
ಮದುವೆ ಎನ್ನುವುದು ಎರಡು ಹೃದಯಗಳನ್ನು ಒಂದು ಮಾಡುವ ಪುಣ್ಯದ ಕಾರ್ಯ ಎನ್ನಲಾಗುತ್ತದೆ. ಆದರೆ ಅದು ಗಂಡು-ಹೆಣ್ಣೇ ಆಗಿರಬೇಕೆಂದೇನೂ ಇಲ್ಲ. ಏಕೆಂದರೆ ಪ್ರಕೃತಿಯ ಲೀಲೆಯೇ ವಿಚಿತ್ರವಾದದ್ದು. ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಪ್ರಕೃತಿಯ ನಿಯಮ ಎಂದೇ ಹೇಳಲಾದರೂ, ಇದೇ ಪ್ರಕೃತಿ ಗಂಡಿಗೆ ಗಂಡಿನ ಮೇಲೆ ಹೆಣ್ಣಿಗೆ ಹೆಣ್ಣಿನ ಮೇಲೆ ವ್ಯಾಮೋಹ ಬರುವಂತೆಯೂ ಮಾಡಿಬಿಡುತ್ತದೆ. ಅದು ದೈವಲೀಲೆ. ಯಾವುದೂ ಮನುಷ್ಯನ ಕೈಯಲ್ಲಿ ಇಲ್ಲವೇ ಇಲ್ಲ. ಹುಟ್ಟುತ್ತಲೇ ಕಟ್ಟಿಕೊಂಡು ಬಂದಿರುವ ಆ ಲೀಲೆಯ ಮುಂದೆ ಎಲ್ಲವೂ ಗೌಣ. ಹೊರಗಡೆ ಹೆಣ್ಣೆಂದು ಕಂಡರೆ ಆಕೆಯಲ್ಲಿ ಒಳಗಡೆ ಗಂಡಿನ ಭಾವನೆ ಇದ್ದಿರಬಹುದು, ಗಂಡೆಂದು ತೋರುವವನಿಗೆ ಹೆಣ್ಣಿನ ಅಂಶ ಬಂದಿರಬಹುದು. ಇದು ಅವರ ತಪ್ಪಲ್ಲ. ಆದರೆ ಇದನ್ನು ಸಮಾಜ ಒಪ್ಪುವುದಿಲ್ಲ ಎನ್ನುವುದು ಮಾತ್ರ ಸತ್ಯ. ಅವರನ್ನು ನೋಡುವ ದೃಷ್ಟಿಯೇ ಬದಲಾಗುವ ಕಾರಣದಿಂದಲೇ ಇಂದು ತೃತೀಯ ಲಿಂಗಿಯರು ಇನ್ನಿಲ್ಲದಂತ ನೋವನ್ನು ಅನುಭವಿಸುವ ಪರಿಸ್ಥಿತಿ ಬಂದಿದೆ.
ಆದರೆ, ಅಪ್ಪ-ಅಮ್ಮನ ಜೊತೆ ಸಮಾಜವೂ ಅವರನ್ನು ಒಪ್ಪಿಕೊಂಡು ಬಿಟ್ಟರೆ, ಇದು ಪ್ರಕೃತಿಯ ನಿಯಮ ಎಂದುಕೊಂಡರೆ ಎಲ್ಲವೂ ಸುಲಭ. ಅದಕ್ಕೆ ಸಾಕ್ಷಿಯಾಗಿದೆ ರಾಮ್ ಮತ್ತು ಶ್ಯಾಮ್ ಪ್ರೇಮ ಕಥೆ. ಒಬ್ಬರು ಹಿಂದೂ, ಇನ್ನೊಬ್ಬ ಕ್ರೈಸ್ತ. ಬೆಂಗಳೂರಿನ ಶ್ರೀರಾಮ್ ಶ್ರೀಧರ್ ಮತ್ತು ಮಹಾರಾಷ್ಟ್ರ ಪುಣೆಯ ಶ್ಯಾಮ್ ಕೊನ್ನೂರ್ ಲವ್ ಸ್ಟೋರಿ ಇದು. ಮನೆಯವರ ಸಮ್ಮುಖದಲ್ಲಿ, ಸ್ನೇಹಿತರು ನೀಡಿದ ಅದ್ಧೂರಿ ಸ್ವಾಗತದಲ್ಲಿ ಇವರಿಬ್ಬರೂ ಒಂದಾಗಿದ್ದಾರೆ. ತಮ್ಮ 11 ವರ್ಷಗಳ ಪ್ರೇಮ ಕಥೆಗೆ ಈ ಅಧಿಕೃತ ಮುದ್ರೆ ಒತ್ತಿದ್ದಾರೆ! ಇಬ್ಬರೂ ಸಾಂಪ್ರದಾಯಿಕ ಧೋತಿ-ಕುರ್ತಾ ಲುಕ್‌ನಲ್ಲಿ ಚಿನ್ನದ ಗಡಿಯಾರಯೊಂದಿಗೆ ಕಾಣಿಸಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಇದು ಮರಾಠಿ ಸಂಪ್ರದಾಯದಂತೆ ಅವರನ್ನು ಜನರು ಅದ್ಧೂರಿಯಾಗಿ ಸ್ವಾಗತ ಕೋರಿರುವುದು ಮತ್ತು ಅಮ್ಮಂದಿರು ಈ ಸಂಬಂಧವನ್ನು ಒಪ್ಪಿರುವುದು ವಿಶೇಷವಾಗಿದೆ. ಈ ವಿವಾಹವು ಸಲಿಂಗಿ ಸಮುದಾಯಕ್ಕೆ ಉತ್ತಮ ಸ್ಫೂರ್ತಿಯಾಗಿದೆ ಎಂದು ನೆಟ್ಟಿಗರಿಂದ ಹೇಳಲಾಗುತ್ತಿದೆ. ಇಂಥ ಮದುವೆಗಳೆಂದರೆ ಹೀಗಳೆಯುವವರು, ಟೀಕಿಸುವವರು ಕಡಿಮೆಯಾಗಿರುವುದು, ಇಂಥದ್ದೊಂದು ಪರಿಸ್ಥಿತಿಯ ಬಗ್ಗೆ ತಿಳಿದುಕೊಂಡು ಅದನ್ನು ಬೆಂಬಲಿಸುತ್ತಿರುವುದನ್ನು ಕಮೆಂಟ್ಗಳಲ್ಲಿ ನೋಡಬಹುದಾಗಿದೆ.
ಅಂದಹಾಗೆ ಈ ಲವ್ಸ್ಟೋರಿ ಶುರುವಾಗಿದ್ದು ಕೂಡ ವಿಶೇಷವೇ. ಅದು 2014 ರಲ್ಲಿ ನಡೆದ ಘಟನೆ. ಪುಣೆಯಿಮದ ಶ್ಯಾಮ್ ಬೆಂಗಳೂರಿಗೆ ಬಂದಾಗ, ಇಬ್ಬರೂ ಅಚಾನಕ್ ಆಗಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾದರು. ಆಗಲೇ ಲವ್ ಆ್ಯಟ್ ಫಸ್ಟ್ ಸೈಟ್ ಆಗಿತ್ತು. ಒಬ್ಬರನ್ನೊಬ್ಬರು ನೀವು ತುಂಬಾ ಮುದ್ದಾಗಿದ್ದೀರಿ ಎನ್ನುವ ಹೊಗಳಿಕೆಯೊಂದಿಗೆ ಇವರ ಫ್ರೆಂಡ್ಷಿಪ್ ಶುರುವಾಯಿತು. ಆದರೆ ಜೀವನ ಕುತೂಹಲದ ತಿರುವು ಪಡೆದದ್ದು 2015ರಲ್ಲಿ. ಈ ಅನಿರೀಕ್ಷಿತ ತಿರುವು ಇಬ್ಬರನ್ನೂ ಒಂದು ಮಾಡಿತು.
ಅಂದು ದರೋಡೆಕೋರರ ದಾಳಿಯಲ್ಲಿ ಗಾಯಗೊಂಡ ಶ್ಯಾಮ್ ಅವರನ್ನು ರಾಮ್ ಆಸ್ಪತ್ರೆಗೆ ಕರೆದೊಯ್ದರು, ಆ ಸಮಯದಲ್ಲಿ ಶ್ಯಾಮ್‌ನ ಪೂರ್ಣ ಹೆಸರೇ ರಾಮ್ಗೆ ತಿಳಿದಿರಲಿಲ್ಲ. ಆಸ್ಪತ್ರೆಗೆ ದಾಖಲು ಮಾಡಿದ ಸಮಯದಲ್ಲಿ ಹೆಸರು ತಿಳಿಯಿತು. ಅಲ್ಲಿಯೇ ಪ್ರೀತಿ ಮೊಳಗಿತು. ಆಸ್ಪತ್ರೆಯಲ್ಲಿ ಸಂಗಾತಿಯಂತೆ ಶ್ಯಾಮ್ನನ್ನು ರಾಮ್ ನೋಡಿಕೊಂಡರು. ಕೊನೆಗೆ ಇಬ್ಬರ ನಡುವೆ ಆಳವಾಗ ಪ್ರೀತಿ ಹುಟ್ಟಿತು. ಒಬ್ಬರನ್ನೊಬ್ಬರು ಬಿಟ್ಟಿರಲಾದಷ್ಟು ಹತ್ತಿರವಾದರು. 11 ವರ್ಷ ಒಟ್ಟಿಗೇ ಇದ್ದರು. ಕೊನೆಗೆ ತಮ್ಮ ಈ ಪ್ರೇಮದ ಪಯಣವನ್ನು ಮನೆಯವರಿಗೆ ತಿಳಿಸಿದರು. ಮೊದಲಿಗೆ ಇದನ್ನು ಮನೆಯವರು ಒಪ್ಪದಿದ್ದರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡರು. ಇದು ದೈವದತ್ತವಾಗಿ ಬಂದಿರುವ ದೈಹಿಕ ಬೆಳವಣಿಗೆ, ಇದರಲ್ಲಿ ಮಕ್ಕಳ ತಪ್ಪು ಏನೂ ಇಲ್ಲ ಎನ್ನುವುದನ್ನು ಅರ್ಥಮಾಡಿಕೊಂಡ ಪಾಲಕರು ಮದುವೆಗೆ ಸಮ್ಮತಿ ಸೂಚಿಸಿದ್ದಾರೆ. ಇದಾಗಲೇ ಈ ಇಬ್ಬರೂ ಒಟ್ಟುಗೂಡ ಹಲವು ಸಮಾಜಮುಖಿ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.