Self Respect Wedding…ಕೋರ್ಟ್ ಅಲೆಯೋದು ಬೇಡ, ಪುರೋಹಿತರೂ ಬೇಡ… ಏನಿದು ಹೊಸ ಟ್ರೆಂಡು?

Pavna Das   | ANI
Published : Nov 16, 2026, 08:40 PM IST
Self Respect Wedding

ಸಾರಾಂಶ

Self Respect Wedding: ಪುರೋಹಿತರಿಲ್ಲ, ಮಂತ್ರಗಳಿಲ್ಲ, ಸಾಂಪ್ರದಾಯಿಕ ಆಚರಣೆಗಳೂ ಇಲ್ಲ! ಏನಿದು ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್? ಈ ಪದ್ಧತಿಯ ಇತಿಹಾಸ, ಮದುವೆ ವಿಧಾನ ಮತ್ತು ಕಾನೂನು ಮಾನ್ಯತೆಯ ಬಗ್ಗೆ ತಿಳಿಯಿರಿ.

ಏನಿದು ಸ್ವ ಗೌರವ ಮದುವೆ?

Self Respect Wedding: ಆಧುನಿಕ ಕಾಲದಲ್ಲಿ ಮದುವೆಯ ಸಂಪ್ರದಾಯಗಳು ಬದಲಾಗುತ್ತಿವೆ. ಹಿಂದೆ ಸಾಂಪ್ರದಾಯಿಕ ಮದುವೆಗಳ ಬದಲಿಗೆ ಕಾನೂನುಬದ್ಧವಾಗಿ ಮದುವೆಯಾಗಲು ಅನೇಕರು ಕೋರ್ಟ್ ಮೊರೆ ಹೋಗುತ್ತಿದ್ದರು. ಇದೀಗ ಇದೇ ಸಾಲಿಗೆ ಮತ್ತೊಂದು ವಿಭಿನ್ನ ಮದುವೆ ಪದ್ಧತಿ ಸೇರ್ಪಡೆಯಾಗಿದೆ. ಅದುವೇ ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್ (Self Respect Wedding). ಮದುವೆಗೂ ಸ್ವಾಭಿಮಾನಕ್ಕೂ ಏನು ಸಂಬಂಧ? ಈ ಎರಡೂ ಹೇಗೆ ಒಂದಕ್ಕೊಂದು ಹೊಂದಿಕೆಯಾಗುತ್ತವೆ ಎಂಬ ಗೊಂದಲ ನಿಮಗೂ ಇರಬಹುದು. ಹಾಗಾದರೆ ಇತ್ತೀಚೆಗೆ ಟ್ರೆಂಡ್ ಆಗುತ್ತಿರುವ ಈ ವಿಶೇಷ ಮದುವೆ ಪದ್ಧತಿ ಯಾವುದು? ಇದರ ಹಿಂದಿನ ಇತಿಹಾಸವೇನು? ತಿಳಿದುಕೊಳ್ಳೋಣ.

ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮಾಡಿದ್ದು ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್!

ಇತ್ತೀಚೆಗೆ ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್ ಸಾಕಷ್ಟು ಸುದ್ದಿಯಲ್ಲಿದೆ. ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಮತ್ತು ಉದ್ಯಮಿ ಕಾವ್ಯಾ ಮಾರನ್ ಅವರು ಈ ಪದ್ಧತಿಯ ಮೂಲಕ ಮದುವೆಯಾಗಿದ್ದಾರೆ ಎಂದು ಡಾ. ಟಿಆರ್‌ಬಿ ರಾಜಾ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಈ ಮದುವೆ ಪದ್ಧತಿಯ ಬಗ್ಗೆ ಚರ್ಚೆ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಇಬ್ಬರೂ ಪರಸ್ಪರ ಹಾರ ಮತ್ತು ಸರವನ್ನು ಹಾಕಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಸುದ್ದಿ ಹೊರಬರುತ್ತಿದ್ದಂತೆ ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್ ಎಂದರೇನು ಎಂಬ ಕುತೂಹಲ ಹಲವರಲ್ಲಿ ಮೂಡಿದೆ.

ಏನಿದು ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್?

ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್ ಈಗ ಹೆಚ್ಚು ಜನರ ಗಮನ ಸೆಳೆಯುತ್ತಿರಬಹುದು. ಆದರೆ ಇದರ ಆರಂಭ ಇಂದಿನದ್ದಲ್ಲ. 1925ರಲ್ಲಿ ತಮಿಳುನಾಡಿನಲ್ಲಿ ಇ.ವಿ. ರಾಮಸ್ವಾಮಿ ನಾಯ್ಕರ್ ಅಂದರೆ ಪೆರಿಯಾರ್ ಅವರ ಸ್ವಾಭಿಮಾನ ಚಳವಳಿಯ ಮೂಲಕ ಈ ಮದುವೆ ಪದ್ಧತಿಯ ಪರಿಕಲ್ಪನೆ ಆರಂಭವಾಯಿತು. ತಮಿಳಿನಲ್ಲಿ ಈ ಮದುವೆ ಪದ್ಧತಿಯನ್ನು 'ಸುಯಮರಿಯಾದೈ ತಿರುಮಣಂ' (Suyamariyathai Thirumanam) ಎಂದು ಕರೆಯಲಾಗುತ್ತದೆ. ಸಮಾಜದಲ್ಲಿ ಬೇರೂರಿದ್ದ ಜಾತಿ ತಾರತಮ್ಯ ಮತ್ತು ಪುರುಷ ಪ್ರಧಾನ ವ್ಯವಸ್ಥೆಯನ್ನು ಪ್ರಶ್ನಿಸುವುದು ಈ ಚಳವಳಿಯ ಪ್ರಮುಖ ಉದ್ದೇಶವಾಗಿತ್ತು. ಎಲ್ಲರಿಗೂ ಸಮಾನ ಗೌರವ ಮತ್ತು ಹಕ್ಕುಗಳು ಸಿಗಬೇಕು ಎಂಬ ಆಶಯದೊಂದಿಗೆ ಈ ಮದುವೆ ಪದ್ಧತಿಗೆ ಚಾಲನೆ ನೀಡಲಾಯಿತು.

ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್ ಹೇಗೆ ನಡೆಯುತ್ತದೆ?

ಈ ಮದುವೆ ಸಾಂಪ್ರದಾಯಿಕ ಮದುವೆಗಳಿಗಿಂತ ಸಂಪೂರ್ಣ ಭಿನ್ನವಾಗಿದೆ. ಇಲ್ಲಿ ಯಾವುದೇ ಸಾಂಪ್ರದಾಯಿಕ ಪೂಜಾ ವಿಧಿವಿಧಾನಗಳು, ಪುರೋಹಿತರು ಅಥವಾ ಮಂತ್ರೋಚ್ಚಾರಣೆ ಇರುವುದಿಲ್ಲ. ಬದಲಾಗಿ ಪರಸ್ಪರ ಒಪ್ಪಿಗೆ, ಸಮಾನತೆ ಮತ್ತು ಗೌರವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇದು ಕೆಲವು ರೀತಿಯಲ್ಲಿ ಕೋರ್ಟ್ ಮ್ಯಾರೇಜ್ ಅನ್ನು ಹೋಲುತ್ತದೆ. ಕುಟುಂಬದವರು, ಆಪ್ತ ಸ್ನೇಹಿತರು ಮತ್ತು ಸಾಕ್ಷಿಗಳ ಸಮ್ಮುಖದಲ್ಲಿ ಮದುವೆ ನಡೆಯುತ್ತದೆ. ಈ ಸಂದರ್ಭದಲ್ಲಿ ಜೋಡಿಯು ತಮ್ಮ ಇಚ್ಛೆಯಂತೆ ಪರಸ್ಪರ ಹಾರ, ಸರ ಅಥವಾ ಉಂಗುರಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡಬಹುದು.

ಆದರೆ ಕೋರ್ಟ್ ಮ್ಯಾರೇಜ್ ಮತ್ತು ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್ ನಡುವೆ ವ್ಯತ್ಯಾಸವಿದೆ. ಕೋರ್ಟ್ ಮ್ಯಾರೇಜ್‌ನಲ್ಲಿ ಕಾನೂನು ಪ್ರಕ್ರಿಯೆಗಳ ಮೂಲಕ ಮದುವೆ ನೋಂದಣಿಯಾಗುತ್ತದೆ. ಆದರೆ ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್‌ನಲ್ಲಿ ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳ ಬದಲಿಗೆ ಪರಸ್ಪರ ಒಪ್ಪಿಗೆ ಮತ್ತು ಸ್ವಾಭಿಮಾನಕ್ಕೆ ಪ್ರಾಮುಖ್ಯತೆ ನೀಡಲಾಗುತ್ತದೆ.

ಯಾವ ರಾಜ್ಯಗಳಲ್ಲಿ ಸೆಲ್ಫ್ ರೆಸ್ಪೆಕ್ಟ್ ವೆಡ್ಡಿಂಗ್‌ಗೆ ಕಾನೂನು ಮಾನ್ಯತೆ ಇದೆ?

ಸೆಲ್ಫ್ ರೆಸ್ಪೆಕ್ಟ್ ಚಳವಳಿಯ ಆರಂಭ ತಮಿಳುನಾಡಿನಲ್ಲಿ ಆಗಿರುವುದರಿಂದ, ಈ ಮದುವೆ ಪದ್ಧತಿಗೆ ಆ ರಾಜ್ಯದಲ್ಲಿ ಕಾನೂನು ಮಾನ್ಯತೆ ದೊರೆತಿದೆ. ಹಿಂದೂ ವಿವಾಹ ಕಾಯ್ದೆ 1955ಕ್ಕೆ ಸೆಕ್ಷನ್ 7-A ಅನ್ನು ಸೇರಿಸುವ ಮೂಲಕ ಸೆಲ್ಫ್ ರೆಸ್ಪೆಕ್ಟ್ ಮತ್ತು ಸೀರ್ ತಿರುಮಣಂ ಮದುವೆಗಳಿಗೆ ಕಾನೂನು ಮಾನ್ಯತೆ ನೀಡಲಾಗಿದೆ. ಇದರ ಜೊತೆಗೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿಯೂ ಈ ಮದುವೆ ಪದ್ಧತಿಯನ್ನು ಅನುಸರಿಸಬಹುದು.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಹೋದರನ ಮದುವೆಯಲ್ಲಿ ನಟ ಉಪೇಂದ್ರ ಮಕ್ಕಳ ಸ್ಟನ್ನಿಂಗ್​ ಲುಕ್​: ಆಯುಷ್​-ಐಶ್ವರ್ಯ ಫೋಟೋಗಳು ವೈರಲ್​
ಮದುವೆಗೆ ಹುಡುಗಿ ನೋಡುವಾಗ ಈ 3 ಗುಣಗಳನ್ನು ತಪ್ಪದೇ ಗಮನಿಸಿ, ಅಂದ-ಚಂದಕ್ಕಿಂತ ಇದೇ ತುಂಬಾ ಇಂಪಾರ್ಟೆಂಟ್‌!