
ಇತ್ತೀಚೆಗಷ್ಟೇ ಮದುವೆಯಾಗಿದ್ದ ನವ ವಿವಾಹಿತೆಯೊಬ್ಬಳು ತನ್ನನ್ನು ಪ್ರೀತಿ ಮಾಡಿದ ಪ್ರೇಮಿಯನ್ನೂ ಬಿಟ್ಟಿರಲಾಗದೇ, ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ಗಂಡನನ್ನೂ ಬಿಟ್ಟು ಹೋಗಲಾಗದೇ ಇಬ್ಬರಿಗೂ ತಲಾ 15 ದಿನಗಳು ಮೀಸಲಿಡುತ್ತೇನೆ. ಗಂಡನ ಜೊತೆ 15 ದಿನ, ಪ್ರೇಮಿಯ ಜೊತೆ 15 ದಿನ ಇರುತ್ತೇನೆ ಎಂದು ಹೇಳಿದ್ದಾಳೆ. ಆಕೆಯ ಮಾತನ್ನು ಕೇಳಿ ನ್ಯಾಯ ನೀಡಲು ಸೇರಿದ್ದ ಪಂಚಾಯಿತಿ ಜನರೇ ಬೆಚ್ಚಿ ಬಿದ್ದಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ರಾಂಪುರ ಜಿಲ್ಲೆಯಲ್ಲಿ ನಡೆದಿದೆ. ಗಂಡ–ಹೆಂಡತಿ–ಪ್ರಿಯಕರರ ನಡುವೆ ನಡೆದ ಅಸಾಮಾನ್ಯ ಘಟನೆ ಇದೀಗ ರಾಜ್ಯದ ಚರ್ಚೆಯ ವಿಷಯವಾಗಿದೆ. ಗಂಡನ ಜೊತೆ ಮದುವೆಯಾಗಿ ಒಂದು ವರ್ಷವಾಗಿದ್ದ ಮಹಿಳೆ, ಪ್ರಿಯಕರನೊಂದಿಗೆ 10 ಬಾರಿ ಓಡಿ ಹೋಗಿದ್ದಾಳೆ. ಇತ್ತೀಚೆಗೆ ಗ್ರಾಮ ಪಂಚಾಯಿತಿಯಲ್ಲಿ ನಡೆದ ವಿಚಾರಣೆಯ ವೇಳೆ ಆಕೆ ಮಾಡಿದ ಪ್ರಸ್ತಾಪ ಎಲ್ಲರನ್ನೂ ಅಚ್ಚರಿಗೊಳಿಸಿದೆ. ಅಜೀಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ವಾಸಿಸುತ್ತಿರುವ ಮಹಿಳೆ, ಮದುವೆಯಾದ ಕೆಲ ದಿನಗಳಲ್ಲೇ ಟಾಂಡಾ ಪ್ರದೇಶದ ಯುವಕನೊಂದಿಗೆ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳು. ಕಳೆದ ಒಂದು ವರ್ಷದಲ್ಲಿ, ಆಕೆ 9 ಬಾರಿ ಗಂಡನ ಮನೆಯಿಂದ ತಪ್ಪಿಸಿಕೊಂಡು ಪ್ರಿಯಕರನ ಮನೆ ಸೇರಿದ್ದಳು. ಪ್ರತಿಸಾರಿ ಗ್ರಾಮಸ್ಥರು ಹಾಗೂ ಪೊಲೀಸರು ಆಕೆಯನ್ನು ವಾಪಸ್ ಗಂಡನ ಮನೆಗೆ ಕಳುಹಿಸುತ್ತಿದ್ದರು.
ಆದರೆ, ಕೇವಲ ಎಂಟು ದಿನಗಳ ಹಿಂದೆ ಮತ್ತೆ ಗಂಡನ ಮನೆಗೆ ಹಿಂತಿರುಗಿದ ಆಕೆ, ಒಂದೇ ರಾತ್ರಿ ಕಳೆದ ಕೂಡಲೇ 10ನೇ ಬಾರಿಗೆ ಪ್ರಿಯಕರನೊಂದಿಗೆ ಓಡಿ ಹೋದಳು. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪಂಚಾಯಿತಿಯನ್ನು ಕರೆದಾಗ, ಎಲ್ಲರ ಎದುರೇ ಆಕೆ 'ಒಂದು ತಿಂಗಳಲ್ಲಿ 15 ದಿನ ಗಂಡನ ಜೊತೆ, 15 ದಿನ ಪ್ರಿಯಕರನ ಜೊತೆ ಇರುತ್ತೇನೆ' ಎಂದು ಎಲ್ಲರ ಮುಂದೆಯೂ ಘೋಷಣೆ ಮಾಡಿದ್ದಾಳೆ. ಈ ಮಾತು ಕೇಳಿದ ತಕ್ಷಣ ಸಭೆಯಲ್ಲಿದ್ದವರು ಅಚ್ಚರಿ ಪಟ್ಟರು. ತನ್ನ ಹೆಂಡತಿಯ ಮಾತು ಕೇಳಿದ ಗಂಡನು ಕೈಮುಗಿದು, 'ನೀನು ನನ್ನನ್ನು ಕ್ಷಮಿಸು, ಇನ್ನು ಮುಂದೆ ಪ್ರಿಯಕರನ ಜೊತೆಗೆ ಜೀವನ ಸಾಗಿಸು' ಎಂದು ಹೇಳಿ ಹೊರಟನು. ಪಂಚಾಯಿತಿಯಲ್ಲಿ ಹಾಜರಿದ್ದ ಹಿರಿಯರು, ಸಂಬಂಧಿಕರು ಈ ಘಟನೆಗೆ ತಲೆ ಕೆಡಿಸಿಕೊಂಡಿದ್ದಾರೆ. ಇದೀಗ ಯುವತಿಯನ್ನು ಪಂಚಾಯಿತಿಯೇ ಒಪ್ಪಿಕೊಂಡು ಪ್ರಿಯಕರನೊಂದಿಗೆ ಕಳುಹಿಸಿದೆ.
ಪೊಲೀಸ್ ಪ್ರತಿಕ್ರಿಯೆ:
ಅಜೀಮನಗರ ಪೊಲೀಸರು ಪ್ರಕರಣದ ಬಗ್ಗೆ ತಿಳಿಸಿದ್ದು, ಮಹಿಳೆಯನ್ನು ಹಿಂದೆ ಗಂಡನ ಮನೆಗೆ ಒಪ್ಪಿಸಲಾಗಿತ್ತು. ಆದರೆ, ಪ್ರಿಯಕರನ ಬಳಿಯೇ ಇರುವುದು ಆಕೆಯ ಸ್ವಯಂ ನಿರ್ಧಾರವಾಗಿರುವುದರಿಂದ, ಈಗ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಈ ವಿಚಿತ್ರ ಪ್ರಕರಣ ಸ್ಥಳೀಯರ ನಡುವೆ ಕುತೂಹಲ ಮೂಡಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.