Mother and Baby Monkeys: ಮರ ಹತ್ತಲು ಬಿಡದ ಅಮ್ಮನಿಗೆ ಮುದ್ದು ಮಾಡಿ ಬೆಣ್ಣೆ ಹಚ್ತಿರೋ ಮರಿ! ಕ್ಯೂಟ್​ ವಿಡಿಯೋ

Published : Jun 11, 2025, 04:23 PM ISTUpdated : Jun 11, 2025, 04:33 PM IST
Mother and Baby monkeys

ಸಾರಾಂಶ

ಅಮ್ಮ ಮತ್ತು ಮಗುವಿನ ಬಾಂಧವ್ಯವೇ ಅತ್ಯಂತ ಸುಂದರ, ಸುಮಧುರ. ಅದು ಮನುಷ್ಯರೇ ಆಗಿರಬಹುದು, ಪ್ರಾಣಿಗಳೇ ಆಗಿರಬಹುದು. ಅಮ್ಮನನ್ನು ಪುಸಲಾಯಿಸುತ್ತಿರುವ ಮರಿಮಂಗನ ಕ್ಯೂಟ್​ ವಿಡಿಯೋ ಒಂದು ವೈರಲ್​ ಆಗಿದೆ ನೋಡಿ! 

ಮನುಷ್ಯರ ಪೂರ್ವಜರು ಎಂದೇ ಖ್ಯಾತಿ ಪಡೆದಿರುವ ಮಂಗಗಳು ಮಾಡುವ ಕಿತಾಪತಿಗಳು ಒಂದೆರಡಲ್ಲ ಬಿಡಿ. ಅವುಗಳ ಆಟ ನೋಡುವುದಕ್ಕೆ ಎಷ್ಟು ಚೆಂದವೋ, ಅತಿಯಾಗಿ ಪ್ರಾಣಕ್ಕೆ ಸಂಚಕಾರ ತರುವುದೂ ಉಂಟು. ದೇವಸ್ಥಾನ, ಪ್ರವಾಸಿ ತಾಣಗಳಲ್ಲಿ ಮಂಗಗಳು ಕೊಡುವ ಉಪದ್ರವಗಳ ಬಗ್ಗೆ ತಿಳಿದದ್ದೇ. ಬ್ಯಾಗ್​ ಕಳ್ಳತನ ಮಾಡುವುದು, ಮೈಮೇಲೆ ಬಿದ್ದು ಪ್ರಾಣಕ್ಕೂ ಕುತ್ತು ತರುವುದು, ಕೈಯಲ್ಲಿ ಏನಾದರೂ ಆಹಾರ ಪೊಟ್ಟಣ ಹಿಡಿದುಕೊಂಡಿದ್ದರೆ ಅದನ್ನು ಕಸಿಯಲು ಬಂದು ಕಚ್ಚುವುದೂ ಇದೆ. ಇವೆಲ್ಲವುಗಳ ಹೊರತಾಗಿಯೂ ಮಂಗಗಳು ಸುಮ್ಮನೇ ಇದ್ದಾಗ ಅವುಗಳ ಆಟವನ್ನು ನೋಡುವುದೇ ಬಲು ಸೊಗಸು. ಇದು ಒಂದೆಡೆಯಾದರೆ, ನಿತ್ಯ ಜೀವನದಲ್ಲಿ ಮಂಗಗಳ ಮಾಡುವ ಕಿತಾಪತಿಗಳು ಒಂದೆರಡಲ್ಲ. ಇನ್ನು ಮಲೆನಾಡು ಪ್ರದೇಶಗಳಲ್ಲಂತೂ ಮಂಗನ ಕಾಟದಿಂದ ಜನಜೀವನ ದಿನನಿತ್ಯವೂ ನರಕವೇ ಆಗಿಬಿಟ್ಟಿದೆ. ಮನೆಯಂಗಳದಲ್ಲಿ ಒಂದೂ ಬೆಳೆಯನ್ನೂ ಬೆಳೆಯಲು ಬಿಡುವುದಿಲ್ಲ, ತೋಟಕ್ಕೆ ಗುಂಪು ಗುಂಪಾಗಿ ನುಗ್ಗಿತು ಎಂದರೆ ಕಥೆ ಮುಗಿದಂತೆಯೇ. ಅದೇನಿದ್ದರೂ ಮಂಗಗಳನ್ನು ಅಪರೂಪಕ್ಕೆ ನೋಡುವವರಿಗೆ ಅವುಗಳ ಆಟ ಮಾತ್ರ ಚೆಂದವೋ ಚಂದ.

ಇದೀಗ ಅಂಥದ್ದೇ ಒಂದು ಕ್ಯೂಟ್​ ವಿಡಿಯೋ ವೈರಲ್​ ಆಗಿದೆ. ಇದರಲ್ಲಿ ಮರಿ ಮರ ಹತ್ತಲು ನೋಡುತ್ತಿದೆ. ಆದರೆ ಅದು ಇನ್ನೂ ಮರ ಹತ್ತಲು ಪಕ್ವ ಆಗಿಲ್ಲ ಎನ್ನುವ ಕಾರಣಕ್ಕೆ ಮರ ಹತ್ತಲು ಹೋಗಬೇಡ ಎಂದು ಅಮ್ಮ ಕಾಲೆಳೆದು ಕೆಳಕ್ಕೆ ಕರೆಸಿಕೊಳ್ಳುತ್ತಿದೆ. ಮಕ್ಕಳು ಹೊರಗಡೆ ಆಟವಾಡಲು ಹೋದಾಗ, ಬಿದ್ದುಬಿಟ್ಟರೆ ಕಷ್ಟ ಎನ್ನುವ ಕಾರಣಕ್ಕೆ ಅಮ್ಮಂದಿರು ಹೋಗುವುದು ಬೇಡ ಎಂದು ಮಕ್ಕಳನ್ನು ಗದರಿ ಮನೆಯಲ್ಲಿಯೇ ಕುಳ್ಳರಿಸುತ್ತಾರಲ್ಲ, ಇದು ಹಾಗೆನೇ. ಆದರೆ ಹೇಳಿಕೇಳಿ ಮುದ್ದು ಕಂದ ಅದು. ಮನುಷ್ಯರ ಬುದ್ಧಿನೇ ಇದಕ್ಕೂ ಇರೋದಲ್ವಾ? ಅಮ್ಮನನ್ನು ಹೇಗಾದರೂ ಮಾಡಿ ಪುಸಲಾಯಿಸಿ ಮರ ಹತ್ತಬೇಕು ಎನ್ನುವುದು ಅದರ ಗುರಿ. ಅದಕ್ಕಾಗಿಯೇ ತಮ್ಮ ಕೆಲಸ ಸಾಧಿಸಲು ಮಕ್ಕಳು ಅಮ್ಮನಿಗೆ ಮುದ್ದು ಮಾಡಿ ಬೆಣ್ಣೆ ಹಚ್ಚುತ್ತಾರಲ್ಲ, ಅದೇ ರೀತಿ ಈ ಮರಿ ಕೂಡ ಅಮ್ಮನಿಗೆ ಮುದ್ದು ಮಾಡಿ ಮುತ್ತಿಕ್ಕುತ್ತಿದೆ.

ಇದರ ಆಟ ಈ ಅಮ್ಮಂಗೆ ಗೊತ್ತಾಗದೇ ಇರತ್ತಾ? ಏನಾದ್ರೂ ಮಾಡಿಕೋ. ನಾನು ಮಾತ್ರ ಮರ ಹತ್ತಲು ಕೊಡಲ್ಲ ಎಂದು ಹುಸಿಕೋಪದಿಂದ ಇರುವ ಅಮ್ಮನ ಮುಖವನ್ನು ಇಲ್ಲಿ ನೋಡಬಹುದು. ಆದರೆ ಮರಿ ಮಾತ್ರ ಕೊನೆಯವರೆಗೂ ತನ್ನ ಪ್ರಯತ್ನ ಬಿಡಲಿಲ್ಲ. ಈ ವೈರಲ್​ ವಿಡಿಯೋಗೆ ನೂರಾರು ಕಮೆಂಟ್ಸ್​ ಬಂದಿವೆ. ಅಮ್ಮ ಮತ್ತು ಮಗುವಿನ ಬಾಂಧವ್ಯದ ವಿಷಯ ಬಂದಾಗ ಪ್ರಾಣಿಗಳಿಗೂ ಮನುಷ್ಯರಿಗೂ ಏನೂ ವ್ಯತ್ಯಾಸವೇ ಇಲ್ಲ ಎಂದೇ ಎಲ್ಲರೂ ಹೇಳುತ್ತಿದ್ದಾರೆ. ಅದರಲ್ಲಿಯೂ ಮಂಗಗಳ ವಿಷಯದಲ್ಲಂತೂ ಇದು ಹೆಚ್ಚೇ ಎನ್ನಬಹುದು.

ಈಚೆಗಷ್ಟೇ ಮಂಗವೊಂದರಿಂದಾಗಿ ಇಡೀ ಶ್ರೀಲಂಕಾ ದೇಶದಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿ ಕಾರ್ಗತ್ತಲು ಕವಿದಿದ್ದು ಸುದ್ದಿಯಾಗಿತ್ತು. ಶ್ರೀಲಂಕಾದ ಪಣದುರದಲ್ಲಿರುವ ವಿದ್ಯುತ್ ಗ್ರಿಡ್‌ನ ಸಬ್‌ಸ್ಟೇಷನ್‌ನಲ್ಲಿ ಕೋತಿಯೊಂದು ತಂತಿಯ ಮೇಲೆ ಹೋಗು ಸಂದರ್ಭದಲ್ಲಿ ಗ್ರಿಡ್​ಗೆ ಸಿಲುಕಿಬಿಟ್ಟಿತ್ತು. ಇದು ಇಡೀ ದೇಶಕ್ಕೆ ವಿದ್ಯುತ್​ ಪೂರೈಕೆ ಮಾಡುವ ಮುಖ್ಯ ಗ್ರಿಡ್​. ಆದ್ದರಿಂದ ವಿದ್ಯುತ್ ಸರಬರಾಜು ಸ್ಥಗಿತವಾಗಿತ್ತು. ಇದರಿಂದ ಮುಖ್ಯವಾಗಿ ಆಸ್ಪತ್ರೆಗಳಲ್ಲಿ ಕೋಲಾಹ ಉಂಟಾಗಿತ್ತು. ಒಂದು ಗಂಟೆಯ ಬಳಿಕ ಆಸ್ಪತ್ರೆ ಮತ್ತು ಇತರ ಪ್ರಮುಖ ಸ್ಥಾಪನೆಗಳಲ್ಲಿ ಬೇರೆ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡಲಾಗಿತ್ತು. ಆದರೆ ಇಡೀ ದೇಶಕ್ಕೆ ವಿದ್ಯುತ್ ನೀಡಲು ಹಲವಾರು ಗಂಟೆಗಳು ಹಿಡಿದವು. ಇಡೀ ದೇಶದಲ್ಲಿ ಏಕಾಏಕಿ ವಿದ್ಯುತ್​ ವ್ಯತ್ಯಯವಾಗಿ ಕೋಲಾಹಲ ಸೃಷ್ಟಿಯಾಗಿತ್ತು. ಬಳಿಕ ಇದಕ್ಕೆ ಕಾರಣ ಹುಡುಕಿದಾಗ, ಕೊಲಂಬೊ ಉಪನಗರದಲ್ಲಿ ಮಂಗವೊಂದು ವಿದ್ಯುತ್ ಗ್ರಿಡ್ ಗೆ ಸಿಲುಕಿದ ಪರಿಣಾಮ ಈ ಘಟನೆ ಸಂಭವಿಸಿರುವುದಾಗಿ ತಿಳಿದಿತ್ತು. ಅದಕ್ಕೆ ಕಾರಣ ತಿಳಿದು ಅದನ್ನು ಸರಿಪಡಿಸುವಷ್ಟರಲ್ಲಿ ರಾತ್ರಿಯಿಡೀ ಲಂಕೆಯ ಜನರು ಕತ್ತಲಿನಲ್ಲಿ ಕಳೆಯುವಂತಾಯಿತು. ವಿದ್ಯುತ್​ ಸಹಾಯದಿಂದ ಮಾಡುವ ಎಲ್ಲಾ ಕಾರ್ಯಗಳೂ ಸ್ಥಗಿತಗೊಂಡಿದ್ದವು!

 

 

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
Chanakya Niti: ಬೆಳಗ್ಗೆ ಎದ್ದಾಗ ಇವನ್ನೆಲ್ಲಾ ನೋಡ್ಬೇಡಿ.. ಚಾಣಕ್ಯ ಹೇಳಿದ ರಹಸ್ಯಗಳು