‘ನಿನಗಾಗಿ ನಾನೇ ಚಿನ್ನ ಹುಡುಕಿದೆ’… ಪ್ರೇಯಸಿಗಾಗಿ ತಿಂಗಳುಗಟ್ಟಲೆ ನದಿಯಲ್ಲಿ ಬಂಗಾರ ಹುಡುಕಿದ ಪ್ರಿಯತಮ!

Published : Oct 29, 2026, 11:36 AM IST
man mines gold for girlfriend

ಸಾರಾಂಶ

ನಿಶ್ಚಿತಾರ್ಥದ ಉಂಗುರ ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವವರಿದ್ದಾರೆ. ಆದರೆ ಪ್ರೇಯಸಿಗೆ ನಿಶ್ಚಿತಾರ್ಥದ ಉಂಗುರ ನೀಡಲು ತಿಂಗಳುಗಟ್ಟಲೆ ನದಿಯಲ್ಲಿ ಚಿನ್ನ ಹುಡುಕಿದ ಯುವಕ. ತಾನೇ ಸಂಗ್ರಹಿಸಿದ ಚಿನ್ನದಿಂದ ಉಂಗುರ ಮಾಡಿಸಿ ಪ್ರಪೋಸ್ ಮಾಡಿದ ಅಪರೂಪದ ಪ್ರೇಮಕಥೆ

ನಿಶ್ಚಿತಾರ್ಥದ ಉಂಗುರ ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವವರಿದ್ದಾರೆ. ಇನ್ನು ಕೆಲವರು ತಮ್ಮ ಬಜೆಟ್‌ಗೆ ತಕ್ಕಂತೆ ಉಂಗುರ ಆಯ್ಕೆ ಮಾಡಿಕೊಳ್ಳುತ್ತಾರೆ. ಯುವಕನೊಬ್ಬ ತನ್ನ ಪ್ರೇಯಸಿಗೆ ಉಂಗುರ ಕೊಡಲು ಅಂಗಡಿಗೆ ಹೋಗಲಿಲ್ಲ. ಬದಲಿಗೆ, ತಿಂಗಳುಗಟ್ಟಲೆ ನದಿಗಳಲ್ಲಿ ಚಿನ್ನ ಹುಡುಕುತ್ತಾ, ತಾನೇ ಸಂಗ್ರಹಿಸಿದ ಚಿನ್ನದಿಂದ ಉಂಗುರ ಮಾಡಿಸಿ ಪ್ರೇಯಸಿಗೆ ಪ್ರಪೋಸ್ ಮಾಡಿದ್ದಾನೆ. ಈ ಅಪರೂಪದ ಪ್ರೇಮಕಥೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ.

ನದಿಯಲ್ಲಿ ಚಿನ್ನ ಹುಡುಕಿ ಪ್ರೇಯಸಿಗೆ ಉಂಗುರ!

ಅಮೆರಿಕದ ಕೊಲೊರಾಡೊ ರಾಜ್ಯದ ವೀಟ್ ರಿಡ್ಜ್‌ನ ಜ್ಯಾಕ್ ವಲ್ಕಾನಿ ಎಂಬ ಯುವಕ ತನ್ನ ಪ್ರೇಯಸಿ ಜೋಆನ್‌ಗೆ ಮದುವೆಯ ಪ್ರಸ್ತಾಪ ಮಾಡಲು ನಿರ್ಧರಿಸಿದಾಗ, ಆಕೆಗೆ ವಿಶೇಷವಾದ ಉಡುಗೊರೆ ನೀಡಬೇಕೆಂದು ಯೋಚಿಸಿದ್ದ. ಸಾಮಾನ್ಯವಾಗಿ ಅಂಗಡಿಯಲ್ಲಿ ಸಿಗುವ ಉಂಗುರ ಖರೀದಿಸುವ ಬದಲು, ತಾನೇ ಚಿನ್ನ ಸಂಗ್ರಹಿಸಿ ಅದರಿಂದ ಉಂಗುರ ತಯಾರಿಸಿದರೆ ಹೇಗೆ ಎಂಬ ಆಲೋಚನೆ ಆತನಿಗೆ ಬಂದಿತ್ತು. ಈ ಯೋಚನೆಯನ್ನು ಕಾರ್ಯರೂಪಕ್ಕೆ ತರಲು ಜ್ಯಾಕ್ ಕೊಲೊರಾಡೊದ ವಿವಿಧ ನದಿಗಳಲ್ಲಿ ಚಿನ್ನ ಹುಡುಕಲು ಆರಂಭಿಸಿದ. ನದಿಯ ಮರಳು ಮತ್ತು ಕೆಸರಿನಲ್ಲಿ ಸಿಗುವ ಚಿನ್ನದ ಸಣ್ಣ ಸಣ್ಣ ಕಣಗಳನ್ನು ಒಂದೊಂದಾಗಿ ಸಂಗ್ರಹಿಸುತ್ತಾ ಹೋದ. ಇದು ಸುಲಭದ ಕೆಲಸವಾಗಿರಲಿಲ್ಲ. ಸಾಕಷ್ಟು ಚಿನ್ನ ಸಂಗ್ರಹಿಸಲು ಹಲವು ತಿಂಗಳುಗಳೇ ಬೇಕಾದವು.

ಸ್ಥಳೀಯ ಸುದ್ದಿ ಮಾಧ್ಯಮ ಜೊತೆ ಮಾತನಾಡಿದ ಜ್ಯಾಕ್, “ನಾನು ಈ ಬಗ್ಗೆ ಸಾಕಷ್ಟು ಯೋಚಿಸಿದೆ. ಕೊನೆಗೆ ಉಂಗುರವನ್ನು ನಾನೇ ತಯಾರಿಸಿದರೆ ಹೇಗೆ ಎಂಬ ಆಲೋಚನೆ ಬಂತು. ಆ ಕ್ಷಣಕ್ಕೆ ಅದು ಅತ್ಯುತ್ತಮ ನಿರ್ಧಾರ ಎನಿಸಿತು” ಎಂದು ಹೇಳಿದ್ದಾನೆ. ಚಿನ್ನದ ಕಣಗಳನ್ನು ಸಂಗ್ರಹಿಸುವುದು ತುಂಬಾ ಸಮಯ ತೆಗೆದುಕೊಳ್ಳುವ ಕೆಲಸವಾಗಿತ್ತು. ಆದರೂ ಅದೇ ಸವಾಲು ತನಗೆ ಮತ್ತಷ್ಟು ಉತ್ಸಾಹ ನೀಡಿತು ಎಂದು ಜ್ಯಾಕ್ ಹಾಸ್ಯಭರಿತವಾಗಿ ಹೇಳಿಕೊಂಡಿದ್ದಾನೆ.

ಆಭರಣ ತಯಾರಕರಿಗೂ ಹೊಸ ಅನುಭವ!

ತಿಂಗಳುಗಳ ಪ್ರಯತ್ನದ ಬಳಿಕ ಸಾಕಷ್ಟು ಚಿನ್ನ ಸಂಗ್ರಹಿಸಿದ ಜ್ಯಾಕ್, ಅದನ್ನು ಉಂಗುರವನ್ನಾಗಿ ರೂಪಿಸಲು ನಿರ್ಧರಿಸಿದ. ಇದಕ್ಕಾಗಿ ವೀಟ್ ರಿಡ್ಜ್‌ನ ಆಭರಣ ತಯಾರಕ ಝಾಕ್ ಅಲೆನ್ ಅವರನ್ನು ಸಂಪರ್ಕಿಸಿ, ತಾನು ಸಂಗ್ರಹಿಸಿದ ಚಿನ್ನದಿಂದ ನಿಶ್ಚಿತಾರ್ಥದ ಉಂಗುರ ತಯಾರಿಸಿಕೊಡುವಂತೆ ಕೇಳಿಕೊಂಡ. ಜ್ಯಾಕ್‌ನ ಈ ವಿಭಿನ್ನ ಪ್ರಯತ್ನ ಝಾಕ್ ಅವರಿಗೂ ಕುತೂಹಲ ಮೂಡಿಸಿತು. ಇಂತಹ ಬೇಡಿಕೆ ತಮಗೆ ಹೊಸದಾಗಿತ್ತು. ಚಿನ್ನವನ್ನು ಕರಗಿಸಿ, ಸೂಕ್ತ ಅಚ್ಚಿನ ಮೂಲಕ ಉಂಗುರದ ಆಕಾರ ನೀಡುವ ಕೆಲಸ ಆರಂಭವಾಯಿತು.

ತಾನು ತಿಂಗಳುಗಟ್ಟಲೆ ಸಂಗ್ರಹಿಸಿದ ಚಿನ್ನವು ನಿಧಾನವಾಗಿ ಉಂಗುರದ ರೂಪ ಪಡೆಯುವುದನ್ನು ನೋಡಿದ ಜ್ಯಾಕ್‌ಗೆ ಅದು ಅವಿಸ್ಮರಣೀಯ ಕ್ಷಣವಾಗಿತ್ತು. ಉಂಗುರ ಸಿದ್ಧವಾದಾಗ ತನ್ನ ಪ್ರಯತ್ನ ಸಾರ್ಥಕವಾಯಿತು ಎಂಬ ಸಂತೋಷ ಆತನಲ್ಲಿತ್ತು.

ಹೈಕಿಂಗ್‌ಗೆ ಕರೆದುಕೊಂಡು ಹೋಗಿ ಸರ್ಪ್ರೈಸ್ ಪ್ರಪೋಸಲ್!

ಉಂಗುರ ಸಿದ್ಧವಾದರೂ ಜ್ಯಾಕ್ ತನ್ನ ಯೋಜನೆಯ ಸುಳಿವನ್ನು ಪ್ರೇಯಸಿ ಜೋಆನ್‌ಗೆ ಬಿಟ್ಟುಕೊಡಲಿಲ್ಲ. ಎಲ್ಲವನ್ನೂ ರಹಸ್ಯವಾಗಿಯೇ ಇಟ್ಟುಕೊಂಡಿದ್ದ. ಬಳಿಕ ಆಕೆಯನ್ನು ಹೈಕಿಂಗ್‌ಗೆ ಕರೆದುಕೊಂಡು ಹೋದ. ಅಲ್ಲಿ ತನ್ನ ಮೊಬೈಲ್‌ನಲ್ಲಿ ನದಿಯ ಬಳಿ ಚಿನ್ನ ಹುಡುಕುತ್ತಿದ್ದ ದೃಶ್ಯಗಳನ್ನು ಒಳಗೊಂಡ ವಿಡಿಯೊವನ್ನು ತೋರಿಸಿದ.

ಆರಂಭದಲ್ಲಿ ಜೋಆನ್‌ಗೆ ಆ ವಿಡಿಯೊ ಏಕೆ ತೋರಿಸುತ್ತಿದ್ದಾನೆ ಎಂಬುದು ಅರ್ಥವಾಗಲಿಲ್ಲ. ನದಿಯಲ್ಲಿ ಚಿನ್ನ ಹುಡುಕುತ್ತಿರುವ ದೃಶ್ಯಗಳನ್ನು ನೋಡಿ, ಇದರಲ್ಲಿ ವಿಶೇಷವೇನಿದೆ ಎಂದುಕೊಂಡಿದ್ದಳು. ಆದರೆ ವಿಡಿಯೊ ಮುಂದುವರಿದಂತೆ, ಜ್ಯಾಕ್ ಚಿನ್ನ ಸಂಗ್ರಹಿಸುತ್ತಿದ್ದ ಉದ್ದೇಶವೇನು ಎಂಬುದು ಆಕೆಗೆ ನಿಧಾನವಾಗಿ ಅರ್ಥವಾಯಿತು. ತನ್ನ ಪ್ರೀತಿಗಾಗಿ ಆತನೇ ಚಿನ್ನ ಸಂಗ್ರಹಿಸಿ ಉಂಗುರ ತಯಾರಿಸಿದ್ದಾನೆ ಎಂಬ ಸತ್ಯ ತಿಳಿದ ಕ್ಷಣ ಆಕೆ ಭಾವುಕಳಾದಳು.

“ಮೊದಲು ಆತ ನದಿಯಲ್ಲಿ ಚಿನ್ನ ಹುಡುಕುತ್ತಿರುವ ವಿಡಿಯೊ ತೋರಿಸುತ್ತಿದ್ದಾನೆ ಎಂದುಕೊಂಡೆ. ಆದರೆ ಅರ್ಧ ವಿಡಿಯೊ ನೋಡುವಷ್ಟರಲ್ಲಿ, ಇದು ಉಂಗುರ ತಯಾರಿಸುವ ಪ್ರಕ್ರಿಯೆ ಎಂಬುದು ಅರ್ಥವಾಯಿತು. ತಕ್ಷಣವೇ ಕಣ್ಣೀರು ಬಂತು. ಆ ಕ್ಷಣ ನನಗೆ ತುಂಬಾ ವಿಶೇಷವಾಗಿತ್ತು” ಎಂದು ಜೋಆನ್ ತನ್ನ ಸಂತೋಷವನ್ನು ಹಂಚಿಕೊಂಡಿದ್ದಾಳೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Amruthadhaare Serial ಮುಗಿಯತ್ತಾ? ಪಾರ್ಟ್​ 2 ಯಾವಾಗ? ನಟಿ ಛಾಯಾ ಸಿಂಗ್​ ಹೇಳಿದ್ದೇನು ಕೇಳಿ
“ಅಮ್ಮ ಎಲ್ಲಿ, ಅಪ್ಪ ಎಲ್ಲಿ?…" ಹೆತ್ತವರನ್ನು ಕಳೆದುಕೊಂಡ 6 ವರ್ಷದ ಕಂದಮ್ಮನ ಕಣ್ಣೀರು, ಮನಕಲಕುವ ಘಟನೆ