
ದಾಂಪತ್ಯ ಜೀವನ, ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವ ಮಾತೇ ಎಲ್ಲೆಲ್ಲೂ ಕೇಳಿಬರುತ್ತಿದೆ. ಆದರೆ, ಈ ಬೆಲೆಯನ್ನು ಕಾಪಾಡಿಕೊಂಡು ಬರುವವರು ಅಂದಿಗೂ ಇದ್ದಾರೆ, ಇಂದೂ ಇದ್ದಾರೆ, ಮುಂದೆಯೂ ಇರುತ್ತಾರೆ. ಕಾಲ ಬದಲಾದಂತೆ, ಹಿಂದಿನ ಕಾಲವೇ ಚೆನ್ನಾಗಿತ್ತು. ಸಂಬಂಧಗಳಿಗೆ ಈಗ ಬೆಲೆಯೇ ಇಲ್ಲ ಎನ್ನುವ ಮಾತು ಕೇಳಿಬರುತ್ತದೆಯಾದರೂ, ಈ ಮಾತು ಹಲವು ದಶಕಗಳಿಂದಲೂ ಕೇಳಿಬರುತ್ತಲೇ ಇದ್ದು, ಬೆಲೆ ಕೊಡುವವರು ಕೊಡುತ್ತಲೇ ಇದ್ದಾರೆ, ಕೊಡದವರು ಕಾಲ ಯಾವುದೇ ಇದ್ದರೂ ಕೊಡುವುದೇ ಇಲ್ಲ. ಅದರಲ್ಲಿಯೂ ದಾಂಪತ್ಯ ಜೀವನದ ಸಂಬಂಧಗಳ ಬಗ್ಗೆ ನೆಗೆಟಿವ್ ಮಾತುಗಳೇ ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ, ಇಲ್ಲೊಂದು ವಿಡಿಯೋ ಕಣ್ಣೀರು ತರಿಸುವಂತಿದೆ.
ಮೂರು ತಿಂಗಳಿನಿಂದ ಕಾಣೆಯಾಗಿರುವ ಪತ್ನಿಯನ್ನು ಈ ಪತಿ, ಹುಡುಕದ ಜಾಗವಿಲ್ಲ, ಅಲೆಯದ ಪೊಲೀಸ್ ಠಾಣೆ ಇಲ್ಲ. ಆದರೆ ಎಲ್ಲವೂ ವ್ಯರ್ಥವಾಗಿತ್ತು. ಆದರೆ ಪತ್ನಿ ಬದುಕಿದ್ದಾಳೆ, ಬಂದೇ ಬರುತ್ತಾಳೆ ಎನ್ನುವ ಆಸೆ ಮಾತ್ರ ಇವರು ಬಿಟ್ಟಿರಲಿಲ್ಲ. ಪತ್ನಿಗಾಗಿ ಹಂಬಲಿಸದ ದಿನವಿಲ್ಲ, ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಅಲೆಯುತ್ತಲೇ ಇದ್ದರು. ಅವರ ಆ ಅಲೆದಾಟಕ್ಕೆ ಕೊನೆಗೂ ಮುಕ್ತಿಯೇನೋ ಸಿಕ್ಕಿತು. ಪತ್ನಿಯೂ ಸಿಕ್ಕಳು, ಆದರೆ ಸಿಕ್ಕಿದ್ದು ಭಿಕ್ಷುಕಿಯಾಗಿ, ಮತಿ ಭ್ರಮಣೆಯಿಂದ ಕೂಡಿದವಳಾಗಿ!
ಪತ್ನಿಯನ್ನು ಆ ಸ್ಥಿತಿಯಲ್ಲಿ ನೋಡಿದ ಪತಿಗೆ ನೋವು, ನಲಿವು, ಖುಷಿ, ದುಃಖ.... ಅಬ್ಬಾ ಎಲ್ಲವೂ ಒಂದೇ ಬಾರಿ ಆಗಿ, ಆಕೆಯ ಸ್ಥಿತಿಯನ್ನೂ ಗಮನಿಸದೇ, ಆಕೆ ಭಿಕ್ಷುಕಿಯಾಗಿ ಕುಳಿತದ್ದನ್ನೂ ಗಮನಿಸದೇ, ಅಲ್ಲಿಯ ಕೊಳಕು, ಹರಿದ ಬಟ್ಟೆ ಯಾವುದನ್ನೂ ಲೆಕ್ಕಿಸದೇ ಪತ್ನಿ ಸಿಕ್ಕ ಖುಷಿಯಲ್ಲಿ ಕಣ್ಣೀರಾದ ಪತಿ ಆಕೆಯನ್ನು ಹೋಗಿ ಜೋರಾಗಿ ಅಳುತ್ತಾ ತಬ್ಬಿಕೊಂಡಿರುವ ವಿಡಿಯೋ ವೈರಲ್ ಆಗಿದ್ದು, ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವವರ ಮಾತಿಗೆ ಏಟು ಕೊಟ್ಟಂತಿದೆ. ಪತ್ನಿಯನ್ನು ಆ ಸ್ಥಿತಿಯಲ್ಲಿ ನೋಡಿದ ಪತಿಗೆ ಅದೆಷ್ಟು ನೋವಾಗಿತ್ತೋ, ಆ ನೋವೆಲ್ಲಾ ಆಕೆ ಸಿಕ್ಕಳು ಎನ್ನುವ ಖುಷಿಯಲ್ಲಿ ಇತ್ತು.
ಆದರೆ, ಆಕೆಯ ಮತಿ ಭ್ರಮಣೆಯಾಗಿರುವುದು ವಿಡಿಯೋದಲ್ಲಿ ತಿಳಿಯುತ್ತದೆ. ಅಲ್ಲಿಗೆ ಬಂದದ್ದು ತನ್ನ ಪತಿ ಎಂದೂ ಆಕೆಗೆ ತಿಳಿಯಲಿಲ್ಲ. ಕಾಣೆಯಾಗಿರೋ ಮೂರು ತಿಂಗಳಿನಲ್ಲಿ ಆಗಿದ್ದೇನು, ಈ ಅವಧಿಯಲ್ಲಿ ಮತಿಭ್ರಮಣೆಯಾಗಿ ಹುಚ್ಚಿಯಂತೆ ಅಲೆಯುವ ಸ್ಥಿತಿ ಏಕೆ ಬಂತು, ಭಿಕ್ಷುಕಿಯಾಗಿದ್ದು ಏಕೆ ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಡುತ್ತಿದ್ದರೂ, ದಂಪತಿಯ ಈ ಪುನರ್ಮಿಲನದ ದೃಶ್ಯ ಮಾತ್ರ ಹೃದಯ ಕಲುಕುವಂತಿದೆ. ದಾಂಪತ್ಯ ಜೀವನ ಹೇಗಿರಬೇಕು, ಪತಿ-ಪತ್ನಿಯ ಸಂಬಂಧ ಹೇಗಿರಬೇಕು ಎನ್ನುವುದನ್ನು ಇದು ತೋರಿಸುವಂತಿದೆ. sozoo.today ಹಂಚಿಕೊಂಡಿರುವ ವಿಡಿಯೋ ಇಲ್ಲಿದೆ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.