
ವೈವಾಹಿಕ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿ ತನ್ನ ಪತ್ನಿಯ ವಿರುದ್ಧ ಅನೈತಿಕ ಸಂಬಂಧದ ಆರೋಪ ಮಾಡಿ, ತಾನು ಮಗುವಿನ ಜೈವಿಕ ತಂದೆಯಲ್ಲ ಎಂದು ಹೇಳಿ ವಿಚ್ಛೇದನ ಕೇಳಿರುವ ಸಂದರ್ಭದಲ್ಲಿ, ಮಗುವಿನ ಪಿತೃತ್ವ ಪರೀಕ್ಷೆ ಅಥವಾ DNA ಟೆಸ್ಟ್ ನಡೆಸಬಹುದು ಎಂದು ಕೋರ್ಟ್ ಹೇಳಿದೆ.
ಸಾಮಾನ್ಯವಾಗಿ ಮದುವೆಯ ಅವಧಿಯಲ್ಲಿ ಜನಿಸಿದ ಮಗುವಿನ ಕಾನೂನುಬದ್ಧ ಪಿತೃತ್ವವನ್ನು ಪ್ರಶ್ನಿಸಲಾಗುವುದಿಲ್ಲ. ಆದರೆ ವಿಚ್ಛೇದನದಂತಹ ವೈವಾಹಿಕ ವಿವಾದದಲ್ಲಿ, ಮಗುವಿನ ಪಿತೃತ್ವವೇ ಪ್ರಕರಣದ ಪ್ರಮುಖ ವಿಚಾರವಾಗಿದ್ದರೆ, ಅಗತ್ಯವಿದ್ದ ಸಂದರ್ಭದಲ್ಲಿ ಡಿಎನ್ ಎ ಪರೀಕ್ಷೆಗೆ ಆದೇಶಿಸಬಹುದು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಪ್ರಸನ್ನ ಬಿ. ವರಾಳೆ ಅವರ ಪೀಠ ಈ ತೀರ್ಪು ನೀಡಿದೆ. ಮಗುವಿನ ಡಿಎನ್ ಎ ಪರೀಕ್ಷೆಯನ್ನು ವಿರೋಧಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ. ಇಂಥ ಸಂದರ್ಭದಲ್ಲಿ ಡಿಎನ್ ಎ ಪರೀಕ್ಷೆ ಮಾಡಿಸಬಹುದು ಎಂದು ಕೋರ್ಟ್ ಹೇಳಿದೆ.
ಕೋರ್ಟ್ ನಲ್ಲಿ ಮಹಿಳೆ, ಮಗುವಿನ ಡಿಎನ್ ಎ ಪರೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದರು. ವ್ಯಕ್ತಿಯನ್ನು ಬಲವಂತವಾಗಿ ಡಿಎನ್ ಎ ಪರೀಕ್ಷೆಗೆ ಒಳಪಡಿಸಲು ಸಾಧ್ಯವಿಲ್ಲ. ಅಲ್ಲದೆ, ಡಿಎನ್ ಎ ಪರೀಕ್ಷೆ ನಡೆಸದೆಯೇ ಪತಿಯ ವಿಚ್ಛೇದನ ಅರ್ಜಿಯನ್ನು ವಿಚಾರಣೆ ಮಾಡಬೇಕು ಎಂದು ಅವರು ಮನವಿ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ಪತಿ ಈಗಾಗಲೇ ಹೈದರಾಬಾದ್ನ ಲ್ಯಾಬ್ನಲ್ಲಿ ಮಾಡಿಸಿದ ಡಿಎನ್ ಎ ಪರೀಕ್ಷೆಯ ವರದಿಯನ್ನು ಕೋರ್ಟ್ಗೆ ಸಲ್ಲಿಸಿದ್ದರು. ಆ ವರದಿಯಲ್ಲಿ, ಮಗುವಿನ ತಂದೆಯಾಗಿರುವ ಸಾಧ್ಯತೆ ಶೂನ್ಯ ಎಂದು ತಿಳಿಸಲಾಗಿತ್ತು.
ಈ DNA ವರದಿ ಪಿತೃತ್ವ ಪರೀಕ್ಷೆಗೆ ಆದೇಶಿಸುವುದಕ್ಕೆ ಪ್ರಾಥಮಿಕ ಆಧಾರವಾಗಿದೆ ಎಂದು ಕೋರ್ಟ್ ಗಮನಿಸಿದೆ. ಜೊತೆಗೆ, ಪತಿ ವಿಚ್ಛೇದನ ಕೇಳಿರುವ ಪ್ರಮುಖ ಕಾರಣವೇ ಮೋಸ. ಹೀಗಾಗಿ ಆ ಆರೋಪ ಸತ್ಯವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಲು ಡಿಎನ್ ಎ ಪರೀಕ್ಷೆ ಬಹಳ ಮಹತ್ವದ್ದಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.