
ಬೀಜಿಂಗ್ (ಏ.14): ಪ್ರೀತಿ ಎಂಬುದು ಹೃದಯಗಳ ವಿಷಯ. ಅಲ್ಲಿ ಆಸ್ತಿ-ಅಂತಸ್ತಿನ ವಿಚಾರ ಬರಬಾರದು ಅನ್ನೋರಿದ್ದಾರೆ? ಅದೇನೇ ಇದ್ದರೂ, ಹಣವಿದ್ದರೆ ಮಾತ್ರವೇ ಪ್ರೀತಿ ಅನ್ನೋದು ಸಾರ್ವಕಾಲಿಕ ಸತ್ಯ. ಅದಕ್ಕೆ ಉದಾಹರಣೆ ಎನ್ನುವಂತೆ ಚೀನಾದಲ್ಲಿ ವೈರಲ್ ಆಗಿರುವ ವಿಡಿಯೋ ಸಾಕ್ಷಿ ನೀಡಿದೆ. ವಿಮಾನದ ಗಗನಸಖಿಯೊಬ್ಬಳಿಗೆ ತನ್ನನ್ನು ಮದುವೆಯಾಗುವಂತೆ ಬಡ ಯುವಕನೊಬ್ಬ ಹೂವಿನೆ ಬೊಕ್ಕೆ ನೀಡಿ ಪ್ರಪೋಸ್ ಮಾಡಿದ್ದ. ಆದರೆ, ಆತನ ಸಾಮಾನ್ಯ ಬಟ್ಟೆ ನೋಡಿ ಅಲ್ಲಿಯೇ ಈ ಪ್ರಪೋಸಲ್‌ಅನ್ನು ಗಗನಸಖಿ ತಿರಸ್ಕರಿಸಿದ್ದಳು.ಆದರೆ, ಮುಂದಿನ ಕ್ಷಣವೇ ನಡೆದ ಘಟನೆ ಆಕೆಯನ್ನು ಪಶ್ಚಾತ್ತಾಪ ಪಡುವಂತೆ ಮಾಡಿದೆ.
ವೈರಲ್ ವಿಡಿಯೋದ ಪ್ರಕಾರ, ಯುವಕನೊಬ್ಬ ದೊಡ್ಡದಾದ ಗುಲಾಬಿ ಹೂವಿನ ಬೊಕ್ಕೆಯೊಂದಿಗೆ ಖಾಸಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾನೆ. ಅಲ್ಲಿ ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯ ಮುಂದೆ ಬೊಕ್ಕೆ ಕೊಟ್ಟು ಪ್ರೇಮ ನಿವೇದನೆ ಕೂಡ ಮಾಡಿದ್ದಾನೆ. ಆದರೆ, ಆ ಯುವಕ ಧರಿಸಿದ್ದ ಸಾಮಾನ್ಯ ಬಟ್ಟೆ ಮತ್ತು ಆತನ ಸರಳ ನೋಟವನ್ನು ಕಂಡು ಆ ಗಗನಸಖಿ ಆತನ ಪ್ರಪೋಸಲ್ ಒಪ್ಪಿಲ್ಲ. "ನಾನು ನಿನ್ನನ್ನು ಮದುವೆಯಾಗಲು ಸಾಧ್ಯವಿಲ್ಲ" ಎಂದು ನೇರವಾಗಿ ಹೇಳಿ, ಆತನ ಪ್ರಪೋಸಲ್ ಅನ್ನು ತಿರಸ್ಕರಿಸಿದ್ದಾಳೆ.
ಯುವತಿ ತಿರಸ್ಕರಿಸಿದ ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಕೋಟಿ ಬೆಲೆಯ ಐಷಾರಾಮಿ ಬೆಂಟ್ಲಿ (Bentley) ಕಾರೊಂದು ಬಂದು ನಿಲ್ಲುತ್ತದೆ. ಕಾರಿನಿಂದ ಇಳಿದ ಚಾಲಕ ಸೀದಾ ಆ ಯುವಕನ ಬಳಿ ಬಂದು ಆತನಿಗೆ ಛತ್ರಿ ಹಿಡಿದು ಕಾರ್‌ನ ಬಾಗಿಲನ್ನು ತೆರೆಯುತ್ತಾನೆ. ಇದನ್ನು ಕಂಡ ಗಗನಸಖಿಯ ಕಣ್ಣುಗಳು ಅಚ್ಚರಿಯಿಂದ ಅರಳುತ್ತವೆ. ತಾನು ತಿರಸ್ಕರಿಸಿದ ಯುವಕ ಸಾಮಾನ್ಯ ವ್ಯಕ್ತಿಯಲ್ಲ, ಬದಲಿಗೆ ಅತೀವ ಶ್ರೀಮಂತ ಎಂಬುದು ಆಕೆಗೆ ಆಗ ಗೊತ್ತಾಗಿದೆ.
ತಕ್ಷಣವೇ ತನ್ನ ನಿರ್ಧಾರ ಬದಲಿಸಿದ ಆಕೆ, ಆತನ ಬಳಿ ಹೋಗಿ ಮಾತನಾಡಿಸಲು ಪ್ರಯತ್ನಿಸುತ್ತಾಳೆ. ಆದರೆ, ಆ ಯುವಕ ಆಕೆಯನ್ನು ಒಮ್ಮೆ ನೋಡಿ, ಮೌನವಾಗಿಯೇ ಕಾರು ಏರಿ ಹೊರಟು ಹೋಗಿದ್ದಾನೆ. ಆಕೆ ಕೇವಲ ಹಣ ಮತ್ತು ಅಂತಸ್ತನ್ನು ನೋಡಿ ಪ್ರೀತಿ ಮಾಡುತ್ತಿದ್ದಾಳೆ ಎಂಬುದು ಯುವಕನಿಗೆ ಅರಿವಾಗಿತ್ತು. ಆತ ಹಿಂತಿರುಗಿ ನೋಡದೆ ಅಲ್ಲಿಂದ ನಿರ್ಗಮಿಸುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಪರ ವಿರೋಧ ಕಾಮೆಂಟ್ ಹಾಕುತ್ತಿದ್ದಾರೆ. ಕೆಲವರು "ಸರಿಯಾದ ಪಾಠ ಕಲಿಸಿದ" ಎಂದು ಯುವಕನನ್ನು ಶ್ಲಾಘಿಸಿದರೆ, ಇನ್ನು ಕೆಲವರು ಇದು ಕೇವಲ ಸಾಮಾಜಿಕ ಜಾಗೃತಿಗಾಗಿ ಅಥವಾ ವೈರಲ್ ಆಗಲು ಸೃಷ್ಟಿಸಿದ 'ಸ್ಟೇಜ್ಡ್' (Staged) ವಿಡಿಯೋ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟನೆ ಎಲ್ಲಿ ನಡೆಯಿತು ಮತ್ತು ಇದರಲ್ಲಿರುವವರು ಯಾರು ಎಂಬುದು ಇನ್ನೂ ಅಧಿಕೃತವಾಗಿ ಸಾಬೀತಾಗಿಲ್ಲ. ಆದರೆ, ಹಣಕ್ಕಿಂತ ಗುಣ ಮುಖ್ಯ ಎಂಬ ಸಂದೇಶವನ್ನಂತೂ ಈ ವಿಡಿಯೋ ಸಾರುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.