ಬಾಲ್ಯವೆಂಬ ಗೋಲ್ಡನ್ ಡೇಸ್, ಕುಂಟಲ ಹಣ್ಣಿನ ಮಧುರ ನೆನಪುಗಳು!

Published : Apr 20, 2022, 05:13 PM IST
ಬಾಲ್ಯವೆಂಬ ಗೋಲ್ಡನ್ ಡೇಸ್, ಕುಂಟಲ ಹಣ್ಣಿನ ಮಧುರ ನೆನಪುಗಳು!

ಸಾರಾಂಶ

ಬಾಲ್ಯದ ನೆನಪುಗಳೇ ಅತೀ ಮಧುರ. ಮನದ ಮೂಲೆಯಲ್ಲಿ ಬೆಚ್ಚಗೆ ಕುಳಿತ ಈ ನೆನಪುಗಳೆಂಬ ಸಿಹಿ ಕ್ಷಣಗಳು ಒಂದು ಬಾರಿ ಹೊರ ಬಂದರೆ ಸಾಕು ಸಿನಿಮಾ ರೀಲ್‌ನಂತೆ ಮನದಲಲಿ ಸುತ್ತು ಹೊಡೆಯುತ್ತಿರುತ್ತವೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಬೆಳೆದ ಮಕ್ಕಳ ಬಾಲ್ಯ ಒಂಥರಾ ಡಿಫರೆಂಟ್‌ ಆಗಿರುತ್ತದೆ. ಇದು ಬಹಳ ಅಮೂಲ್ಯ. ಅನೇಕರು ಆ ದಿನಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಬಾಲ್ಯವೆಂಬ ದಿನಗಳು ಮತ್ತೆ ಬಾರದೇ ಎಂದು ಪರಿತಪಿಸುತ್ತಾರೆ. 

ಶಶಿಧರ್ ನಾಯ್ಕ ಎ, ಎಸ್. ಡಿ. ಎಂ ಸ್ನಾತಕೋತ್ತರ ಕೇಂದ್ರ ಉಜಿರೆ.

ನಾವು ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದಾಗ ಶಾಲೆಗಳು ಆರಂಭವಾಗುತ್ತಿದ್ದದ್ದೇ  ಜೂನ್  ತಿಂಗಳ  ಆರಂಭದಲ್ಲಿ. ಹಿಂದಿನ ದಿನಗಳಲ್ಲಿ ಗ್ರಾಮಾಂತರ  ಪ್ರದೇಶದಲ್ಲಿ ಇಂದಿನ  ರೀತಿ ಶಾಲೆಗೆ  ಹೋಗಲು  ಯಾವುದೇ  ವಾಹನಗಳ  ಸೌಕರ್ಯ ಇರಲಿಲ್ಲ. ಹೀಗಾಗಿ  ಶಾಲೆ  ಎಷ್ಟೇ ದೂರ  ಇದ್ದರೂ  ನಡೆದುಕೊಂಡೇ  ಹೋಗಬೇಕಿತ್ತು. ಹೀಗೆ  ಶಾಲೆಗೆ ನಡೆದುಕೊಂಡು  ಹೋಗುತ್ತಿರೋವಾಗ ಹೇಗೂ ಮಳೆಗಾಲದ ಆರಂಭದ ತಿಂಗಳ ಕಾಲವಾದ್ದರಿಂದ  ಕುಂಟಲ  ಹಣ್ಣಿನ ಪರ್ವ ಕಾಲ ಕೂಡ. ಈ ಹಣ್ಣನ್ನು ಕೀಳುವಾಗ   ಅದೆಷ್ಟೋ  ಬಾರಿ  ಮರದಿಂದ  ಬಿದ್ದು  ಏಟು ಮಾಡಿಕೊಂಡದ್ದು  ಇದೆ.

ಕುಂಟಲ ಹಣ್ಣನ್ನು ತಿಂದ ಮೇಲೆ   ನಾಲಗೆ  ನೀಲಿ  ಬಣ್ಣಕ್ಕೆ  ತಿರುಗುತ್ತದೆ. ಹೀಗಾಗಿ  ಈ ಹಣ್ಣನ್ನು ತಿನ್ನುವ ಮೊದಲು ಮೇಲೆ ನಮ್ಮ  ಗೆಳೆಯರ ಜೊತೆ  ಒಂದು  ಪಂತ (ಬೆಟ್ಟಿಂಗ್ ) ನಡೆಯುತ್ತಿತ್ತು.  ಅದೇನಂದ್ರೆ  ಹಣ್ಣು ತಿಂದ  ಮೇಲೆ ಯಾರ  ನಾಲಗೆ   ಹೆಚ್ಚು ನೀಲಿ   ಆಗುತ್ತದೆ ಎಂದು.  ಯಾರ  ನಾಲಗೆ  ಹೆಚ್ಚು  ನೀಲಿ  ಆಗುತ್ತೆ  ಅವರು  ಅವರು  ಹೆಚ್ಚು  ಹಣ್ಣನ್ನ  ತಿಂದಿದ್ದಾರೆ  ಅಂತ  ಲೆಕ್ಕ. ಅದೊಂತರ  ಆಗಿನ  ಕಾಲದ ಮಜಾ. ಇದರ ನಂತ್ರ  ತರಗತಿಗೆ ಪ್ರವೇಶ  ಆದ  ನಂತರ  ಈ ಹಣ್ಣನ್ನು  ತಿಂದು  ತರಗತಿಗೆ  ಪ್ರವೇಶ  ಮಾಡಿದಕ್ಕೆ  ಮೇಷ್ಟ್ರ  ಕೈಯಿಂದ ಅದೆಷ್ಟೋ  ಬಾರಿ ಪೆಟ್ಟು  ತಿಂದ ನೆನಪು  ಕೂಡ ಇದೆ. ಅದಲ್ಲದೆ ನಾವು ಓದುತಿದ್ದದ್ದು ಪಕ್ಕಾ  ಕನ್ನಡ  ಮಾಧ್ಯಮ ಶಾಲೆಯಲ್ಲಿ.  ಹೀಗಾಗಿ  ಶಾಲಾ  ಸಮವಸ್ತ್ರ ಕೂಡ  ನೀಲಿ ಬಣ್ಣದ್ದೇ.  ಅಂಗಿ  ಆಕಾಶ  ನೀಲಿ, ಚಡ್ಡಿ  ಕಡು ನೀಲಿ.  ಇದರಿಂದಾಗಿ ಕುಂಟಲ ಹಣ್ಣನ್ನು ಮರದಿಂದ ಕೊಯ್ದು   ಜೇಬಲ್ಲಿ  ಹಾಕಿ  ಸ್ಕೂಲ್  ತನಕ  ತಿಂದು ಕೊಂಡು ಹೋಗುತಿದ್ದಾಗ  ಹಣ್ಣಿನ ಬಣ್ಣ  ಚಡ್ಡಿ ಗೆ ಕಲೆ  ಆಗುತಿದ್ದದ್ದು ಗೊತ್ತಾಗುತ್ತಿರಲಿಲ್ಲ.  

  ಸಂಜೆ  4.30 ಕ್ಕೆ  ಶಾಲೆ  ಬಿಟ್ರು ಮತ್ತೆ ಮನೆಗೆ ತಲುಪುವಾಗ ಸಂಜೆ 7 ಗಂಟೆ.  ಯಾಕಂದ್ರೆ  ಮತ್ತೆ  ಈ ಹಣ್ಣಿನ  ಮರವನ್ನು ಅರಸಿ  ಹೋಗುತ್ತಾ, ಆ ಮರ ಸಿಕ್ಕಿದ ಮೇಲೆ ಅದಕ್ಕೆ ಹತ್ತಿ  ಆ ಹಣ್ಣನ್ನು  ಕೊಯ್ಯುತ್ತ, ಹರಟೆ  ಹೊಡೆಯುತ್ತ, ಹಣ್ಣಿನ  ವಿಷಯಕ್ಕೆ  ಸಣ್ಣ ಪುಟ್ಟ  ಜಗಳ ಕೂಡ ಆಗುತಿದ್ದಂತಹ ವಿಚಾರಗಳನ್ನು  ಈಗ  ನೆನೆಸಿಕೊಂಡರೆ ನಗು ಕೂಡ  ಬರುತ್ತೆ.  ಕೆಲವೊಂದು ಬಾರಿ ಹಣ್ಣಿನ  ವಿಚಾರದಲ್ಲಿ ಅದೆಷ್ಟೋ ಬಾರಿ  ಒಬ್ಬರೊಬ್ಬರು ಪರಸ್ಪರ  ಕೈ ಮಿಲಾಯಿಸಿ ಜಗಳ ಆಡಿ,   ಇಬ್ಬರ  ಮೈಯಲ್ಲಿ ರಕ್ತ ಬರಿಸಿದ್ದು  ಇದೆ. ಅಲ್ಲದೆ  ಈ ಕುಂಟಲ  ಹಣ್ಣನ್ನು   ಒಬ್ಬರೊಬ್ಬರ  ಮೈಗೆ ಬಿಸಾಡಿಕೊಂಡು  ತಮಾಷೆ ಮಾಡಿದ್ದು  ಕೂಡ  ಇದೆ. ಇದಲ್ಲದೆ  ಹೆಚ್ಚು  ಹಣ್ಣಾದ ಹಣ್ಣನ್ನು  ಮತ್ತೊಬ್ರ  ಸ್ಕೂಲ್  ಯುನಿಫಾರ್ಮ್ ಗೆ ಉಜ್ಜಿ  ಹೋಳಿ  ಹಬ್ಬದಂತೆ  ನೀಲಿ   ಬಣ್ಣದ ಓಕುಳಿ ಆಡಿದ್ದು  ಇದೆ.\

ಇದರ ಎಲೆಯನ್ನು  ಬಳಸಿಕೊಂಡು  ಸೀಟಿ ರೀತಿಯಲ್ಲಿ ಮಾಡಿ, ಅದನ್ನ ಊದಿಕೊಂಡು  ಗೆಳೆಯರ ಜೊತೆ  ನಡೆದುಕೊಂಡು  ಹೋಗುವುದೆಂದರೆ  ಅದರ ಮಜಾನೇ  ಬೇರೆ.  ಇಂದಿನ  ಕಾಲದ ರೀತಿಯಲ್ಲಿ   ವಾಹನಗಳು ನಮ್ಮ  ಊರಲ್ಲಿ ಸಂಚರಿಸುತ್ತಿರಲಿಲ್ಲ. ಒಂದು  ಲಾರಿ  ಬಂತೆಂದರೆ  ಹೋ  ಹೋ ಎಂದು  ಬೊಬ್ಬೆ  ಹಾಕುತ್ತಾ ಅದರ  ಹಿಂದೆಯೇ  ಓಡಾಟ. ಹೀಗೆ ದೊಡ್ಡ  ದೊಡ್ಡ ವಾಹನಗಳನ್ನು  ಕಂಡಿರದ  ನಮಗೆ  ಈ ಕುಂಟಲ ಹಣ್ಣಿನ ಎಲೆಯಿಂದ ಮಾಡಿದ ಸೀಟಿಯಿಂದ ಮಾಡಿದ   ಶಬ್ದವನ್ನು    ವಾಹನಗಳ ಶಬ್ದದ ರೀತಿಯಲ್ಲಿ  ಅನುಕರಣೆ  ಮಾಡುತಿದ್ದೆವು. ಆ ಬಾಲ್ಯದಲ್ಲಿ, ಆ  ಸಮಯದಲ್ಲಿ    ಅದೊಂತರ  ಸಂತೋಷದ ದಿನಗಳು.
ಕೆಲವೊಂದು ಸಂದರ್ಭದಲ್ಲಿ  ಮರಕ್ಕೆ   ಹತ್ತಲು ಆಗದಿದ್ರೆ ದೊಡ್ಡ  ಛತ್ರಿಯನ್ನು ಕೊಕ್ಕೆಯ  ಹಾಗೆ  ಬಳಸಿಕೊಂಡು  ಆ ಮರದ ರೆಂಬೆಯನ್ನು  ಬಗ್ಗಿಸಿ ಕೊಯ್ಯುತಿದ್ದೆವು. ಅಂತಹ  ಸಂಧರ್ಭದಲ್ಲಿ  ಅಪ್ಪ  ತೆಗೆದುಕೊಟ್ಟ  ಕೊಡೆ ಮುರಿದು   ಹೋಗಿ  ಬೈಗಳು  ತಿಂದು, ಪೆಟ್ಟು ತಿಂದ ನೆನಪುಗಳು ಅಜರಾಮರವಾಗಿದೆ.

ಇದಲ್ಲದೆ  ಕೆಲವೊಂದು  ಬಾರಿ  ಈ ಹಣ್ಣನ್ನು  ಜಾಸ್ತಿ  ತಿನ್ನುತಿದ್ದರಿಂದ ಕೆಲವು ಸಲ  ಜ್ವರ  ಬಂದದ್ದು ಇದೆ. ಪೇಟೆಯ ಮುಖವನ್ನು ಕಾಣದೆ ,ಹೊಸ  ರೀತಿಯ ಹಣ್ಣುಗಳ  ಪರಿಚಯ ಇಲ್ಲದಿದ್ದ ಕಾಲದಲ್ಲಿ    ಇಂತಹ ಹಣ್ಣುಗಳೇ  ಸ್ಟ್ರಾಬೆರಿ, ಚೆರ್ರಿ  ಹಣ್ಣುಗಳೆಂದೆ ಪರಿಭಾವಿಸುತ್ತಿದ್ದೆವು.

ಆದರೆ  ಇಂದು ಆಧುನಿಕತೆಯ ಬೆಳವಣಿಗೆಯಿಂದ ಮಾನವ ಹಳ್ಳಿ  ತೊರೆದು ನಗರ  ಪ್ರದೇಶ ಸೇರಿರುವ ಕಾರಣ, ಈ ರೀತಿಯ  ಸುಂದರ ಸನ್ನಿವೇಶಗಳು ಮರೆ ಮಾಚಿ ಕಳೆದುಹೋದ ಘಟನೆಗಳನ್ನು  ಕೇವಲ ಮೆಲುಕು ಹಾಕುವಂತೆ ಆಗಿದೆ. ಸಾವಿರ ಕೋಟಿ ರೂಪಾಯಿ ಕೊಟ್ಟರೂ ಕಳೆದುಹೋದ ಸುಂದರ ಕ್ಷಣಗಳನ್ನು ಖರೀದಿಸಲಾಗದು. ಇಂತಹ ಸುಂದರ ಕ್ಷಣಗಳನ್ನು  ನೆನೆಯುವಾಗ  ಓ ಬಾಲ್ಯವೇ ಮತ್ತೆ ನೀ  ಬರಬಾರದೇ ಅನಿಸುತ್ತಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗೆದ್ದು .. ನಾಚುತ್ತಲೇ ಮಲಗುವ ಕೋಣೆಯ ರಹಸ್ಯ ಬಹಿರಂಗಪಡಿಸಿದ ಪಿಗ್ಗಿ
ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌