
ಮುಂಬೈ (ಮಾ.20): ಖ್ಯಾತ ರಿಯಾಲಿಟಿ ಶೋ 'ರೈಸ್ ಅಂಡ್ ಫಾಲ್' (Rise and Fall) ಮೂಲಕ ಜಗತ್ತಿಗೆ ತನ್ನ ಇನ್ನೊಂದು ರೂಪವನ್ನು ಸಂಜಯ್ ಬಂಗಾರ್ ಪುತ್ರ ತೋರಿದ್ದರು. ಅಲ್ಲಿಯವರೆಗೂ ತಾವು ಲಿಂಗ ಬದಲಾವಣೆ ಮಾಡಿರುವ ವಿಚಾರವನ್ನು ಅಷ್ಟು ಮುಕ್ತವಾಗಿ ಎಲ್ಲಿಯೂ ಹೇಳಿರಲಿಲ್ಲ. ಆದರೆ, ಈ ರಿಯಾಲಿಟಿ ಶೋ ಮೂಲಕ ಟೀಮ್ ಇಂಡಿಯಾ ಮಾಜಿ ಆಟಗಾರ ಹಾಗೂ ಮಾಜಿ ಕೋಚ್ ಸಂಜಯ್ ಬಂಗಾರ್ ಅವರ ಪುತ್ರ, ಅಧಿಕೃತವಾಗಿ ಪುತ್ರಿಯಾಗಿದ್ದು ಖಚಿತವಾಗಿತ್ತು. ತಮ್ಮ ಹೆಸರನ್ನು ಅವರು ಅನಾಯಾ ಬಂಗಾರ್ ಆಗಿ ಮಾಡಿಕೊಂಡಿರುವುದಾಗಿಯೂ ಹೇಳಿದ್ದರು. ಇತ್ತೀಚೆಗೆ ಅವರು ವೆಜಿನೋಪ್ಲಾಸ್ಟಿ ಅಂದರೆ, ಲಿಂಗ ದೃಢೀಕರಣ ಶಸ್ತ್ರಚಿಕಿತ್ಸೆ (Gender Affirming Surgery) ಮಾಡಿಕೊಂಡಿರುವುದಾಗಿ ಹೇಳಿದ್ದಾರೆ.
ವ್ಯಜಿನೋಪಾಸ್ಟಿ ಸರ್ಜರಿ ವ್ಯಕ್ತಿಯ ಜನನಾಂಗವನ್ನು ಸ್ತ್ರಿಲಿಂಗಕ್ಕೆ ಅನುಗುಣವಾಗಿ ಪುನರ್ ನಿರ್ಮಾಣ ಅಥವಾ ಶಸ್ತ್ರಚಿಕಿತ್ಸೆ ಮೂಲಕ ಮಾಡುವ ಸರ್ಜರಿಯಾಗಿದೆ. ಇದರ ಬೆನ್ನಲ್ಲಿಯೇ ಅವರು ಏಕಕಾಲದಲ್ಲಿ ತಂದೆ ಹಾಗೂ ತಾಯಿ ಎರಡೂ ಆದ ವಿಶ್ವದ ಮೊದಲ ವ್ಯಕ್ತಿ ಎನಿಸಿಕೊಳ್ಳುವ ಸಾಧ್ಯತೆಯೂ ಇದೆ. ಅದಕ್ಕೆ ಕಾರಣ ಅವರು ಹೇಳಿರುವ ಮಾತು. ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ (Gender Transition Surgery) ಒಳಗಾಗುವ ಮೊದಲೇ ತಮ್ಮ ವೀರ್ಯವನ್ನು ಶೇಖರಿಸಿಟ್ಟಿರುವುದಾಗಿ (Sperm Freezing) ಅನಯಾ ಬಹಿರಂಗಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ತಾಯಿಯಾಗುವ ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ಅವರು ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಕುರಿತು ಮನಬಿಚ್ಚಿ ಮಾತನಾಡಿದ ಅನಯಾ, "ನನ್ನ ಮುಂದೆ ಎರಡು ಆಯ್ಕೆಗಳಿದ್ದವು: ಒಂದು ದತ್ತು ತೆಗೆದುಕೊಳ್ಳುವುದು, ಅಥವಾ ಹಾರ್ಮೋನ್ ಚಿಕಿತ್ಸೆಗೂ ಮುನ್ನ ನನ್ನ ವೀರ್ಯವನ್ನು ಶೇಖರಿಸಿಡುವುದು. ನಾನು ಎರಡನೇ ಆಯ್ಕೆಯನ್ನು ಆರಿಸಿಕೊಂಡೆ. ಏಕೆಂದರೆ ಮುಂದೊಂದು ದಿನ ನಾನು ತಾಯಿಯಾಗಬೇಕೆಂದು ಬಯಸಿದರೆ ಅದು ಸಾಧ್ಯವಾಗಬೇಕು ಎಂಬುದು ನನ್ನ ಆಸೆ. ನಾನು ಸ್ವತಃ ಮಗುವಿಗೆ ಜನ್ಮ ನೀಡಲು ಸಾಧ್ಯವಿಲ್ಲದಿರಬಹುದು, ಆದರೆ ಬಾಡಿಗೆ ತಾಯ್ತನದ (Surrogacy) ಮೂಲಕ ಖಂಡಿತವಾಗಿಯೂ ಮಗುವನ್ನು ಪಡೆಯಬಹುದು," ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಅನಯಾ ಬಂಗಾರ್ ಅವರ ಈ ನಿರ್ಧಾರವು ಸಂಪೂರ್ಣವಾಗಿ ವೈಜ್ಞಾನಿಕವಾಗಿದೆ ಮತ್ತು ಇದು ಸಾಧ್ಯವಿದೆ. ವ್ಯಕ್ತಿಯೊಬ್ಬರು ಲಿಂಗ ಬದಲಾವಣೆಯ ಹಂತಕ್ಕೆ ಹೋಗುವ ಮೊದಲು ತಮ್ಮ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಉಳಿಸಿಕೊಳ್ಳಲು ವೀರ್ಯ ಅಥವಾ ಅಂಡಾಣುಗಳನ್ನು ಶೇಖರಿಸಿಡಬಹುದು. ಅನಯಾ ಅವರಿಗೆ ನೈಸರ್ಗಿಕವಾಗಿ ಗರ್ಭಧರಿಸಲು ಸಾಧ್ಯವಿಲ್ಲದಿದ್ದರೂ, ಅವರ ಶೇಖರಿಸಲ್ಪಟ್ಟ ವೀರ್ಯವನ್ನು ಬಳಸಿ, ದಾನಿಯ ಅಂಡಾಣು (Donor Egg) ಮತ್ತು ಬಾಡಿಗೆ ತಾಯಿಯ (Surrogate Mother) ಸಹಾಯದಿಂದ ಜೈವಿಕ ಮಗುವನ್ನು ಪಡೆಯಲು ಸಾಧ್ಯವಿದೆ.
ಪ್ರಸ್ತುತ ವೈದ್ಯಕೀಯ ವಿಜ್ಞಾನದ ಪ್ರಕಾರ, ಟ್ರಾನ್ಸ್‌ಜೆಂಡರ್ ಮಹಿಳೆಯರಿಗೆ ನೈಸರ್ಗಿಕ ಗರ್ಭಧಾರಣೆ ಸಾಧ್ಯವಿಲ್ಲ. ಗರ್ಭಧರಿಸಲು ಅಗತ್ಯವಿರುವ ಗರ್ಭಾಶಯ, ಫಾಲೋಪಿಯನ್ ಟ್ಯೂಬ್‌ಗಳು ಮತ್ತು ಹಾರ್ಮೋನ್ ವ್ಯವಸ್ಥೆಯು ಪುರುಷ ದೇಹದಲ್ಲಿ ಇರುವುದಿಲ್ಲ. ಕೆಲವು ದೇಶಗಳಲ್ಲಿ 'ಗರ್ಭಾಶಯ ಕಸಿ' (Uterus Transplant) ಪ್ರಯೋಗಗಳು ನಡೆಯುತ್ತಿದ್ದರೂ, ಟ್ರಾನ್ಸ್‌ಜೆಂಡರ್ ಮಹಿಳೆಯರಲ್ಲಿ ಇದುವರೆಗೆ ಯಶಸ್ವಿ ಗರ್ಭಧಾರಣೆ ವರದಿಯಾಗಿಲ್ಲ. ಹೀಗಾಗಿ, ಬಾಡಿಗೆ ತಾಯ್ತನವೇ ಸದ್ಯಕ್ಕೆ ಇರುವ ಏಕೈಕ ಮತ್ತು ಸುರಕ್ಷಿತ ಆಯ್ಕೆಯಾಗಿದೆ.
ಅನಯಾ ಅವರು ಹಾರ್ಮೋನ್ ಚಿಕಿತ್ಸೆಗೂ ಮುನ್ನವೇ ವೀರ್ಯ ಶೇಖರಿಸಿಡುವ ಮೂಲಕ ಅತ್ಯಂತ ಬುದ್ಧಿವಂತ ನಿರ್ಧಾರ ತಳೆದಿದ್ದಾರೆ. ಇಂದು ಜಗತ್ತಿನಾದ್ಯಂತ ಅನೇಕ ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಈ ಹಾದಿಯನ್ನು ತುಳಿಯುತ್ತಿದ್ದಾರೆ. ಅಮೇರಿಕನ್ ಸೊಸೈಟಿ ಫಾರ್ ರಿಪ್ರೊಡಕ್ಟಿವ್ ಮೆಡಿಸಿನ್ (ASRM) 2021ರ ವರದಿಯ ಪ್ರಕಾರ, ಲಿಂಗ ಬದಲಾವಣೆಗೂ ಮುನ್ನ ವೀರ್ಯ ಅಥವಾ ಅಂಡಾಣು ಶೇಖರಿಸಿಡುವುದು ಭವಿಷ್ಯದಲ್ಲಿ ಪೋಷಕರಾಗಲು ಇರುವ ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ (WHO) 2023ರ ತಾಂತ್ರಿಕ ವರದಿಯು ಕೂಡ 'ಫರ್ಟಿಲಿಟಿ ಪ್ರಿಸರ್ವೇಶನ್' ಎಂಬುದು ಟ್ರಾನ್ಸ್‌ಜೆಂಡರ್ ವ್ಯಕ್ತಿಗಳ ಸಂತಾನೋತ್ಪತ್ತಿ ಹಕ್ಕಿನ ಪ್ರಮುಖ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.