ಏನ್​ ಕೆಲ್ಸ ಹೇಳಿದ್ರೂ ಮಾಡತ್ತೆ ಈ ಕೋತಿ... ವಿಡಿಯೋ ನೋಡಿದ್ರೆ ನಮ್ ಮನೆಯಲ್ಲೂ ಇರ್ಬಾದಿತ್ತೇ ಅಂತೀರಾ ನೋಡಿ!

By Suchethana D  |  First Published Jan 9, 2025, 5:57 PM IST

ಎಂಥ ಕೆಲಸ ಹೇಳಿದ್ರೂ ಫಟಾಫಟ್​ ಮಾಡಿ ಮುಗಿಸುತ್ತೆ ಈ ಮಂಗ. ಅಬ್ಬಬ್ಬಾ ಎನ್ನುವ ಅಚ್ಚರಿಯ ವಿಡಿಯೋ ವೈರಲ್​ ಆಗಿದೆ. 
 


ಮಂಗನಿಂದ ಮಾನವನೋ, ಮಾನವನೊಳಗೆ ಮಂಗನೋ ತಿಳಿಯದ ವಿಷಯ. ಆದರೆ, ಕೋತಿಗೂ ಮನುಷ್ಯರಿಗೆ ಅವಿನಾಭಾವ ಸಂಬಂಧ ಇರುವುದಂತೂ ದಿಟ. ಅದಕ್ಕಾಗಿಯೇ ಮನುಷ್ಯರು ಕುಚೇಷ್ಠೆ ಮಾಡಿದಾಗ ಮಂಗನ ಚೇಷ್ಠೆ, ಕಪಿ ಚೇಷ್ಠೆ ಎನ್ನುವುದು ಉಂಟು. ಮಂಗನ ಜೀವನ ಕ್ರಮ ಕೂಡ ಮನುಷ್ಯನ ಜೀವನ ಕ್ರಮಕ್ಕಿಂತ ಹೆಚ್ಚೇನೂ ವ್ಯತ್ಯಾಸವಿಲ್ಲ. ಅದರಲ್ಲಿಯೂ ಮಂಗ ತನ್ನ ಮರಿಗಳ ಜೊತೆ ಇರುವ ಪರಿ ನೋಡುತ್ತಾ ನಿಂತರೆ, ನಿಜಕ್ಕೂ ಮನುಷ್ಯರಿಗೂ, ಮಂಗಗಳಿಗೂ ವ್ಯತ್ಯಾಸ ಇದೆಯಾ ಎನ್ನುವಷ್ಟು ಅಚ್ಚರಿ ಆಗುವುದೂ ಇದೆ. ಆದರೆ ಇಲ್ಲಿ ಹೇಳಹೊರಟಿರುವುದು ಮಾತ್ರ ಸ್ವಲ್ಪ ಡಿಫರೆಂಟ್​ ಸ್ಟೋರಿ.

ಸಾಕು ಪ್ರಾಣಿಗಳು ಅದರಲ್ಲಿಯೂ ಹೆಚ್ಚಾಗಿ ನಾಯಿ ತನ್ನ ಒಡೆಯ ಹೇಳಿದ ಕೆಲಸಗಳನ್ನು ಮಾಡುವುದು ಇದೆ. ಬೆಕ್ಕಿಗೆ ಟ್ರೇನಿಂಗ್​ ಕೊಟ್ಟರೆ ಅದು ಕೂಡ ಅಷ್ಟಿಷ್ಟು ಕೆಲಸ ಮಾಡುತ್ತದೆ. ಇನ್ನು ವನ್ಯಮೃಗಗಳನ್ನೂ ಮನುಷ್ಯ ಪಳಗಿಸಿ ತನಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳುತ್ತಲೇ ಬಂದಿದ್ದಾನೆ. ಆದರೆ ಇವೆಲ್ಲವೂ ಒಂದು ಹಂತದ ಕೆಲಸಗಳಿಗಷ್ಟೇ ಸೀಮಿತ. ಆದರೆ ಮನೆಯಲ್ಲಿನ ಜನರು ಮಾಡುವ ಎಲ್ಲಾ ಕೆಲಸಗಳನ್ನು ಮಾಡುವ ಏಕೈಕ ಪ್ರಾಣಿಯೆಂದರೆ ಬಹುಶಃ ಕೋತಿಯೇ ಇರಬೇಕೇನೋ. ಈಗ ವೈರಲ್​ ಆಗಿರೋ ವಿಡಿಯೋ ನೋಡಿದ್ರೆ ಖಂಡಿತವಾಗಿಯೂ ಬಹುತೇಕರು ಅದರಲ್ಲಿಯೂ ಮಹಿಳೆಯರು ನಮ್ಮ ಮನೆಯಲ್ಲಿಯೂ ಇಂಥದ್ದೊಂದು ಕೋತಿ ಇದ್ರೆ ಎಷ್ಟು ಚೆನ್ನಾಗಿತ್ತು ಎಂದು ಹೇಳದೇ ಇರಲು ಸಾಧ್ಯನೇ ಇಲ್ಲ ಬಿಡಿ. 
 
ಏಕೆಂದರೆ, ಈ ಕೋತಿ ಪಾತ್ರೆ ತೊಳೆಯುತ್ತೆ, ಬಟ್ಟೆ ಒಗೆಯತ್ತೆ, ಮನೆ ಗುಡಿಸುವುದು,  ಹಿಟ್ಟು ಕಲಸುವುದು, ಅದರಿಂದ ಚಪಾತಿ ಮಾಡುವುದರಿಂದ ಹಿಡಿದು ಎಲ್ಲಾ ಕೆಲಸಗಳನ್ನೂ ಮಾಡುತ್ತೆ. ಅಂದಹಾಗೆ ಈ ಮಂಗ ಇರುವುದು ಉತ್ತರ ಪ್ರದೇಶದ  ಬರೇಲಿ ಜಿಲ್ಲೆಯ, ಸದ್ವಾ ಗ್ರಾಮದಲ್ಲಿ. ಕೃಷಿಕರೊಬ್ಬರು ಇದನ್ನು ಸಾಕಿದ್ದಾರೆ. ಈ ಕೋತಿ ಸಂಕಷ್ಟದಲ್ಲಿ ಇದ್ದಾಗ ಅದನ್ನು ಇವರು ರಕ್ಷಿಸಿದ್ದರು. ನಂತರ ಮನೆಗೆ ತಂದು ರಾಣಿ ಎಂದು ಹೆಸರು ಇಟ್ಟಿದ್ದಾರೆ.  ಇದೀಗ ಮನೆಯ ಸದಸ್ಯರಿಗಿಂತಲೂ ಹೆಚ್ಚಾಗಿ ಕೆಲಸ ಮಾಡುತ್ತದೆ. ಮನೆಯಲ್ಲಿ ಎಲ್ಲರೂ ಮಾಡುವ ಕೆಲಸವನ್ನು ತದೇಕ ಚಿತ್ತದಿಂದ ನೋಡಿದ ಕೋತಿ ಎಲ್ಲಾ ಕೆಲಸ ಮಾಡಲು ಶುರು ಮಾಡಿದಂತೆ!

Tap to resize

Latest Videos

ಅದು ಯಾವ ಪರಿ ಎಂದರೆ, ಕಸ ಗುಡಿಸುವುದು, ನೆಲ ಒರೆಸುವುದು, ಬಟ್ಟೆ ತೊಳೆಯುವುದು ಅಷ್ಟೇ ಏಕೆ, ಚಪಾತಿಗೆ ಹಿಟ್ಟನ್ನು ಕಲಸಿ ಚಪಾತಿಯನ್ನೂ ಲಟ್ಟಿಸತ್ತೆ! ಕೋತಿ ಮಾಡಿದ ಚಪಾತಿ ತಿನ್ನುವುದಾ? ಇದು ತೊಳೆದ ಪಾತ್ರೆಯಲ್ಲಿ ಊಟ ಮಾಡೋದಾ? ಬಟ್ಟೆ ತೊಡುವುದಾ ಎಂದೆಲ್ಲಾ ಹೇಳುವವರೂ ಇಲ್ಲವೆಂದೇನಲ್ಲ. ಆದರೆ ಕೋತಿಯೊಂದು ಇಷ್ಟು ಕೆಲಸ ಮಾಡ್ತಿರೋದನ್ನು ನೋಡಿ ನೆಟ್ಟಿಗರು ಅಬ್ಬಬ್ಬಾ ಎಂದು ಕಣ್​ ಕಣ್​ ಬಿಡೋದು ಮಾತ್ರ ಗ್ಯಾರೆಂಟಿ! 
 

click me!