ಉದ್ಯೋಗ ಕಡಿತ ಮಾಡುತ್ತಿರುವ ಬಗ್ಗೆ ಪೇಟಿಎಂ ವಕ್ತಾರರು ನಿರಾಕರಿಸಿದ್ದು, ವಾರ್ಷಿಕ ಮೌಲ್ಯಮಾಪನ ಕೆಲಸಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ. ಆದರೆ, ಆರ್‌ಬಿಐ ರೆಗ್ಯುಲೇಷನ್, ಕಂಪನಿಯ ನಿರ್ವಹಣೆ ಹಾಗೂ ಎಐ ಅಳವಡಿಕೆಯ ಕಾರಣದಿಂದಾಗಿ ನೌಕರರ ಸಂಖ್ಯೆಯಲ್ಲಿ ಭಾರೀ ಪ್ರಮಾಣದ ಕಡಿತವಾಗುವ ಸಾಧ್ಯತೆ ಇದೆ.
ನವದೆಹಲಿ (ಮಾ.14): ಭಾರತದ ಸ್ಟಾರ್ಟ್‌ಅಪ್ ಜಗತ್ತು ಹಾಗೂ ಡಿಜಿಟಲ್ ಫೈನಾನ್ಸ್ ಲೋಕದಲ್ಲಿ ಮಿಂಚಿನಂತೆ ಹೆಸರು ಮಾಡಿದ್ದ ಪೇಟಿಎಂನ ಕೆಟ್ಟ ದಿನಗಳು ಈಗಾಗಲೇ ಆರಂಭವಾಗಿದೆ. ಆರ್‌ಬಿಐನ ರೆಗ್ಯಲೇಷನ್ ದಿನಗಳು ಹತ್ತಿರವಾಗುತ್ತಿರುವ ಸಮಯದಲ್ಲಿ ಪೇಟಿಎಂನ ಮಾತೃಸಂಸ್ಥೆಯಾಗಿರುವ ಒನ್ 97 ಕಮ್ಯುನಿಕೇಷನ್, ತನ್ನ ಎಲ್ಲಾ ವಿಭಾಗಗಳಲ್ಲಿ ನೌಕರರ ಸಂಖ್ಯೆಯನ್ನು ಕಡಿಮೆ ಮಾಡುವ ನಿರ್ಧಾರ ಮಾಡಿದೆ. ನೌಕರರ ವಾರ್ಷಿಕ ಮೌಲ್ಯಮಾಪಪನ ಪ್ರಕ್ರಿಯೆಯ ಬೆನ್ನಲ್ಲಿಯೇ ಲೇಆಫ್‌ಗಳು ನಡೆಯಲಿದೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ. ಫಿನ್‌ಟೆಕ್ ಯೂನಿಕಾರ್ನ್‌ನ ಪೇಮೆಂಟ್ ಬ್ಯಾಂಕ್‌ಗಳು ದೇಶದ ಅಗ್ರ ಬ್ಯಾಂಕ್‌ನ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಕಾರಣ ಭಾರತೀಯ ರಿಸರ್ವ್ ಬ್ಯಾಂಕ್ ಈಗಾಗಲೇ ಪಿಪಿಬಿಎಲ್‌ನ ಕಾರ್ಯನಿರ್ವಹಣೆಗೆ ಕಡಿವಾಣ ಹೇರಿದೆ. ಮಾರ್ಚ್ 15 ರಿಂದ ಇದರ ಸಂಪೂರ್ಣ ಕೆಲಸಗಳು ಕೂಡ ಬಂದ್ ಆಗಲಿದೆ. ಇದರ ನಡುವೆ ಪೇಟಿಎಂನಿಂದ ಲೇಆಫ್ ಸುದ್ದಿ ಹೊರಬಿದ್ದಿದೆ. ಎಷ್ಟು ನೌಕರರು ಕೆಲಸ ಕಳೆದುಕೊಳ್ಳಲಿದ್ದಾರೆ ಎನ್ನುವ ಮಾಹಿತಿಯನ್ನು ಕಂಪನಿ ಈವರೆಗೂ ನೀಡಿಲ್ಲ. ಆದರೆ, ಎರಡು ವಾರಗಳ ಹಿಂದೆ ಮೂಲಗಳು ಹೇಳಿರುವ ಪ್ರಕಾರ, ಕೆಲವು ವಿಭಾಗಗಳಿಗೆ ತನ್ನ ನೌಕರರನ್ನು ಶೇ. 20ರಷ್ಟು ಇಳಿಸುವಂತೆ ಸೂಚನೆ ನೀಡಲಾಗಿದೆ.
ವಾರ್ಷಿಕ ಮೌಲ್ಯಮಾಪನವಷ್ಟೇ: ವಾರ್ಷಿಕವಾಗಿ ಪೇಟಿಎಂನಲ್ಲಿ ಮೌಲ್ಯಮಾಪನನನ ನಡೆಯುತ್ತಿದೆ. ಅದು ಮೊದಲಿನಿಂದಲೂ ನಡೆದುಕೊಂಡು ಬಂದ ಪ್ರಕ್ರಿಯೆ ಇದು ಕೆಲವು ಉದ್ಯೋಗ ನಷ್ಟಕ್ಕೆ ಕಾರಣವಾಗಬಹುದು ಎಂದು ಪೇಟಿಎಂ ವಕ್ತಾರರು ತಿಳಿಸಿದ್ದು, ಎಷ್ಟು ಪ್ರಮಾಣದ ನೌಕರರು ಹೊರಬೀಳಲಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿಲ್ಲ. ಕಾರ್ಯಕ್ಷಮತೆಯ ಕಾರಣಕ್ಕಿಂತ ಹೆಚ್ಚಾಗಿ ಕೃತಕ ಬುದ್ದಿಮತ್ತೆಯನ್ನು ಕೆಲವು ವಿಭಾಗಗಳಲ್ಲಿ ಬಳಸಿಕೊಳ್ಳಲು ಕಂಪನಿ ತೀರ್ಮಾನಿಸಿದ್ದು, ಇದು ಕೆಲವು ಉದ್ಯೋಗಗಳ ಮೇಲೆ ಪರಿಣಾಮ ಬೀರಲಿದೆ ಎಂದಿದ್ದಾರೆ.
undefined
ವಾರ್ಷಿಕ ವೇತನ ಹೆಚ್ಚಳದ ಸೈಕಲ್‌ನಲ್ಲಿ ನಾವಿದ್ದೇವೆ. ಇದು ಎಲ್ಲಾ ಕಂಪನಿಗಳ ಸಾಮಾನ್ಯ ಪ್ರಕ್ರಿಯೆ. ಈ ವೇಳೆ ನಿರ್ವಹಣೆಯ ಆಧಾರದ ಮೇಲೆ ಮೌಲ್ಯಮಾಪಗಳನ್ನು ನಡೆದು, ಕೆಲವು ಬದಲಾವಣೆಗಳನ್ನು ಹೊಸ ಜವಾಬ್ದಾರಿಗಳನ್ನು ನೀಡಲಾಗುತ್ತದೆ. ಇದು ಲೇಆಫ್ ಪ್ರಕ್ರಿಯೆಗಿಂತ ಭಿನ್ನವಾಗಿದೆ ಎಂದು ಅರ್ಥ ಮಾಡಿಕೊಳ್ಳಬೇಕು. ಯಾವುದೇ ಸಂಸ್ಥೆಯಲ್ಲಿನ ಕಾರ್ಯಕ್ಷಮತೆಯ ಮೌಲ್ಯಮಾಪನಗಳ ವಾಡಿಕೆಯ ಅಂಶವಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಕೆಲಸಗಳನ್ನು ಇನ್ನಷ್ಟು ದಕ್ಷತೆಯಿಂದ ಮಾಡುವ ಸಲುವಾಗಿ ಎಐಅನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದೇವೆ. ಇದು ನಮ್ಮ ಬೆಳವಣಿಗೆ ಮತ್ತು ವೆಚ್ಚ-ದಕ್ಷತೆಯ ಗುರಿಗಳೊಂದಿಗೆ ಉತ್ತಮವಾಗಿ ಹೊಂದಾಣಿಕೆ ಮಾಡಲು ಕೆಲವು ಪಾತ್ರಗಳು ಮತ್ತು ಕಾರ್ಯಗಳನ್ನು ಮರು ವ್ಯಾಖ್ಯಾನಿಸುವುದನ್ನು ಒಳಗೊಂಡಿರುತ್ತದೆ" ಎಂದು ವಕ್ತಾರರು ತಿಳಿಸಿದ್ದಾರೆ. ಇದನ್ನು ಲೇಆಫ್‌ಗಳು ಎನ್ನಲು ಸಾಧ್ಯವಿಲ್ಲ ಎಂದು ಹೇಳಿರುವ ವಕ್ತಾರರು, ಅಪ್ರರೈಸಲ್ ಹಾಗೂ ನಿರ್ವಹಣೆಯ ರಿವ್ಯೂಗಳು ಕಂಪನಿಗಳಲ್ಲಿ ಸಾಮಾನ್ಯ ಪ್ರಕ್ರಿಯೆ ಎಂದಿದ್ದಾರೆ.
ಅಕ್ರಮ ಹಣ ವರ್ಗಾವಣೆ, ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ 5.49 ಕೋಟಿ ದಂಡ!
ಈ ಕುರಿತಂತೆ ಮಾತನಾಡಿರುವ ಕೆಲ ಉದ್ಯೋಗಿಗಳು, ಈಗಾಗಲೇ ಕೆಲವು ಸಿಬ್ಬಂದಿಗೆ ಒಂದು ತಿಂಗಳ ಫರ್ಫಾಮೆನ್ಸ್ ಇಂಪ್ರೂವ್‌ಮೆಂಟ್ ಪ್ಲ್ಯಾನ್ (ಪಿಐಪಿ) ನೀಡಲಾಗಿದೆ. ಅದರ ಬೆನ್ನಲ್ಲಿಯೇ ಅವರನ್ನು ಕೆಲಸದಿಂದ ವಜಾ ಮಾಡುವ ಪತ್ರವ ಒಳಗೊಂಡಿರುತ್ತದೆ. ಇದರಲ್ಲಿ ಅವರಿಗೆ ಯಾವುದೇ ಪ್ಯಾಕೇಜ್‌ಗಳು ಇರೋದಿಲ್ಲ ಎಂದಿದ್ದಾರೆ. 1 ಸಾವಿರಕ್ಕೂ ಅಧಿಕ ಮಂದಿಗೆ 2023ರ ಡಿಸೆಂಬರ್‌ನಲ್ಲಿ ಪಿಂಕ್ ಸ್ಲಿಪ್ ನೀಡಲಾಗಿತ್ತು. ಅಂದು ಎಐ ಅನ್ನು ಅಳವಡಿಸಿಕೊಳ್ಳುವ ಕಾರಣಕ್ಕೆ ಈ ನಿರ್ಧಾರ ಮಾಡಲಾಗಿದೆ ಎನ್ನಲಾಗಿತ್ತು. ಈ ಬಾರಿ ಈ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ. ಅಲ್ಲದೆ, 20224ರ ಜನವರಿಯಲ್ಲಿ ಸೈಲೆಂಟ್ ಲೇಆಫ್‌ಗಳು ಕೂಡ ನಡೆದಿದ್ದವು. ಈಗ ಪೇಟಿಎಂ ಮಾಡಲಿರುವ ಲೇಆಫ್‌ಗಳು ನೌಕರರ ನಿರ್ವಹಣೆಯ ಆಧಾರದ ಮೇಲೆ ನಡೆಯೋದಿಲ್ಲ ಎಂದು ತಿಳಿಸಿದ್ದಾರೆ. ಪೇಟಿಎಂನಲ್ಲಿ ಈಗಾಗಲೇ 6 ಸಾವಿರಕ್ಕೂ ಅಧಿಕ ನೌಕರರು ಕೆಲಸ ಮಾಡುತ್ತಿದ್ದಾರೆ. ಇವರ ಭವಿಷ್ಯದ ಮೇಲೆ ತೂಗುಗತ್ತಿ ಬಿದ್ದಿದೆ.
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಜೊತೆಗಿನ ಒಪ್ಪಂದ ಕಡಿದುಕೊಂಡ ಪೇಟಿಎಂ; ಬಿಎಸ್ ಇ ಫೈಲ್ಲಿಂಗ್ ನಲ್ಲಿ ಮಾಹಿತಿ ಬಹಿರಂಗ