
ಬೆಂಗಳೂರು (ಜ.31) ಹೊಸ ವರ್ಷದ ಆರಂಭಿಕ ತಿಂಗಳಲ್ಲೇ ಉದ್ಯೋಗ ಕಡಿತ ಆತಂಗಳು ಎದುರಾಗುತ್ತಿದೆ. ಅಮೇಜಾನ್ ಈಗಾಗಲೇ 16,000 ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಭಾರತದಲ್ಲೇ ಹೆಚ್ಚು ಎಂದು ಮೂಲಗಳು ಹೇಳುತ್ತಿದೆ. ಇದರ ಬೆನ್ನಲ್ಲೇ ಓಲಾ ಎಲೆಕ್ಟ್ರಿಕ್ ಕಂಪನಿ ಇದೀಗ ಶೇಕಡಾ 5 ರಷ್ಟು ಉದ್ಯೋಗ ಕಡಿತ ಮಾಡಲಿದೆ ಎಂದು ವರದಿಯಾಗಿದೆ. ಓಲಾ ಎಲೆಕ್ಟ್ರಿಕ್ ಕಂಪನಿಯ ಶೇಕಡಾ 5ರಷ್ಟು ಅಂದರೆ ಸರಿಸುಮಾರು 620 ಮಂದಿ ಉದ್ಯೋಗಕ್ಕೆ ಕತ್ತರಿ ಬೀಳಲಿದೆ.
ಓಲಾ ಎಲೆಕ್ಟ್ರಿಕ್ ಕಂಪನಿಯಲ್ಲಿ ಹಲವು ವಿಭಾಗದಲ್ಲಿ ಆಟೋಮೇಶನ್ ನಡೆಯುತ್ತಿದೆ. ಉತ್ಪಾದನೆ ವೇಗ ಹಾಗೂ ಶಿಸ್ತು ಹೆಚ್ಚಿಸಲು ಆಟೋಮೇಶನ್ ಮಾಡಲಾಗುತ್ತಿದೆ. ಇದರಿಂದ ಉದ್ಯೋಗ ಕಡಿತ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಆಟೋಮೇಶನ್ ಮೂಲಕ ಉತ್ಪನ್ನಗಳ ತ್ವರಿತ ಪ್ರೊಡಕ್ಷನ್ ಮಾಡಲಾಗುತ್ತದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಸಾಕಷ್ಟು ಟೀಕೆಗಳಿಗೆ ಗುರಿಯಾಗಿತ್ತು. ಪ್ರಮುಖವಾಗಿ ಸರ್ವೀಸ್ ವಿಳಂಬ ಕುರಿತು ಹಲವು ಗ್ರಾಹಕರು ಆಕ್ರೋಶ ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ಇದೀಗ 2026ರಲ್ಲಿ ಹೊಸದಾಗಿ ಉದ್ಯೋಗ ಕಡಿತಕ್ಕೆ ಓಲಾ ಎಲೆಕ್ಟ್ರಿಕ್ ಮುಂದಾಗಿದೆ. 2025ರ ಮಾರ್ಚ್ ತಿಂಗಳಲ್ಲಿ ಓಲಾ ಎಲೆಕ್ಟ್ರಿಕ್ಟ್ 1000 ಉದ್ಯೋಗ ಕಡಿತ ಮಾಡಿತ್ತು. 2022ರಲ್ಲೂ ಓಲಾ ಎಲೆಕ್ಟ್ರಿಕ್ ಕಂಪನಿಯಲ್ಲಿ ಮಹತ್ವದ ಬದಲಾವಣೆ ಮಾಡಿತ್ತು.
2025-26ರ ಆರ್ಥಿಕ ವರ್ಷದಲ್ಲಿ ಓಲಾ ಎಲೆಕ್ಟ್ರಿಕ್ ಮಾರಾಟ ಕುಸಿತ ಕಂಡಿದೆ. ಓಲಾ ವಿರುದ್ದ ಸತತ ಟೀಕೆ, ಗ್ರಾಹಕರ ಆಕ್ರೋಶದ ಕಾರಣ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಕುಸಿತ ಕಂಡಿತ್ತು. ಓಲಾ ಸ್ಕೂಟರ್ ಸರ್ವೀಸ್ ಹಾಗೂ ಇತರ ಸುಧಾರಣೆಗಳಿಗೆ ಕಂಪನಿ ಸಿಇಒ ಭವಿಷ್ ಅಗರ್ವಾಲ್ ಕ್ರಮ ಕೈಗೊಂಡಿದ್ದರು. ಈ ಬೆಳವಣಿಗೆ ಬಳಿಕ ಡಿಸೆಂಬರ್ 2025ರಲ್ಲಿ ಓಲಾ ಮಾರಾಟದಲ್ಲಿ ಸುಧಾರಣೆ ಕಂಡಿದೆ.
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ಇದೆ. ಎಥರ್ ಎನರ್ಜಿ, ಟಿವಿಎಸ್, ಬಜಾಜ್ ಸೇರಿದಂತೆ ಹಲವು ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಕಂಪನಿಗಳ ಜೊತೆಗೆ ಹೊಸ ಹೊಸ ಕಂಪನಿಗಳು ಸೇರಿಕೊಂಡಿದೆ. ಹೀಗಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ಎದುರಿಸುತ್ತಿದೆ.