ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೆಯ ಪಟ್ಟಿಸಿದ್ಧಪಡಿಸುತ್ತಿದೆ. ಏಪ್ರಿಲ್ 8 ಅಥವಾ 10ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕುಂದಗೊಳ ಹಾಗೂ ನವಲಗುಂದ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸುವುದು ಕಾಂಗ್ರೆಸ್ ಹೈಕಮಾಂನ ದೊಡ್ಡ ಸವಾಲಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಏ.1) : ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಎರಡನೆಯ ಪಟ್ಟಿಸಿದ್ಧಪಡಿಸುತ್ತಿದೆ. ಏಪ್ರಿಲ್ 8 ಅಥವಾ 10ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ಧಾರವಾಡ ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಕುಂದಗೊಳ ಹಾಗೂ ನವಲಗುಂದ ಕ್ಷೇತ್ರಗಳಿಗೆ ಟಿಕೆಟ್ ಅಂತಿಮಗೊಳಿಸುವುದು ಕಾಂಗ್ರೆಸ್ ಹೈಕಮಾಂಡ್‌ಗೆ ದೊಡ್ಡ ಸವಾಲಾಗಿದೆ.
ಈ ಎರಡೂ ಕ್ಷೇತ್ರಗಳು ಒಂದಕ್ಕೊಂದು ತಳಕು ಹಾಕಿಕೊಂಡಿವೆ. ಈ ಎರಡರಲ್ಲಿ ಕನಿಷ್ಠ ಒಂದು ಕ್ಷೇತ್ರದಲ್ಲಾದರೂ ಕುರುಬ ಸಮುದಾಯ(Kuruba community)ಕ್ಕೆ ಟಿಕೆಟ್ ಕೊಡಲೇಬೇಕೆಂಬ ಅಘೋಷಿತ ನಿಯಮ ಕಾಂಗ್ರೆಸ್ಸಿನಲ್ಲಿದೆ.
ಧಾರವಾಡ: ಸತತ ಒಬ್ಬನೇ ಅಭ್ಯರ್ಥಿಗೆ ಮಣೆ ಹಾಕದ ಗ್ರಾಮೀಣ ಮತದಾರರು!
ಅತ್ತ ಕುಂದಗೋಳ(Kundagola assembly constituency)ದಲ್ಲಿ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಕುರುಬ ಸಮುದಾಯಕ್ಕೆ ಸೇರಿದವರು. ಇವರಿಗೆ ಟಿಕೆಟ್ ಕೊಡುವುದು ಬೇಡ ಎಂಬ ಬೇಡಿಕೆ ಅಲ್ಲಿನ ಒಂದು ಬಣದ್ದು. ಕುಸುಮಾವತಿ ಶಿವಳ್ಳಿಗೆ ಟಿಕೆಟ್ ಕೊಡುವುದನ್ನು ಬಿಟ್ಟರೆ ಮತ್ಯಾರಿಗೆ ಕೊಡಬೇಕು ಎಂಬ ಚಿಂತೆ ಹೈಕಮಾಂಡ್‌ನಲ್ಲಿ ಶುರುವಾಗಿದೆ. ಇನ್ನು 16 ಜನ ಆಕಾಂಕ್ಷಿಗಳು ಇಲ್ಲಿದ್ದಾರೆ. ಇದರಲ್ಲಿ ಕುಸುಮಾವತಿ ಶಿವಳ್ಳಿ ಅಥವಾ ಅವರ ಕುಟುಂಬದ ಸದಸ್ಯರ ಪೈಕಿ ಒಬ್ಬರು ಹಾಗೂ ಲಿಂಗಾಯತ ಸಮುದಾಯಕ್ಕೆ ಸೇರಿರುವ, ಉಪಚುನಾವಣೆಯಲ್ಲಿ ಪಕ್ಷದ ಪರವಾಗಿ ಕೆಲಸ ಮಾಡಿರುವ ಪ್ರಕಾಶಗೌಡ ಪಾಟೀಲ ಹೆಸರು ಮುಂಚೂಣಿಗೆ ಬಂದಿವೆ. ಇನ್ನು ಚಂದ್ರಶೇಖರ ಜುಟ್ಟಲ್, ರಮೇಶ ಕೊಪ್ಪದ ಹೆಸರು ಕೂಡ ಕೇಳಿ ಬರುತ್ತಿದೆ. ಆದರೂ ಶಿವಳ್ಳಿ ಕುಟುಂಬದ ಸದಸ್ಯ ಅಥವಾ ಪ್ರಕಾಶಗೌಡ ಪಾಟೀಲ ಮಧ್ಯೆ ತೀವ್ರ ಪೈಪೋಟಿ ನಡೆದಿದೆ.
ಇನ್ನು ನವಲಗುಂದ ಕ್ಷೇತ್ರ(Navalagunda assembly constituency)ದಲ್ಲಿ ರೆಡ್ಡಿ ಸಮುದಾಯ(reddy community)ಕ್ಕೆ ಸೇರಿದ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ, ಕುರುಬ ಸಮುದಾಯಕ್ಕೆ ವಿನೋದ ಅಸೂಟಿ, ಕೆ.ಎನ್.ಗಡ್ಡಿ, ರಾಜಶೇಖರ ಮೆಣಸಿನಕಾಯಿ ಸೇರಿದಂತೆ 9 ಜನ ಆಕಾಂಕ್ಷಿಗಳಿದ್ದಾರೆ. ಇಲ್ಲಿ ಕೋನರಡ್ಡಿ ಹಾಗೂ ಅಸೂಟಿ ಮಧ್ಯೆ ಭಾರಿ ಪೈಪೋಟಿ ನಡೆದಿದೆ.
ಒಂದು ವೇಳೆ ಕುಂದಗೋಳದಲ್ಲಿ ಶಿವಳ್ಳಿ ಕುಟುಂಬಕ್ಕೆ ಟಿಕೆಟ್ ಪಕ್ಕಾ ಆದರೆ, ನವಲಗುಂದದಲ್ಲಿ ಕೋನರಡ್ಡಿ ಹಾದಿ ಸುಗಮವಾಗುತ್ತದೆ. ಶಿವಳ್ಳಿ ಕುಟುಂಬಕ್ಕೆ ಕೊಡದೆ ಲಿಂಗಾಯತ ಸಮುದಾಯದ ಪ್ರಕಾಶಗೌಡ ಅಥವಾ ಬೇರೆ ಯಾರಿಗಾದರೂ ಟಿಕೆಟ್ ಕೊಟ್ಟರೆ ಇಲ್ಲಿ ವಿನೋದ ಅಸೂಟಿಗೆ ಟಿಕೆಟ್ ಕೊಡುವುದು ಅನಿವಾರ್ಯವಾಗುತ್ತದೆ. ಕುರುಬ ಸಮುದಾಯಕ್ಕೆ ಯಾವ ಕ್ಷೇತ್ರಕ್ಕೆ ಟಿಕೆಟ್ ಕೊಟ್ಟರೆ ಪಕ್ಷದ ಸ್ಥಾನಗಳನ್ನು ಹೆಚ್ಚಿಸಿಕೊಳ್ಳಬಹುದು ಎಂದು ಅಳೆದು ತೂಗಿ ಪಕ್ಕಾ ಮಾಡಲು ಹರಸಾಹಸ ಪಡುತ್ತಿದೆ.
ಸದ್ಯದ ಮಾಹಿತಿಯಂತೆ ನವಲಗುಂದ ಕ್ಷೇತ್ರಕ್ಕೆ ಕೋನರಡ್ಡಿ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಬಂದಿದೆಯಾದರೂ ಪಟ್ಟಿಬಿಡುಗಡೆಯಾಗುವವರೆಗೂ ನಂಬುವಂತಿಲ್ಲ ಎಂಬ ಮಾತು ಕಾಂಗ್ರೆಸ್‌ನಲ್ಲೇ ಕೇಳಿ ಬರುತ್ತಿದೆ. ಕೋನರಡ್ಡಿ ಹೆಸರು ಅಂತಿಮವಾಗಿರುವುದೇ ನಿಜವಾದರೆ ಕುಂದಗೋಳದಲ್ಲಿ ಶಿವಳ್ಳಿ ಕುಟುಂಬಕ್ಕೆ ಟಿಕೆಟ್ ಸಿಗುವುದು ಗ್ಯಾರಂಟಿ ಎನ್ನಲಾಗುತ್ತದೆ. ಆಗ ಕ್ಷೇತ್ರದಲ್ಲಿನ ಭಿನ್ನಮತವನ್ನು ಯಾವ ರೀತಿ ಶಮನ ಮಾಡಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆನ್ನುವುದರ ಬಗ್ಗೆ ಪಕ್ಷದ ಹೈಕಮಾಂಡ್ ಯೋಚಿಸಬೇಕಾಗುತ್ತದೆ.
Ticket fight: ಎರಡನೆ ಪಟ್ಟಿ ಬಿಡುಗಡೆ ಮುನ್ನವೇ ಮೊಳಕಾಲ್ಮುರು ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ!
ಒಟ್ಟಿನಲ್ಲಿ ನವಲಗುಂದ ಹಾಗೂ ಕುಂದಗೋಳ ಎರಡು ಕ್ಷೇತ್ರಗಳು ಟಿಕೆಟ್ ವಿಷಯದಲ್ಲಿ ಒಂದಕ್ಕೊಂದು ತಳಕುಹಾಕಿಕೊಂಡಿರುವುದಂತೂ ಸತ್ಯ. ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.!