ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಈ ವರೆಗೆ ಬರೋಬ್ಬರಿ 14 ಚುನಾವಣೆಗಳನ್ನು ಕಂಡಿವೆ. ಈ 14 ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಮಹಿಳಾ ಶಾಸಕರಾಗಿ ಆಯ್ಕೆಯಾಗಿದ್ದು ಬರೀ ಮೂವರು ಮಾತ್ರ. ಉಳಿದಂತೆ ಇಲ್ಲಿ ಪುರುಷರೇ ಪ್ರಾಬಲ್ಯ ಮೆರೆದಿದ್ದಾರೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ (ಮಾ.10) : ಧಾರವಾಡ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳು ಈ ವರೆಗೆ ಬರೋಬ್ಬರಿ 14 ಚುನಾವಣೆಗಳನ್ನು ಕಂಡಿವೆ. ಈ 14 ಚುನಾವಣೆಗಳಲ್ಲಿ ಜಿಲ್ಲೆಯಲ್ಲಿ ಮಹಿಳಾ ಶಾಸಕರಾಗಿ ಆಯ್ಕೆಯಾಗಿದ್ದು ಬರೀ ಮೂವರು ಮಾತ್ರ. ಉಳಿದಂತೆ ಇಲ್ಲಿ ಪುರುಷರೇ ಪ್ರಾಬಲ್ಯ ಮೆರೆದಿದ್ದಾರೆ.
ಹುಬ್ಬಳ್ಳಿ-ಧಾರವಾಡ(Hubballi-dharwad) ಪಶ್ಚಿಮ, ಧಾರವಾಡ ಗ್ರಾಮೀಣ, ಸೆಂಟ್ರಲ್ (ಹಿಂದಿನ ಹುಬ್ಬಳ್ಳಿ ಗ್ರಾಮೀಣ), ಪೂರ್ವ (ಹಿಂದಿನ ಹುಬ್ಬಳ್ಳಿ ಸಿಟಿ), ಕುಂದಗೋಳ, ನವಲಗುಂದ, ಕಲಘಟಗಿ ಹೀಗೆ ಏಳು ಕ್ಷೇತ್ರಗಳನ್ನೊಳಗೊಂಡ ಜಿಲ್ಲೆಯಿದು.
Karnataka assembly election: ಜಿಲ್ಲೆಯಾದ್ಯಂತ ಮತಗಟ್ಟೆಸ್ಥಳ, ಹೆಸರು ಬದಲಾವಣೆ
ಪುರುಷರಷ್ಟೇ ಮಹಿಳಾ ಮತದಾರರೂ ಇಲ್ಲಿದ್ದಾರೆ. ಆದರೆ ಶಾಸಕರಾಗಿ ಆಯ್ಕೆಯಾಗುವಲ್ಲಿ ಮಾತ್ರ ಮಹಿಳೆಯರು ಹಿಂದೆ ಬಿದ್ದಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ ಶಾಸಕರಾಗಿ ಆಯ್ಕೆಯಾದ ಮಹಿಳೆಯರೆಂದರೆ ಮೂವರು ಮಾತ್ರ. ಹಾಗಂತ ಹೆಚ್ಚಿನ ಮಹಿಳೆಯರು ಪ್ರಯತ್ನ ಪಟ್ಟಿಲ್ಲ ಅಂತೇನೂ ಇಲ್ಲ. ಕೆಲವರು ಪ್ರಯತ್ನ ಪಟ್ಟಿದ್ದಾರೆ, ಫಲ ಸಿಕ್ಕಿಲ್ಲ.
ಚಿತ್ರನಟಿ ಉಮಾಶ್ರೀ ಅವರು 1994ರಲ್ಲಿ ಬಂಗಾರಪ್ಪ ಅವರ ಕೆಸಿಪಿಯಿಂದ ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಸೋಲನ್ನುಭವಿಸಬೇಕಾಯಿತು. ಇದೇ ರೀತಿ ಬೇರೆ ಬೇರೆ ಮಹಿಳಾ ಮುಖಂಡರು ಸ್ಪರ್ಧಿಸಿದ್ದರೂ ಶಾಸಕರಾಗಿ ಹೊರಹೊಮ್ಮಿದ್ದು ಮಾತ್ರ ಮೂವರೇ.
ಯಾರಾರಯರು?
1972 ಹಾಗೂ 1978ರಲ್ಲಿ ಸುಮತಿ ಬಾಲಚಂದ್ರ ಮಡಿಮನ್ ಎರಡು ಬಾರಿ ಧಾರವಾಡ ಗ್ರಾಮೀಣ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದರು. ಇವರು ತಮ್ಮ ಎರಡನೇ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಅಕಾಲಿಕ ನಿಧನರಾದರು. ನಂತರ ನಡೆದ ಉಪಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮತ್ತೆ ಪುರುಷರೇ ಆಯ್ಕೆಯಾಗಿದ್ದರು.
ಇನ್ನು ಇದೇ ಕ್ಷೇತ್ರದಿಂದ 2008ರಲ್ಲಿ ಸೀಮಾ ಮಸೂತಿ ಬಿಜೆಪಿಯಿಂದ ಆಯ್ಕೆಯಾದ ಮತ್ತೊಬ್ಬ ಶಾಸಕಿ. 2013ರಲ್ಲಿ ಕಣಕ್ಕಿಳಿದರೂ ಕಾಂಗ್ರೆಸ್‌ನ ವಿನಯ ಕುಲಕರ್ಣಿ ಅವರ ಎದುರಿಗೆ ಸೋಲುಂಡರು. 2018ರಲ್ಲಿ ಇವರಿಗೆ ಟಿಕೆಟ್ ಸಿಗಲಿಲ್ಲ. ಇದೀಗ ಮತ್ತೆ ಇವರು ಬಿಜೆಪಿಯಿಂದ ಟಿಕೆಟ್ ಕೇಳುತ್ತಿದ್ದಾರೆ.
ಇನ್ನು ಕುಂದಗೋಳ ಕ್ಷೇತ್ರದಿಂದ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಅನುಕಂಪದಿಂದ ಶಾಸಕರಾಗಿದ್ದಾರೆ. ಇವರ ಪತಿ ಸಿ.ಎಸ್.ಶಿವಳ್ಳಿ ಕುಂದಗೋಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. 2019ರಲ್ಲಿ ಅವರು ಅಕಾಲಿಕ ನಿಧನರಾದ ಹಿನ್ನೆಲೆಯಲ್ಲಿ ನಡೆದ ಉಪಚುನಾವಣೆಯಲ್ಲಿ ಪಕ್ಷವು ಕುಸುಮಾವತಿ ಅವರನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬಂದಿದೆ. ಇದೀಗ ಈ ಕ್ಷೇತ್ರದಲ್ಲಿ ಇವರಿಗೆ ಟಿಕೆಟ್ ಕೊಡುವುದು ಬೇಡ ಎನ್ನುವ ದೊಡ್ಡ ದನಿ ಕೇಳಿಬರುತ್ತಿದೆ. ಪಕ್ಷ ಟಿಕೆಟ್ ಕೊಡುತ್ತದೆಯೋ ಇಲ್ಲವೋ ಎಂಬುದನ್ನು ಕಾಲವೇ ಉತ್ತರಿಸಬೇಕಿದೆ.
ಈ ಸಲ ಯಾರಾರಯರ ಪ್ರಯತ್ನ?
ಇದೀಗ ಧಾರವಾಡ ಗ್ರಾಮೀಣ ಕ್ಷೇತ್ರ(Dharwad rural constituency)ದಲ್ಲಿ ಸೀಮಾ ಮಸೂತಿ, ಸವಿತಾ ಅಮರಶೆಟ್ಟಿಬಿಜೆಪಿಯಿಂದ ಟಿಕೆಟ್ ಕೇಳುತ್ತಿದ್ದರೆ, ವಿನಯ ಕುಲಕರ್ಣಿ ಪತ್ನಿ ಶಿವಲೀಲಾ ಕುಲಕರ್ಣಿ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿದ್ದಾರೆ. ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕುಸುಮಾವತಿ ಶಿವಳ್ಳಿ, ದೃತಿ ಸಾಲ್ಮನಿ, ಪಶ್ಚಿಮ ಕ್ಷೇತ್ರದಲ್ಲಿ ಮಾಜಿ ಮಂತ್ರಿ ಎಸ್.ಆರ್.ಮೋರೆ ಪುತ್ರಿ ಕೀರ್ತಿ ಮೋರೆ, ನವಲಗುಂದ ಕ್ಷೇತ್ರದಿಂದ ಜಿಪಂ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ, ಸೆಂಟ್ರಲ್ ಕ್ಷೇತ್ರದಿಂದ ಸರೋಜಾ ಹೂಗಾರ, ಡಾ.ಜಹೀದಾಖಾನ್ ಸೇರಿದಂತೆ ಹಲವರು ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ.
ರಾಜಕೀಯ ಪಕ್ಷಗಳು ಪ್ರತಿ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಕ್ಷೇತ್ರಗಳಲ್ಲಾದರೂ ಮಹಿಳೆಯರಿಗೆ ಟಿಕೆಟ್ ಮೀಸಲಿಡಬೇಕು ಎಂಬ ಬೇಡಿಕೆ ಕೂಡ ಇದೀಗ ಮಹಿಳಾ ಮಣಿಗಳಿಂದ ಕೇಳಿಬಂದಿದೆ. ಅದಕ್ಕೆ ತಕ್ಕಂತೆಯೇ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಬಯಸುತ್ತಿದ್ದಾರೆ. ಈಗ ಪ್ರಯತ್ನ ನಡೆಸುತ್ತಿರುವವರ ಪೈಕಿ ಯಾರೆಲ್ಲ ಟಿಕೆಟ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೋ? ಯಾರು ಶಾಸಕರಾಗಿ ಆಯ್ಕೆಯಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಧಾರವಾಡ: ಪೂರ್ವ ಬಿಟ್ಟರೆ ಆರೂ ಕ್ಷೇತ್ರಗಳಲ್ಲಿ ಲಿಂಗಾಯತರೇ ನಿರ್ಣಾಯಕರು!
ಸಂಸದೆ ಸರೋಜಿನಿ:
ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಈವರೆಗೆ ಆಯ್ಕೆಯಾದ ಸರೋಜಿನಿ ಮಹಿಷಿ ಏಕೈಕ ಸಂಸದೆ.