ಹಿಂದುಳಿದ ತಾಲೂಕೆಂಬ ಹಣೆಪಟ್ಟಿಹೊತ್ತಿರುವ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರ ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕಿನ ಕೆಲ ಗ್ರಾಮಗಳ ವ್ಯಾಪ್ತಿ ಹೊಂದಿದೆ. ಬಿಜೆಪಿಯ ಸಿ.ಎಂ.ನಿಂಬಣ್ಣ, ಹಾಲಿ ಶಾಸಕರು.
ಬಸವರಾಜ ಹಿರೇಮಠ
ಧಾರವಾಡ (ಮಾ.09): ಹಿಂದುಳಿದ ತಾಲೂಕೆಂಬ ಹಣೆಪಟ್ಟಿಹೊತ್ತಿರುವ ಧಾರವಾಡ ಜಿಲ್ಲೆಯ ಕಲಘಟಗಿ ಕ್ಷೇತ್ರ ಕಲಘಟಗಿ, ಅಳ್ನಾವರ ಮತ್ತು ಧಾರವಾಡ ತಾಲೂಕಿನ ಕೆಲ ಗ್ರಾಮಗಳ ವ್ಯಾಪ್ತಿ ಹೊಂದಿದೆ. ಬಿಜೆಪಿಯ ಸಿ.ಎಂ.ನಿಂಬಣ್ಣ, ಹಾಲಿ ಶಾಸಕರು. ಈ ಮೊದಲು ಶಾಸಕರಾಗಿದ್ದ, ಮಾಜಿ ಸಚಿವ ಸಂತೋಷ ಲಾಡ್ ಅವರು ಕಳೆದ ಅವಧಿಯಲ್ಲಿ ವೈಯಕ್ತಿಕ ಕಾರಣಗಳಿಂದ ಕ್ಷೇತ್ರವನ್ನು ನಿರ್ಲಕ್ಷಿಸಿದ ಪರಿಣಾಮ, ಸ್ಥಳೀಯರು, ನಿವೃತ್ತ ಶಿಕ್ಷಕರೂ ಆಗಿದ್ದ ಸಿ.ಎಂ. ನಿಂಬಣ್ಣವರ ಅನುಕಂಪದ ಆಧಾರದ ಮೇಲೆ ಸುಲಭವಾಗಿ ಗೆದ್ದು ಬಂದರು.
ಆದರೆ, ಈ ಬಾರಿ ಕ್ಷೇತ್ರದ ಪರಿಸ್ಥಿತಿ ಕಳೆದ ಬಾರಿಯಂತಿಲ್ಲ. ಯಾವುದೇ ಪಕ್ಷದಿಂದ ಯಾರೇ ಸ್ಪರ್ಧಿಸಿದರೂ ಗೆಲವು ಮಾತ್ರ ಮುಳ್ಳಿನ ಹಾದಿಯೇ ಸರಿ. ಇಷ್ಟಾಗಿಯೂ, ಬಿಜೆಪಿ ಹಾಗೂ ಕಾಂಗ್ರೆಸ್ಸಿನಲ್ಲಿ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆದಿದೆ. ಕಾಂಗ್ರೆಸ್ ಟಿಕೆಟ್, ವಿಧಾನಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿಗೋ ಅಥವಾ ಮಾಜಿ ಸಚಿವ ಸಂತೋಷ ಲಾಡ್‌ಗೋ ಎಂಬುದು ಕುತೂಹಲ ಮೂಡಿಸಿದೆ. ಕೆಲ ದಿನಗಳ ಹಿಂದೆ ಛಬ್ಬಿಗೆ ಟಿಕೆಟ್ ಸಿಕ್ಕೇ ಬಿಡ್ತು ಎಂದು ಅವರ ಅಭಿಮಾನಿಗಳು ಹಾಗೂ ಲಾಡ್‌ಗೆ ಟಿಕೆಟ್ ಸಿಕ್ಕೇ ಬಿಡ್ತು ಎಂದು ಅವರ ಅಭಿಮಾನಿಗಳು ವಿಜಯೋತ್ಸವ ಆಚರಿಸಿದ್ದು, ತಮಾಷೆಯ ಸಂಗತಿಯಾಗಿ ಕಂಡು ಬಂತು.
ಬಿಜೆಪಿ ಎಂಎಲ್‌ಸಿ ಪುಟ್ಟಣ್ಣ ಕಾಂಗ್ರೆಸ್ಸಿಗೆ: ವಿಧಾನಸಭಾ ಚುನಾವಣೆಗೆ ಸ್ಪರ್ಧೆ
ಇಬ್ಬರೂ ನಾಯಕರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಮಾಡುವ ಕುರಿತು ಲಾಡ್ ಮತ್ತೆ ಕನಸಿನ ಅರಮನೆ ತೋರಿಸುತ್ತಿದ್ದರೆ, ಛಬ್ಬಿ ಮಾತ್ರ ಊರೂರು ಅಡ್ಡಾಡಿ ಒಂದು ಬಾರಿ ಅವಕಾಶ ಕೊಡಿ ಎಂದು ಜನರ ಮನ ಗೆಲ್ಲುತ್ತಿದ್ದಾರೆ. ಇವರಿಬ್ಬರ ಟಿಕೆಟ್ ಪೈಟ್, ಕಾಂಗ್ರೆಸ್‌ಗೆ ತಲೆನೋವಾಗಿದೆ. ಇಬ್ಬರ ಪೈಕಿ ಯಾರೊಬ್ಬರಿಗೆ ಟಿಕೆಟ್ ನೀಡಿದರೂ ಇನ್ನೊಬ್ಬರು ರೆಬಲ್ ಆಗುವ ಸಾಧ್ಯತೆಗಳೇ ಹೆಚ್ಚಿವೆ. ಈ ಮಧ್ಯೆ, ಲಾಡ್ ಅವರು ಟಿಕೆಟ್ ಸಿಗದಿದ್ದರೆ ಬಿಜೆಪಿಗೆ ಹೋಗಲಿದ್ದಾರೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ. ಜೊತೆಗೆ, ಸ್ಥಳೀಯರಾದ ಬಂಗಾರೇಶ ಹಿರೇಮಠ ಸಹ ಕಾಂಗ್ರೆಸ್‌ನಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ.
ಇನ್ನು, ಬಿಜೆಪಿಯಿಂದ ಮತ್ತೊಂದು ಬಾರಿ ಸ್ಪರ್ಧಿಸಲು ನಿಂಬಣ್ಣ ಉತ್ಸುಕರಾಗಿದ್ದಾರೆ. ತಮಗೆ ನೀಡದೇ ಹೋದಲ್ಲಿ ಪುತ್ರ ಶಶಿಧರಗೆ ಟಿಕೆಟ್ ನೀಡಿ ಎಂದು ಕೇಳಿದ್ದಾರೆ. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಜಿ.ಪಂ. ಮಾಜಿ ಸದಸ್ಯ ವಿ.ಎಸ್. ಪಾಟೀಲ, ಸದಾನಂದ ಚಿಂತಾಮಣಿ, ಪಿ.ಪಿ. ಹೊನ್ನಳ್ಳಿ, ಕಲ್ಮೇಶ ಹಾವೇರಿ ಪೇಟ, ಶಂಕರ ಬಸವರೆಡ್ಡಿ ಹಾಗೂ ಮಾಜಿ ಮೇಯರ್ ಶಿವು ಹಿರೇಮಠ ಸಹ ಬಿಜೆಪಿಯಿಂದ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಈರಣ್ಣ ಶೀಗಿಗಟ್ಟಿ, ಆನಂದ ಹಬೀಬ ಟಿಕೆಟ್ ಬಯಸಿದ್ದಾರೆ.
ಕ್ಷೇತ್ರದ ಹಿನ್ನೆಲೆ: 1972ರಲ್ಲಿ ಜೆ.ಸಿ.ಪಾಟೀಲ (ಕಾಂಗ್ರೆಸ್), 1978ರಲ್ಲಿ ಎಸ್.ಎಫ್. ಪಾಟೀಲ (ಜನತಾ ಪಕ್ಷ), 1983ರಲ್ಲಿ ಫಾದರ್ ಜಾಕೋಬ್ (ಪಕ್ಷೇತರ), 1985ರಿಂದ 1994ರ ವರೆಗೆ ಮೂರು ಬಾರಿ ಜೆಡಿಎಸ್‌ನಿಂದ ಪಿ.ಸಿ. ಸಿದ್ದನಗೌಡರ, 1999ರಿಂದ 2008ರ ವರೆಗೆ ಎರಡು ಬಾರಿ ಬಿಜೆಪಿಯಿಂದ ಎಸ್.ಐ.ಚಿಕ್ಕನಗೌಡರ, 2008ರಿಂದ 2013ರ ವರೆಗೆ ಎರಡು ಬಾರಿ ಕಾಂಗ್ರೆಸ್‌ನಿಂದ್ ಸಂತೋಷ್ ಲಾಡ್ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 2018ರಲ್ಲಿ ಬಿಜೆಯಿಂದ ಸಿ.ಎಂ. ನಿಂಬಣ್ಣವರ ಆಯ್ಕೆಯಾದರು. ಇತಿಹಾಸದ ಪುಟಗಳನ್ನು ತೆರೆದರೆ ಕ್ಷೇತ್ರವನ್ನು ಪ್ರತಿನಿಧಿಸಿದವರ ಪೈಕಿ ವಲಸಿಗರೇ ಹೆಚ್ಚು. ಸ್ಥಳೀಯರಾದ ಜೆ.ಸಿ.ಪಾಟೀಲ, ಎಸ್.ಎಫ್. ಪಾಟೀಲ ಹಾಗೂ ನಿಂಬಣ್ಣವರ ಮಾತ್ರ ಇದಕ್ಕೆ ಅಪವಾದ.
ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?
ಜಾತಿ ಲೆಕ್ಕಾಚಾರ: ಕಲಘಟಗಿ ಕ್ಷೇತ್ರದಲ್ಲಿ ಒಟ್ಟು 1,89,394 ಮತದಾರರಿದ್ದು, ಈ ಪೈಕಿ ಲಿಂಗಾಯತರು 60 ಸಾವಿರ, ಮರಾಠರು 40,000, ವಾಲ್ಮೀಕಿ ಜನಾಂಗದವರು 30,500, ಮುಸ್ಲಿಮರು 22,500, ಎಸ್ಸಿಗಳು 20,000 ಹಾಗೂ ಇತರರು 16,000ದಷ್ಟಿದ್ದಾರೆ. ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯ ಹೆಚ್ಚಿದೆ. ನಂತರದ ಸ್ಥಾನದಲ್ಲಿ ಮರಾಠಿಗರಿದ್ದಾರೆ.