ಪಂಚರತ್ನ ಯೋಜನೆಯ ಗುರಿ ರಾಜ್ಯದಲ್ಲಿರುವ ಬಡವರ ಕಲ್ಯಾಣವೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ತುರುವೇಕೆರೆ (ಡಿ.28) : ಪಂಚರತ್ನ ಯೋಜನೆಯ ಗುರಿ ರಾಜ್ಯದಲ್ಲಿರುವ ಬಡವರ ಕಲ್ಯಾಣವೇ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಪಟ್ಟಣದಲ್ಲಿ ನಡೆದ ಪಂಚರತ್ನ ರಥಯಾತ್ರೆಯ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು ತಮಗೆ ಬಹುಮತದ ಸರ್ಕಾರ ನೀಡಿ. ರಾಜ್ಯದ ಜನತೆ ಹಿಂದೆಂದೂ ಕಂಡರಿಯದ ಉತ್ತಮ ಆಡಳಿತವನ್ನು ನೀಡುವೆ. ತಮಗೆ ಅಧಿಕಾರದ ಆಸೆ ಇಲ್ಲ. ಅಧಿಕಾರ ಅನುಭವಿಸಿ ಸಂಪತ್ತು ಮಾಡಬೇಕೆಂಬ ದುರಾಲೋಚನೆಯೂ ಇಲ್ಲ. ಇರುವ ಜೀವವನ್ನು ಬಡವರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದೇನೆ. ಒಮ್ಮೆ ನನಗೆ ಅವಕಾಶ ನೀಡಿ ಎಂದು ಕುಮಾರಸ್ವಾಮಿ ಸಾರ್ವಜನಿಕರು ಮತ್ತು ಜೆಡಿಎಸ್ ಕಾರ್ಯಕರ್ತರಲ್ಲಿ ಮನವಿ ಮಾಡಿಕೊಂಡರು.
ಗ್ರಾಮಾಂತರ ಪ್ರದೇಶದಲ್ಲಿರುವ ಜನರಿಗೆ ಉತ್ತಮ ವಸತಿ, ಶಿಕ್ಷಣ, ಆರೋಗ್ಯ, ರೈತರ ಜೀವನ ಸುಧಾರಣೆ ಮತ್ತು ಯುವ ಜನರ ಸಬಲೀಕರಣ ಸೇರಿದಂತೆ ವಿವಿಧ ಯೋಜನೆಗಳನ್ನು ಜಾರಿಗೆ ತರುವುದು ತಮ್ಮ ಮೂಲ ಮಂತ್ರವಾಗಿದೆ. ಸಿಕ್ಕ ಅಧಿಕಾರಾವಧಿಯಲ್ಲಿ ಈ ಯೋಜನೆಗಳನ್ನು ಜಾರಿಗೆ ತರದಿದ್ದಲ್ಲಿ ತಮ್ಮಲ್ಲಿ ಮುಂದೆ ಮತ ಕೇಳಲು ಬರುವುದಿಲ್ಲ ಎಂದು ಕುಮಾರಸ್ವಾಮಿ ಶಪಥ ಮಾಡಿದರು.
ಸದನದಲ್ಲಿ ಸಮಸ್ಯೆ ಚರ್ಚಿಸದೇ ಪಂಚರತ್ನ ರಥಯಾತ್ರೆ ಮಾಡುವ ಶಾಸಕರು: ಚಲುವರಾಯಸ್ವಾಮಿ ಟೀಕೆ
ಮೂರ್ನಾಲ್ಕು ತಿಂಗಳು ತಾಳ್ಮೆಯಿಂದ ಇರಿ:
ಕೊಬ್ಬರಿ ಬೆಲೆ ಕುಸಿದಿರುವ ಕುರಿತು ಸಾರ್ವಜನಿಕರೊಬ್ಬರು ಮಾತನಾಡಿದರು. ಇದಕ್ಕೆ ಉತ್ತರಿಸಿದ ಕುಮಾರಸ್ವಾಮಿ ಇನ್ನು ಮೂರ್ನಾಲ್ಕು ತಿಂಗಳು ತಾಳಿ. ನಾನು ಅಧಿಕಾರಕ್ಕೆ ಬರುವೆ. ನಿಮ್ಮ ನೋವನ್ನು ಬಗೆಹರಿಸುವೆ ಎಂದರು. ಜನರಿಗೆ ಈಗ ಜಾತಿ ಬೇಡ, ಜೀವನ ಬೇಕಾಗಿದೆ. ನಾನು ಯಾವುದೇ ಜಾತಿಗೆ ಸೀಮಿತವಾಗದೆ ಸರ್ವ ಜನರ ಸುಖವನ್ನು ಬಯಸುವವನು. ಹಾಗಾಗಿ ಇಡೀ ರಾಜ್ಯದ ಜನತೆ ಈ ಬಾರಿ ಜೆಡಿಎಸ್‌ನ್ನು ಬೆಂಬಲಿಸುವರು ಎಂದು ಕುಮಾರಸ್ವಾಮಿ ಹೇಳಿದರು.
ಪಂಚರತ್ನ ರಥಯಾತ್ರೆಗೆ ತಾಲೂಕಿನ ಮಾಯಸಂದ್ರ ಟಿ.ಬಿ ಕ್ರಾಸ್‌ನಿಂದ ಭರ್ಜರಿ ಸ್ವಾಗತ ನೀಡಲಾಯಿತು. ಟಿಬಿ ಕ್ರಾಸಿನಲ್ಲಿ ಅಡಿಕೆಯ ಹೊಂಬಾಳೆ ಹಾಗೂ ಬೃಹತ್ ಗಾತ್ರದ ಹೂವಿನ ಹಾರವನ್ನು ಹಾಕುವ ಮೂಲಕ ಕುಮಾರಸ್ವಾಮಿಯವರಿಗೆ ಸ್ವಾಗತ ಕೋರಲಾಯಿತು. ಪಟ್ಟಣದ ಪ್ರವಾಸಿ ಮಂದಿರಕ್ಕೆ ಬರುವ ಮಾರ್ಗದುದ್ದಕ್ಕೂ ಕುಮಾರಸ್ವಾಮಿಯವರ ಅಭಿಮಾನಿಗಳು ಸ್ವಾಗತ ಕೋರಿದರು.
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗ ರಾಜ್ಯ ಯುವ ಜೆಡಿಎಸ್‌ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟಚಂದ್ರೇಶ್ ರಾಗಿ ಹುಲ್ಲಿನ ಭಾರಿ ಗಾತ್ರದ ಹಾರವನ್ನು ಹಾಕಲಾಯಿತು. ಬಾಣಸಂದ್ರ ವೃತ್ತದಲ್ಲಿ ಎಳನೀರು, ಕುಂಬಳಕಾಯಿ, ಪೋಸ್ಟ್ ಆಫೀಸ್ ವೃತ್ತದಲ್ಲಿ ವಿಜಯಕುಮಾರ್‌ರವರು ಕೊಬ್ಬರಿಯ ಬೃಹತ್ ಹಾರ ಹಾಕಿದರು. ನಂತರ ಉಡುಸಲಮ್ಮ ದೇವಾಲಯದ ಮುಂಭಾಗ ಭಾರಿ ಗಾತ್ರದ ಸೇಬಿನ ಹಾರವನ್ನು ಹಾಕಲಾಯಿತು. ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಎಚ್.ಬಿ.ನಂಜೇಗೌಡ, ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಾಗರಾಜು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು. Mandya: ಅಧಿವೇಶನದಲ್ಲಿ ಚರ್ಚಿತ ವಿಷಯಗಳು ಎಷ್ಟು ಜಾರಿಯಾಗಿವೆ?: ಕುಮಾರಸ್ವಾಮಿ ಪ್ರಶ್ನೆ