ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಿದೆ. ಇದರಲ್ಲಿ 30 ರಾಜಕೀಯ ಪಕ್ಷಗಳು ಪಾಲ್ಗೊಳ್ಳಲಿವೆ.
ನವದೆಹಲಿ (ಜುಲೈ 17, 2023): ಮುಂದಿನ ಲೋಕಸಭೆ ಚುನಾವಣೆಗೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿರುವ ಆಡಳಿತಾರೂಢ ಎನ್‌ಡಿಎ ಮೈತ್ರಿಕೂಟ, ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಮಹತ್ವದ ಸಭೆ ನಡೆಸಲಿದೆ. ಇದರಲ್ಲಿ 30 ರಾಜಕೀಯ ಪಕ್ಷಗಳು ಪಾಲ್ಗೊಳ್ಳಲಿವೆ. ಬೆಂಗಳೂರಿನಲ್ಲಿ ‘ಮೋದಿ ವಿರೋಧಿ’ ಒಕ್ಕೂಟದ 24 ರಾಜಕೀಯ ಪಕ್ಷಗಳ ಸಭೆ ನಡೆಯುತ್ತಿರುವಾಗಲೇ ಈ ಸಭೆ ಏರ್ಪಟ್ಟಿದೆ.
ಎನ್‌ಡಿಎಗೆ ಹೊಸ ಮಿತ್ರರ ಸೇರ್ಪಡೆ:
ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಎನ್‌ಡಿಎ ಸಭೆ ಮಂಗಳವಾರ ಸಂಜೆ ನಡೆಯಲಿದ್ದು, ಅದಕ್ಕೆ ಹೊಸ ಮಿತ್ರರನ್ನೂ ಆಹ್ವಾನಿಸಲಾಗಿದೆ. ಬಿಹಾರದ ಲೋಕಜನಶಕ್ತಿ ಪಕ್ಷದ ಚಿರಾಗ್ ಪಾಸ್ವಾನ್, ಹಿಂದುಸ್ತಾನಿ ಅವಾಮ್ ಮೋರ್ಚಾದ ಜೀತನ್ ರಾಂ ಮಾಂಝಿ, ರಾಷ್ಟ್ರೀಯ ಲೋಕ ಸಮತಾ ಪಕ್ಷದ ಉಪೇಂದ್ರ ಕುಶ್ವಾಹ ಹಾಗೂ ವಿಕಾಸಶೀಲ ಇನ್ಸಾನ್ ಪಕ್ಷದ ಮುಕೇಶ್ ಸಾಹನಿ ಅವರಿಗೆ ಆಮಂತ್ರಣ ಕಳುಹಿಸಲಾಗಿದ್ದು, ಅವರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದನ್ನು ಓದಿ: ಮೋದಿ ಮಣಿಸಲು ಬೆಂಗ್ಳೂರಲ್ಲಿ ಇಂದಿನಿಂದ 2 ದಿನ ವಿಪಕ್ಷಗಳ ಸಭೆ: 26 ಪಕ್ಷಗಳ ಮುಖಂಡರಿಗೆ ಆಹ್ವಾನ
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಮಾಜಿ ಆಪ್ತ ಓಂಪ್ರಕಾಶ್ ರಾಜಭಾರ್ ಅವರು ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷ ಎಂಬ ಪಕ್ಷ ಕಟ್ಟಿದ್ದು, ಅವರು ಭಾನುವಾರ ಎನ್‌ಡಿಎ ಸೇರಿದ್ದಾರೆ. ಸಮಾಜವಾದಿ ಪಕ್ಷದ ಶಾಸಕ ದಾರಾ ಸಿಂಗ್ ಚೌಹಾಣ್ ಶುಕ್ರವಾರವಷ್ಟೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅಮಿತ್ ಶಾ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಚಂದ್ರಬಾಬು, ಬಾದಲ್ ಎನ್‌ಡಿಎಗಿಲ್ಲ:
ಆಂಧ್ರಪ್ರದೇಶದ ತೆಲುಗುದೇಶಂ ಪಕ್ಷದ ಚಂದ್ರಬಾಬು ನಾಯ್ಡು ಮತ್ತು ಪಂಜಾಬ್‌ನ ಶಿರೋಮಣಿ ಅಕಾಲಿದಳದ ಬಾದಲ್ ಕುಟುಂಬ ಎನ್‌ಡಿಎಗೆ ಮತ್ತೆ ಸೇರಲಿದೆ ಎಂಬ ಲೆಕ್ಕಾಚಾರಗಳು ಸುಳ್ಳಾಗಿವೆ. ಅವು ಎನ್‌ಡಿಎ ಸೇರಲು ನಿರಾಕರಿಸಿವೆ ಎಂದು ತಿಳಿದುಬಂದಿದೆ. ಆಂಧ್ರದಲ್ಲಿ ಪವನ್ ಕಲ್ಯಾಣ್ ನೇತೃತ್ವದ ಜನಸೇನಾ ಪಕ್ಷದ ಜೊತೆ ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆಯಿದೆ.
ಇನ್ನುಳಿದಂತೆ ಎನ್‌ಡಿಎಯಲ್ಲಿ ಸದ್ಯ ಬಿಜೆಪಿ, ಎಐಎಡಿಎಂಕೆ, ಶಿವಸೇನೆ (ಏಕನಾಥ್ ಶಿಂಧೆ ಬಣ), ಎನ್‌ಪಿಪಿ, ಎನ್‌ಡಿಪಿಪಿ, ಎಸ್‌ಕೆಎಂ, ಜೆಜೆಪಿ, ಐಎಂಕೆಎಂಕೆ, ಎಜೆಎಸ್‌ಯು, ಆರ್‌ಪಿಐ, ಎಂಎನ್‌ಎಫ್, ಟಿಎಂಸಿ (ತಮಿಳ್ ಮನಿಲಾ ಕಾಂಗ್ರೆಸ್), ಐಪಿಎಫ್‌ಟಿ, ಬಿಪಿಪಿ, ಪಿಎಂಕೆ, ಎಂಜಿಪಿ, ಅಪ್ನಾ ದಳ, ಎಜೆಪಿ, ನಿಷಾದ್ ಪಾರ್ಟಿ, ಯುಪಿಪಿಎಲ್, ಎಐಆರ್‌ಎನ್‌ಸಿ, ಶಿರೋಮಣಿ ಅಕಾಲಿದಳ ಸಂಯುಕ್ತ ಮುಂತಾದ 24 ಪಕ್ಷಗಳಿವೆ.
ಇದನ್ನೂ ಓದಿ: ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ
ಎನ್‌ಡಿಎ ತೆಕ್ಕೆಗೆ ಒಬಿಸಿ ನಾಯಕ ರಾಜಭರ್
2024ರ ಲೋಕಸಭಾ ಚುನಾವಣೆಗೂ ಎನ್‌ಡಿಎ ಮೈತ್ರಿಕೂಟ ಬಲಪಡಿಸುವ ಯತ್ನ ಮುಂದುವರೆಸಿರುವ ಬಿಜೆಪಿ, ಇದೀಗ ಉತ್ತರಪ್ರದೇಶ ಸುಹೇಲ್‌ದೇವ್ ಭಾರತೀಯ ಸಮಾಜ್ ಪಕ್ಷದ ಸಂಸ್ಥಾಪಕ ಹಾಗೂ ಹಿಂದುಳಿದ ವರ್ಗದ ನಾಯಕ ಓಂ ಪ್ರಕಾಶ್ ರಾಜಭರ್ ಅವರನ್ನು ಮರಳಿ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಲೋಕಸಭೆಯಲ್ಲಿ 80 ಸ್ಥಾನ ಹೊಂದಿರುವ ಮತ್ತು ಈ ಪೈಕಿ ಬಹುತೇಕ ಸ್ಥಾನ ಗೆಲ್ಲುವ ಗುರಿ ಹಾಕಿಕೊಂಡಿರುವ ಎನ್‌ಡಿಎ ಮೈತ್ರಿಕೂಟದ ಕನಸಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.
ಲೋಕಸಭಾ ಚುನಾವಣೆಗೂ ಮುನ್ನ ಒಬಿಸಿ, ದಲಿತ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಕಾಂಗ್ರೆಸ್ ನೇತೃತ್ವದ ವಿಪಕ್ಷಗಳು ತಂತ್ರ ರೂಪಿಸುತ್ತಿರುವ ಹೊತ್ತಿನಲ್ಲೇ ಬಿಜೆಪಿ ತನ್ನ ದಾಳವನ್ನು ಯಶಸ್ವಿಯಾಗಿ ಉರುಳಿಸಿದೆ.
ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ 50 ಸೀಟ್ ಟಾರ್ಗೆಟ್: ತಮಿಳುನಾಡಿನ ರಾಮನಾಥಪುರದಿಂದ ಪ್ರಧಾನಿ ಮೋದಿ ಸ್ಪರ್ಧೆ?
ಓಂ ಪ್ರಕಾಶ್, ಭಾನುವಾರ ದೆಹಲಿಯಲ್ಲಿ ಬಿಜೆಪಿ ಹಿರಿಯ ನಾಯಕ ಅಮಿತ್ ಶಾ ಅವರನ್ನು ಭೇಟಿಯಾಗಿದ್ದರು. ಬಳಿಕ ಈ ಕುರಿತು ಟ್ವೀಟ್ ಮಾಡಿರುವ ರಾಜಭರ್, ‘ಬಿಜೆಪಿ ಮತ್ತು ಎಸ್‌ಬಿಎಸ್‌ಪಿ ಒಂದಾಗಿವೆ. ಸಾಮಾಜಿಕ ನ್ಯಾಯ, ರಾಷ್ಟ್ರೀಯ ಭದ್ರತೆ, ಉತ್ತಮ ಆಡಳಿತ, ಶೋಷಿತ ರೈತರು, ಬಡವರು, ದಲಿತರು, ಮಹಿಳೆಯರು ಮತ್ತು ಯುವಕರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿವೆ’ ಎಂದು ಹೇಳಿದ್ದಾರೆ. ಜೊತೆಗೆ ಜುಲೈ 18ರಂದು ನಡೆಯಲಿರುವ ಎನ್‌ಡಿಎ ಸಭೆಯಲ್ಲಿ ಭಾಗಿಯಾಗುವುದಾಗಿ ಘೋಷಿಸಿದ್ದಾರೆ.
ಪ್ರಭಾವಿ ರಾಜಭರ್:
ಒಬಿಸಿ ಸಮುದಾಯಕ್ಕೆ ಸೇರಿದ ರಾಜ್‌ಭರ್, ರಾಜ್ಯದ ಪೂರ್ವಭಾಗದಲ್ಲಿ ಅದರಲ್ಲೂ ವಿಶೇಷವಾಗಿ ರಾಜ್‌ಭರ್ ಸಮುದಾಯದಲ್ಲಿ ಪ್ರಭಾವಿಯಾಗಿದ್ದಾರೆ. ಹಿಂದಿನ ಉತ್ತರಪ್ರದೇಶದ ಬಿಜೆಪಿ ಸರ್ಕಾರದ ಭಾಗವಾಗಿದ್ದ ರಾಜಭರ್ ಚುನಾವಣೆಗೂ ಮುನ್ನ ಎನ್‌ಡಿಎ ತೊರೆದು ಸಮಾಜವಾದಿ ಪಕ್ಷದ ಜೊತೆ ಕೈಜೋಡಿಸಿದ್ದರು. ಹೀಗಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ವಲ್ಪ ಹೊಡೆತ ಕೊಡುವಲ್ಲಿ ಯಶಸ್ವಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಒಬಿಸಿ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ರಾಜಭರ್ ಅವರನ್ನು ಮರಳಿ ತನ್ನತ್ತ ಸೆಳೆದುಕೊಂಡಿದೆ. ಕಳೆದ ಕೆಲ ದಿನಗಳಲ್ಲಿ ಎನ್‌ಸಿಪಿ, ಎಲ್‌ಜೆಪಿ, ಹಿಂದುಸ್ತಾನ್ ಅವಾಮ್ ಮೋರ್ಚಾ ಪಕ್ಷಗಳನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ ಇದೀಗ ಎಸ್‌ಬಿಎಸ್‌ಪಿಯನ್ನೂ ತನ್ನೆಡೆಗೆ ಸೆಳೆದುಕೊಂಡಿದೆ.
ಇದನ್ನೂ ಓದಿ: ಏಕರೂಪ ಸಂಹಿತೆಗೆ ಬಿಜೆಪಿ ಮಿತ್ರ ಪಕ್ಷದಲ್ಲೇ ವಿರೋಧ: ಅಲ್ಪಸಂಖ್ಯಾತರ ಹೊರಗಿಡಿ ಎಂದ ಮುಸ್ಲಿಂ ಬೋರ್ಡ್