
ನವದೆಹಲಿ (ಜುಲೈ 17, 2023): ಮುಂದಿನ ಲೋಕಸಭೆ ಚುನಾವಣೆಗೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳುತಿರುವ ‘ಮೋದಿ ವಿರೋಧಿ’ ಪ್ರತಿಪಕ್ಷಗಳು ಸೋಮವಾರ ಮತ್ತು ಮಂಗಳವಾರ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಸಭೆ ನಡೆಸಲಿವೆ. ಇತ್ತೀಚಿನ ದಿನಗಳಲ್ಲಿ ವಿಪಕ್ಷಗಳು ನಡೆಸುತ್ತಿರುವ 2ನೇ ಸಭೆ ಇದಾಗಿದೆ. ಈ ಹಿಂದೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಜೂನ್ 23ರಂದು ಪಟನಾದಲ್ಲಿ ಮೊದಲ ಸಭೆ ನಡೆಸಿದ್ದರು.
ಬೆಂಗಳೂರಿನ ಸಭೆಯಲ್ಲಿ ಮೈತ್ರಿಕೂಟದ ಹೆಸರು ಏನಿರಬೇಕು? ಕೂಟದ ಅಜೆಂಡಾ ಏನು? ರಾಜ್ಯವಾರು ಮೈತ್ರಿ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಜತೆಗೆ, ಜುಲೈ 20ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಬಿಜೆಪಿ ವಿರುದ್ಧ ಒಗ್ಗಟ್ಟಿನಿಂದ ಹೋರಾಡುವ ನಿಟ್ಟಿನಲ್ಲಿ ತಮ್ಮೊಳಗಿರುವ ಭಿನ್ನಮತವನ್ನು ನಿವಾರಣೆ ಮಾಡಿಕೊಳ್ಳುವುದಕ್ಕೂ ವಿರೋಧ ಪಕ್ಷಗಳ ಸಭೆಯಲ್ಲಿ ಪ್ರಯತ್ನ ನಡೆಯಲಿದೆ.
ಇದನ್ನು ಓದಿ: ಗ್ಯಾರಂಟಿ ಬೇಕೋ, ಬಿಜೆಪಿ ಬೇಕೋ? ನಿರ್ಧರಿಸಿ; ವಿಪಕ್ಷ ಗೆದ್ದರೆ ಹಗರಣ ಗ್ಯಾರಂಟಿ: ಪ್ರತಿಪಕ್ಷ ಮೈತ್ರಿಗೆ ಮೋದಿ ಚಾಟಿ
ಮೊದಲಿನ ಸಭೆಯಲ್ಲಿ 17 ವಿಪಕ್ಷಗಳು ಪಾಲ್ಗೊಂಡಿದ್ದವು. ಆದರೆ ಈಗಿನ ಸಭೆಗೆ 24 ಪಕ್ಷಗಳಿಗೆ ಆಹ್ವಾನ ಹೋಗಿದೆ. ಈ ಸಭೆಯ ಉಸ್ತುವಾರಿಯನ್ನು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ನೋಡಿಕೊಳ್ಳುತ್ತಿದ್ದಾರೆ. ಮೊದಲ ದಿನ ಸಂಜೆ ಸಿದ್ದರಾಮಯ್ಯ ಅವರು ಔತಣಕೂಟ ಹಮ್ಮಿಕೊಂಡಿದ್ದಾರೆ.
ಸೋನಿಯಾ, ರಾಹುಲ್ ಗಾಂಧಿ ಭಾಗಿ:
ಸಭೆಗೆ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಹಾಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಗಮಿಸಲಿದ್ದಾರೆ. ಟಿಎಂಸಿ ಅಧ್ಯಕ್ಷೆ ಹಾಗೂ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರದ ಮುಖ್ಯಮಂತ್ರಿ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್, ಬಿಹಾರದ ಮಾಜಿ ಮುಖ್ಯಮಂತ್ರಿ ಹಾಗೂ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನೆ ನಾಯಕ ಉದ್ಧವ್ ಠಾಕ್ರೆ, ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್, ಆಪ್ ನಾಯಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಆಗಮಿಸಲಿದ್ದಾರೆ.
ಇದನ್ನೂ ಓದಿ: ಮೂರೇ ದಿನಕ್ಕೆ ವಿಪಕ್ಷಗಳ ಮೈತ್ರಿ ಠುಸ್! ಪರಸ್ಪರ ಕಚ್ಚಾಡಿಕೊಂಡ ಕಾಂಗ್ರೆಸ್, ಟಿಎಂಸಿ, ಸಿಪಿಎಂ
ಮೋದಿ ವಿರೋಧಿ ಒಕ್ಕೂಟಕ್ಕೆ ಆಪ್:
ಆದಾಗ್ಯೂ ವಿಪಕ್ಷಗಳ ‘ಮೋದಿವಿರೋಧಿ ಒಕ್ಕೂಟ’ ಇನ್ನೂ ಅಧಿಕೃತವಾಗಿ ರಚನೆಯಾಗಿಲ್ಲ. ಅದರಲ್ಲಿ ಅಂತಿಮವಾಗಿ ಕಾಂಗ್ರೆಸ್, ಎನ್‌ಸಿಪಿ, ಶಿವಸೇನೆ (ಉದ್ಧವ್ ಬಣ), ಟಿಎಂಸಿ, ಜೆಡಿಯು, ಸಮಾಜವಾದಿ ಪಾರ್ಟಿ, ಆರ್‌ಜೆಡಿ ಮುಂತಾದ 24 ಪಕ್ಷಗಳು ಇರುವ ಸಾಧ್ಯತೆಯಿದೆ. ಈ ಒಕ್ಕೂಟ ಸೇರುವುದಕ್ಕೆ ಮೀನಮೇಷ ಎಣಿಸುತ್ತಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಆಪ್ ಕೂಡ ಸೋಮವಾರದ ಸಭೆಯಲ್ಲಿ ಪಾಲ್ಗೊಳ್ಳಲಿದ್ದೇವೆ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ.
ಯಾಕೆ ಸಭೆ?
ಇದನ್ನೂ ಓದಿ: ಬಿಜೆಪಿ ಮಣಿಸಲು ಪಣ ತೊಟ್ಟ 17 ವಿಪಕ್ಷಗಳು: ಮುಂದಿನ ಸಭೆಗೆ ಬರಲು ಕಾಂಗ್ರೆಸ್‌ಗೆ ಆಪ್ ಷರತ್ತು
ಯಾರ್ಯಾರು ಭಾಗಿ?
ಸೋನಿಯಾ, ರಾಹುಲ್ ಗಾಂಧಿ, ಖರ್ಗೆ, ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್, ಲಾಲು ಯಾದವ್, ಉದ್ಧವ್ ಠಾಕ್ರೆ, ಎಂ.ಕೆ. ಸ್ಟಾಲಿನ್, ಅರವಿಂದ ಕೇಜ್ರಿವಾಲ್ ಸೇರಿ ಅನೇಕ ನಾಯಕರು
ಇದನ್ನೂ ಓದಿ: 2024 ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ರಣತಂತ್ರ: ಜೂನ್ 12ಕ್ಕೆ ಪಟನಾದಲ್ಲಿ ವಿಪಕ್ಷ ನಾಯಕರ ಬೃಹತ್ ‘ಲೋಕ’ಸಭೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.