ಗಣಿ ನಾಡಲ್ಲಿ ಮತ್ತೆ ಗುಡುಗಿದ ಸಿದ್ದರಾಮಯ್ಯ

By Kannadaprabha News  |  First Published Oct 16, 2022, 3:07 PM IST
  • ಗಣಿ ನಾಡಲ್ಲಿ ಮತ್ತೆ ಗುಡುಗಿದ ಸಿದ್ದರಾಮಯ್ಯ
  • ಬಳ್ಳಾರಿ ಪಾದಯಾತ್ರೆ ನೆನಪಿಸಿ ಸಿದ್ದು ವಾಗ್ಝರಿ
  • ಶ್ರೀರಾಮುಲುಗೆ ಇಂದಿರಾ, ಸೋನಿಯಾ ಕೊಡುಗೆ ನೆನಪಿಸಿದ ಸಿದ್ದು
  • ಮತ್ತೊಂದು ಸಿದ್ದರಾಮೋತ್ಸವದಂತೆ ಭಾಸವಾದ ಸಮಾವೇಶ

ಕೆ.ಎಂ.ಮಂಜುನಾಥ್‌

ಬಳ್ಳಾರಿ (ಅ.16) : ರಾಹುಲ್‌ ಗಾಂಧಿ ಕೈಗೊಂಡಿರುವ ಭಾರತ ಜೋಡೋ ಪಾದಯಾತ್ರೆ ನಿಮಿತ್ತ ಶನಿವಾರ ಇಲ್ಲಿನ ಮುನ್ಸಿಪಲ್‌ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್‌ ಬೃಹತ್‌ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎಂದಿನ ತಮ್ಮ ಶೈಲಿಯಲ್ಲಿ ಬಿಜೆಪಿ, ಸಚಿವ ಶ್ರೀರಾಮುಲು,ರೆಡ್ಡಿ ಸಹೋದರರ ವಿರುದ್ಧ ಅಬ್ಬರಿಸಿ ಗುಡುಗಿದರು.

Tap to resize

Latest Videos

undefined

ಕರ್ನಾಟಕದಲ್ಲಿ ದುಡ್ಡಿದ್ದವರಿಗೆ ಮಾತ್ರ ನೌಕರಿ: ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದ ರಾಹುಲ್‌ ಗಾಂಧಿ

ಸಂವಾದಿ ರೂಪದಲ್ಲಿ ಮಾತು ಆರಂಭಿಸಿದ ಸಿದ್ದರಾಮಯ್ಯ ಮಾತಿಗೆ ನೆರೆದಿದ್ದ ಜನಸ್ತೋಮ ಕೇಕೇ, ಶಿಳ್ಳೆ, ಜಯಕಾರದೊಂದಿಗೆ ಪ್ರತಿ ಸ್ಪಂದಿಸುತ್ತಿತ್ತು. ಅದರಿಂದ ಪ್ರೇರಿತರಾದ ಸಿದ್ದರಾಮಯ್ಯ ಆವೇಶದ ವಾಗ್ಝರಿ ಹರಿಸಿದರು. ಸಿದ್ದರಾಮಯ್ಯ ಅವರ ಈ ಮಾತುಗಳು ಹಿಂದೆ ವಿಧಾನಸೌಧದಲ್ಲಿ ರೆಡ್ಡಿ ಸೋದರರ ಪಂಥಾಹ್ವಾನಕ್ಕೆ ಸವಾಲೆಂಬಂತೆ ಅವರ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಕೈಕೊಂಡ ಪಾದಯಾತ್ರೆಯನ್ನು ನೆನಪಿಸುವಂತಿತ್ತು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರಗಳ ವೈಫಲ್ಯವನ್ನು ಹಾಗೂ ಹಗರಣಗಳನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತ ಇಂಥ ಸರ್ಕಾರ ಬೇಕಾ? ಎಂದು ನೆರೆದಿದ್ದ ಜನರನ್ನು ಕೇಳಿದಾಗ ಮುಗಿಲು ಬಿರಿಯುವಂತ ಜಯಕಾರ ಮೊಳಗಿತು.

ಸಿದ್ದರಾಮಯ್ಯ ವೇದಿಕೆಗೆ ಆಗಮಿಸಿದಾಗ ರಾಹುಲ್‌ ಜತೆ ಅವರು ಕೈ ಬೀಸಿದಾಗ, ಭಾಷಣ ಮಾಡುತ್ತಿದ್ದ ನಾಯಕರು ಸಿದ್ದರಾಮಯ್ಯ ಹೆಸರು ಪ್ರಸ್ತಾಪಿಸಿದಾಗಲೆಲ್ಲ ಭಾರಿ ಕರತಾಡಣ, ಕೇಕೇ ಶಿಳ್ಳೆಗಳು ಮೊಳಗುತ್ತಿದ್ದವು. ಸ್ವತಃ ಅವರು ಭಾಷಣ ಮಾಡಲು ಅಣಿಯಾದಾಗ ಸುಮಾರು 5ನಿಮಿಷಗಳ ಕಾಲ ನಿರಂತರ ಚಪ್ಪಾಳೆ, ಕೇಕೆ ಕೇಳಿಸುವುದನ್ನು ಕಂಡು ಸಭಿಕರನ್ನು ಗದರಿ ಸುಮ್ಮನಿಸಿರಿ ಮಾತು ಆರಂಭಿಸಿದರು. ಇಡೀ ಸನ್ನಿವೇಶ ದಾವಣಗೆರೆ ಸಿದ್ದರಾಮೋತ್ಸವ ನೆನೆಸುವಂತೆ ಮತ್ತೊಂದು ಸಿದ್ದರಾಮೋತ್ಸವ ಎನ್ನುವಂತೆ ಭಾಸವಾಯಿತು.

ಅಷ್ಟೇ ಅಲ್ಲ ವೇದಿಕೆಯಲ್ಲಿದ್ದ ಹಿರಿಯ ಕಾಂಗ್ರೆಸ್ಸಿಗರು ಕೂಡ ಸಿದ್ದು ಮಾತಿಗೆ ತಲೆದೂಗುತ್ತಿದ್ದರು. ಡಿ.ಕೆ.ಶಿವಕುಮಾರ ರಾಹುಲ್‌ ಕಿವಿಯಲ್ಲಿ ಸಿದ್ದು ಭಾಷಣ ತರ್ಜುಮೆ ಮಾಡುತ್ತಿದ್ದರು.

ಇಂದಿರಾ, ಸೋನಿಯಾ ಕೊಡುಗೆ:

ಇದೇ ವೇಳೆ ಬಳ್ಳಾರಿಗೆ ಸೋನಿಯಾ ಕೊಡುಗೆ ಏನು ಎನ್ನುವ ಸಚಿವ ಶ್ರೀರಾಮುಲು ಅವರ ವ್ಯಂಗ್ಯದ ಪ್ರಶ್ನೆಗೆ ಇಂದಿರಾ ಗಾಂಧಿ ಸ್ಥಾಪಿಸಿದ ಜಿಂದಾಲ್‌ ಉಕ್ಕಿನ ಕಾರ್ಖಾನೆ ಮತ್ತು ಸೋನಿಯಾ ಗಾಂಧಿ ಅವರು ಕುಡತಿನ ಬಳಿ ಸ್ಥಾಪಿಸಿದ ಬಿಟಿಪಿಎಸ್‌ ಮತ್ತು ಇತರ ಉದ್ಯಮಗಳಿಂದ ಉದ್ಯೋಗ ಸೃಷ್ಟಿಯಾಗಿ ಸಾವಿರ ಸಾವಿರ ಕುಟುಂಬಗಳಿಗೆ ನೆರವಾಗಿವೆ. ಸೋನಿಯಾ ಗಾಂಧಿ ಅವರು ತಮ್ಮನ್ನು ಆಯ್ಕೆ ಮಾಡಿದ ಬಳ್ಳಾರಿಗಾಗಿ ವಿಶೇಷ ಪ್ಯಾಕೇಜ್‌ ನೀಡಿದ್ದಾರೆ ಎಂದು ಕಾಂಗ್ರೆಸ್‌ ಕೊಡುಗೆಯನ್ನು ಜ್ಞಾಪಿಸುತ್ತ ಬಿಜೆಪಿ ಕೊಡುಗೆ ಏನು?, ನೀವು ರೆಡ್ಡಿ ಸೋದರರು ಸೇರಿ ಗಣಿ ಹಗರಣ ಮಾಡಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಗೆ ಒಂದು ರೂಪಾಯಿ ಕೆಲಸ ಬಿಜೆಪಿ ಸರ್ಕಾರ ಮಾಡಿಲ್ಲ. ನಮಗೆ ಚರ್ಚೆಗೆ ಆಹ್ವಾನ ಕೊಡ್ತಿಯಾ ಶ್ರೀರಾಮುಲು? ನಿನ್ನಂತ ಪೆದ್ದನ ಜೊತೆ ಚರ್ಚೆ ಮಾಡಲು ನಾವು ತಯಾರಿಲ್ಲ. ನಮ್ಮ ಉಗ್ರಪ್ಪ ಬರ್ತಾನೆ ಚರ್ಚೆ ಮಾಡೋಕೆ. ಬಳ್ಳಾರಿ ಲೂಟಿ ಹೊಡೆದಿದ್ದೆ ನಿಮ್ಮ ಸಾಧನೆ. ಗಣಿ ಲೂಟಿ ಮಾಡಿದ್ರಿ, ಇದರ ವಿರುದ್ಧ ಪಾದಯಾತ್ರೆ ಮಾಡಿದ್ವಿ. ಅದರಿಂದ ನೀವು ಜೈಲಿಗೆ ಹೊದ್ರಿ, ಇನ್ನೂ ರೆಡ್ಡಿ ಮೇಲೆ ಕೇಸ್‌ ಇದ್ದಾವೆ ಎಂದು ಆರೋಪಿಸಿದರು.

ದೇಶವನ್ನು ಹಾಳು ಮಾಡ್ತಿರುವ ನಿಮ್ಮ ಬಗ್ಗೆ ಹೇಳಬೇಕಲ್ವಾ? ಅದಕ್ಕಾಗಿ ಪಾದಯಾತ್ರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಭ್ರಷ್ಟಸರ್ಕಾರವೇ ಇದೆ. ಮೋದಿ ನೇತೃತ್ವದ ಸರ್ಕಾರ ಬಂದ ಮೇಲೆ ದೇಶದ ಸಾಲದ ಪ್ರಮಾಣ ಹೆಚ್ಚಿದೆ. .53 ಸಾವಿರ ಕೋಟಿ ಇದ್ದ ಸಾಲದ ಪ್ರಮಾಣ 1.53 ಲಕ್ಷ ಕೋಟಿಗೇರಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು, ಇದರ ವಿರುದ್ಧ ನಮ್ಮ ಪಾದಯಾತ್ರೆ ಎಂದರು.ಬಿಜೆಪಿ ಸರ್ಕಾರವನ್ನು ಕಿತ್ತೆಸೆಯಬೇಕಿದೆ. ಈ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಿ ಎಂದು ಮನವಿ ಮಾಡಿದರು.

ಬಳ್ಳಾರೀಲಿ ಕಾಂಗ್ರೆಸ್‌ ಅಬ್ಬರ: 'ಕೈ' ಪಾಳೆಯಕ್ಕೆ ಹುಮ್ಮಸ್ಸು

ನಮ್ಮ ಪಾದಯಾತ್ರೆ ಬಿಜೆಪಿಯಲ್ಲಿ ನಡುಕವನ್ನುಂಟು ಮಾಡಿದೆ. ಹೀಗಾಗಿ ಎಲ್ಲಿ ಅಧಿಕಾರ ಹೋಗುತ್ತದೆಯೋ ಎಂಬ ಭೀತಿಯಲ್ಲಿ ಇದೀಗ ಬಿಜೆಪಿಯೂ ಜನಸಂಕಲ್ಪ ಯಾತ್ರೆಯನ್ನು ನಡೆಸುತ್ತಿದೆ.ಆದರೆ ಈಗಾಗಲೇ ಜನತೆಯೇ ಸಂಕಲ್ಪ ಮಾಡಿ ಆಗಿದೆ.40% ಕಮಿಷನ್‌ ಪಡೆಯುವ ಭ್ರಷ್ಟಸರ್ಕಾರವನ್ನು ಕಿತ್ತೆಸೆಯಬೇಕೆಂದು ಸಂಕಲ್ಪಿಸಿದ್ದಾಗಿದೆ ಎಂದು ನುಡಿದರು.

click me!