ರಟ್ಟೀಹಳ್ಳಿ (ಹಾವೇರಿ) (ಅ.16) : ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಪರವಾದ ಅಲೆಯಿದೆ. ಪಂಚ ರಾಜ್ಯಗಳ ಚುನಾವಣೆಯಲ್ಲೂ ಇದು ಸಾಬೀತಾಗಿದೆ. ಅದೇ ರೀತಿ ರಾಜ್ಯದಲ್ಲಿ ಬಿಜೆಪಿ 150ಕ್ಕೂ ಹೆಚ್ಚು ಸ್ಥಾನ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಹೇಳಿದರು.
ಖರ್ಗೆ ಮಾತು ಕಲಬುರಗಿ ಜನಾನೇ ಕೇಳಿಲ್ಲ, ಇನ್ನು ರಾಜಸ್ಥಾನದಲ್ಲಿ ಕೇಳ್ತಾರಾ?: ಅರುಣ ಸಿಂಗ್ ವ್ಯಂಗ್ಯ
ರಟ್ಟೀಹಳ್ಳಿ ತಾಲೂಕಿನ ಮಾಸೂರಿನ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕರ್ತರ ಸಂಕಲ್ಪ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಪರವಾಗಿತ್ತು. ಆದರೆ, ಮೋದಿ ನೇತೃತ್ವದ ಬಿಜೆಪಿ ಸರ್ಕಾರ ರೈತರು, ಬಡವರು, ಮಹಿಳೆಯರ ಪರವಾಗಿದೆ. ಇವರೆಲ್ಲರೂ ಬಿಜೆಪಿ ಮತ್ತು ಮೋದಿ ಪರವಾಗಿದ್ದಾರೆ. ಜನಧನ್, ಕಿಸಾನ್ ಸಮ್ಮಾನ್, ಉಜ್ವಲ್ ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ನಮ್ಮ ಸರ್ಕಾರ ನೀಡಿದೆ. ಕರ್ನಾಟಕದಲ್ಲೂ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಕಾರ್ಯೋನ್ಮುಖವಾಗಿದೆ ಎಂದು ಹೇಳಿದರು.
ದೇಶದಲ್ಲಿ ಎರಡೇ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ. ಮುಂದಿನ ದಿನಗಳಲ್ಲಿ ಅಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಭಾರತ ಜೋಡೋ ಬಳಿಕ ಅನೇಕ ಕಾಂಗ್ರೆಸ್ಸಿಗರು ಆ ಪಕ್ಷ ತೊರೆಯಲಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಯೋಜನೆಗಳ ಬಗ್ಗೆ ಕಾರ್ಯಕರ್ತರು ಜನರಿಗೆ ತಿಳಿಸಬೇಕು. ಆ ಮೂಲಕ ಈಗಿನಿಂದಲೇ ಪಕ್ಷ ಸಂಘಟನೆ ಮಾಡಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಕರೆ ನೀಡಿದರು.
ಕಾಂಗ್ರೆಸ್ ಈಗ ಮುಳುಗುತ್ತಿರುವ ಹಡಗು. ಇಂದಿನ ಸಭೆಯಲ್ಲಿ ಜನರ ಉತ್ಸಾಹವನ್ನು ನೋಡಿದರೆ ನಿಮ್ಮನ್ನು ಚುನಾವಣೆಗೆ ಸಿದ್ಧ ಮಾಡೋ ಅವಶ್ಯಕತೆ ಇಲ್ಲ, ನೀವೆಲ್ಲ ಸಿದ್ಧರಾಗಿ ಕಾಯುತ್ತಿದ್ದೀರಿ, ಕೇಂದ್ರ ಸರ್ಕಾರದ ಅಭಿವೃದ್ಧಿ ಯೋಜನೆಗಳು ನಮ್ಮ ಮುಂದಿನ ಚುನಾವಣೆಯ ಬತ್ತಳಿಕೆಗಳಾಗಿವೆ.
ಜಿಲ್ಲೆಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ. ಪಕ್ಕದ ಜಿಲ್ಲೆಯಲ್ಲಿ ಮಾಜಿ ಮುಖ್ಯಮಂತ್ರಿ ಇದ್ದಾರೆ, ಬಡವರು ಮಹಿಳೆಯರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಶೇಷ ಕಾಳಜಿ ಇದೆ. ಪ್ರಧಾನಿ ನರೇಂದ್ರ ಮೋದಿಯವರು ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ರಾಜ್ಯದಲ್ಲಿ ಬೊಮ್ಮಾಯಿಯವರು ಮುಖ್ಯಮಂತ್ರಿಯಾಗುತ್ತಿದ್ದಂತೆ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಗೆ ತಂದರು. ಇದು ನಮ್ಮ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಕಾಂಗ್ರೆಸ್ ಕೇವಲ ಜೋಡೋ ಯಾತ್ರೆ ಮೂಲಕ ಕಾಂಗ್ರೆಸ್ ತುಂಡು ತುಂಡಾಗ್ತಿದೆ. ಬರುವ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯ ಆರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಿಸುವ ಸಂಕಲ್ಪ ಮಾಡಬೇಕಿದೆ ಎಂದರು.
ಜಿಲ್ಲಾ ಉಸ್ತುವಾರಿ ಶಿವರಾಮ್ ಹೆಬ್ಬಾರ್ ಮಾತನಾಡಿ, ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಹಲವಾರು ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಿದ್ದು ಕೃಷಿ ಕ್ಷೇತ್ರದ ಅಭಿವೃದ್ಧಿಯಂತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯತ್ತ ಸಾಗಿದೆ. ನಮ್ಮ ಸಾಧನೆಗಳೇ ಮುಂದಿನ ಚುನಾವಣೆಗೆ ನಮಗೆ ಶ್ರೀ ರಕ್ಷೆ ಎಂದರು.
ಉನ್ನತ ಶಿಕ್ಷಣಕ್ಕೆ ಹೆಚ್ಚಿನ ನೆರವು ರಾಜ್ಯ ಸರ್ಕಾರ ನೀಡಿದ್ದು, ಶಿಕ್ಷಣ ಕ್ರಾಂತಿ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿ, ಕಾರ್ಮಿಕರ ಮಕ್ಕಳಿಗೆ ವಿಶೇಷ ಸೌಲಭ್ಯ ನೀಡಿದ್ದು ನಮ್ಮ ಸರ್ಕಾರದ ಸಾಧನೆಯಾಗಿದೆ. ಇಂದಿನ ಸಭೆಯಲ್ಲಿ ಬೂತ್ ಮಟ್ಟದ ಸಭೆಯ ಮೂಲಕ ಜನರಿಗೆ ಪಕ್ಷದ ಸಂಘಟನೆ ಮಾಡಲಾಗುತ್ತಿದೆ. ಸರ್ಕಾರದ ಸಾಧನೆಗಳನ್ನು ಕಾರ್ಯಕರ್ತರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದರು.
ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಹಿರೇಕೆರೂರ ವಿಧಾನಸಭಾ ಕ್ಷೇತ್ರದಲ್ಲಿ ನಡೆದಂತಹ ಅಭಿವೃದ್ಧಿಪರ ಯೋಜನೆಗಳೇ ನಮಗೆ ಶ್ರೀರಕ್ಷೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ತರ ಸಾಧನೆಗಳಿಂದ ಮುಂದಿನ ಚುನಾವಣೆಯ ಯುದ್ಧ ಇಂದಿನ ಸಭೆಯ ಮೂಲಕ ಸರ್ವಜ್ಞನ ನಾಡಾದ ಮಾಸೂರಿನಿಂದ ಪ್ರಾರಂಭವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರವಾಗಿ ರೈತರ ಖಾತೆಗೆ 10 ಸಾವಿರ ರು. ಜಮಾ ಮಾಡಿ ರೈತರ ಸಂಕಷ್ಟದಲ್ಲಿ ಪಾಲುದಾರರಾಗಿ ಕಾರ್ಯನಿರ್ವಹಿಸಿದೆ. ಹಿರೇಕೆರೂರ ಕ್ಷೇತ್ರದಲ್ಲಿ ಕುಮದ್ವತಿ ನದಿಗೆ ಚೆಕ್ ಡ್ಯಾಂ ನಿರ್ಮಾಣ, ಎಲ್ಲಾ ಹಳ್ಳಿಗಳಿಗೆ ತುಂಗಭದ್ರಾ ನದಿಯಿಂದ ಕುಡಿಯುವ ನೀರು ಪೂರೈಸುವ ಯೋಜನೆ ಸಿದ್ಧವಾಗಿದೆ ಎಂದರು.
ಕಾಂಗ್ರೆಸ್ ಲೀಡರ್‌ಲೆಸ್ ಪಾರ್ಟಿ, ಸಿದ್ದು ಡರ್ಟಿ ಪಾಲಿಟಿಕ್ಸ್: ಅರುಣ ಸಿಂಗ್
ಮಡ್ಲೂರು ಏತ ನೀರಾವರಿ, ಹಿರೇಕೆರೂರ ಮತ್ತು ರಟ್ಟೀಹಳ್ಳಿಯಲ್ಲಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ . 10 ಕೋಟಿ, ರಸ್ತೆ ಅಭಿವೃಟದ್ಧಿಗೆ . 5 ಕೋಟಿ, ಮಾಸೂರಿನ ಸರ್ವಾಂಗೀಣ ಅಭಿವೃದ್ಧಿಗೆ . 25 ಕೋಟಿ, ರಟ್ಟೀಹಳ್ಳಿಯಲ್ಲಿ ಅಗ್ನಿಶಾಮಕ ದಳ ನಿರ್ಮಾಣಕ್ಕೆ . 3 ಕೋಟಿ, ಹಿರೇಕೆರೂರಿನಲ್ಲಿ ಕಾರ್ಮಿಕ ಭವನ ನಿರ್ಮಾಣ, ಕೋವಿಡ್‌ನಿಂದ ಮೃತಪಟ್ಟಕುಟುಂಬಗಳಿಗೆ ತಲಾ . 50 ಸಾವಿರ ನೆರವನ್ನು 130 ಕುಟುಂಬಗಳಿಗೆ ನೀಡಿದ್ದೇನೆ. ಇಷ್ಟುದಿನ ಮಾಡಿದ ಕೆಲಸಕ್ಕೆ ಮುಂದಿನ ದಿನಗಳಲ್ಲಿ ನಿಮ್ಮ ಮತಗಳ ಮೂಲಕ ಕೂಲಿ ಕೇಳುತ್ತೇನೆ. ಆಗ ಕೊಡೊ ಕೆಲಸ ನಿಮ್ಮದು ಎಂದರು.