ವೈಯಕ್ತಿಕ ಪ್ರತಿಷ್ಠೆಗಿಂತ ಪಕ್ಷವೇ ಮುಖ್ಯವಾದಲ್ಲಿ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಹೀಗಾಗಿ, ನಾವೆಲ್ಲರೂ ಒಟ್ಟಾಗಿ ಸೇರಿ ಬಿಜೆಪಿ ಅಧಿಕಾರಕ್ಕೆ ತರೋಣ ಎಂದ ನಿರ್ಮಲಕುಮಾರ ಸುರಾನಾ.
ವಿಜಯಪುರ(ಅ.16): ಇಲ್ಲಿನ ಪಾಲಿಕೆ ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು. ವೈಯಕ್ತಿಕ ಪ್ರತಿಷ್ಠೆಗಿಂತ ಪಕ್ಷವೇ ಮುಖ್ಯವಾದಲ್ಲಿ ಮಾತ್ರ ಅಧಿಕಾರಕ್ಕೆ ಬರಲು ಸಾಧ್ಯ. ಹೀಗಾಗಿ, ನಾವೆಲ್ಲರೂ ಒಟ್ಟಾಗಿ ಸೇರಿ ಬಿಜೆಪಿ ಅಧಿಕಾರಕ್ಕೆ ತರೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಪಾಲಿಕೆ ಚುನಾವಣೆ ಉಸ್ತುವಾರಿ ನಿರ್ಮಲಕುಮಾರ ಸುರಾನಾ ಹೇಳಿದರು.
ಇಲ್ಲಿನ ಚಾಲುಕ್ಯ ನಗರದ ಮಹೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಶನಿವಾರ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಬಿಜೆಪಿ ಪಕ್ಷದ ಕಚೇರಿ ಉದ್ಘಾಟನಾ ಸಭೆಯಲ್ಲಿ ಅವರು ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಸರ್ಕಾರ ಜನಪರವಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆæ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ನಾವೆಲ್ಲರೂ ಕಾರ್ಯ ನಿರ್ವಹಿಸಬೇಕು. ಈ ಚುನಾವಣೆಯಲ್ಲಿ ನಾವು ಯಾವ ರೀತಿಯಾಗಿ ಕಾರ್ಯ ನಿರ್ವಹಿಸುತ್ತೇವೆಯೋ ಅದೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಕಮಲ ನಾಯಕರ ಒಗ್ಗಟ್ಟಿನ ಮಂತ್ರ: ಕಾಂಗ್ರೆಸ್, ಜೆಡಿಎಸ್‌ಗೆ ತಕ್ಕ ಪಾಠ ಕಲಿಸಲು ಬಿಜೆಪಿ ಸಜ್ಜು
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ಈ ಹಿಂದೆ ವಿಜಯಪುರವನ್ನು ಧೂಳಾಪುರ ಎನ್ನುತ್ತಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ನಗರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಇಡೀ ಚಿತ್ರಣವೇ ಬದಲಾಗಿದೆ. ತಾಂಡಾಗಳು, ಕೊಳಚೆ ಪ್ರದೇಶಗಳ ಅಭಿವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ವಿಜಯಪುರ ಸ್ಲಂ ಮುಕ್ತ ನಗರವಾಗಲಿದೆ. ನೇರವಾಗಿಯೇ ಬಡವರಿಗೆ ಮನೆ ಕೊಡುವ ಕೆಲಸ ಮಾಡುತ್ತಿದ್ದೇವೆ. ಹಿಂದುತ್ವ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದರು.
ನಾವೆಲ್ಲರೂ ಈ ಚುನಾವಣೆಯಲ್ಲಿ ಒಗ್ಗಟ್ಟಾಗಿ ಕೆಲಸ ಮಾಡಿದರೆ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ, ಕಳೆದ ನಾಲ್ಕು ವರ್ಷಗಳಲ್ಲಿ ಗೂಂಡಾಗಿರಿ ರಹಿತ, ಸುಭದ್ರ ಆಡಳಿತ ನಮ್ಮ ಪಕ್ಷವನ್ನು ಕೈಹಿಡಿಯುತ್ತದೆ ಎಂದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಮಲ ಪಕ್ಷವನ್ನು ಅರಳಿಸಬೇಕು. ನಮ್ಮ ಪಕ್ಷದ ಹಿಂದೂ ಸಮಾಜದವರೆ ಮೇಯರ್ ಹಾಗೂ ಉಪಮೇಯರ್ ಆಗಬೇಕು. ಯಾರಿಗೆ ಟಿಕೆಟ್ ಸಿಕ್ಕರೂ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಕೇವಲ 35 ಅಭ್ಯರ್ಥಿಗಳಿಗೆ ಮಾತ್ರ ಈ ಚುನಾವಣೆಯಲ್ಲಿ ಟಿಕೆಟ್ ನೀಡಲು ಸಾಧ್ಯ. ಒಂದು ವೇಳೆ ಟಿಕೆಟ್ ಸಿಗದಿರುವವರು ಬೇರೆ ಪಕ್ಷದ ಕಡೆ ಮುಖ ಮಾಡುವುದು ಬೇಡ. ಮೊದಲು ಪಕ್ಷ ನಿಷ್ಠೆ ಇರಬೇಕು. ನಮ್ಮ ಪಕ್ಷದ ನಾಯಕರೇ, ನಾವು ಮಾಡಿದ ಕೆಲಸಗಳೇ ನಮಗೆ ಮುಂದಿನ ಚುನಾವಣೆಯಲ್ಲಿ ಬಂಡವಾಳ. ಯಾವುದೇ ಕಾರಣಕ್ಕೂ ಹಿಂದೆ ಮಾಡಿದ ಸಹಾಯವನ್ನು ಮರೆಯಬಾರದು ಎಂದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ, ಎಲ್ಲರೂ ಒಗ್ಗಟ್ಟಾಗಿ ಹಾಗೂ ಎಲ್ಲರ ಅಭಿಪ್ರಾಯ ಪಡೆದು ಈ ಚುನಾವಣೆಯಲ್ಲಿ ಕಾರ್ಯ ನಿರ್ವಹಿಸಿದರೆ ಸುಲಭವಾಗಿ ಗೆಲ್ಲಬಹುದು ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಚುನಾವಣೆಯಲ್ಲಿ ಜನರ ಬೆಂಬಲ ಹಾಗೂ ಆಕಾಂಕ್ಷಿಗಳ ಸಂಖ್ಯೆಯನ್ನು ನೋಡಿದರೆ ನಮ್ಮ ಪಕ್ಷ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಜನರ ಬೆಂಬಲ ಪಕ್ಷದ ಪರವಾಗಿದೆ ಎಂಬುದು ಗೊತ್ತಾಗುತ್ತದೆ. ಈ ಚುನಾವಣೆಯಲ್ಲಿ ಕನಿಷ್ಠ 25 ಸೀಟು ಗೆಲ್ಲಬೇಕು, ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿ, ಕಳೆದ ನಾಲ್ಕು ವರ್ಷಗಳಲ್ಲಿ ವಿಜಯಪುರದಲ್ಲಿ ಸಾಕಷ್ಟುಅಭಿವೃದ್ಧಿಯಾಗಿದೆ. ಸಾಕಷ್ಟುಅನುದಾನವೂ ಜಿಲ್ಲೆಗೆ ಹರಿದು ಬಂದಿದೆ. ಹೀಗಾಗಿ, ನಾವು ಸ್ವಲ್ಪ ಪ್ರಯತ್ನಪಟ್ಟರೆ ಅಧಿಕಾರಕ್ಕೆ ಬರುವುದು ಸುಲಭ ಎಂದು ಹೇಳಿದರು.
ಕೋಮುಗಲಭೆ ಸೃಷ್ಟಿಸಿ ಅಶಾಂತಿ ವಾತಾವರಣ ನಿರ್ಮಿಸುತ್ತಿರುವ ಬಿಎಸ್‌ವೈ: ತಾರನಾಳ
ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಬಾಂಡಗೆ, ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚಂದ್ರಶೇಖ ಕವಟಗಿ, ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಸಹ ಸಂಘಟನಾ ಕಾರ್ಯದರ್ಶಿ ಜಯಪ್ರಕಾಶ, ವಿವೇಕ ಡಬ್ಬಿ, ಮಲ್ಲಿಕಾರ್ಜುನ ಜೋಗೂರ, ಮಳುಗೌಡ ಪಾಟೀಲ, ಬಸವರಾಜ ಬಿರಾದಾರ, ಈಶ್ವರ ಶಿವೂರ ಮತ್ತಿತರರು ಇದ್ದರು.
ಈ ಹಿಂದೆ ವಿಜಯಪುರವನ್ನು ಧೂಳಾಪುರ ಎನ್ನುತ್ತಿದ್ದರು. ಕಳೆದ ನಾಲ್ಕು ವರ್ಷಗಳಲ್ಲಿ ನಗರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳಿಂದ ಇಡೀ ಚಿತ್ರಣವೇ ಬದಲಾಗಿದೆ. ತಾಂಡಾಗಳು, ಕೊಳಚೆ ಪ್ರದೇಶಗಳ ಅಭಿವೃದ್ಧಿಯಾಗಿದೆ. ಮುಂದಿನ ದಿನಗಳಲ್ಲಿ ವಿಜಯಪುರ ಸ್ಲಂ ಮುಕ್ತ ನಗರವಾಗಲಿದೆ. ನೇರವಾಗಿಯೇ ಬಡವರಿಗೆ ಮನೆ ಕೊಡುವ ಕೆಲಸ ಮಾಡುತ್ತಿದ್ದೇವೆ. ಹಿಂದುತ್ವ ಹಾಗೂ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಅಂತ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.