ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ವಂಚಿತರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ವಿರುದ್ಧ ಬೇಸರಗೊಂಡವರು ಮತ್ತು ಪಕ್ಷ ತೊರೆಯಲು ಸಿದ್ಧರಾಗಿರುವವರು ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಿಂದ ದೂರ ಉಳಿದಿದ್ದರು.
ಬೆಂಗಳೂರು (ನ.16): ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ವಂಚಿತರು, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕುಟುಂಬ ವಿರುದ್ಧ ಬೇಸರಗೊಂಡವರು ಮತ್ತು ಪಕ್ಷ ತೊರೆಯಲು ಸಿದ್ಧರಾಗಿರುವವರು ನೂತನ ರಾಜ್ಯಾಧ್ಯಕ್ಷರ ಪದಗ್ರಹಣ ಸಮಾರಂಭದಿಂದ ದೂರ ಉಳಿದಿದ್ದರು. ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಪದಗ್ರಹಣ ಕಾರ್ಯಕ್ರಮಕ್ಕೆ ಮಾಜಿ ಸಚಿವರಾದ ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಸಿ.ಟಿ.ರವಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಲಿಂಬಾವಳಿ, ಅರವಿಂದ್ ಬೆಲ್ಲದ್ ಸೇರಿದಂತೆ ಹಲವು ನಾಯಕರು ಗೈರಾಗಿದ್ದರು.
ಬಿಜೆಪಿಯಿಂದ ಅಂತರ ಕಾಯ್ದುಕೊಂಡಿರುವ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಕ್ಷೇತ್ರದಲ್ಲಿಯೇ ಇದ್ದರೂ ಕಚೇರಿಯತ್ತ ಆಗಮಿಸಲಿಲ್ಲ. ಈ ಮೂಲಕ ಪಕ್ಷ ತೊರೆಯುವ ವದಂತಿಗೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ. ಸಿ.ಟಿ.ರವಿ ಅವರು ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ತೆರಳಿರುವ ಕಾರಣ ಆಗಮಿಸಿರಲಿಲ್ಲ. ಯಡಿಯೂರಪ್ಪ ಬೆಂಬಲಿಗರು, ಪಕ್ಷದ ನಿಷ್ಠಾವಂತರು ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಗೋವಿಂದ ಕಾರಜೋಳ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬಿ.ಶ್ರೀರಾಮುಲು ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.
ಬಿಜೆಪಿಗೆ ಬರುವಾಗ ಜಾಮೂನು ನೀಡ್ತಾರೆ, ಬಳಿಕ ವಿಷ ಕೊಡ್ತಾರೆ: ಶಾಸಕ ಎಸ್.ಟಿ.ಸೋಮಶೇಖರ್
ವಿಧಾನಸಭೆ ಚುನಾವಣೆ ನಂತರ ಬಿಜೆಪಿಗೆ ದೊಡ್ಡ ಶಕ್ತಿ, ಉತ್ಸಾಹ ಬಂದಿದೆ. ಎಲ್ಲರೂ ಒಗ್ಗಟ್ಟಾಗಿ ನಡೆದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ರಾಜ್ಯದಲ್ಲಿ 28 ಸ್ಥಾನಗಳನ್ನು ಗೆಲ್ಲಬಹುದು. ನೂತನ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎಲ್ಲರನ್ನೂ ಒಟ್ಟಾಗಿ ಕರೆದುಕೊಂಡು ಹೋಗುವ ವಿಶ್ವಾಸ ಇದೆ. ಸೂಕ್ತ ಸಮಯದಲ್ಲಿ ವಿಜಯೇಂದ್ರ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ್ದಾರೆ. ಅವರನ್ನು ಅಧ್ಯಕ್ಚರನ್ನಾಗಿ ಮಾಡಿದ ಪಕ್ಷದ ವರಿಷ್ಠರಿಗೆ ಅಭಿನಂದನೆ ಸಲ್ಲಿಸುತ್ತೇನೆ.
- ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ
ವಿಧಾನಸಭೆ ಚುನಾವಣೆಯಲ್ಲಿ ಸೋಲಿನ ನಂತರ ಹೊಸ ಸಾರಥಿಯ ಆಯ್ಕೆಯಲ್ಲಿ ಕಾಲ ಕಳೆಯುತ್ತಿದ್ದೆವು. ಈಗ ಅದಕ್ಕೆ ಕಾಲ ಕೂಡಿ ಬಂದಿದ್ದು, ವಿಜಯೇಂದ್ರ ಅವರಿಗೆ ಹೊಸ ಜವಾಬ್ದಾರಿ ಲಭಿಸಿದೆ. ರಾಜ್ಯದಲ್ಲಿ ಏನೋ ಕಳೆದುಕೊಂಡಿದ್ದೇವೆಯೋ ಅದನ್ನು ಪಡೆದುಕೊಳ್ಳಬೇಕು. ಈಗ ವಿಶ್ವಾಸದ ರಾಜಕಾರಣ ಬೇಕಾಗಿದೆ. ಕಾರ್ಯಕರ್ತರಲ್ಲಿ ವಿಶ್ವಾಸ ಮೂಡಿಸಿ ರಾಜಕಾರಣ ಮಾಡಬೇಕಿದೆ. ಈ ದೇಶದಲ್ಲಿ ಶೇ.60ರಷ್ಟು 40 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಅವರ ಭಾವನೆಗಳಿಗೆ ಹೊಸದಿಕ್ಕು ಕೊಡಲಿದ್ದಾರೆ ಎಂಬ ವಿಶ್ವಾಸ ಇದೆ. ವಿಜಯೇಂದ್ರ ಅವರಿಗೆ 24 ಗಂಟೆ ದುಡಿಯುವ ಸಾಮರ್ಥ್ಯ ಇದೆ.
-ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ
ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾದಾಗ ಬಹಳಷ್ಟು ಮಂದಿಗೆ ಆಶ್ಚರ್ಯವಾಗಿತ್ತು. ಮುಂದಿನ ಲೋಕಸಭೆ ಚುನಾವಣೆಯಲ್ಲಿ 28 ಕ್ಷೇತ್ರಗಳನ್ನು ಗೆಲುವು ಸಾಧಿಸಿ ರಾಜ್ಯವೇ ಆಶ್ಚರ್ಯಪಡುವಂತಾಗಬೇಕು. ಪಕ್ಷದಲ್ಲಿ ಅಲ್ಲೊಂದು ಇಲ್ಲೊಂದು ಸಮಸ್ಯೆ ಇದೆ. ಅದನ್ನು ಜೀರ್ಣ ಮಾಡಿಕೊಳ್ಳಬೇಕು ಎಂದು ಹಿರಿಯರು ಹೇಳಿಕೊಟ್ಟಿದ್ದಾರೆ. ಅದನ್ನು ಪಾಲನೆ ಮಾಡಿ ಮುನ್ನಡೆಯಬೇಕಿದೆ. ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡುವ ನಿಟ್ಟಿನಲ್ಲಿ ವಿಜಯೇಂದ್ರ ಅವರ ಕೈ ಬಲಪಡಿಸಿಬೇಕಿದೆ.
-ಕೆ.ಎಸ್.ಈಶ್ವರಪ್ಪ, ಮಾಜಿ ಸಚಿವ
ಪಕ್ಷದಲ್ಲಿನ ಪರಿಸ್ಥಿತಿ ಸ್ವಚ್ಛ ಮಾಡಿದರೆ ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ: ಎಸ್.ಟಿ.ಸೋಮಶೇಖರ್
ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸೋಲಾದ ಬಳಿಕ ಕಾರ್ಯಕರ್ತರು ಉತ್ಸಾಹ ಕಳೆದುಕೊಂಡು ಹೊರಗೆ ಬರುತ್ತಿರಲಿಲ್ಲ. ಆದರೆ ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಮತ್ತೆ ಉತ್ಸಾಹದಿಂದ ಸಂಭ್ರಮಗೊಂಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ವಿಜಯೇಂದ್ರ ನಾಯಕತ್ವದಲ್ಲಿ 28 ಸ್ಥಾನಗಳನ್ನು ಗೆದ್ದು ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಕ್ಕೆ ನಿಲ್ಲಬೇಕಾಗಿದೆ. ವಿಜಯೇಂದ್ರ ಅವರಿಗೆ ರಾಜ್ಯವನ್ನು ಸುತ್ತಿ ಪಕ್ಷ ಕಟ್ಟುವ ಹಂಬಲ ಇದ್ದು, ಅವರ ಬೆಂಬಲಕ್ಕೆ ನಾವೆಲ್ಲರೂ ನಿಲ್ಲಬೇಕು
- ಗೋವಿಂದ ಕಾರಜೋಳ, ಮಾಜಿ ಸಚಿವ