ಈ ಸಲ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ: ಜನ್‌ ಕೀ ಬಾತ್‌ ಸಮೀಕ್ಷೆ

Published : Apr 15, 2023, 05:35 AM IST
ಈ ಸಲ ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ: ಜನ್‌ ಕೀ ಬಾತ್‌ ಸಮೀಕ್ಷೆ

ಸಾರಾಂಶ

ವಿಧಾನಸಭೆ ಚುನಾವಣೆಯಲ್ಲಿ ಯಾರಿಗೂ ಬಹುಮತ ಇಲ್ಲ, ಮ್ಯಾಜಿಕ್‌ ನಂಬರ್‌ ಸನಿಹಕ್ಕೆ ಬಿಜೆಪಿ: ಜನ್‌ ಕೀ ಬಾತ್‌, ಬಿಜೆಪಿಗೆ 2018ಕ್ಕಿಂತ ಹೆಚ್ಚು ಸ್ಥಾನ, ಕಾಂಗ್ರೆಸ್‌ಗೂ ಕಳೆದ ಸಲಕ್ಕಿಂತ ಹೆಚ್ಚು ಸೀಟು, ಜೆಡಿಎಸ್‌ಗೆ ಖೋತಾ, 3ನೇ ಸ್ಥಾನ. 

ಬೆಂಗಳೂರು(ಏ.15): ತೀವ್ರ ಕುತೂಹಲ ಕೆರಳಿಸಿರುವ, ದೇಶದ ಗಮನಸೆಳೆದಿರುವ ಹಾಗೂ ಜಿದ್ದಾಜಿದ್ದಿಯಿಂದ ಕೂಡಿರುವ ಕರ್ನಾಟಕದ ಸಾರ್ವತ್ರಿಕ ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಹೊರಬೀಳಲಿದೆ. ಕಾಂಗ್ರೆಸ್ಸಿನ ತೀವ್ರ ಪೈಪೋಟಿಯಿದ್ದರೂ ಆಡಳಿತಾರೂಢ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ‘ಜನ್‌ ಕೀ ಬಾತ್‌’ ಸಂಸ್ಥೆ ನಡೆಸಿರುವ ಸಮೀಕ್ಷೆ ಭವಿಷ್ಯ ನುಡಿದಿದೆ.

ಮಾರ್ಚ್‌ 15ರಿಂದ ಏಪ್ರಿಲ್‌ 11ರವರೆಗೆ ರಾಜ್ಯಾದ್ಯಂತ ನಡೆದಿರುವ ಈ ಸಮೀಕ್ಷೆಯ ಪ್ರಕಾರ, ಬಿಜೆಪಿ 98ರಿಂದ 109 ಸ್ಥಾನಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಪ್ರತಿಪಕ್ಷ ಕಾಂಗ್ರೆಸ್‌ 89ರಿಂದ 97 ಸ್ಥಾನಗಳೊಂದಿಗೆ 2ನೇ ಅತಿದೊಡ್ಡ ಪಕ್ಷ ಎನಿಸಿಕೊಳ್ಳಲಿದೆ. ಜೆಡಿಎಸ್‌ 25ರಿಂದ 29 ಸ್ಥಾನಗಳನ್ನಷ್ಟೇ ಗಳಿಸಲಿದೆ. ಇತರರು ಕೇವಲ 1 ಸ್ಥಾನ ಪಡೆಯಲಿದ್ದಾರೆ. 224 ಸದಸ್ಯಬಲದ ವಿಧಾನಸಭೆಯಲ್ಲಿ ಯಾವುದೇ ಪಕ್ಷ ಬಹುಮತ ಪಡೆಯಬೇಕಿದ್ದರೆ ಕನಿಷ್ಠ 113 ಸ್ಥಾನ ಗಳಿಸಬೇಕಿದ್ದು, ಈ ಬಾರಿ ಆ ಸಾಧ್ಯತೆ ಕಂಡುಬರುತ್ತಿಲ್ಲ ಎಂದು ಸಮೀಕ್ಷೆ ಹೇಳಿದೆ.

Jan Ki Baat Suvarna News Survey: ಗ್ರೇಟರ್ ಬೆಂಗಳೂರಿನಲ್ಲಿ ಯಾವ ಪಕ್ಷಕ್ಕೆ ಎಷ್ಟು ಅಂಕಿ ಅಂಶ..?

ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಡಲಿದೆ, ಆದರೆ ಹಳೆ ಮೈಸೂರು ಭಾಗದಲ್ಲಿ ಮಾತ್ರ ತ್ರಿಕೋನ ಸ್ಪರ್ಧೆಯ ಸಾಧ್ಯತೆ ಇದೆ. ರಾಜ್ಯದಲ್ಲಿ ಆಡಳಿತ ವಿರೋಧಿ ಅಲೆ ಸ್ಪಷ್ಟವಾಗಿದ್ದು, ಹಾಲಿ ಸ್ಥಾನಗಳಿಂದ ಬಿಜೆಪಿ ಕೆಲವೊಂದಿಷ್ಟುಸ್ಥಾನಗಳನ್ನು ಕಳೆದುಕೊಳ್ಳಲಿದೆ ಮತ್ತು ಕಾಂಗ್ರೆಸ್‌ಗೆ ಒಂದಿಷ್ಟುಸ್ಥಾನಗಳ ಲಾಭವಾಗಲಿದೆ ಎಂದು ಸಮೀಕ್ಷಾ ವರದಿ ಹೇಳಿದೆ.
ಆದರೆ ಆಡಳಿತ ವಿರೋಧಿ ಅಲೆ ಇರುವುದರ ಹೊರತಾಗಿಯೂ, ಕಾಂಗ್ರೆಸ್‌ ಸ್ಪಷ್ಟಬಹುಮತ ಪಡೆಯುವ ಸಾಧ್ಯತೆ ಇಲ್ಲ. ಕಾರಣ, ಆಡಳಿತ ವಿರೋಧಿ ಅಲೆಯು ಆಡಳಿತಾರೂಢ ಸರ್ಕಾರವನ್ನು ಕಿತ್ತೊಗೆದು, ಕಾಂಗ್ರೆಸ್‌ ಸುಲಭವಾಗಿ ಗೆಲುವು ಸಾಧಿಸಿಕೊಂಡು ಹೋಗುವಷ್ಟರ ಮಟ್ಟಿಗೆ ಇಲ್ಲ ಎಂದು ಸಮೀಕ್ಷೆ ಹೇಳಿದೆ.

ಒಕ್ಕಲಿಗ ಮತ ಸೆಳೆಯುವ ಡಿಕೆಶಿ:

ಸಮೀಕ್ಷೆ ಅನ್ವಯ ಒಕ್ಕಲಿಗ ಸಮುದಾಯಕ್ಕೆ ಸೇರಿದ ಮತ್ತು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿರುವ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ನ ಒಕ್ಕಲಿಗ ಸಮುದಾಯದ ಮತಗಳನ್ನು ಗಮನಾರ್ಹ ಪ್ರಮಾಣದಲ್ಲಿ ಕಾಂಗ್ರೆಸ್‌ ಕಡೆಗೆ ಸೆಳೆಯಲಿದ್ದಾರೆ. ಇದರ ಪರಿಣಾಮ ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಸ್ಥಾನಗಳ ಪೈಕಿ 12 ಸ್ಥಾನಗಳನ್ನು ಈ ಬಾರಿ ಜೆಡಿಎಸ್‌ ಕಳೆದುಕೊಳ್ಳಲಿದೆ.

ದಲಿತರ ಮತ ಮಹತ್ವದ್ದು:

ಇನ್ನೊಂದು ಕುತೂಹಲಕಾರಿ ಅಂಶವೆಂದರೆ, ಈ ಬಾರಿ ಹಿಂದೂ ಮತ್ತು ಮುಸ್ಲಿಂ ಮತಗಳು ಅತ್ಯಂತ ಪ್ರಬಲವಾಗಿ ಧ್ರುವೀಕರಣಗೊಂಡಿದ್ದು, ಇಲ್ಲಿ ಎಡಪಂಥೀಯ ದಲಿತ ಮತ್ತು ಬಲಪಂಥೀಯ ದಲಿತ ಮತಗಳು ಅತ್ಯಂತ ಮಹತ್ವದ್ದಾಗಿದೆ. ಎಲ್ಲಿ ಮುಸ್ಲಿಂ ಮತ ಬ್ಯಾಂಕ್‌ ಹೆಚ್ಚು ಶಕ್ತಿಶಾಲಿಯಾಗಿದೆಯೋ ಅಲ್ಲೆಲ್ಲಾ ದಲಿತ ಮತಗಳು ಹಿಂದೂ ಮತಗಳಾಗಿ ಧ್ರುವೀಕರಣಗೊಂಡಿವೆ ಮತ್ತು ಅವು ಬಿಜೆಪಿ ಕಡೆಗೆ ವಾಲಿರುವುದು ಕಂಡುಬಂದಿದೆ ಎಂದು ಸಮೀಕ್ಷೆ ಹೇಳಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104, ಕಾಂಗ್ರೆಸ್‌ 80 ಹಾಗೂ ಜೆಡಿಎಸ್‌ 37 ಸ್ಥಾನಗಳನ್ನು ಗಳಿಸಿದ್ದವು. ನಂತರ ಆಪರೇಷನ್‌ ನಡೆದು ಬಿಜೆಪಿ ಬಹುಮತ ಸಾಧಿಸಿತ್ತು. 2018ರ ಚುನಾವಣೆಗೆ ಹೋಲಿಸಿದರೆ ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳ ಸ್ಥಾನಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಆದರೆ ಜೆಡಿಎಸ್‌ ಸಂಖ್ಯೆ ಕುಸಿತ ಕಾಣಲಿದೆ ಎಂದು ‘ಜನ್‌ ಕೀ ಬಾತ್‌’ ಅಂದಾಜಿಸಿದೆ.

Jan Ki Baat Suvarna News Survey: ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌-ಬಿಜೆಪಿ ಹಗ್ಗಜಗ್ಗಾಟ!

ಬಿಜೆಪಿಗಿಂತ ಕಾಂಗ್ರೆಸ್ಸಿಗೆ ಹೆಚ್ಚು ಶೇಕಡಾ ಮತ

ಕಾಂಗ್ರೆಸ್‌ ಶೇ.38-40ರಷ್ಟುಮತ ಪಡೆದರೆ, ಬಿಜೆಪಿ ಶೇ.37-39ರಷ್ಟುಮತ ಪಡೆಯಲಿದೆ. ಅಂದರೆ ಬಿಜೆಪಿ ಕಾಂಗ್ರೆಸ್‌ಗಿಂತ ಸ್ವಲ್ಪ ಕಡಿಮೆ ಮತ ಪಡೆಯಲಿದೆ ಎಂದು ಜನ್‌ ಕಿ ಬಾತ್‌ ಸಮೀಕ್ಷೆ ಹೇಳಿದೆ. ಹೀಗಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಅತ್ಯಂತ ನಿಕಟ ಹಣಾಹಣಿ ಏರ್ಪಡಲಿದೆ. ಆದರೆ, ಬಿಜೆಪಿಗಿಂತ ಕಾಂಗ್ರೆಸ್‌ ಹೆಚ್ಚಿನ ಶೇಕಡಾವಾರು ಮತ ಪಡೆದುಕೊಳ್ಳಲಿದ್ದರೂ, ಅಲ್ಪ ಪ್ರಮಾಣದ ಮತಗಳ ಅಂತರವು, ಕಾಂಗ್ರೆಸ್‌ಗೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಿನ ಪ್ರಮಾಣದ ಸೀಟು ಒದಗಿಸಲು ನೆರವಾಗುವ ಸಾಧ್ಯತೆ ಕಡಿಮೆ. ಇನ್ನು ಜೆಡಿಎಸ್‌ ಶೇ.16-18ರಷ್ಟು ಮತ್ತು ಇತರರು ಶೇ.5.7ರಷ್ಟು ಮತ ಪಡೆದುಕೊಳ್ಳಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಶೇಕಡಾವಾರು ಮತ

ಬಿಜೆಪಿ 37-39%
ಕಾಂಗ್ರೆಸ್‌ 38-40%
ಜೆಡಿಎಸ್‌ 16-18%
ಇತರೆ 05-07%
ಯಾರಿಗೆ ಎಷ್ಟು ಸ್ಥಾನ?
ಒಟ್ಟು ವಿಧಾನಸಭೆ ಬಲ: 224
ಬಹುಮತಕ್ಕೆ: 113
ಪಕ್ಷ ಜನ್‌ ಕೀ ಬಾತ್‌ ಹಾಲಿ ಸಂಖ್ಯೆ
ಬಿಜೆಪಿ 98-109 104
ಕಾಂಗ್ರೆಸ್‌ 89-97 80
ಜೆಡಿಎಸ್‌ 25-29 37
ಇತರೆ 00-01 03

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ