ಕಾಂಗ್ರೆಸ್‌ ಗೆದ್ದರೆ ಮೀಸಲಾತಿ ಪ್ರಮಾಣ ಶೇ.75ಕ್ಕೆ ಹೆಚ್ಚಳ: ಸಿದ್ದರಾಮಯ್ಯ

Published : Apr 15, 2023, 04:20 AM IST
ಕಾಂಗ್ರೆಸ್‌ ಗೆದ್ದರೆ ಮೀಸಲಾತಿ ಪ್ರಮಾಣ ಶೇ.75ಕ್ಕೆ ಹೆಚ್ಚಳ: ಸಿದ್ದರಾಮಯ್ಯ

ಸಾರಾಂಶ

ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಮೀಸಲಾತಿ ಪರಿಷ್ಕರಣೆ ಮಾಡಿರುವ ಬಿಜೆಪಿ ಸರ್ಕಾರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ ತಪರಾಕಿ ನೀಡಿದೆ. 

ಬೆಂಗಳೂರು (ಏ.15): ‘ರಾಜ್ಯದಲ್ಲಿ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಮೀಸಲಾತಿ ಪರಿಷ್ಕರಣೆ ಮಾಡಿರುವ ಬಿಜೆಪಿ ಸರ್ಕಾರದ ನಿರ್ಧಾರದ ಬಗ್ಗೆ ಸುಪ್ರೀಂ ಕೋರ್ಟ್‌ ತಪರಾಕಿ ನೀಡಿದೆ. ಚುನಾವಣೆ ಹಿನ್ನೆಲೆಯಲ್ಲಿ ಹಿಂದೂ ಮತಗಳ ಧ್ರುವೀಕರಣ ದುರುದ್ದೇಶದಿಂದ ಮಾಡಿದ್ದ ನಿರ್ಧಾರವನ್ನು ಈಗಲಾದರೂ ವಾಪಸು ಪಡೆದು ರಾಜ್ಯ ಸರ್ಕಾರ ಮಾನ ಉಳಿಸಿಕೊಳ್ಳಬೇಕು’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. 

ಇದೇ ವೇಳೆ ‘ಒಟ್ಟು ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡ 75ಕ್ಕೆ ಹೆಚ್ಚಿಸಿ ಪ್ರತಿಯೊಂದು ಜಾತಿಗಳಿಗೆ ಅವುಗಳ ಜನಸಂಖ್ಯೆಗೆ ಅನುಗುಣವಾಗಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವುದೊಂದೇ ಈಗಿನ ಮೀಸಲಾತಿ ವಿವಾದಕ್ಕೆ ಶಾಶ್ವತ ಪರಿಹಾರ.  ಕಾಂಗ್ರೆಸ್‌ ಮರಳಿ ಅಧಿಕಾರಕ್ಕೆ ಬಂದರೆ ಒಟ್ಟು ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿ ಎಲ್ಲ ಜಾತಿ ಜನರಿಗೆ ಅವರ ಜನಸಂಖ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಿಸುತ್ತದೆ’ ಎಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಮುಸ್ಲಿಂ ಮೀಸಲಾತಿ ರದ್ದತಿಗಾಗಿ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಕ್ಕೆ ನೀಡಿರುವ ತಪರಾಕಿ ನಿರೀಕ್ಷಿತವಾಗಿತ್ತು. 

ಕೆಳಮಟ್ಟದ ರಾಜಕಾರಣದಿಂದ ನನಗೆ ಬೇಜಾರಾಗಿದೆ: ರಮೇಶ್‌ ಜಾರಕಿಹೊಳಿ

ರಾಜ್ಯ ಸರ್ಕಾರದ ನಿರ್ಧಾರ ‘ದೋಷಪೂರಿತ ಮತ್ತು ತಪ್ಪು ಕಲ್ಪನೆಯನ್ನು ಆಧರಿಸಿದೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯ ಬುನಾದಿಯೇ ಅತ್ಯಂತ ಅಸ್ಥಿರವಾಗಿದೆ’ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿದೆ. ತನ್ಮೂಲಕ ರಾಜ್ಯ ಸರ್ಕಾರ ತಲೆ ತಗ್ಗಿಸುವಂತೆ ಮಾಡಿದೆ’ ಎಂದು ಟೀಕಿಸಿದ್ದಾರೆ. ಮುಸ್ಲಿಮರು ಕೇವಲ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಚಿನ್ನಪ್ಪ ರೆಡ್ಡಿ ಆಯೋಗ ಪರಿಗಣಿಸಿತ್ತು ಎಂಬ ಕೇಂದ್ರ ಸರ್ಕಾರದ ಸಾಲಿಸಿಟರ್‌ ಜನರಲ ಹೇಳಿಕೆ ಸಂಪೂರ್ಣ ತಪ್ಪು ಮಾಹಿತಿಯಾಗಿದೆ. ಮುಸ್ಲಿಂಮರು ಸಾಮಾಜಿಕವಾಗಿಯೂ ಹಿಂದುಳಿದಿದ್ದಾರೆ ಎಂದು ಚಿನ್ನಪ್ಪ ರೆಡ್ಡಿ ಆಯೋಗ ಹೇಳಿತ್ತು.

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಯನ ಆಧರಿತವಾದ ವರದಿ, ವಿಶ್ವಾಸಾರ್ಹ ಅಂಕಿ-ಅಂಶಗಳ ಸಂಗ್ರಹ ಹೀಗೆ ಯಾವುದೇ ತಯಾರಿ ಇಲ್ಲದೆ ಅತ್ಯವಸರದಿಂದ ಮುಸ್ಲಿಂ ಮೀಸಲಾತಿಯನ್ನು ಬಿಜೆಪಿ ರದ್ದುಪಡಿಸಿತ್ತು. ಇದಕ್ಕೆ ಚುನಾವಣಾ ಲಾಭದ ದುರುದ್ದೇಶ ಬಿಟ್ಟರೆ ಬೇರೆ ಕಾರಣಗಳಿರಲಿಲ್ಲ. ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿ ಉಳಿಸಿಕೊಂಡ ಶೇಕಡಾ 4ರಷ್ಟುಮೀಸಲಾತಿಯನ್ನು ಒಕ್ಕಲಿಗ ಮತ್ತು ಲಿಂಗಾಯತರಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ಮುಸ್ಲಿಂ ಮೀಸಲಾತಿ ರದ್ದತಿ ಆದೇಶ ರದ್ದಾದರೆ ಆ ಎರಡೂ ಸಮುದಾಯಗಳಿಗೆ ನೀಡಿರುವ ಹೆಚ್ಚುವರಿ ಮೀಸಲಾತಿಯೂ ರದ್ದಾಗುತ್ತದೆ ಎಂದು ಹೇಳಿದ್ದಾರೆ.

ಮೀಸಲಾತಿ ಮಿತಿ ಹೆಚ್ಚಳ: ಒಳ ಮೀಸಲಾತಿ ಮತ್ತು ಒಕ್ಕಲಿಗ, ಲಿಂಗಾಯತ ಇಲ್ಲವೇ ಇತರ ಅರ್ಹ ಜಾತಿಗಳಿಗೆ ಮೀಸಲಾತಿ ನೀಡುವುದಕ್ಕೆ ಕಾಂಗ್ರೆಸ್‌ ಪಕ್ಷದ ವಿರೋಧ ಇಲ್ಲ. ಒಟ್ಟು ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡ 75ಕ್ಕೆ ಹೆಚ್ಚಿಸಿದರೆ ಎಲ್ಲರಿಗೂ ಮೀಸಲಾತಿ ನೀಡಬಹುದು. ಮೀಸಲಾತಿಗೆ ಶೇಕಡಾ 50ರ ಮಿತಿ ಎನ್ನುವುದು ಇಂದಿರಾ ಸಹಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶದ ಭಾಗವೇ ಹೊರತು ಅದು ಸಾಂವಿಧಾನಿಕವಾದುದೇನಲ್ಲ. ವಿಶೇಷ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಬಹುದೆಂದು ಅದೇ ಆದೇಶದಲ್ಲಿ ಹೇಳಲಾಗಿದೆ. 

ಕರ್ನಾಟಕದ ಮುಂದಿನ ಸಿಎಂ ಎಚ್‌.ಡಿ.ಕುಮಾರಸ್ವಾಮಿ: ಆರ್‌.ಉಗ್ರೇಶ್‌

ನ್ಯಾಯವಾದಿ ಕಾಂತರಾಜ ಅಧ್ಯಕ್ಷತೆಯ ಆಯೋಗ ಮನೆಮನೆಗೆ ತೆರಳಿ ವೈಜ್ಞಾನಿಕವಾಗಿ ನಡೆಸಿದ್ದ ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ರಾಜ್ಯ ಸರ್ಕಾರದ ಕೈಯಲ್ಲಿದೆ. ಆ ವರದಿ ಆಧಾರದಲ್ಲಿ ಮೀಸಲಾತಿಯನ್ನು ಹೆಚ್ಚಿಸಿದರೆ ನ್ಯಾಯಾಲಯ ಕೂಡಾ ಮಾನ್ಯತೆ ನೀಡಲಿದೆ ಎಂದು ಹೇಳಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ
ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ