ಗುತ್ತಿಗೆದಾರರು, ಕಾಂಗ್ರೆಸ್ ಸರ್ಕಾರದ ನಡುವೆ ಬಿಲ್ ಪಾವತಿ, ಕಮಿಷನ್ ಆರೋಪದ ಜಟಾಪಟಿ ತಾರಕಕ್ಕೇರುತ್ತಿರುವ ನಡುವೆಯೇ ಬಿಜೆಪಿ ಮುಖಂಡ, ಮಾಜಿ ಸಚಿವ ಆರ್.ಅಶೋಕ್ ಅವರು ರಾಜ್ಯ ಸರ್ಕಾರಕ್ಕೆ 10 ಪ್ರಶ್ನೆಗಳನ್ನು ಕೇಳಿದ್ದಾರೆ.
ಬೆಂಗಳೂರು (ಆ.11): ಗುತ್ತಿಗೆದಾರರು, ಕಾಂಗ್ರೆಸ್ ಸರ್ಕಾರದ ನಡುವೆ ಬಿಲ್ ಪಾವತಿ, ಕಮಿಷನ್ ಆರೋಪದ ಜಟಾಪಟಿ ತಾರಕಕ್ಕೇರುತ್ತಿರುವ ನಡುವೆಯೇ ಬಿಜೆಪಿ ಮುಖಂಡ, ಮಾಜಿ ಸಚಿವ ಆರ್. ಅಶೋಕ್ ಅವರು ರಾಜ್ಯ ಸರ್ಕಾರಕ್ಕೆ 10 ಪ್ರಶ್ನೆಗಳನ್ನು ಕೇಳಿದ್ದಾರೆ. ಬಿಬಿಎಂಪಿ ಗುತ್ತಿಗೆದಾರರಿಂದ ಅಹವಾಲು ಸ್ವೀಕರಿಸಿದ ಬಳಿಕ ಬೆಂಗಳೂರಿನ ಇತರ ಬಿಜೆಪಿ ಶಾಸಕರೊಂದಿಗೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅಶೋಕ್ ಅವರು,
ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಫಂಡ್ ಕಲೆಕ್ಷನ್‌ಗೆ ಇಳಿದಿದೆಯೇ? ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಾಂಗ್ರೆಸ್ ಅಧಿಕಾರ ಪಡೆದರೆ ಎಟಿಎಂ ಸರ್ಕಾರದ ಮುನ್ಸೂಚನೆ ಕೊಟ್ಟಿದ್ದರು. ಅವರ ಮಾತು ನೂರಕ್ಕೆ ನೂರು ಸತ್ಯವಾಗಿದೆ. ಹಿಂದೆ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಪೇಸಿಎಂ ಎಂದು ಕಾಂಗ್ರೆಸಿಗರು ಅಪಪ್ರಚಾರ ಮಾಡಿದ್ದರು. ಈಗ ಪೇ ಕಾಂಗ್ರೆಸ್, ಪೇ ಸಿಎಂ, ಪೇ ಡಿಸಿಎಂ ಆಗಿದೆಯೇ ಎಂದು ಪ್ರಶ್ನಿಸಿದರು.
ರಾಜ್ಯದ ಮೊದಲ ಮಹಿಳಾ ಕಮಿಷನರ್ IPS ರೇಣುಕಾ ಸುಕುಮಾರ್ ಅಧಿಕಾರ ಸ್ವೀಕಾರ!
ಡಿಸಿಎಂ ಡಿ.ಕೆ.ಶಿವಕುಮಾರ್ ಕಾಮಗಾರಿ ಕಳಪೆ ಬಗ್ಗೆ ಮಾತನಾಡುತ್ತಾರೆ. ಕಳಪೆ ಆದರೆ ಸರ್ಕಾರದ ಕಾನೂನು ಕಟ್ಟಳೆಗಳಿವೆ. ಮಾನದಂಡವೂ ಇದೆ. ಕಾರ್ಪೊರೇಷನ್‌ನಲ್ಲಿ ಸ್ಕಾವಡ್ ಇದೆ ಎಂದು ಹೇಳಿದ ಅಶೋಕ್, ಪಾಲಿಕೆಗಳಲ್ಲಿ ವರ್ಗಾವಣೆ ಮಾಡಬೇಕಾದರೆ, ನನ್ನ ಗಮನಕ್ಕೆ ತರದೆ ಮಾಡಬಾರದೆಂದು ಶಿವಕುಮಾರ್ ಪತ್ರ ಬರೆದಿದ್ದಾರೆ. ನಾನು ಕೂಡ ನಾಲ್ಕು ಬಾರಿ ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದೆ. ಯಾವತ್ತೂ ಕೂಡ ಇಂತಹ ಒಂದು ಪತ್ರವನ್ನೂ ಬರೆದಿಲ್ಲ. ಬಿಲ್ ಪಾವತಿ ನಿಲ್ಲಿಸಲು ನಾನು ಯಾವತ್ತೂ ಹೇಳಿರಲಿಲ್ಲ. ಕೆಲಸ ಕಾರ್ಯ ಸ್ಥಗಿತವಾದರೆ ಬ್ರ್ಯಾಂಡ್ ಬೆಂಗಳೂರು ಅನುಷ್ಠಾನ ಹೇಗೆ ಸಾಧ್ಯ? ಲೋಡ್‌ಗಟ್ಟಲೆ ತ್ಯಾಜ್ಯ ಎಲ್ಲೆಂದರಲ್ಲಿ ಬಿದ್ದಿದೆ. ಕಸ ತೆಗೆಯುವವರಿಲ್ಲ. ಕಾಮಗಾರಿ ನಡೆಸುವವರಿಲ್ಲ. ಬ್ರ್ಯಾಂಡ್ ಬೆಂಗಳೂರು ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅಶೋಕ್ ಅವರು ಸರ್ಕಾರಕ್ಕೆ ಕೇಳಿದ 10 ಪ್ರಶ್ನೆಗಳು ಹೀಗಿವೆ...
1. ‘ನಮ್ಮ ಸರ್ಕಾರದ ಮೇಲೆ ಶೇ.40ರಷ್ಟುಕಮಿಶನ್ ಎಂದು ನಿರಾಧಾರ ಆರೋಪ ಮಾಡಿದ್ದೀರಿ. ನಿಮ್ಮ ಮೇಲೆ ಶೇ.15ರಷ್ಟುಕಮಿಷನ್ ಆರೋಪ ಮಾಡಿದ್ದಾರೆ. ಇದಕ್ಕೆ ನಿಮ್ಮ ಉತ್ತರ ಏನು?
2. ಗುತ್ತಿಗೆದಾರರು ಅಜ್ಜಯ್ಯನ ದೇವಸ್ಥಾನಕ್ಕೆ ಹೋಗಿ ಆಣೆ ಮಾಡುವಂತೆ ಕೇಳಿದ್ದಾರೆ. ನೀವು ಕಮಿಶನ್ ಕೇಳದೆ ಇದ್ದರೆ ಸವಾಲು ಒಪ್ಪಬೇಕಿತ್ತಲ್ಲವೇ?
3. ಫಂಡ್ ಕಲೆಕ್ಷನ್ ಎಂಬುದು ಲೋಕಸಭಾ ಚುನಾವಣೆಗೆ ಗುದ್ದಲಿ ಪೂಜೆಯೇ?
4. ಗುತ್ತಿಗೆದಾರರ ಸಮಸ್ಯೆ ಬಗ್ಗೆ ಮಾತನಾಡುವ ಕೆಂಪಣ್ಣನವರೇ ಎಲ್ಲಿದ್ದೀರಪ್ಪಾ?
5. ಬಿಬಿಎಂಪಿಯ 2019ರಿಂದ 2023ರ ಕಾಮಗಾರಿಗಳನ್ನು ಮಾತ್ರ ತನಿಖೆ ಮಾಡುತ್ತಿದ್ದೀರಿ. ನೀವು ಪ್ರಾಮಾಣಿಕರು ಇದ್ದರೆ 2013ರಿಂದ ತನಿಖೆ ಮಾಡಬಹುದಲ್ಲವೇ?
6. ಎಲ್ಲ ಗುತ್ತಿಗೆದಾರರು ಕಳ್ಳರಾದರೆ, 50 ವರ್ಷ ರಾಜ್ಯವಾಳಿದ ಕಾಂಗ್ರೆಸ್ಸಿನ ಬಳುವಳಿ ಇವರೇ. ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದರೆ ನಿಮ್ಮ ಬ್ರ್ಯಾಂಡ್ ಬೆಂಗಳೂರಿನ ಕಥೆ ಏನು?
7. ದಯಾಮರಣ ಕೋರಿ 300 ಜನ ಗುತ್ತಿಗೆದಾರರು ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ. ಕಾಂಗ್ರೆಸ್ಸಿನವರೇ ಇದಕ್ಕೆ ನಿಮ್ಮ ಉತ್ತರ ಏನು?
8. ದೆಹಲಿಯಲ್ಲಿ ಸಚಿವರ ಸಭೆ ಮಾಡಿದ್ದು ಲೋಕಸಭಾ ಸೀಟು ಗೆಲ್ಲಿಸಲೇ ಅಥವಾ ಸೂಟ್‌ಕೇಸ್ ತುಂಬಿಸಲೋ?
ಮಾರ್ಕೆಟಿಂಗ್ ಕಂಪನಿಯಲ್ಲಿ ಚಾಣಾಕ್ಷ, ದೇಶಾದ್ಯಂತ ಲಕ್ಷಾಂತರ ಜನರ ಉದ್ಯೋಗದಾತ ಡಾ.ಅಫ್ಸರ್ ಹಿಂದೂಸ್ಥಾನಿ!
9. ಎರಡು ತಿಂಗಳಿಂದ ನಿವೇಶನದ ಒಂದು ಪ್ಲಾನ್‌ಗೆ ಕೂಡ ಒಪ್ಪಿಗೆ ಸಿಗುತ್ತಿಲ್ಲ. ನಿವೇಶನದಲ್ಲಿ ನಿರ್ಮಾಣ ಕಾಮಗಾರಿಗೆ ಅನುಮತಿ ನೀಡದೆ ಇರುವುದರ ಗೂಢಾರ್ಥ ಏನು? ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರಾ?
10. ಸನ್ಮಾನ್ಯ ಡಿ.ಕೆ.ಶಿವಕುಮಾರ್ ಅವರೇ, ನಿಮ್ಮದು ಬ್ರ್ಯಾಂಡ್ ಬೆಂಗಳೂರೇ ಅಥವಾ ಬ್ಲ್ಯಾಕ್ ಬೆಂಗಳೂರೇ? ಸಿಎಂ ಹಣ ಬಿಡುಗಡೆ ಮಾಡಿದರೆ, ಡಿಸಿಎಂ ತಡೆ ಹಿಡಿಯುತ್ತಾರೆ. ವೇಣುಗೋಪಾಲ್ ಅವರು ಹಣ ಬಿಡುಗಡೆಗೆ ಮತ್ತು ಸುರ್ಜೇವಾಲಾ ಅವರು ಹಣ ತಡೆ ಹಿಡಿಯಲು ಸೂಚಿಸಿದ್ದರೇ? ಈ ಎಲ್ಲ ಪ್ರಶ್ನೆಗಳಿಗೆ ನಾವು ಹಾಗೂ ಜನರು ಉತ್ತರ ನಿರೀಕ್ಷಿಸುತ್ತಿದ್ದೇವೆ ಎಂದು ಅಶೋಕ್ ಅವರು ಹೇಳಿದರು.