ರಾಜಕಾರಣ ಮಾಡುವುದು ಮೋಜಿಗಾಗಲ್ಲ: ಸಚಿವ ಜೆ.ಸಿ.ಮಾಧುಸ್ವಾಮಿ

By Kannadaprabha NewsFirst Published Mar 4, 2023, 11:30 PM IST
Highlights

ರಾಜಕಾರಣ ಮಾಡುವುದು ಮೋಜಿಗಾಗಿ ಅಲ್ಲ. ಅಭಿವೃದ್ಧಿ ಚಿಂತನೆಯುಳ್ಳವರು ರಾಜಕಾರಣಕ್ಕೆ ಬರಬೇಕು. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರ ಆಶೋತ್ತರಗಳಿಗೆ ಅನುಗುಣವಾಗಿ ಅಧಿಕಾರ ಬಳಸಿದಾಗ ಸಾರ್ಥಕತೆ ಪಡೆಯುತ್ತದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

ಮಂಡ್ಯ (ಮಾ.04): ರಾಜಕಾರಣ ಮಾಡುವುದು ಮೋಜಿಗಾಗಿ ಅಲ್ಲ. ಅಭಿವೃದ್ಧಿ ಚಿಂತನೆಯುಳ್ಳವರು ರಾಜಕಾರಣಕ್ಕೆ ಬರಬೇಕು. ಜನರ ಹಿತವನ್ನು ಗಮನದಲ್ಲಿಟ್ಟುಕೊಂಡು ಅವರ ಆಶೋತ್ತರಗಳಿಗೆ ಅನುಗುಣವಾಗಿ ಅಧಿಕಾರ ಬಳಸಿದಾಗ ಸಾರ್ಥಕತೆ ಪಡೆಯುತ್ತದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ತಾಲೂಕಿನ ಹುಲಿಕೆರೆ ಬಳಿ ದುದ್ದ ಹೋಬಳಿಯ ಏತ ನೀರಾವರಿ ಯೋಜನೆ ಮೂಲಕ 54 ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಜಕಾರಣ ಮಾಡಲು ಬರುವವರು ನಾನು ಏತಕ್ಕಾಗಿ ಬಂದಿದ್ದೇನೆ. ಏನು ಮಾಡಲು ಬಂದಿದ್ದೇನೆ. ಜನರಿಗೆ ನಾನೇನು ಕೊಡಬಲ್ಲೆ ಎಂಬುದರ ಬಗ್ಗೆ ಚಿಂತನೆ ಮಾಡಿದರೆ ಕ್ಷೇತ್ರದಲ್ಲಿರುವ ಸಮಸ್ಯೆ ಪರಿಹರಿಸಲು ಸಾಧ್ಯ ಎಂದರು.

ಸಚಿವ ಸಂಪುಟದಲ್ಲಿ ಮಂತ್ರಿಯಾಗುವುದು ದರ್ಪ ಪ್ರದರ್ಶಿಸುವುದಕ್ಕಲ್ಲ. ಸ್ವಾರ್ಥ ರಾಜಕಾರಣ ಮಾಡುವುದಕ್ಕೂ ಅಲ್ಲ. ಅಧಿಕಾರ ಸಿಕ್ಕಾಗ ಕ್ಷೇತ್ರದ ಅಭಿವೃದ್ಧಿ ಮಾಡಬೇಕು. ಜನರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಬೇಕು. ಅಭಿವೃದ್ಧಿ ವಿಚಾರದಲ್ಲಿ ಶಾಸಕ ಸಿ.ಎಸ್‌.ಪುಟ್ಟರಾಜು ಅವರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ಸೂಚಿಸಿದರು. ಮಂಡ್ಯ ಜಿಲ್ಲೆ ಎಂದರೆ ಸಂಪೂರ್ಣ ನೀರಾವರಿ ಜಿಲ್ಲೆ, ಸಂಪದ್ಭರಿತ ಜಿಲ್ಲೆ ಎಂದುಕೊಂಡಿದ್ದೆ. ನಾನು ಸಣ್ಣ ನೀರಾವರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ಬಳಿಕವಷ್ಟೇ ಇಲ್ಲೂ ನೀರಾವರಿ ವಂಚಿತ ಗ್ರಾಮಗಳು, ತಾಲೂಕುಗಳು ಇವೆ ಎನ್ನುವುದು ಅರಿವಾಯಿತು ಎಂದರು.

Latest Videos

ಸಂವಿಧಾನದ ಆಶಯವನ್ನ ಜೆಡಿಎಸ್ ಪಕ್ಷ ತಪ್ಪಾಗಿ ಅರ್ಥೈಸಿಕೊಂಡಿದೆ: ಸಿ.ಟಿ.ರವಿ ಲೇವಡಿ

ಬರಪೀಡಿತ ಪ್ರದೇಶಕ್ಕೆ ನೀರು: ಸಿ.ಎಸ್‌.ಪುಟ್ಟರಾಜು ಅವರು ಶಾಸಕರಾಗಿ ನೀರಾವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಅವರು ಸಣ್ಣ ನೀರಾವರಿ ಸಚಿವರಾಗಿದ್ದ ಸಮಯದಲ್ಲೇ ನೀರಾವರಿ ವಂಚಿತ ಪ್ರದೇಶಗಳನ್ನು ಗುರುತಿಸಿ ಅನುದಾನ ತಂದು ಕೆರೆ-ಕಟ್ಟೆಗಳನ್ನು ತುಂಬಿಸಿದ್ದಾರೆ. ಹೇಮಾವತಿ, ಕಾವೇರಿ, ಲೋಕಪಾವನಿಯಿಂದಲೂ ಬರಪೀಡಿತ ಪ್ರದೇಶಗಳಿಗೆ ನೀರುಣಿಸಿ ಅಭಿವೃದ್ಧಿಪಡಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಅರ್ಧ ಅನುದಾನವನ್ನು ಮೇಲುಕೋಟೆ ಕ್ಷೇತ್ರಕ್ಕೆ ತಂದಿದ್ದಾರೆ. ಮಂತ್ರಿಯಾಗುವುದಕ್ಕಿಂತ ಮುಂಚೆ ಏನು ಒಂದೇ ತಾಲೂಕಿಗೆ ಸಣ್ಣ ನೀರಾವರಿ ಇಲಾಖೆ ಕೆಲಸ ಮಾಡುತ್ತಿದೆ ಎಂದು ಇಲಾಖೆಯನ್ನು ಪ್ರಶ್ನಿಸಿದ್ದೆ. ನಂತರ ನಾನೇ ಸಚಿವನಾಗಿ ಬಂದು ನೋಡಿದಾಗ ಪುಟ್ಟರಾಜು ಅವರ ಕಾರ್ಯ ನನ್ನ ಕಣ್ಣೆದುರಿಗಿತ್ತು ಎಂದು ಶ್ಲಾಘಿಸಿದರು.

ಸರ್ಕಾರಗಳು ನಿರಂತರವಾಗಿರುತ್ತವೆ. ಗೆಲ್ಲುವವರೆಗೂ ಬೇರೆ ಬೇರೆ ಪಕ್ಷಗಳು. ಗೆದ್ದು ಬಂದ ಮೇಲೆ ನಮ್ಮೆಲ್ಲರ ಉದ್ದೇಶಗಳು ರಾಜ್ಯದ ಅಭಿವೃದ್ಧಿ ಕಡೆಗೆ ಇರುತ್ತದೆ. ನಾಡಿನ ಪ್ರತಿಯೊಬ್ಬರಿಗೂ ಶಕ್ತಿ ನೀಡುವ ಮೂಲಕ ಅಭಿವೃದ್ಧಿಯತ್ತ ಕೊಂಡೊಯ್ಯಬೇಕು. ಸ್ವಾಭಿಮಾನವನ್ನು ಬಿಟ್ಟುಕೊಡಬಾರದು. ಆ ನಿಟ್ಟಿನಲ್ಲಿ ಪುಟ್ಟರಾಜು ಕ್ಷೇತ್ರದೊಳಗೆ ಅಭಿವೃದ್ಧಿಯ ಪರ್ವವನ್ನೇ ಸೃಷ್ಟಿಸಿದ್ದಾರೆ ಎಂದರು. ಜಿಪಂ ಮಾಜಿ ಸದಸ್ಯ ಮಾದಪ್ಪ, ಚಂದಗಾಲು ಶಿವಣ್ಣ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್‌, ಇಲಾಖೆ ಕಾರ್ಯದರ್ಶಿ ಮೃತ್ಯುಂಜಯ, ಮನ್‌ಮುಲ್‌ ಅಧ್ಯಕ್ಷ ಬಿ.ಆರ್‌.ರಾಮಚಂದ್ರ, ಮುಖ್ಯ ಇಂಜಿನಿಯರ್‌ ರಾಘವನ್‌, ಸೂಪರಿಂಟೆಂಡೆಂಟ್‌ ಇಂಜಿನಿಯರ್‌ ಗೋಕುಲ್‌, ಉಪವಿಭಾಗಾಧಿಕಾರಿ ನಂದೀಶ್‌, ತಹಸೀಲ್ದಾರ್‌ ಸೌಮ್ಯ, ಸುಂಕಾತೊಣ್ಣೂರು ಗ್ರಾಪಂ ಅಧ್ಯಕ್ಷ ನಲ್ಲಹಳ್ಳಿ ಮಹೇಶ್‌ ಇತರರಿದ್ದರು.

ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಸಲ್ಲದು: ದುದ್ದ ಏತ ನೀರಾವರಿ ಯೋಜನೆ ಸಿ.ಎಸ್‌.ಪುಟ್ಟರಾಜು ಅವರ ಶ್ರಮದ ಫಲ. ಈ ಯೋಜನೆ ರೂಪಿಸಿ ಕಾರ್ಯಗತಗೊಳಿಸಿದ್ದೇ ಅವರು. ಆದರೆ, ಕೆಲವರು ಎಲ್ಲಿಯೋ ಮಾಹಿತಿ ಪಡೆದುಕೊಂಡು ನಾನು ಮಾಡಿದೆ ಎಂದು ಹೇಳಿಕೊಂಡು ತಿರುಗುವುದರಲ್ಲಿ ಅರ್ಥ ಇಲ್ಲ ಎಂದು ರೈತಸಂಘದವರ ಆರೋಪಕ್ಕೆ ಸಚಿವ ಜೆ.ಸಿ.ಮಾಧುಸ್ವಾಮಿ ತಿರುಗೇಟು ನೀಡಿದರು. ಪುಟ್ಟರಾಜು ಮಂತ್ರಿಯಾಗಿದ್ದಾಗ ಈ ಕೆಲಸ ಡಿಪಿಆರ್‌ ಆಗಿದ್ದು, ಯೋಜನೆ ಜಾರಿ ಮಾಡಲಾಗಿತ್ತು. ನಮ್ಮ ಸರ್ಕಾರ ಬಂದಾಗ ನೆರೆ ಹಾವಳಿ, ಕೊರೋನಾ ಬಂದಿದ್ದರಿಂದ ಸುಮಾರು ಕೆಲಸಗಳನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ, ನನ್ನ ಇಲಾಖೆಯಲ್ಲಿನ ಕೆಲಸಗಳನ್ನು ನಿಲ್ಲಿಸಲಿಲ್ಲ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಬಾರದು. ಅದರಂತೆ ಪುಟ್ಟರಾಜು ಕೆಲಸ ಮಾಡಿದ್ದಾರೆ ಎಂದರು.

ಸಿಂಧನೂರಿನ ಬಿಜೆಪಿ ಟಿಕೆಟ್‌ಗಾಗಿ 9 ಜನ ಆಕಾಂಕ್ಷಿಗಳು ಓಡಾಟ: ಟಿಕೆಟ್ ಘೋಷಣೆ ಮಾಡಲು ಹೈಕಮಾಂಡ್ ವಿಳಂಬ

740 ಕೋಟಿ ರು. ಖರ್ಚು: ಸಣ್ಣ ನೀರಾವರಿ ಇಲಾಖೆಯ 740 ಕೋಟಿ ರು. ಮಂಡ್ಯ ಜಿಲ್ಲೆಗೆ ಖರ್ಚು ಮಾಡಲಾಗಿದೆ. ಸಂಸದರಾಗಿದ್ದಾಗಲೂ ಕೆಲಸ ಮಾಡಿದ್ದರು. ಇಂಥ ಯೋಜನೆಗಳನ್ನು ಜಾರಿಗೊಳಿಸಲು ರೈತರು ಸಹಕಾರ ನೀಡಬೇಕು. ಮೇಲುಕೋಟೆ, ಕೆ.ಆರ್‌.ಪೇಟೆ ತಾಲೂಕುಗಳಲ್ಲೂ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಒಳ್ಳೆಯ ಜನಪ್ರತಿನಿಧಿಗಳು ಕ್ಷೇತ್ರಕ್ಕೆ ಸಿಗುವುದು ಕಷ್ಟ. ನಿಮಗೆ ಒಳ್ಳೆಯ ಜನಪ್ರತಿನಿಧಿ ಸಿಕ್ಕಿದ್ದಾರೆ. ಮೇಲುಕೋಟೆ ಕ್ಷೇತ್ರಕ್ಕೆ ಇನ್ನಷ್ಟುಯೋಜನೆಗಳನ್ನು ಮಾಡಲು ಪ್ರಸ್ತಾವನೆ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಅದನ್ನು ಮಾಡಿಕೊಡಲಾಗುವುದು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ನೀಡಿದರು.

click me!