ಬೆಳ​ಗಾ​ವಿ​ಯಲ್ಲಿಂದು ಮೋದಿ 10.5 ಕಿ.ಮೀ. ರೋಡ್‌ ಶೋ: ವಿಧಾನಸಭೆ ಚುನಾವಣೆಗೆ ಪ್ರಧಾನಿ ರಣಕಹಳೆ

By Kannadaprabha News  |  First Published Feb 27, 2023, 6:59 AM IST

ಬೆಳ​ಗಾ​ವಿ​ಯಲ್ಲಿ ಮೇಲ್ದ​ರ್ಜೆ​ಗೇ​ರಿದ ರೈಲು ನಿಲ್ದಾಣ, ಜೋಡಿ ರೈಲು ಮಾರ್ಗ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯ​ಕ್ರ​ಮಕ್ಕೆ ಸೋಮ​ವಾರ ಚಾಲ​ನೆ, ಶಂಕು​ಸ್ಥಾ​ಪನೆ ನೆರ​ವೇ​ರಿ​ಸ​ಲಿ​ರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬ​ರು​ವ ವಿಧಾ​ನ​ಸಭಾ ಚುನಾ​ವ​ಣೆಗೆ ರಣ​ಕ​ಹಳೆ ಮೊಳ​ಗಿ​ಸ​ಲಿ​ದ್ದಾ​ರೆ. 


ಬೆಳಗಾವಿ (ಫೆ.27): ಬೆಳ​ಗಾ​ವಿ​ಯಲ್ಲಿ ಮೇಲ್ದ​ರ್ಜೆ​ಗೇ​ರಿದ ರೈಲು ನಿಲ್ದಾಣ, ಜೋಡಿ ರೈಲು ಮಾರ್ಗ ಲೋಕಾರ್ಪಣೆ ಸೇರಿದಂತೆ ವಿವಿಧ ಕಾರ್ಯ​ಕ್ರ​ಮಕ್ಕೆ ಸೋಮ​ವಾರ ಚಾಲ​ನೆ, ಶಂಕು​ಸ್ಥಾ​ಪನೆ ನೆರ​ವೇ​ರಿ​ಸ​ಲಿ​ರುವ ಪ್ರಧಾನಿ ನರೇಂದ್ರ ಮೋದಿ ಅವರು ಮುಂಬ​ರು​ವ ವಿಧಾ​ನ​ಸಭಾ ಚುನಾ​ವ​ಣೆಗೆ ರಣ​ಕ​ಹಳೆ ಮೊಳ​ಗಿ​ಸ​ಲಿ​ದ್ದಾ​ರೆ. ಇದೇ ವೇಳೆ ನಗ​ರ​ದಲ್ಲಿ ಮೊದಲ ಬಾರಿಗೆ 10.45 ಕಿ.ಮೀ. ಉದ್ದದ ಬೃಹತ್‌ ರೋಡ್‌ ಶೋ ಅನ್ನೂ ನಡೆ​ಸ​ಲಿ​ದ್ದಾ​ರೆ. ಕೆಎಸ್‌ಆರ್‌ಪಿ ಮೈದಾನದಿಂದ ಆರಂಭ​ವಾ​ಗ​ಲಿ​ರುವ ರೋಡ್‌ ಶೋ ಸಾರ್ವ​ಜ​ನಿಕ ಸಮಾ​ವೇಶ ನಡೆ​ಯ​ಲಿ​ರುವ ಮಾಲಿನಿ ಸಿಟಿ ಮೈದಾನದವರೆಗೆ ನಡೆ​ಯ​ಲಿದೆ. 

ಈ ರೋಡ್‌ ಶೋ ಅನ್ನು ಐತಿ​ಹಾ​ಸಿ​ಕ​ಗೊ​ಳಿ​ಸಲು ಬಿಜೆಪಿ ಸಿದ್ಧತೆ ಮಾಡಿಕೊಂಡಿದ್ದು, ರೋಡ್‌ ಶೋ ಸಾಗುವ ಮಾರ್ಗದ ರಸ್ತೆಯ ಇಕ್ಕೆ​ಲ​ಗ​ಳಲ್ಲಿ 90 ಪಾಯಿಂಟ್ಸ್‌ ಗುರುತಿಸಿ ಲೈವ್‌ ಶೋ ನಡೆಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಒಟ್ಟು 8 ಕೇಂದ್ರ​ಗ​ಳನ್ನು ಗುರು​ತಿಸಿ ಅಲ್ಲಿ ಜನ​ರಿಗೆ ನಿಲ್ಲಲು ವ್ಯವಸ್ಥೆ ಮಾಡ​ಲಾ​ಗಿ​ದೆ. ಹುಬ್ಬ​ಳ್ಳಿ​ಯಲ್ಲಿ ಇತ್ತೀ​ಚೆಗೆ ಪ್ರಧಾನಿ ಅವರು ಒಂದು ಗಂಟೆ ರೋಡ್‌ ಶೋ ಮಾಡಿ​ದ್ದ​ರು​. ಈ ಸಂಬಂಧ ಕೇಂದ್ರ ಸಂಸ​ದೀಯ ವ್ಯವ​ಹಾ​ರ​ಗಳ ಸಚಿವ ಪ್ರಹ್ಲಾದ್‌ ಜೋಶಿ ಮಾತ​ನಾಡಿ, ಸೋಮವಾರ ಶಿವಮೊಗ್ಗದ ಕಾರ್ಯ​ಕ್ರಮ ಮುಗಿ​ಸಿ​ಕೊಂಡು ಮಧಾಹ್ನ 2 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. 

Tap to resize

Latest Videos

ಇಂದು ಶಿವಮೊಗ್ಗ ಏರ್‌ಪೋರ್ಟ್‌ ಲೋಕಾರ್ಪಣೆ: ಬಿಎಸ್‌ವೈ 80ನೇ ಜನ್ಮದಿನದಂದೇ ಮೋದಿ ಉದ್ಘಾಟನೆ

ವಿಮಾನ ನಿಲ್ದಾಣದಿಂದ ಕಾಪ್ಟರ್‌ ಮೂಲಕ ಕಂಗ್ರಾಳಿಯಲ್ಲಿರುವ ಕೆಎಸ್‌ಆರ್‌ಪಿ ಮೈದಾನದಲ್ಲಿನ ಹೆಲಿಪ್ಯಾಡ್‌ಗೆ ಆಗಮಿಸಲಿದ್ದಾರೆ. ಬಳಿಕ ಅಲ್ಲಿಂದ ಚನ್ನಮ್ಮ ವೃತ್ತ ಮಾರ್ಗವಾಗಿ ಮಾಲಿನಿ ಸಿಟಿಗೆ ರೋಡ್‌ ಶೋ ಮೂಲಕ ಆಗಮಿಸಲಿದ್ದಾರೆ. ಅಲ್ಲಿ ಸಭಾ ಕಾರ್ಯ​ಕ್ರ​ಮ​ ಉದ್ಘಾ​ಟಿ​ಸ​ಲಿ​ದ್ದಾ​ರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ​ಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಹಾಗೂ ರಾಜ್ಯ ಸಚಿವರು, ಶಾಸಕರು, ಸಂಸದರು, ಎಂಎಲ್‌ಸಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿ​ಸಿ​ದ​ರು.

1 ಲಕ್ಷ ವೇದಿ​ಕೆ: ಈಗಾಗಲೇ ವೇದಿಕೆ ಮುಂಭಾಗದಲ್ಲಿ 1 ಲಕ್ಷ ಆಸನದ ವ್ಯವಸ್ಥೆ ಮಾಡಲಾಗಿದ್ದು, 1.5 ಲಕ್ಷದಿಂದ 2 ಲಕ್ಷ ಜನ ಸಭಾ ಕಾರ್ಯ​ಕ್ರ​ಮ​ದಲ್ಲೇ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಆಗಮಿಸುವ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿ​ದರು.

10000 ಮಹಿ​ಳೆ​ಯ​ರ ಪೂರ್ಣಕುಂಭ ಸ್ವಾಗ​ತ: ಮೋದಿ ರೋಡ್‌ ಶೋ ವೇಳೆ ಜನಸಾಮಾನ್ಯರು ಹಾಗೂ ಅಭಿಮಾನಿಗಳು ದೇಶದ 29 ರಾಜ್ಯಗಳು ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ವೇಷಭೂಷಣ ಧರಿಸಿ ಪ್ರಧಾನಿಗೆ ಶುಭ ಕೋರಲಿದ್ದಾರೆ. ಅಲ್ಲದೆ, ರೋಡ್‌ ಶೋ ಬೆಳಗಾವಿ ದಕ್ಷಿಣ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಕೇಸರಿ ಪೇಟ ತೊಟ್ಟು, ಪೂರ್ಣಕುಂಭ ಹೊತ್ತು 10 ಸಾವಿರ ಮಹಿಳೆಯರು ಪ್ರಧಾನಿಗೆ ಸ್ವಾಗತ ಕೋರಲಿದ್ದಾರೆ.

ಐವರು ಕಾಯ​ಕ​ಯೋ​ಗಿ​ಗ​ಳಿಂದ ಸ್ವಾಗ​ತ: ರೋಡ್‌ ಶೋ ವೇಳೆ ಪ್ರಧಾನಿ ಮೋದಿ ಅವ​ರಿ​ಗೆ ಬೆಳ​ಗಾವಿ ನಗರದ ಚನ್ನಮ್ಮ ವೃತ್ತ ಸೇರಿ ಇನ್ನಿತರ ನಿಗದಿತ ಪ್ರದೇ​ಶ​ಗ​ಳಲ್ಲಿ ಐವರು ಆಯ್ದ ಕಾಯಕಯೋಗಿಗಳು ವಿಶೇಷ ಸ್ವಾಗತ ನೀಡ​ಲಿ​ದ್ದಾ​ರೆ. ಆಟೋ ಚಾಲಕ ಮಯೂರ ಚವ್ಹಾಣ, ಪೌರಕಾರ್ಮಿಕ ಮಹಿಳೆ ಮೀನಾಕ್ಷಿ ತಳವಾರ, ನೇಕಾರ ಕಲ್ಲಪ್ಪ ಟೋಪಗಿ, ರೈತ ಮಹಿಳೆ ಶೀಲಾ ಬಾಬುರವಾಕ ಖನ್ನೂಕರ್‌, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ್‌ ಅವರು ಮೋದಿ ಅವ​ರಿಗೆ ಸ್ವಾಗತ ನೀಡ​ಲಿ​ರುವ ಕಾಯ​ಕ​ಯೋ​ಗಿ​ಗಳು.

10ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ?

ವಿಶೇಷ ಭಾವ​ಚಿತ್ರ ಸಿದ್ಧ​ಪ​ಡಿ​ಸಿದ ಟೈಲ​ರ್‌: ಬೆಳಗಾವಿಯ ಟೈಲರ್‌ ಎಸ್‌.ಕೆ.ಕಾಕಡೆ ಅವರು ಪ್ರಧಾನಿ ಮೋದಿಯವರ ಅಪರೂಪದ ಫೋಟೋ ಸಿದ್ಧಪಡಿಸಿ ಅದನ್ನು ಮೋದಿಯವರಿಗೆ ಕೊಡುಗೆ​ಯಾಗಿ ನೀಡಲು ಕಾಯುತ್ತಿದ್ದಾರೆ. ಟೈಲ​ರಿಂಗ್‌ ವೃತ್ತಿಯಲ್ಲಿರುವ ಕಾಕಡೆಯವರು ಕಾಟನ್‌ ದಾರ ಬಳಸಿ 12.5 ಲಕ್ಷ ಬಾರಿ ಸ್ಟಿಚ್‌ ಮಾಡಿ ಮೋದಿಯವರ ವಿಶೇಷ ಭಾವಚಿತ್ರ ಸಿದ್ಧಪಡಿಸಿದ್ದಾರೆ. ಈ ವಿಶೇಷ ಚಿತ್ರ ಸಿದ್ಧಪಡಿಸಲು ಕಾಕಡೆಯವರು ಒಂದು ತಿಂಗಳು ಶ್ರಮವಹಿಸಿದ್ದಾರೆ. ಸೋಮವಾರ ಮೋದಿ ಭೇಟಿ ವೇಳೆ ಈ ವಿಶೇಷ ಭಾವಚಿತ್ರವನ್ನು ಕೊಡುಗೆ ನೀಡಲು ಅವಕಾಶ ಕಲ್ಪಿಸಬೇಕು ಎಂದು ಜಿಲ್ಲಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದಾರೆ.

click me!