
ವಿಜಯ್ ಮಲಗಿಹಾಳ
ಬೆಂಗಳೂರು(ಫೆ.27): ಬರುವ ಮಾ.1ರಿಂದ ರಾಜ್ಯದ ನಾಲ್ಕು ದಿಕ್ಕುಗಳಿಂದ ಆರಂಭವಾಗಲಿರುವ ಆಡಳಿತಾರೂಢ ಬಿಜೆಪಿಯ ‘ವಿಜಯ ಸಂಕಲ್ಪ ಯಾತ್ರೆ’ಯ ರಥ ಮಾದರಿಯ ಬಸ್‌ಗಳ ಸಿದ್ಧತೆ ಅಂತಿಮ ಹಂತ ತಲುಪಿದೆ. ನಾಲ್ಕು ಯಾತ್ರೆಗಳಿಗಾಗಿ ನಾಲ್ಕು ಪ್ರತ್ಯೇಕ ಹವಾನಿಯಂತ್ರಿತ ಬಸ್‌ಗಳನ್ನು ಸಿದ್ಧಪಡಿಸಲಾಗುತ್ತಿದ್ದು, ತಂಡದ ನಾಯಕರ ಪ್ರವಾಸಕ್ಕೆ ಬೇಕಾದ ಸಕಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಯಾತ್ರೆಗಾಗಿಯೇ ಬಿಜೆಪಿಯು ಅಶೋಕ್ ಲೈಲ್ಯಾಂಡ್ ಕಂಪನಿಗೆ ಸೇರಿದ ನಾಲ್ಕು ಲಘು ವಾಣಿಜ್ಯ ವಾಹನದ ಚಾಸಿ ಖರೀದಿಸಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನ ಎಸ್.ಎಂ. ಆಟೋಮೊಬೈಲ್ಸ್ ಪ್ರೈ.ಲಿ.ನಲ್ಲಿ ಮಾರ್ಪಾಟು ಮಾಡುತ್ತಿದ್ದು, ಕೊನೆಯ ಕ್ಷಣದ ಸಿದ್ಧತೆ ಕೆಲಸ ನಡೆದಿದೆ.
ಈ ನಾಲ್ಕು ವಾಹನಗಳು ಅಂದಾಜು 20 ದಿನಗಳಲ್ಲಿ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸರಿ ಸುಮಾರು 8000 ಕಿ.ಮೀ. ನಷ್ಟುಕ್ರಮಿಸಲಿವೆ. ಅಂದರೆ, ಹೆಚ್ಚೂ ಕಡಿಮೆ ಒಂದೊಂದು ವಾಹನ ಎರಡು ಸಾವಿರ ಕಿ.ಮೀ. ಸಂಚರಿಸಬಹುದು. ಹೀಗಾಗಿ, ಮಾರ್ಗದುದ್ದಕ್ಕೂ ಎಲ್ಲ ಕಡೆ ವಾಹನದಿಂದ ಕೆಳಗೆ ಇಳಿದು ಮತ್ತೊಂದು ವೇದಿಕೆಗೆ ತೆರಳಿ ಭಾಷಣ ಮಾಡುವ ಬದಲು ಕಡಿಮೆ ಜನರಿದ್ದಲ್ಲಿ ವಾಹನದಿಂದಲೇ ಭಾಷಣ ಮಾಡುವುದಕ್ಕೆ ಪೂರಕವಾಗಿ ಹೈಡ್ರಾಲಿಕ್ ಸ್ಟೇಜ್ ನಿರ್ಮಿಸಲಾಗಿದೆ. ಸುಮಾರು 8ರಿಂದ 10 ಮಂದಿ ಈ ಸ್ಟೇಜ್ ಮೇಲೆ ನಿಂತು ಭಾಷಣ ಮಾಡಬಹುದಾಗಿದೆ. ಸುಮಾರು 1000 ಜನರನ್ನು ಉದ್ದೇಶಿಸಿ ಮಾತನಾಡಿದರೂ ಕೇಳುವಷ್ಟುಧ್ವನಿವರ್ಧಕ ವ್ಯವಸ್ಥೆ ಕಲ್ಪಿಸಲಾಗಿದೆ.
ಮೊದಲು ಅವರ ಕುಟುಂಬದ ಸಮಸ್ಯೆ ಬಗೆಹರಿಸಿಕೊಳ್ಳಲಿ: ಕೇಂದ್ರ ಸಚಿವ ಜೋಶಿ ವಿರುದ್ಧ ಎಚ್‌ಡಿಕೆ ಗರಂ
ಬಸ್‌ನೊಳಗೆ ಹಲವು ವ್ಯವಸ್ಥೆ:
ಜತೆಗೆ ಬಸ್ಸಿನಲ್ಲಿ ಏಳು ಮಂದಿ ಕುಳಿತುಕೊಳ್ಳಲು ಸೋಫಾ ವ್ಯವಸ್ಥೆ ಅಳವಡಿಸಲಾಗಿದೆ. ಒಂದು ಸಭಾಂಗಣ ಇದೆ. ಸಣ್ಣ ಪುಟ್ಟಸಭೆಗಳನ್ನು ನಡೆಸಬಹುದು. ಇದು ಬೇಸಿಗೆ ಕಾಲದ ಆರಂಭವಾಗಿದ್ದರಿಂದ ತಂಪು ಪಾನೀಯ ಕುಡಿಯಲು ರೆಫ್ರಿಜರೇಟರ್ ಕೂಡ ಇರಲಿದೆ. ಅಲ್ಲದೆ, ಇಡೀ ಬಸ್ಸಿನಲ್ಲಿ ವೈಫೈ ತಂತ್ರಜ್ಞಾನ ಅಳವಡಿಸಲಾಗುತ್ತದೆ. ಬಸ್ಸಿನ ಹಿಂದಿನ ಭಾಗ ಡಿಜಿಟಲ್ ಎಲ್‌ಇಡಿ ಪ್ರದರ್ಶನ ಫಲಕ ಅಳವಡಿಸಲಾಗಿದೆ. ಸತತವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಸಾಧನೆಗಳ ಸ್ಕೊ್ರೕಲ್ ಆಗುತ್ತಿರುತ್ತದೆ. ಬಸ್ಸಿನ ಒಂದು ಬದಿಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ದೊಡ್ಡ ಭಾವಚಿತ್ರಗಳನ್ನು ಬಳಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಎಲ್ಲಿಂದ ಯಾತ್ರೆ ಆರಂಭ?:
ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ನೇತೃತ್ವದ ತಂಡದ ಮೊದಲ ಯಾತ್ರೆಗೆ ಮಾ.1ರಂದು ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ನೇತೃತ್ವದ ತಂಡದ ಎರಡನೇ ಯಾತ್ರೆಗೆ ಮಾ.2ರಂದು ನಂದಗಡದ ಸಂಗೊಳ್ಳಿ ರಾಯಣ್ಣ ಸ್ಮಾರಕ ಬಳಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಚಾಲನೆ ನೀಡಲಿದ್ದಾರೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೇತೃತ್ವದ ಮೂರನೇ ಯಾತ್ರೆಗೆ ಮಾ.3ರಂದು ಬೆಳಗ್ಗೆ ಬಸವಕಲ್ಯಾಣದ ಹೊಸ ಅನುಭವ ಮಂಟಪ ಸಮೀಪ ಮತ್ತು ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದ ನಾಲ್ಕನೇ ಯಾತ್ರೆಗೆ ಅದೇ ದಿನ ಸಂಜೆ ನಾಡಪ್ರಭು ಕೆಂಪೇಗೌಡರ ಹುಟ್ಟೂರಾದ ಬೆಂಗಳೂರಿನ ದೇವನಹಳ್ಳಿ ಬಳಿಯ ಆವತಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಲನೆ ನೀಡಲಿದ್ದಾರೆ.
ಹೆಂಡ್ತಿ, ಮಕ್ಕಳಿಲ್ಲದವರ ಕೈಗೆ ದೇಶ ಕೊಟ್ರೆ ಬೆಲೆ ಏರಿಕೆ ಆಗದೆ ಮತ್ತೇನು ಆಗ್ತದೆ: ಸಿಎಂ ಇಬ್ರಾಹಿಂ
ಯಾತ್ರೆಯುದ್ದಕ್ಕೂ ಒಟ್ಟು 80ಕ್ಕೂ ಹೆಚ್ಚು ರಾರಯಲಿ ಮತ್ತು 75 ಸಾರ್ವಜನಿಕ ಸಭೆಗಳು ನಡೆಯಲಿವೆ. 150ಕ್ಕೂ ಹೆಚ್ಚು ರೋಡ್ ಶೋಗಳು ಸಹ ನಡೆಯಲಿವೆ. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರು ಈ ಒಟ್ಟು ಯಾತ್ರೆಯ ಸಂಚಾಲಕರಾಗಿದ್ದರೆ, ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಸಹ ಸಂಚಾಲಕರಾಗಿದ್ದಾರೆ. ಯಾತ್ರೆಯ ಬಸ್ಸುಗಳ ಸಿದ್ಧತೆಯ ಹೊಣೆಯನ್ನು ಪಕ್ಷದ ಮುಖಂಡರೂ ಆಗಿರುವ ಮಾಜಿ ಉಪಮೇಯರ್ ಎಸ್.ಹರೀಶ್ ಮತ್ತು ಬೆಂಗಳೂರು ಕೇಂದ್ರ ಘಟಕದ ಉಪಾಧ್ಯಕ್ಷ ಗಣೇಶ್ ಅವರಿಗೆ ವಹಿಸಲಾಗಿದೆ.
ರಥದಲ್ಲಿ ಏನಿದೆ?
ವಾಹನದಿಂದಲೇ ಭಾಷಣ ಮಾಡಲು ಹೈಡ್ರಾಲಿಕ್ ಸ್ಟೇಜ್
1000 ಜನರು ಕೇಳಿಸಿಕೊಳ್ಳಬಹುದಾದ ಧ್ವನಿವರ್ಧಕ ವ್ಯವಸ್ಥೆ
ಬಸ್‌ನೊಳಗೆ ಸಭಾಂಗಣ, 8 ಜನ ಕೂರಲು ಆಸನ ವ್ಯವಸ್ಥೆ
ಹವಾನಿಯಂತ್ರಿತ ವ್ಯವಸ್ಥೆ, ವೈಫೈ, ತಂಪು ಪಾನೀಯಕ್ಕೆ ಫ್ರಿಜ್
ಬಸ್ಸಿನ ಹಿಂಭಾಗದಲ್ಲಿ ಡಿಜಿಟಲ್ ಎಲ್‌ಇಡಿ ಪ್ರದರ್ಶನ ಫಲಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.