ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದು, ಮೋದಿ ಹೆಸರಿನಲ್ಲಿ ಮತ ಕೇಳಲು ಹೋದರೆ ಬಿಜೆಪಿಗರಿಗೆ ಮಹಿಳೆಯರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಕುಟುಕಿದರು.
ಸೊರಬ (ಏ.22) : ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನತೆ ತತ್ತರಿಸಿದ್ದು, ಮೋದಿ ಹೆಸರಿನಲ್ಲಿ ಮತ ಕೇಳಲು ಹೋದರೆ ಬಿಜೆಪಿಗರಿಗೆ ಮಹಿಳೆಯರೇ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಐಸಿಸಿ ಸದಸ್ಯ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಸ್. ಮಧು ಬಂಗಾರಪ್ಪ ಕುಟುಕಿದರು.
ಪಟ್ಟಣದ ಬಂಗಾರಧಾಮದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಜನತೆ ಪುನಃ ಸೌದೆ ಒಲೆಯ ಮೊರೆ ಹೋಗುವಂತಾಗಿದೆ. ಉಚಿತ ಅಡುಗೆ ಗ್ಯಾಸ್ ಸಿಲಿಂಡರ್ ನೀಡುವುದಾಗಿ ತಿಳಿಸಿ, ನಂತರ ಬೆಲೆ ನಿಗದಿ ಮಾಡಿದ್ದು ಜನತೆಗೆ ಬರೆ ಎಳೆದಂತಾಯಿತು. ಇದೀಗ ಅಡುಗೆ ಸಿಲಿಂಡರ್ ಬೆಲೆ ಏರಿಕೆ ಮತ್ತು ಸಬ್ಸಿಡಿ ಕಡಿತದಿಂದ ಮಹಿಳೆಯರು ರೋಸಿ ಹೋಗಿದ್ದಾರೆ. ಬಿಜೆಪಿಗರು ಮೋದಿ ಹೆಸರಿನಲ್ಲಿ ಈ ಬಾರಿ ಮತ ಕೇಳುವ ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ. ರಾಜ್ಯದಲ್ಲಿ ಸುಳ್ಳು ಮತ್ತು ಸತ್ಯದ ನಡುವೆ ಚುನಾವಣೆ ನಡೆಯುತ್ತಿದ್ದು, ನುಡಿದಂತೆ ನಡೆಯುವ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ...ಈ ಬಾರಿ ಶಿವಮೊಗ್ಗದಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?
ಜನ ವಿರೋಧಿ ನೀತಿಯಿಂದಾಗಿ ಬಿಜೆಪಿ ರಾಜಕೀಯವಾಗಿ ಬೀದಿಯಲ್ಲಿ ಬೆತ್ತಲಾಗುತ್ತಿದೆ. ಜನರ ಭಾವನಾತ್ಮಕ ವಿಷಯಗಳನ್ನು ಮುಂದಿಟ್ಟು ಚುನಾವಣೆ ಎದುರಿಸುತ್ತಿದ್ದವರಿಗೆ ಈ ಬಾರಿ ಚುನಾವಣೆ ಫಲ ನೀಡುವುದಿಲ್ಲ. ಕರಾವಳಿ ಭಾಗದಲ್ಲಿ ಕೋಮು ಸೂಕ್ಷ್ಮತೆಯ ವಿಚಾರಗಳನ್ನು ಮುಂದಿಟ್ಟು ಚುನಾವಣೆಗೆ ಬಿಜೆಪಿ ತೆರಳುತ್ತಿದ್ದು, ಅಲ್ಲಿಯೂ ಜನ ಎಚ್ಚೆತ್ತುಕೊಂಡಿದ್ದಾರೆ. ಜಾತಿ, ಮತ, ಧರ್ಮಗಳ ಬೇಧವನ್ನು ತೊರೆದು ನಾವೆಲ್ಲರು ಕನ್ನಡಿಗರು, ಭಾರತೀಯರು ಎನ್ನುವ ಮನೋಭಾವದೊಂದಿಗೆ ಕಾಂಗ್ರೆಸ್‌ಗೆ ಬೆಂಬಲಿಸುತ್ತಿದ್ದಾರೆ ಎಂದರು.
ಡಬಲ್ ಇಂಜಿನ್ ಬಿಜೆಪಿ ಸರ್ಕಾರದ ಮೇಲೆ ಜನತೆ ಸಂಪೂರ್ಣ ವಿಶ್ವಾಸ ಕಳೆದುಕೊಂಡಿದ್ದಾರೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ ಖಾಲಿ ಖುರ್ಚಿಗಳಿಗೆ ಭಾಷಣ ಮಾಡಿದ್ದೇ ಬಿಜೆಪಿಗರ ಸಾಧನೆಯಾಗಿದೆ ಎಂದು ವ್ಯಂಗ್ಯವಾಡಿದ ಅವರು, ರಾಜ್ಯದಲ್ಲಿ ಮಾತ್ರವಲ್ಲದೇ ಕ್ಷೇತ್ರದಲ್ಲಿಯೂ ಅನೇಕ ಬಿಜೆಪಿ ನಾಯಕರು ಸಮರೋಪಾದಿಯಾಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಹಳಬರು ಹೊಸಬರು ಎನ್ನುವ ಬೇಧವಿಲ್ಲದೇ ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಕಾರ್ಡ್ ಬಗ್ಗೆ ಜನತೆಗೆ ನಂಬಿಕೆ ಇದೆ. ಆದರೆ, ಕ್ಷೇತ್ರದ ವಿಠಲಾಪುರದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಕಾರ್ಯಕರ್ತರು ಎಂದು ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ವಾಸ್ತವವಾಗಿ ಬಿಜೆಪಿಗರು ಒತ್ತಡದಿಂದ ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಫೋಟೋ ತಗೆಸಿಕೊಂಡ ವಿಷಯವೂ ಸಹ ಬಹಿರಂಗವಾಗಿದ್ದು, ಆ ಕಾರ್ಯಕರ್ತರು ತಮಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಬಿ. ಅಣ್ಣಪ್ಪ, ಟೌನ್ ಅಧ್ಯಕ್ಷ ಅಬ್ದುಲ್ ರಶೀದ್ ಹಿರೇಕೌಂಶಿ, ಮುಖಂಡರಾದ ಎಚ್.ಗಣಪತಿ, ಎಂ.ಡಿ. ಶೇಖರ್, ಸುರೇಶ್ ಬಿಳವಾಣಿ, ಕೆ.ವಿ. ಗೌಡ, ಸೈಯದ್ ಅತೀಕ್, ಪ್ರಶಾಂತ್ ಮೇಸ್ತ್ರಿ, ಯು. ಫಯಾಜ್ ಅಹ್ಮದ್, ಸಂಜೀವ ನೇರಲಗಿ, ಪ್ರಭಾಕರ ಶಿಗ್ಗಾ, ಪ್ರಮೋದ್ ಉಪ್ಪಳ್ಳಿ ಸೇರಿದಂತೆ ಇತರರಿದ್ದರು.
ಕರಪತ್ರದಲ್ಲಿ ದೇವರ ಫೋಟೋ ಮುದ್ರಣ: ಎಸ್‌ಪಿ ಅಭ್ಯರ್ಥಿ ಮೇಲೆ ನೀತಿಸಂಹಿತೆ ಉಲ್ಲಂಘನೆ ತೂಗುಗತ್ತಿ!
ಗೊಂದಲ ಸೃಷ್ಟಿಸಲು ಯತ್ನಿಸಿದ ಕುಮಾರ್!
ಇತ್ತೀಚೆಗೆ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಹಮ್ಮಿಕೊಂಡ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಮಾತಿಗೂ ಮನ್ನಣೆ ನೀಡದೇ ಬಿಜೆಪಿ ಅಭ್ಯರ್ಥಿ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಮೆರವಣಿಗೆಯ ಜನಸಂದಣಿ ಮಧ್ಯದಲ್ಲಿ ಕಾರು ಚಲಾಯಿಸಿದರು. ಈ ವೇಳೆ ಕಾರ್ಯಕರ್ತರು ತಾಳ್ಮೆ ಕಾಯ್ದುಕೊಂಡರು. ಬಿಜೆಪಿ ಮೆರವಣಿಗೆಗೆ ನಮ್ಮ ಕಾರ್ಯಕರ್ತರು ಸಹಕಾರ ನೀಡಿದರು. ಆದರೆ, ಕುಮಾರ್ ಬಂಗಾರಪ್ಪ ಗೊಂದಲ ಸೃಷ್ಟಿಸಲು ಯತ್ನಿಸಿದ್ದು ವಿಫಲವಾಯಿತು ಎಂದು ಕಾಂಗ್ರೆಸ್ ಅಭ್ಯರ್ಥಿ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.