Shivamogga: ಜಿಲ್ಲೆ​ಯಲ್ಲಿ ರಂಗೇರುತ್ತಿದೆ ಚುನಾವಣೆ: ಪ್ರಚಾರ ಜೋರು

By Kannadaprabha News  |  First Published Apr 22, 2023, 5:00 AM IST

ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಮುಗಿದ್ದು, ಜಿಲ್ಲೆಯ 7 ಕ್ಷೇತ್ರಗಳ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಭದ್ರಕೋಟೆ ಆಗಿರುವ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌, ಜೆಡಿಎಸ್‌ ಕಾರ್ಯತಂತ್ರ ರೂಪಿಸಿವೆ.


 ಶಿವಮೊಗ್ಗ (ಏ.22) : ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆ ದಿನಾಂಕ ಮುಗಿದ್ದು, ಜಿಲ್ಲೆಯ 7 ಕ್ಷೇತ್ರಗಳ ಚುನಾವಣಾ ಕಣ ರಂಗೇರಿದೆ. ಬಿಜೆಪಿ ಭದ್ರಕೋಟೆ ಆಗಿರುವ ಜಿಲ್ಲೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್‌, ಜೆಡಿಎಸ್‌ ಕಾರ್ಯತಂತ್ರ ರೂಪಿಸಿವೆ.

ಚುನಾವಣಾ ದಿನ ಹತ್ತಿರವಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳ ಪ್ರಚಾರ ಭರಾಟೆ ಜೋರಾಗಿದ್ದು, ಮತದಾರರ ಮನವೊಲಿಸಲು ಕಸರತ್ತು ನಡೆಸುತ್ತಿದ್ದಾರೆ. ಚುನಾವಣೆ ಪೂರ್ವಭಾವಿ ಸಭೆಗಳು ನಡೆಯುತ್ತಿದ್ದು, ಅಭ್ಯರ್ಥಿಗಳ ಹಾಜರಿ ಎದ್ದು ಕಾಣುತ್ತಿದೆ.

Tap to resize

Latest Videos

ಕರಪತ್ರದಲ್ಲಿ ದೇವರ ಫೋಟೊ ಬಳಕೆ; ಎಸ್‌ಪಿ ಅಭ್ಯರ್ಥಿ ಪರಶುರಾಮ್‌ ವಿರುದ್ಧ ಪ್ರಕರಣ ದಾಖಲು

ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳು ಏಳೂ ಕ್ಷೇತ್ರದಲ್ಲೂ ಸ್ಪರ್ಧೆ ಮಾಡುತ್ತಿದ್ದರೆ, ಜೆಡಿಎಸ್‌ ಶಿಕಾರಿಪುರ ಹೊರತುಪಡಿಸಿ ಆರು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕಳೆದ ಬಾರಿ ಚುನಾವಣೆಯಲ್ಲಿ 6 ಕ್ಷೇತ್ರಗಳಲ್ಲಿ ಗೆದ್ದು ಬೀಗಿದ್ದ ಬಿಜೆಪಿಗೆ ಇದು ಪ್ರತಿಷ್ಠೆಯ ಕಣವಾದರೆ, ಕಳೆದ ಬಾರಿಯ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳು ಹವಣಿಸುತ್ತಿವೆ.

ಮತಭೇಟೆಗಳಿದ ನಾಯಕರು:

ನಾಮಪತ್ರ ಸಲ್ಲಿಕೆ ಆಗುತ್ತಿದ್ದಂತೆ ಪ್ರಮುಖ ಪಕ್ಷದ ಅಭ್ಯರ್ಥಿಗಳ ಪರ ಆಯಾ ಪಕ್ಷದ ನಾಯಕರು ಪ್ರಚಾರಕ್ಕೆ ಮುಂದಾಗಿದ್ದಾರೆ. ಕೊನೆ ಕ್ಷಣದಲ್ಲಿ ಟಿಕೆಟ್‌ ಗಿಟ್ಟಿಸಿಕೊಂಡ ಶಿವಮೊಗ್ಗ ನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಎನ್‌.ಚನ್ನಬಸಪ್ಪ ಅವರು ಶುಕ್ರವಾರ ಬೆಳಗ್ಗೆ ರಂಭಾಪುರಿ ಶ್ರೀಗಳನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬಳಿಕ ಶಾಸಕ ಕೆ.ಎಸ್‌. ಈಶ್ವರಪ್ಪ ನೇತೃತ್ವದಲ್ಲಿ ಮಾಜಿ ನಗರಸಭಾ ಸದಸ್ಯ ಎನ್‌.ಜೆ. ಸುಭಾಷ್‌ ಮನೆಯಲ್ಲಿ ನಡೆದ ಸ್ನೇಹಮಿಲನ ಕಾರ್ಯಕ್ರಮದಲ್ಲಿ ನಗರದ ಪ್ರಮುಖರ ಜೊತೆ ಚನ್ನಬಸಪ್ಪ ಕೆಲ ಕಾಲ ಚರ್ಚೆ ನಡೆಸಿದರು.

ಇತ್ತ ಶಿವಮೊಗ್ಗ ನಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಎಚ್‌.ಸಿ. ಯೋಗೀಶ್‌ ಶುಕ್ರವಾರ ನವುಲೆಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಮತಯಾಚನೆಗೆ ಚಾಲನೆ ನೀಡಿದರು. ಶಿವಮೊಗ್ಗ ನ್ಯಾಯಾಲಯದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯೋಗೇಶ್‌ ಮತಯಾಚನೆ ಮಾಡಿದರು.

ಶಿವಮೊಗ್ಗ ಗ್ರಾಮಾಂತರ ಭಾಗದಲ್ಲಿ ಮಾಜಿ ಶಾಸಕಿ, ಜೆಡಿಎಸ್‌ ಅಭ್ಯರ್ಥಿ ಹಲವಡೆ ಮತಯಾಚನೆ ಆರಂಭಿಸಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ, ಶಾಸಕ ಕೆ.ಬಿ.ಪ್ರಸನ್ನಕುಮಾರ್‌ ಗ್ರಾಮಾಂತರ ವಿಧಾನಸಭಾ ಕ್ಷೇತ್ರವ್ಯಾಪ್ತಿಯ ಹಲವು ಗ್ರಾಮದಲ್ಲಿ ಚುನಾವಣೆ ಪ್ರಚಾರ ಆರಂಭಿಸಿದ್ದಾರೆ.

ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಚುನಾವಣೆ ಕಣಕ್ಕಿಳಿದಿರುವ ಕಿಮ್ಮನೆ ರತ್ನಾಕರ್‌ ಪರ ಆರ್‌.ಎಂ.ಮಂಜುನಾಥ್‌ ಗೌಡ ಪ್ರಚಾರ ಕೈಗೊಂಡಿದ್ದು, ಗೆಲುವಿಗೆ ಹೆಚ್ಚಿನ ಶ್ರಮ ಹಾಕಿದ್ದಾರೆ. ಇತ್ತ ಗೃಹಸಚಿವ ಆರಗ ಜ್ಞಾನೇಂದ್ರ ಅವರು ಕ್ಷೇತ್ರದ ನಾನಾ ಭಾಗಗಳಿಗೆ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ತೀರ್ಥಹಳ್ಳಿಯಲ್ಲಿ ಪಕ್ಷ ಸೇರ್ಪಡೆ ಕಾರ್ಯ ಎರಡೂ ಪಕ್ಷಗಳಿಂದ ಜೋರಾಗಿಯೇ ನಡೆದಿದೆ.

ಭದ್ರಾವತಿಯಿಂದ ಈ ಬಾರಿಯೂ ನಾನೇ ಗೆಲ್ಲಬೇಕು ಎಂದು ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಬಿ.ಕೆ.ಸಂಗಮೇಶ್‌ ಪರ ಪ್ರಚಾರ ಜೋರಾಗಿಯೇ ನಡೆಯುತ್ತಿದೆ. ಇತ್ತ ಅಪ್ಪಾಜಿ ಗೌಡ ಅವರ ಆದರ್ಶಹೊತ್ತು ಚುನಾವಣೆ ಕಣಕ್ಕೆ ದುಮುಕಿರುವ ಶಾರದಾ ಅಪ್ಪಾಜಿಗೌಡ ಅವರು ಗೆಲುವಿಗೆ ಶತಾಯಗತ ಎಂಬ ಪ್ರಯತ್ನ ಮಾಡುತ್ತಿದ್ದಾರೆ.

ಸಾಗರದಲ್ಲಿ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ಅವರು ಮನೆ ಮನೆ ತೆರೆಳಿ ಮತಯಾಚಿಸುತ್ತಿದ್ದಾರೆ. ಇನ್ನು ಸಹೋದರರ ಸವಾಲಿನ ಕಣವಾಗಿರುವ ಸೊರಬದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಧುಬಂಗಾರಪ್ಪ ಹಾಗೂ ಬಿಜೆಪಿ ಕುಮಾರ್‌ ಬಂಗಾರಪ್ಪ ಅವರ ಪ್ರಚಾರವೂ ಜೋರಾಗಿಯೇ ಇದೆ.

ಶಿಕಾರಿಪುರದಲ್ಲಿ ತಮ್ಮ ಮಗನಿಗೆ ಟಿಕೆಟ್‌ ಕೊಡಿಸುವಲ್ಲಿ ಸಫಲ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮ್ಮ ಮಗ ವಿಜಯೇಂದ್ರ ಅವ​ರನ್ನು ಗೆಲ್ಲಿಸಿಕೊಂಡು ತಮ್ಮ ಪ್ರತಿಷ್ಠೆಯನ್ನು ಉಳಿಸಿಕೊಳ್ಳಲು ನಾನಾ ಕಡೆ ಪ್ರಚಾರ ಆರಂಭಿಸಿದ್ದಾರೆ. ಇತ್ತ ಕಾಂಗ್ರೆಸ್‌ ಅಭ್ಯರ್ಥಿ ಗೋಣಿ ಮಾಲತೇಶ್‌ ಗೆಲುವಿಗಾಗಿ ನಾನಾ ಕಸರತ್ತು ಮಾಡುತ್ತಿದ್ದಾರೆ.

ಶಿವಮೊಗ್ಗದಲ್ಲಿ ಹೊಸ ಮುಖಕ್ಕೆ ಮಣೆ ಹಾಕಿದ ಬಿಜೆಪಿ...ಈ ಬಾರಿ ಶಿವಮೊಗ್ಗದಲ್ಲಿ ಕಮಾಲ್ ಮಾಡುತ್ತಾ ಕಾಂಗ್ರೆಸ್..?

ಇನ್ನು ಪಕ್ಷದ ಅಭ್ಯರ್ಥಿಗಳ ಜೊತೆ ಅಧೃಷ್ಟಪರೀಕ್ಷೆಗೆ ಇಳಿದಿರುವ ಪಕ್ಷೇತರ ಅಭ್ಯರ್ಥಿಗಳು ಪ್ರಚಾರಕ್ಕೆ ಮುಂದಾಗಿದ್ದಾರೆ. ನಾಮಪತ್ರ ಸಲ್ಲಿಕೆ ಬೆನ್ನಲ್ಲೆ ಅಭ್ಯರ್ಥಿಗಳು ಮತದಾರರ ಬಳಿ ಹೋಗಿ ಮತಯಾಚನೆ ಮಾಡುತ್ತಿದ್ದು, ಚುನಾವಣೆ ಪ್ರಚಾರ ಜೋರಾಗಿಯೇ ನಡೆಯುತ್ತಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!