ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಣಿಸಲು ವಿಪಕ್ಷಗಳು ಒಂದಾಗಿದೆ. ಇದೀಗ ಬೆಂಗಳೂರಿನಲ್ಲಿ ಕೆಲವೇ ಹೊತ್ತಲ್ಲಿ 2ನೇ ಮಹಾ ಸಭೆ ಆರಂಭಗೊಳ್ಳುತ್ತಿದೆ. ಘಟಾನುಘಟಿ ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಆದರೆ ಈ ಸಭೆಗೂ ಮುನ್ನವೇ ಕಾಂಗ್ರೆಸ್ ಉರುಳಿಸಿದ ದಾಳ, ಮೈತ್ರಿಗೆ ಅಡ್ಡಿಯಾಗುವ ಸಾಧ್ಯತೆ ಇದೆ.
ಬೆಂಗಳೂರು(ಜು.17) ಅಧಿಕಾರ ಹಿಡಿಯಲು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಿರುವ ವಿಪಕ್ಷಗಳು ಈಗಾಗಲೇ ಮೈತ್ರಿ ಮಾಡಿಕೊಂಡಿದೆ. ಬಿಹಾರದ ಸಭೆ ಬಳಿಕ ಇದೀಗ 2ನೇ ಸುತ್ತಿನ ಮಹಾ ಸಭೆ ಇಂದು(ಜು.17) ಹಾಗೂ ನಾಳೆ(ಜು.18) ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಕೆಲವೇ ಹೊತ್ತಲ್ಲಿ ಸಭೆ ಆರಂಭಗೊಳ್ಳುತ್ತಿದೆ. ಆದರೆ ಈ ಸಭೆಗೂ ಮುನ್ನವೇ ಕಾಂಗ್ರೆಸ್ ದಾಳ ಉರುಳಿಸಿದೆ. ವಿಪಕ್ಷಗಳ ಮೈತ್ರಿ ಕೂಟದಲ್ಲಿ ರಾಹುಲ್ ಗಾಂಧಿಯ ಪ್ರಮುಖ ನಾಯಕ. ಹೀಗಾಗಿ ರಾಹುಲ್ ಗಾಂಧಿಯೇ ವಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಎಂದು ಕರ್ನಾಟಕ ಕಾಂಗ್ರೆಸ್ ಹೇಳಿದೆ. ಈ ಹೇಳಿಕೆ ಇದೀಗ ಮೈತ್ರಿ ಸಭೆಗೂ ಮುನ್ನವೇ ಮಿತ್ರ ಪಕ್ಷಗಳ ಅಸಮಾಧಾನಕ್ಕೆ ಕಾರಣವಾಗಿದೆ.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೀಡಿದ ಸ್ಫೋಟಕ ಹೇಳಿಕೆ ಮೈತ್ರಿ ಸಭೆಯ ಮಿತ್ರ ಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. 2023ರ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೇಳ ಹೆಸರಿಲ್ಲದಂತಾಗಿದೆ. ರಾಹುಲ್ ಗಾಂಧಿ ಮಾರ್ಗದರ್ಶನದಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಇದೇ ರೀತಿ 2024ರ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಗಾಂಧಿ ನಾಯಕತ್ವದಲ್ಲಿ ಅದ್ವಿತೀಯ ಗೆಲುವು ವಿಪಕ್ಷಗಳ ಪಾಲಾಗಲಿದೆ. ರಾಹುಲ್ ಗಾಂಧಿ ಪ್ರಧಾನಿ ಮಂತ್ರಿಯಾಗಲಿದ್ದಾರೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ. ಈ ಹೇಳಿಕೆ ವಿಪಕ್ಷಗಳ ಮೈತ್ರಿ ಸಭೆಯಲ್ಲಿ ಬಿರುಕು ಮೂಡಿಸುವ ಸಾಧ್ಯತೆ ಇದೆ.
ಜೈಲುವಾಸ ತಪ್ಪಿಸಲು ಕೇಜ್ರಿವಾಲ್ ತಂತ್ರ, ಆಪ್ ಕುತಂತ್ರ ಬಯಲು ಮಾಡಿದ ಕಾಂಗ್ರೆಸ್ ನಾಯಕ!
ವಿಪಕ್ಷಗಳ ಮೈತ್ರಿ ಮಾತುಕತೆ ಆರಂಭಗೊಂಡ ದಿನದಿಂದ ಪ್ರಧಾನಿ ಅಭ್ಯರ್ಥಿ ಯಾರು ಅನ್ನೋ ಪ್ರಶ್ನೆ ಹಲವು ಬಾರಿ ಮುನ್ನಲೆಗೆ ಬಂದಿದೆ. ಆದರೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಎಲ್ಲಾ ಪಕ್ಷಗಳು ಹೇಳಿವೆ. ಇಷ್ಟಾದರೂ ಬಿಹಾರ ಸಿಎಂ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಕೆಲ ನಾಯಕರು ವಿಪಕ್ಷಗಳ ನೇತೃತ್ವ ವಹಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ. ಇತ್ತ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೂಡ ಇದೇ ಹಾದಿಯಲ್ಲಿದ್ದಾರೆ. ಆದರೆ ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಅನ್ನೋ ಹೇಳಿಕೆಯಿಂದ ಇದೀಗ ಕೆಲ ನಾಯಕರಿಗೆ ಹಿನ್ನಡೆಯಾಗಿದೆ.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್,ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಹಲವು ನಾಯಕರು ಸಭೆಗಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಘಟಾನುಘಟಿ ನಾಯಕರಿಗೆ ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೂಗುಚ್ಚ ನೀಡಿ ಸ್ವಾಗತಿಸಿದ್ದಾರೆ.
20ಕ್ಕೂ ಹೆಚ್ಚು ಪಕ್ಷಗಳ ಘಟನಾನುಘಟಿ ನಾಯಕರು ಭಾಗವಹಿಸುವ ಸಭೆ ನಡೆಯಲಿರುವ ನಗರದ ರೇಸ್‌ಕೋರ್ಸ್ ರಸ್ತೆಯ ತಾಜ್ ವೆಸ್ಟೆಂಡ್ ತಾರಾ ಹೋಟೆಲ್‌ನಲ್ಲಿ ಭಾರೀ ತಯಾರಿ ನಡೆಸಲಾಗಿದೆ. ಸಭೆಗೆ ಆಗಮಿಸುವ ನಾಯಕರಿಗೆ ಭರ್ಜರಿ ಸ್ವಾಗತಕ್ಕಾಗಿ ರೇಸ್ ಕೊರ್ಸ್ ರಸ್ತೆ, ಕುಮಾರಕೃಪಾ ರಸ್ತೆಯಲ್ಲಿ ಬೃಹತ್ ಫ್ಲೆಕ್ಸ್ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ರಸ್ತೆಯ ಎಡಭಾಗದಲ್ಲಿ ಪ್ರತಿಪಕ್ಷದ ನಾಯಕರುಗಳ ಪ್ಲೆಕ್ಸ್ ಅಳವಡಿಕೆ ಮಾಡಲಾಗಿದೆ.
ನನ್ನ ಮಾತು ಕೇಳಿದ್ರೆ ಮದ್ವೆಯಾಗುತಿತ್ತು, ಕಾಲ ಇನ್ನೂ ಮಿಂಚಿಲ್ಲ; ಲಾಲು ಮಾತಿಗೆ ನಾಚಿ ನೀರಾದ ರಾಹುಲ್!
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹಾಗೂ ಕೇರಳ ಸೇರಿದಂತೆ ವಿವಿಧ ರಾಜ್ಯಗಳ ವಿವಿಧ ಪಕ್ಷಗಳ ಮುಖಂಡರ ಫ್ಲೆಕ್ಸ್‌ಗಳು ರಾಜಾಜಿಸುತ್ತಿವೆ.