
ಕೆ.ಆರ್.ಪೇಟೆ (ಜು.17) ಕ್ಷೇತ್ರದ ಶಾಸಕರಿಗೆ ತಪ್ಪು ಮಾಹಿತಿ ನೀಡಿ ಸರ್ಕಾರದ ವತಿಯಿಂದ ನೀಡಲಾದ ಪರಿಹಾರದ ವಿತರಣಾ ಪತ್ರವನ್ನು ಸಚಿವರ ಮೂಲಕ ವಿತರಿಸಿದ ತಹಸೀಲ್ದಾರ್ ನಿಸರ್ಗ ಪ್ರಿಯ ನಡೆಗೆ ಶಾಸಕ ಎಚ್.ಟಿ.ಮಂಜು ಬಹಿರಂಗ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಅಕ್ಕಿಹೆಬ್ಬಾಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಗೋಡನ್ ಕಟ್ಟಡದ ಉದ್ಘಾಟನಾ ಸಮಾರಂಭಕ್ಕೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಆಗಮಿಸಿದ್ದರು. ಸದರಿ ಕಾರ್ಯಕ್ರಮಕ್ಕೆ ಶಾಸಕ ಎಚ್.ಟಿ.ಮಂಜು ಬಂದಿದ್ದರು. ಆದರೆ, ಬೀರವಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟಿದ್ದ ಮಂಜುನಾಥ್ ಮತ್ತು ಗಾಯಾಳು ರಾಜು ಮನೆಗೆ ಭೇಟಿ ನೀಡಿದ್ದ ಸಚಿವ ಎನ್.ಚಲುವರಾಯಸ್ವಾಮಿ ಮೃತರ ಕುಟುಂಬಕ್ಕೆ 5 ಲಕ್ಷ ರು ಗಳ ಪರಿಹಾರದ ಪತ್ರ ಮತ್ತು ಗಾಯಾಳು ರಾಜುಗೆ ವೈಯಕ್ತಿಕವಾಗಿ 25 ಸಾವಿರ ನೆರವು ನೀಡಿದ್ದರು.
ವಿದ್ಯಾರ್ಥಿಗಳಿಗೆ ಹುಳು ಮಿಶ್ರಿತ ಆಹಾರ: ವಸತಿ ಶಾಲೆ ಸಿಬ್ಬಂದಿಗೆ ಶಾಸಕ ಹೆಚ್‌ಟಿ ಮಂಜುನಾಥರಿಂದ ಫುಲ್ ಕ್ಲಾಸ್
ಅಕ್ಕಿಹೆಬ್ಬಾಳು ಸಹಕಾರ ಸಂಘದ ಕಾರ್ಯಕ್ರಮದಲ್ಲಿ ಸದರಿ ವಿಚಾರವನ್ನು ಪ್ರಸ್ತಾಪಿಸಿದ ಶಾಸಕ ಎಚ್.ಟಿ.ಮಂಜು ಕ್ಷೇತ್ರದ ತಹಸೀಲ್ದಾರ್ ನಿಸರ್ಗ ಪ್ರಿಯ ಅವರು ನನಗೆ ದೂರವಾಣಿ ಕರೆ ಮಾಡಿ ಸಿಡಿಲು ಬಡಿದು ಮೃತಪಟ್ಟಬೀರವಳ್ಳಿ ರೈತ ಮಂಜುನಾಥ್ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರು ಪರಿಹಾರದ ಮೊತ್ತ ಕುಟುಂಬಸ್ಥರ ಬ್ಯಾಂಕ್ ಖಾತೆಗೆ ಜಮೆಯಾಗಿದೆ. ಆದ ಕಾರಣ ಅಕ್ಕಿಹೆಬ್ಬಾಳು ಕಾರ್ಯಕ್ರಮದಲ್ಲಿ ಪರಿಹಾರ ವಿತರಣಾ ಪತ್ರವನ್ನು ನೀಡುವಂತೆ ನನಗೆ ತಿಳಿಸಿದ್ದರು.
ಸಹಕಾರಿ ಸಂಸ್ಥೆ ಸರ್ಕಾರದ ಸಹಭಾಗಿತ್ವದಲ್ಲಿರುವುದರಿಂದ ಮೃತ ರೈತರ ಕುಟುಂಬಕ್ಕೆ ಇದೇ ವೇದಿಕೆಯಲ್ಲಿ ಪರಿಹಾರ ಪತ್ರ ನೀಡುವುದು ಒಳ್ಳೆಯದು ಎಂದು ಭಾವಿಸಿ ನಾನು ಇದಕ್ಕೆ ಒಪ್ಪಿಕೊಂಡು ಈ ಕಾರ್ಯಕ್ರಮದಲ್ಲಿ ಕಾಯುತ್ತಿದ್ದೆ. ಆದರೆ, ತಹಸೀಲ್ದಾರ್ ನನ್ನ ಗಮನಕ್ಕೆ ಬರದಂತೆ ಸಚಿವರನ್ನು ಬೀರವಳ್ಳಿಗೆ ಕರೆದೊಯ್ದು ಪರಿಹಾರ ವಿತರಣಾ ಪತ್ರ ನೀಡುವ ಮೂಲಕ ಶಾಸಕರ ಹಕ್ಕು ಚ್ಯುತಿ ಮಾಡಿದ್ದಾರೆ ಎಂದು ಕಿಡಿಕಾರಿದರು.
ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕರಾದವರಿಗೆ ಅವರದೇ ಆದ ಕೆಲವೊಂದು ಹಕ್ಕುಗಳಿರುತ್ತವೆ. ಜನಪ್ರತಿನಿಧಿಗಳ ಘನತೆ ಮತ್ತು ಗೌರವಗಳಿಗೆ ಧಕ್ಕೆ ತರುವ ಕೆಲಸವನ್ನು ಯಾರೊಬ್ಬರೂ ಮಾಡಬಾರದು. ಇಂದಿನ ಘಟನೆ ನನಗೆ ಅತೀವ ನೋವು ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕರ ಹಕ್ಕುಚ್ಯುತಿಯನ್ನು ಸಚಿವ ಚಲುವರಾಯಸ್ವಾಮಿ ಖಂಡಿಸಬೇಕು. ಯಾವುದೇ ಕಾರಣಕ್ಕೂ ಶಾಸಕರ ಹಕ್ಕು ಮತ್ತು ಕರ್ತವ್ಯಗಳಿಗೆ ಧಕ್ಕೆ ತರುವ ಕೆಲಸ ಮಾಡದಂತೆ ಅಧಿಕಾರಿಗಳಿಗೆ ತಾಕೀತು ಮಾಡಬೇಕೆಂದು ಮಂಜು ತಮ್ಮ ಆಕ್ರೋಶ ಹೊರಹಾಕಿದರು.
ಚಲುವರಾಯಸ್ವಾಮಿಯಿಂದ ದ್ವೇಷದ ರಾಜಕಾರಣ: ಶಾಸಕ ಸುರೇಶ್‌ಗೌಡ ಕಿಡಿ
ಅ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಶಾಸಕ ಎಚ್.ಟಿ ಮಂಜು, ತಹಸೀಲ್ದಾರರ ನಡೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾಡಿದ ಅಪಮಾನ. ಕ್ಷೇತ್ರದ ಶಾಸಕರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸುವ ಮೂಲಕ ಕ್ಷೇತ್ರದ ಮತದಾರರಿಗೆ ಅವಮಾನ ಮಾಡಿದ್ದಾರೆ. ಈ ನಡೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು ಶಾಸನ ಸಭೆಯಲ್ಲಿ ಹಕ್ಕು ಚ್ಯುತಿ ಮಂಡಿಸುವುದಾಗಿ ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.