Karnataka BJP: ವಿವಿಧ ನೇಮಕಾತಿಗಳ ಪಟ್ಟಿ, ಅರವಿಂದ್ ಬೆಲ್ಲದ್ ಸ್ಥಾನಕ್ಕೆ ಹೊಸ ಮುಖ

By Suvarna NewsFirst Published Jan 4, 2022, 4:34 PM IST
Highlights

* ಮುಂಬರುವ ವಿಧಾನಸಭೆಗೆ ಬಿಜೆಪಿ ತಯಾರಿ
* ಪಕ್ಷದ ವಿವಿಧ ವಿಭಾಗಗಳಿಗೆ ನೇಮಕಾತಿ
* ನೇಮಕಾತಿ ಮಾಡಿ ಆದೇಶ ಹೊರಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್

ಬೆಂಗಳೂರು, (ಜ.04): ಮುಂದಿನ ವಿಧಾನಸಭೆ ಚುನಾವಣೆಗೆ ಕರ್ನಾಟಕ ಬಿಜೆಪಿ (Karnataka BJP) ತಯಾರಿ ಆರಂಭಿಸಿದ್ದು, ಪಕ್ಷ ಸಂಘಟನೆಗಾಗಿ ವಿವಿಧ ವಿಭಾಗಗಳಿಗೆ ಪದಾಧಿಕಾರಿಗಳನ್ನ ನೇಮಕ ಮಾಡುತ್ತಿದೆ.

ಮೊನ್ನೇ ಅಷ್ಟೇ ಸಂಚಾಲಕರು, ಜಿಲ್ಲಾಧ್ಯಕ್ಷರು, ವಕ್ತಾರರು ಸೇರಿದಂತೆ ವಿವಿಧ ವಿಭಾಗಗಳಿಗೆ ಪದಾಧಿಕಾರಿಗಳನ್ನ ನೇಮಕ ಮಾಡಿತ್ತು. ಇದೀಗ ಇಂದು (ಮಂಗಳವಾರ) ಕೆಲ ಹುದ್ದೆಗಳಿಗೆ ನೇಮಕಾತಿ ಮಾಡಿದೆ.

Karnataka BJP ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ, ಕಾರ್ಯಕಾರಣಿ ಸಭೆಯಲ್ಲಿ ಮೊದಲ ವಿಕೆಟ್ ಪತನ

 ತುಮಕೂರು, ಮಧುಗಿರಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷರ ಹುದ್ದೆಗಳಿಗೆ ನೂತನ ಜಿಲ್ಲಾಧ್ಯಕ್ಷರನ್ನು ನೇಮಕ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು ಆದೇಶ ಹೊರಡಿಸಿದ್ಧಾರೆ. 

ಅದರಲ್ಲೂ ಮುಖ್ಯವಾಗಿ ಶಾಸಕ ಅರವಿಂದ ಬೆಲ್ಲದ್ ಅವರ ರಾಜೀನಾಮೆಯಿಂದ ತೆರವಾಗಿದ್ದು ಸ್ಥಾನಕ್ಕೆ ಹೊಸಬರನ್ನು ನೇಮಕವಾಗಿದೆ.  ಸಂಜಯ್ ಕಪಾಟಕರ್ ಎನ್ನುವರನ್ನು ಹುಬ್ಬಳ್ಳಿ- ಧಾರವಾಡ ಮಹಾನಗರದ ಜಿಲ್ಲಾಧ್ಯಕ್ಷರಾಗಿ ನೇಮಿಸಲಾಗಿದೆ.

ತುಮಕೂರು (ವಿಧಾನಸಭೆ ಕ್ಷೇತ್ರಗಳು: ತುಮಕೂರು ನಗರ, ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆ, ತಿಪಟೂರು, ಚಿಕ್ಕನಾಯಕನಹಳ್ಳಿ, ಗುಬ್ಬಿ) ಜಿಲ್ಲಾ ಅಧ್ಯಕ್ಷರಾಗಿ ಲಕ್ಷ್ಮೀಶ ಅವರನ್ನ ಆಯ್ಕೆ ಮಾಡಲಾಗಿದೆ.

ಮಧುಗಿರಿ (ವಿಧಾನಸಭೆ ಕ್ಷೇತ್ರಗಳು: ಮಧುರಿಗಿ, ಕೊರಟಗೆರೆ, ಶಿರಾ, ಪಾವಗಡ) ಜಿಲ್ಲಾ ಅಧ್ಯಕ್ಷರಾಗಿ  ಬಿ.ಕೆ.ಮಂಜುನಾಥ್,ಶಿರಾ ಅವರನ್ನು ನೇಮಕ ಮಾಡಲಾಗಿದೆ.

 ಅಲ್ಪಸಂಖ್ಯಾತ ಮೋರ್ಚಾ ರಾಜ್ಯಧ್ಯಕ್ಷರಾಗಿ ಸೈಯ್ಯದ್ ಸಲಾಂ ಹಾಗೂ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಉಪಾಧ್ಯಕ್ಷರಾಗಿ ಮೊಹಮ್ಮದ್ ಫಾರೂಕ್ ಅವರನ್ನು ನೇಮಿಸಲಾಗಿದೆ.

ವಿಧಾನ ಪರಿಷತ್ ಚುನಾವಣೆ ಸಮಯದಲ್ಲಿ ಜಿಲ್ಲಾ ಬಿಜೆಪಿ ವಲಯದಲ್ಲಿ ಮೂಡಿದ್ದ ಭಿನ್ನಮತ ಚುನಾವಣೆ ನಂತರ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಹಿರಿಯ ಮುಖಂಡರೊಬ್ಬರನ್ನು ಸಭೆಯಿಂದ ಹೊರಗೆ ಕಳುಹಿಸುವ ಹಂತಕ್ಕೆ ತಲುಪಿದೆ.

ಜಿಲ್ಲಾಧ್ಯಕ್ಷರ ನೇಮಕದಲ್ಲಿ ಭಿನ್ನಮತ
ತುಮಕೂರು ಜಿಲ್ಲಾ ಕೋರ್ ಕಮಿಟಿ ಸಭೆಯಲ್ಲಿ ಭಿನ್ನಮತ ಸ್ಫೋಟಿಸಿದ್ದು, ಮಾಜಿ ಸಚಿವ ಸೊಗಡು ಶಿವಣ್ಣ ಅವರನ್ನು ಸಭೆಯಿಂದ ಹೊರಗೆ ಕಳುಹಿಸಲಾಗಿದೆ.

ವಿಧಾನ ಪರಿಷತ್ ಚುನಾವಣೆ ವಿಚಾರ ಹಾಗೂ ದತ್ತ ಪೀಠಕ್ಕೆ ಯಾತ್ರೆ ತೆರಳುವ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀನಿವಾಸ್ ಮೇಲೆ ಶಿವಣ್ಣ ಹಲ್ಲೆ ಮಾಡಿದ್ದು ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

ಬಿಜೆಪಿ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರ ನೇಮಕದ ವಿಚಾರ ಚರ್ಚೆಗೆ ಬಂದಿದೆ. ನಗರ ಶಾಸಕ ಜ್ಯೋತಿಗಣೇಶ್ ಅವರು ಹೆಬ್ಬಾಕ ರವಿಶಂಕರ್ ಹೆಸರು ಪ್ರಸ್ತಾಪ ಮಾಡಿದ್ದು, ಇದಕ್ಕೆ ಶಿವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

'ಭ್ರಷ್ಟರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಬೇಡಿ. ಉತ್ತಮರನ್ನು ನೇಮಿಸಿ' ಎಂದು ಸಲಹೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸ್ವಲ್ಪಮಟ್ಟಿಗೆ ಮಾತಿಗೆ ಮಾತು ಬೆಳೆದಿದೆ. ಇದರಿಂದ ಸಿಟ್ಟುಗೊಂಡ ಅರುಣ್‌ ಕುಮಾರ್ ಅವರು ಶಿವಣ್ಣ ಅವರನ್ನು ಸಭೆಯಿಂದ ಹೊರಗೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಕಾರಣೆಯಲ್ಲಿ ರಾಜೀನಾಮೆ ನೀಡಿದ್ದ ಬೆಲ್ಲದ್
ಹೌದು....ಹುಬ್ಬಳ್ಳಿಯಲ್ಲಿ ನಡೆಯುತ್ತಿರೋ ಬಿಜೆಪಿ ಕಾರ್ಯಕಾರಿಣಿಯ (BJP Executive Meeting)2ನೇ ದಿನ ಸಭೆಯಲ್ಲಿ ಶಾಸಕ ಅರವಿಂದ್ ಬೆಲ್ಲದ್ ಅವರು ಹುಬ್ಬಳ್ಳಿ-ಧಾರವಾಡ ಮಹಾನಗರ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

 ಮಹಾನಗರ ಘಟಕ ಅಧ್ಯಕ್ಷ ಸ್ಥಾನದಿಂದ ವಿಮುಕ್ತಿ ಮಾಡಿ ಎಂದು ಶಾಸಕ ಅರವಿಂದ ಬೆಲ್ಲದ್ ಮನವಿ ಮಾಡಿಕೊಂಡಿದ್ದರು. ವಿಧಾನ ಪರಿಷತ್ ಚುನಾವಣೆ ವಿಚಾರದಲ್ಲಿ ಶೆಟ್ಟರ್ ಅಸಮಾಧಾನಗೊಂಡಿದ್ದು ಇದಕ್ಕೆ ಕಾರಣ ಎಂದು ತಿಳಿದುಬಂದಿದೆ. 

ಧಾರವಾಡ ದ್ವಿಸದಸ್ಯತ್ವ ವಿಧಾನಪರಿಷತ್ ಚುನಾವಣೆಯಲ್ಲಿ ಅಚ್ಚರಿ ಎಂಬಂತೆ ಕಾಂಗ್ರೆಸ್‌ನ ಸಲೀಂ ಅಹ್ಮದ್ ಮೊದಲ ಪ್ರಾಶಸ್ತ್ಯ ಮತಗಳಲ್ಲಿ ಜಯಗಳಿಸಿದ್ರೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಹೋದರ ಪ್ರದೀಪ್ ಶೆಟ್ಟರ್, ಎರಡನೇ ಪ್ರಾಶಸ್ತ್ಯ ಮತದಲ್ಲಿ ಗೆಲುವು ಸಾಧಿಸಿದ್ದರು. 

ಇದು ಬಿಜೆಪಿ ನಾಯಕರಲ್ಲಿ ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ, ಧಾರವಾಡ ಅಂದ್ರೆ ಬಿಜೆಪಿಯ ಭದ್ರಕೋಟೆ ಅನ್ನೋ ಮಾತಿದೆ. ಶೆಟ್ಟರ್ ಹಾಗೂ ಜೋಷಿಯಂತಹ ಘಟಾನುಘಟಿ ನಾಯಕರು ಇದ್ದರೂ ಸಹ ಬಿಜೆಪಿ ಎರಡನೇ ಪ್ರಾಶಸ್ತ್ಯದಲ್ಲಿ ಗೆದ್ದಿರುವುದು ಶಾಕ್ ಆಗಿದೆ.

ಇದರಿಂದಾಗಿ ತೀವ್ರ ಬೇಸರಗೊಂಡಿದ್ದ ಮಾಜಿ ಜಗದೀಶ್ ಶೆಟ್ಟರ್, ದೆಹಲಿಗೆ ತೆರಳಿ ಹೈಕಮಾಂಡ್ ಗೂ ದೂರು ನೀಡೋಕೆ ಮುಂದಾಗಿದ್ದರು. ಅಮಿತ್ ಶಾ, ಜೆ.ಪಿ.ನಡ್ಡಾ ಭೇಟಿಯಾಗಿ ದೂರು ನೀಡೋಕೆ ಗಂಭೀರ ಚಿಂತನೆ ನಡೆಸಿದ್ದರು. ಅರವಿಂದ್ ಬೆಲ್ಲದ್ ವಿರುದ್ಧ ದೂರು ಕೊಡಲು ಮುಂದಾಗಿದ್ದರು ಎನ್ನಲಾಗಿದೆ. ಈ ಎಲ್ಲಾ ಬೆಳವಣಿಗೆಗಳಿಂದ ಬೇಸತ್ತು ಅರವಿಂದ್ ಬೆಲ್ಲದ್ ಬಿಜೆಪಿ ನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

click me!