Karnataka Politics: ರಾಮನಗರ ಜಗಳ, ಡಿಕೆ ಸುರೇಶ್‌ಗೆ ಧನ್ಯವಾದ ಹೇಳಿದ ಸಿಟಿ ರವಿ

By Suvarna NewsFirst Published Jan 4, 2022, 4:01 PM IST
Highlights

* ಡಿಕೆ ಸುರೇಶ್-ಅಶ್ವತ್ಥ್ ನಾರಾಯಣ ಗಲಾಟೆ ಪ್ರಕರಣ
* ರಾಜ್ಯ ರಾಜಕಾರಣದಲ್ಲಿ ಆರೋಪ-ಪ್ರತ್ಯಾರೋಪ ಜೋರು
* ಈ ಬಗ್ಗೆ ಸಂಸದ ಡಿಕೆ ಸುರೇಶ್‌ಗೆ ಧನ್ಯವಾದ ಹೇಳಿದ ಸಿಟಿ ರವಿ

ಬೆಂಗಳೂರು, (ಜ.04): ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಹಾಗೂ ಸಚಿವ ಡಾ ಸಿಎನ್ ಅಶ್ವತ್ಥ್ ನಾರಾಯಣ(Dr CN Ashwath Narayan) ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ.

ಇನ್ನುಈ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(CT Ravi) ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ಸಂಸ್ಕೃತಿಯನ್ನು ರಾಜ್ಯದ ಜನರಿಗೆ ಪರಿಚಯಿಸಿದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಅವರಿಗೆ ಧನ್ಯವಾದ ಎಂದು ಟಾಂಗ್ ಕೊಟ್ಟಿದ್ದಾರೆ.

Karnataka Politics ರಾಮನಗರದಲ್ಲಿ ನಾಯಕರ ಕಿತ್ತಾಟ, ರೌಡಿ ಡಿಕೆ ಬ್ರದರ್ಸ್​ ಎಂದು ಟ್ವೀಟ್ ಮಾಡಿದ ಬಿಜೆಪಿ

ಮಂಗಳವಾರ ಸಿ. ಟಿ. ರವಿ ಈ ಕುರಿತು ಫೇಸ್ ಬುಕ್ ಪೋಸ್ಟ್‌ (Facebook Post) ಹಾಕಿದ್ದು,ಇಂದಿನ ಯುವಜನತೆ Indian National Congress ದ ಸಂಸ್ಕೃತಿ ಅಂದರೆ ಭ್ರಷ್ಟಾಚಾರ, ಹೊಣೆಗೇಡಿತನ ಅಂದುಕೊಂಡಿದ್ದರು, ರೌಡಿಸಂ ಕೂಡಾ ಅದರ ಅವಿಭಾಜ್ಯ ಅಂಗ ಅನ್ನುವುದು ಈಗ ಜಗಜ್ಜಾಹೀರಾಗಿದೆ ಎಂದು ಕಿಡಿಕಾರಿದ್ದಾರೆ.

ಮುಜುಗರವಿಲ್ಲದೆ ಈ "ರಿಪಬ್ಲಿಕ್ ಆಫ್ ರೌಡಿಸಂ" ಅನ್ನು ಸಮರ್ಥಿಸಿಕ್ಕೊಳ್ಳುವ ವ್ಯಕ್ತಿಗಳು ಕೂಡಾ ಕಾಂಗ್ರೆಸ್ ಕುಸಂಸ್ಕೃತಿಯ ಪಾಲುದಾರರು. ನಮ್ಮ ರಕ್ತವೇ ಬೇರೆ ಅನ್ನುವ ಕೆಪಿಸಿಸಿ ಅಧ್ಯಕ್ಷರೇ, ನಿಮ್ಮ ರಕ್ತದ ಮಾದರಿ ಪರೀಕ್ಷೆಗೆ ಸಮಯ ವ್ಯಯ ಮಾಡಬೇಡಿ. ನಿಮ್ಮ ರಕ್ತದ ಗುಣ ನಿನ್ನೆ ನಿಮ್ಮ ಸಹೋದರ ಸಾರ್ವಜನಿಕವಾಗಿ ತೋರಿಸಿದ್ದಾರೆ. ನಿನ್ನೆಯೇ ಅದರ ಪರೀಕ್ಷೆ ಮತ್ತು ಫಲಿತಾಂಶ ರಾಜ್ಯದ ಜನತೆಗೆ ಸಿಕ್ಕಿದೆ ಎಂದಿದ್ದಾರೆ. 

ಸಾರ್ವಜನಿಕವಾಗಿ ತೋಳೇರಿಸಿ ಸಚಿವರ ಕಡೆ ನುಗ್ಗುವ ನಿಮ್ಮ ರಾಜಕೀಯ ದಾರ್ಷ್ಟ್ಯ ಪ್ರಜಾಪ್ರಭುತ್ವಕ್ಕೆ ಸೂಕ್ತವೇ? ಸುಳ್ಳರೆಲ್ಲ ಸೇರಿ ಕಟ್ಟುತ್ತಿರುವ ಸಾಮ್ರಾಜ್ಯದ ಒಂದು ಮುಖ ಸಿದ್ದರಾಮಯ್ಯನವರ ರೂಪದಲ್ಲಿ ಮತಾಂತರ ನಿಷೇಧ ಕಾಯಿದೆಯ ಸಂದರ್ಭದಲ್ಲಿ ಹೊರಬಿತ್ತು ಎಂದು ಟೀಕಿಸಿದ್ದಾರೆ.

ಸುಪ್ರೀಂಕೋರ್ಟ್ ಹಾಗೂ NGT ತೀರ್ಪಿಗಾಗಿ ಕಾಯುತ್ತಿರುವ ಮೇಕೆದಾಟು ಯೋಜನೆ ಪಾದಯಾತ್ರೆಯ ನಾಟಕದಲ್ಲಿ ಹೊರಬಿದ್ದದ್ದು ನಿಮ್ಮ ರಾಜಕೀಯ ಪಾದಯಾತ್ರೆ ಗಿಮಿಕ್ಕಿನ ಎರಡನೇ ಮುಖ. ನಿನ್ನೆ ನಿಮ್ಮ ತಮ್ಮನ ರೂಪದಲ್ಲಿ ಅನಾವಾರಣಗೊಂಡಿದ್ದು ನಿಮ್ಮ ಪಕ್ಷದ ರೌಡಿಸಂನ ಮೂರನೆಯ ಮುಖ. ಗೋಸುಂಬೆಗಿಂತ ಹೆಚ್ಚು ಬಾರಿ ಬಣ್ಣ ಬದಲಾವಣೆ ಮಾಡುತ್ತಿರುವ ಕಾಂಗ್ರೆಸ್ ಅನ್ನು ನೋಡಿ ಗೋಸುಂಬೆಯೂ ಮುಖಮುಚ್ಚಿಕೊಂಡಿದೆಯಂತೆ ಎಂದು ಹೇಳಿದ್ದಾರೆ.

ಬಿಜೆಪಿ ಸರಣಿ ಟ್ವೀಟ್
ಬಿಜೆಪಿ ಸರ್ಕಾರದ ಅಭಿವೃದ್ಧಿಪರ ರಾಜಕಾರಣದ ಮುಂದೆ ಕನಕಪುರದ ರೌಡಿ ಸಹೋದರರ ಧಮ್ಕಿ ರಾಜಕಾರಣ ನಡೆಯುವುದಿಲ್ಲ. ಗೂಂಡಾ ವರ್ತನೆ ತೋರಿ ಪ್ರಜಾಪ್ರಭುತ್ವದಲ್ಲಿ ಬಹಳ ಕಾಲ ಉಳಿಯಲು ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷವೀಗ ಗೂಂಡಾಗಳನ್ನು ತಯಾರು ಮಾಡುವ ಫ್ಯಾಕ್ಟರಿಯಾಗಿದೆ. ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ' ಎಂದು ಬಿಜೆಪಿ ಟ್ವೀಟ್ ಮಾಡಿದೆ.

"ಕಾಂಗ್ರೆಸ್‌ ಸಂಸದ ಡಿ. ಕೆ. ಸುರೇಶ್ ಕೇವಲ ಶಿಷ್ಟಾಚಾರ ಉಲ್ಲಂಘಿಸಿದ್ದಲ್ಲ, ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಹಾಗೂ ನಾಡಪ್ರಭು ಕೆಂಪೇಗೌಡರಿಗೆ ಅವಮಾನ ಮಾಡಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಗೂಂಡಾಗಿರಿ ಪ್ರದರ್ಶಿಸಿದ ಕಾಂಗ್ರೆಸ್ ಪಕ್ಷದ ನಾಯಕರನ್ನು ರಾಜ್ಯದ ಜನತೆ ಎಂದಿಗೂ ಕ್ಷಮಿಸುವುದಿಲ್ಲ" ಎಂದು ಬಿಜೆಪಿ ಹೇಳಿದೆ.

"ಕೆಂಪೇಗೌಡರು ಆಳಿದ ಜಿಲ್ಲೆಯಲ್ಲಿ ಪಕ್ಷದ ನಾಯಕರು ತೋರಿದ ಗೂಂಡಾ ವರ್ತನೆ ಖಂಡನೀಯ. ರಾಜ್ಯದ ಮರ್ಯಾದೆಯನ್ನು ಮಣ್ಣುಪಾಲು ಮಾಡುವ ನಾಯಕರನ್ನು ಕಾಂಗ್ರೆಸ್‌ ಬೆಳೆಸುತ್ತಿದೆ. ಇಂತಹ ಅನೈತಿಕ ರಾಜಕಾರಣದ ಮೂಲಕ ಕಾಂಗ್ರೆಸ್‌ ರಾಜ್ಯದ ಜನತೆಗೆ ಯಾವ ಸಂದೇಶ ನೀಡುತ್ತಿದ್ದಾರೆ?" ಎಂದು ಬಿಜೆಪಿ ಪ್ರಶ್ನಿಸಿದೆ.

click me!