ನಾವು ‘ಆಪರೇಷನ್ ಹಸ್ತ’ ಮಾಡುತ್ತಿಲ್ಲ, ನಮಗೆ ಅದರ ಅವಶ್ಯಕತೆಯೇ ಇಲ್ಲ. ಆದರೆ, ಈಗಿನ ರಾಜಕೀಯ ಸನ್ನಿವೇಶ ಸರಿಯಿಲ್ಲ. ಹೀಗಾಗಿಯೇ ನಾನು ರಾಜಕೀಯ ನಿವೃತ್ತಿಗೆ ಮುಂದಾಗಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೈಸೂರು (ಆ.23): ‘ನಾವು ‘ಆಪರೇಷನ್ ಹಸ್ತ’ ಮಾಡುತ್ತಿಲ್ಲ, ನಮಗೆ ಅದರ ಅವಶ್ಯಕತೆಯೇ ಇಲ್ಲ. ಆದರೆ, ಈಗಿನ ರಾಜಕೀಯ ಸನ್ನಿವೇಶ ಸರಿಯಿಲ್ಲ. ಹೀಗಾಗಿಯೇ ನಾನು ರಾಜಕೀಯ ನಿವೃತ್ತಿಗೆ ಮುಂದಾಗಿದ್ದೇನೆ ಎಂದು ಶಾಸಕ ತನ್ವೀರ್ ಸೇಠ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಬಿಜೆಪಿ ಆಡಳಿತದಿಂದ ಬೇಸತ್ತು, ಜನರು ಬದಲಾವಣೆ ಬಯಸಿ ನಮಗೆ 136 ಸ್ಥಾನ ಕೊಟ್ಟಿದ್ದಾರೆ. ಹೀಗಾಗಿ ‘ಆಪರೇಷನ್ ಹಸ್ತ’ದ ಅವಶ್ಯಕತೆ ನಮಗಿಲ್ಲ. ಆದರೆ, ಪಕ್ಷಾಂತರ ಮಾಡುವವರ ವಿರುದ್ಧ ಎಷ್ಟೇ ಕಾನೂನು ಬಿಗಿ ಮಾಡಿದರೂ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆಗೆ ಹೋಗುತ್ತಾರೆ.
ಇವರಿಗೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಾ ‘ಆಪರೇಷನ್ ಹಸ್ತ’ಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ಎಸ್.ಟಿ.ಸೋಮಶೇಖರ್ ಅವರು ಸಿಎಂ ಭೇಟಿಯಾಗಿರುವುದು ಕ್ಷೇತ್ರದ ಕೆಲಸದ ವಿಚಾರಕ್ಕೆ. ಪಕ್ಷ ಸೇರುವ ಉಹಾಪೋಹದ ವಿಚಾರಕ್ಕೆ ಎಸ್.ಟಿ. ಸೋಮಶೇಖರ್ ಅವರೇ ಉತ್ತರ ಕೊಡಬೇಕು. ನಾವು ಯಾರಿಗೂ ಆಹ್ವಾನ ಕೊಟ್ಟಿಲ್ಲ. ಪಕ್ಷಕ್ಕೆ ಬರುವವರು ನಮ್ಮ ಬಳಿ ಮಾತನಾಡಿಲ್ಲ. ಅದರ ಬಗ್ಗೆ ಚರ್ಚೆ ಮಾಡುವ ಅಗತ್ಯ ಕೂಡ ನನಗಿಲ್ಲ. 15 ಜನ ಹಾಲಿ-ಮಾಜಿ ಶಾಸಕರು ಪಕ್ಷಕ್ಕೆ ಬರುವ ವಿಚಾರದ ಬಗ್ಗೆ ಸಚಿವ ಚಲುವರಾಯಸ್ವಾಮಿಯೇ ಉತ್ತರ ಕೊಡಬೇಕು ಎಂದರು.
ಆಪರೇಷನ್ ಕಮಲ ಮಾಡಿದಾಗ ಇವರಿಗೆ ನಾಚಿಕೆ ಆಗಲಿಲ್ವಾ?: ಸಚಿವ ಶಿವರಾಜ ತಂಗಡಗಿ
ಗೃಹಲಕ್ಷ್ಮಿ ಯೋಜನೆ ಯಶಸ್ಸಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮನವಿ: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಗೃಹ ಲಕ್ಷ್ಮಿ ಯೋಜನೆ ಜಾರಿ ಸಮಾರಂಭವನ್ನು ಯಶಸ್ವಿಯಾಗಿ ಆಯೋಜಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು. ಯೋಜನೆ ಜಾರಿ ಸಂಬಂಧ ನಡೆದ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ ಜಿಲ್ಲೆಯ ಸಚಿವರು, ಶಾಸಕರ ಸಭೆಯಲ್ಲಿ ಮಾತನಾಡಿ, ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಪ್ರತಿ ಅಂಗನವಾಡಿ ಶಿಕ್ಷಕಿಯರು, ಸಹಾಯಕಿಯರಿಗೆ ಕನಿಷ್ಠ 7 ಮಂದಿ ಮಹಿಳೆಯರನ್ನು ಕರೆ ತರಲು ಸೂಚಿಸಲಾಗಿದ್ದು, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಆಗಮನದ ಹಿನ್ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಯಾವುದಕ್ಕೂ ಕೊರತೆ ಆಗಬಾರದು ಎಂದರು. ಸಮಾರಂಭದಲ್ಲಿ ಒಂದೂವರೆ ಲಕ್ಷ ಮಹಿಳೆಯರು ಸೇರಲಿದ್ದು, ನಾಲ್ಕು ಜಿಲ್ಲೆಗಳಿಂದ ಬರುವ ಮಹಿಳೆಯರಿಗೆ ಮಧ್ಯಾಹ್ನದ ಊಟೋಪಚಾರ, ನೀರು ಸೇರಿದಂತೆ ಇನ್ನಿತರ ಮೂಲ ಸೌಲಭ್ಯದ ಕಡೆ ಗಮನ ಹರಿಸಬೇಕು ಎಂದು ಶಾಸಕರು ಹಾಗೂ ಮುಖಂಡರಲ್ಲಿ ಮನವಿ ಮಾಡಿದರು.
ವಯಸ್ಸಾಗಿದೆ, ನನಗೆ ಎಂಪಿ ಟಿಕೆಟ್ ಕೊಡಲ್ಲ: ಸಂಸದ ಬಚ್ಚೇಗೌಡ
ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು, ಶಾಸಕರಾದ ತನ್ವೀರ್ ಸೇಠ್, ಸಿ. ಪುಟ್ಟರಂಗಶೆಟ್ಟಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಅನಿಲ್ ಚಿಕ್ಕಮಾದು, ದರ್ಶನ್ ಧ್ರುವ ನಾರಾಯಣ, ದರ್ಶನ್ ಪುಟ್ಟಣ್ಣಯ್ಯ, ಮಂಥರ್‌ಗೌಡ, ಎಚ್.ಎಂ. ಗಣೇಶ್ ಪ್ರಸಾದ್, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಸಿ. ನರೇಂದ್ರ ಮೊದಲಾದವರು ಇದ್ದರು.