ಮುಡಾ ತನಿಖೆ ಬಳಿಕ ಸಿದ್ದರಾಮಯ್ಯ ದೋಷಮುಕ್ತರಾದರೆ ಅವರ ಪಾದ ತೊಳೆವೆ: ಶಾಸಕ ಚನ್ನಬಸಪ್ಪ

By Kannadaprabha NewsFirst Published Aug 21, 2024, 2:03 PM IST
Highlights

ಮುಡಾ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ನೈತಿಕ ಹೊಣೆಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಆಗ್ರಹಿಸಿದರು. 
 

ಶಿವಮೊಗ್ಗ (ಆ.21): ಮುಡಾ ಹಗರಣದಲ್ಲಿ ಆರೋಪಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಅವರು ನೈತಿಕ ಹೊಣೆಹೊತ್ತು ಕೂಡಲೇ ರಾಜೀನಾಮೆ ನೀಡಬೇಕು ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನಮಗೆ ಗೌರವವಿದೆ. ಅವರು ತಪ್ಪೇ ಮಾಡಿಲ್ಲ ಎನ್ನುವುದಾದರೆ ತನಿಖೆ ಎದುರಿಸಲು ಏಕೆ ತಯಾರಿಲ್ಲ. ತನಿಖೆ ಎದುರಿಸಲಿ ಒಂದು ಪಕ್ಷ ಅವರು ತನಿಖೆ ಎದುರಿಸಿ ತಪ್ಪಿತಸ್ಥರಲ್ಲ ಎಂದು ತಿಳಿದುಬಂದರೆ ನಾನು ಅವರ ಪಾದ ತೊಳೆಯುತ್ತೇನೆ ಎಂದರು.

ಮೂಡ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲು ಹೊರಟಿದೆ. ರಾಜಪಾಲರಿಗೆ ಅಪಮಾನ ಮಾಡುವ ರೀತಿ ಕಾಂಗ್ರೆಸ್‌ನವರು ಪ್ರತಿಭಟನೆ ಮಾಡುತ್ತಿದ್ದಾರೆ. ಸಂವಿಧಾನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ದೇಶಕ್ಕೆ ಅಪಮಾನವಾಗುವ ರೀತಿಯಲ್ಲಿ ಮಾತ ನಾಡುತ್ತಿದ್ದಾರೆ. ಅದರಲ್ಲೂ ಪ್ರತಿಭಟನೆಯ ಹೆಸರಿನಲ್ಲಿ ರಾಜ್ಯಪಾಲರಿಗೆ ಅಗೌರವವನ್ನು, ಅಪಮಾನವನ್ನು ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು. ರಾಜ್ಯಪಾಲರಿಗೆ ಅವಮಾನ ಮಾಡಿದರೆ ಅದು ಸಂವಿಧಾನಕ್ಕೆ ಅವಮಾನ ಮಾಡಿದಂತಾಗುತ್ತದೆ. ಪ್ರತಿಭಟನೆ ಎಲ್ಲರ ಹಕ್ಕು ಆದರೆ, ಈ ಪ್ರತಿಭಟನೆ ಒಬ್ಬರನ್ನು ಟೀಕಿಸಲು ಆಗಬಾರದು.

Latest Videos

ಇದು ಕೊಲೆ ಆರೋಪಿ ದರ್ಶನ್ ಕೈ ಕಡಗದ ರಹಸ್ಯ: ನಾಲ್ಕು ದಶಕದಿಂದ ಕೈಯಿಂದ ಕಳಚಿರಲಿಲ್ಲ ಈ ಕಡಗ!

ಸಚಿವ ಕೃಷ್ಣಬೈರೇಗೌಡ ಅಂತವರನ್ನು ಕೂಡ ರಾಜ್ಯಪಾಲರ ಬಗ್ಗೆ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ. ಅದರಲ್ಲೂ ಐವನ್ ಡಿಸೋಜಾ ಎಂಬಾತ ಮೀತಿಮೀರಿ ಮಾತನಾಡುತ್ತಾನೆ. ಈತನನ್ನು ಆತನನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯೋ ಇಲ್ಲವೋ ಎಂಬಂತಾಗಿದೆ. ರಾಜ್ಯಪಾಲರ ಭಾವಚಿತ್ರವನ್ನು ಸುಟ್ಟುಹಾಕುವುದು ಹೇಯ ಕೃತ್ಯವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಹಿಂದುಳಿದ ವರ್ಗಗಳ ನಾಯಕ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದುಳಿದ ವರ್ಗದವರಿಗೆ ಏನೆಲ್ಲ ಮೋಸ ಮಾಡಿದೆ ಎಂದು ರಾಜ್ಯದ ಜನತೆಗೆ ತಿಳಿದಿದೆ ಎಂದು ಹರಿಹಾಯ್ದರು.

ಹಿಂದುಳಿದ ವರ್ಗಗಳ 1093 ಸಮುದಾಯ ಭವನಗಳಿಗೆ ಬಿಜೆಪಿ ಸರ್ಕಾರ ನೀಡಿದ್ದ ಹಣವನ್ನು ವಾಪಾಸ್ಸು ತೆಗೆದುಕೊಂಡು ಹೊಸದಾಗಿಯೂ ನೀಡದೇ ರದ್ದು ಮಾಡಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲಿಯೇ ಸುಮಾರು 99 ಸಮುದಾಯಗಳಿಗೆ ಹಣ ನೀಡಬೇಕಿತ್ತು ಒಟ್ಟಾರೆ 300 ಕೋಟಿ ರು.ಗಳನ್ನು ಕಾಂಗ್ರೆಸ್ ಸರ್ಕಾರ ವಾಪಾಸ್ಸು ತೆಗೆದುಕೊಂಡು ಹಿಂದುಳಿದ ವರ್ಗಗಳಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು. ಹೀಗೆ ಹಣವನ್ನು ವಾಪಾಸ್ಸು ತೆಗೆದುಕೊಂಡಿರುವುದನ್ನು ನೋಡಿದರೆ ಸರ್ಕಾರ ದೀವಾಳಿಯಾಗಿದೆ ಎಂದು ಅರ್ಥ. ಹೊಸ ಯೋಜನೆಗಳಿಗೆ ಹಣವನ್ನು ಬಿಡುಗಡೆ ಮಾಡಿಲ್ಲ.

ಧಾರವಾಡದ ಅಂಬೋಳ್ಳಿ ಗ್ರಾಮದಲ್ಲಿ ರಸ್ತೆಯಿಲ್ಲದೇ ಶಾಲಾ ಮಕ್ಕಳ ಪರದಾಟ!

ಹಿಂದುಳಿದ ವರ್ಗಗಳ ಎಲ್ಲಾ ನಿಗಮಗಳಿಗೂ ಹಣ ಬಿಡುಗಡೆ ಮಾಡಿಲ್ಲ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಇಲ್ಲ, ವಾಲ್ಮೀಕಿ ಹಗರಣ ಎಲ್ಲರಿಗೂ ಗೊತ್ತಿದೆ, ಪರಿಶಿಷ್ಟರಿಗೆ ಮೀಸಲಿಟ್ಟ ರಾಜ್ಯದ ಹಣವನ್ನು ತೆಲಂಗಾಣ ರಾಜ್ಯದ ಚುನಾವಣೆಗೆ ಬಳಸುತ್ತಾರೆ ಎಂದರೆ, ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿಕಾರಿದರು. ಈ ಎಲ್ಲಾ ವಿಷಯಗಳನ್ನು ಮುಂದಿಟ್ಟುಕೊಂಡು ಬಿಜೆಪಿಯಿಂದ ರಾಜ್ಯಾದಾದ್ಯಂತ ಜನಾಂದೋಲನವನ್ನು ಆರಂಭಿಸುತ್ತೇವೆ. ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ಕೊಡುವುದು ಸೂಕ್ತ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ನಾಗರಾಜ್, ಜಗದೀಶ್, ಶ್ರೀನಾಗ್, ಮಂಜುನಾಥ್ ನವಿಲೆ ಉಪಸ್ಥಿತರಿದ್ದರು.

click me!