ಜೆಡಿಎಸ್‌ನಿಂದ ಇಬ್ಬರೇ ಗೆದ್ದಿದ್ದು ಆದ್ರೂ ರಾಷ್ಟ್ರದಲ್ಲಿ ಮಂತ್ರಿ: ಎಚ್‌ಡಿಕೆ ವಿರುದ್ಧ ಚೆಲುವರಾಯಸ್ವಾಮಿ ವಾಗ್ದಾಳಿ

By Girish GoudarFirst Published Oct 5, 2024, 8:48 PM IST
Highlights

ನಾನು ಮಧ್ಯಾಹ್ನ ತಾನೇ ನಿರ್ಧಾರ ಮಾಡಿದೆ. ಈ ಕುಮಾರಸ್ವಾಮಿ ಹೇಳಿಕೆಗೆ ಮತ್ತೆ ಹೇಳಿಕೆ ಕೊಡಬಾರದು ಅಂತ. ಏನಾದರೂ ಸತ್ವ ಇದ್ದರೆ ಅದಕ್ಕೆ ಪ್ರತಿಕ್ರಿಯಿಸುವುದು ಒಳ್ಳೆಯದು, ಅದರಲ್ಲಿ ಸತ್ಯನೇ ಇಲ್ಲದಿದ್ದಾಗ ನಾವು ಅವರ ತರಹನೇ ಆಗಿಬಿಡ್ತಿವಿ: ಕೃಷಿ ಸಚಿವ ಚೆಲುವರಾಯಸ್ವಾಮಿ 

ಹಾಸನ(ಅ.05):  ಕಳೆದ ಒಂದು ವಾರದಿಂದ ಹಲವು ಜಿಲ್ಲೆಗಳಲ್ಲಿ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿದ್ದವು. ಇದೀಗ ಮಳೆಯಾಗುತ್ತಿರುವುದು ಸಂತೋಷದ ವಿಷಯವಾಗಿದೆ. ಬೆಳೆ ಕೈ ಸೇರಲ್ಲ ಎನ್ನುವ ಪರಿಸ್ಥಿತಿ ಇತ್ತು. ಮುಂದಿನ ಒಂದು ವಾರ ಮಳೆಯಾಗುವ ಸಾಧ್ಯತೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. 

ಇಂದು(ಶನಿವಾರ) ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ ಅವರು, ವಿಶ್ವವಿಖ್ಯಾತ ದಸರಾ ನಡೆಯುತ್ತಿದೆ. ಎಂತಹ ಸನ್ನಿವೇಶ ಇದ್ದರೂ ದಸರಾ ಸಂದರ್ಭದಲ್ಲಿ ಮಳೆಯಾಗುತ್ತೆ. ಇಷ್ಟು ವಿಜೃಂಭಣೆಯಿಂದಎಲ್ಲೂ ಈ ರೀತಿಯ ದಸರಾ ಆಗಲ್ಲ. ಚಾಮುಂಡೇಶ್ವರಿಗೆ ಎಲ್ಲರೂ ಕೈ ಮುಗಿಯಬೇಕಾಗುತ್ತದೆ ಎಂದು ತಿಳಿಸಿದ್ದಾರೆ. 

Latest Videos

ಕುಮಾರಸ್ವಾಮಿ ರಕ್ತದ ಕಣ ಕಣದಲ್ಲೂ ದ್ವೇಷ ತುಂಬಿದೆ: ಸಚಿವ ಚಲುವರಾಯಸ್ವಾಮಿ ಕಿಡಿ

ಭಂಡ ಸರ್ಕಾರ ಎಂಬ ಕೇಂದ್ರ ಸಚಿವ ಎಚ್.ಡಿ‌.ಕುಮಾರಸ್ವಾಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಸಚಿವರು, ನಾನು ಮಧ್ಯಾಹ್ನ ತಾನೇ ನಿರ್ಧಾರ ಮಾಡಿದೆ. ಈ ಕುಮಾರಸ್ವಾಮಿ ಹೇಳಿಕೆಗೆ ಮತ್ತೆ ಹೇಳಿಕೆ ಕೊಡಬಾರದು ಅಂತ. ಏನಾದರೂ ಸತ್ವ ಇದ್ದರೆ ಅದಕ್ಕೆ ಪ್ರತಿಕ್ರಿಯಿಸುವುದು ಒಳ್ಳೆಯದು, ಅದರಲ್ಲಿ ಸತ್ಯನೇ ಇಲ್ಲದಿದ್ದಾಗ ನಾವು ಅವರ ತರಹನೇ ಆಗಿಬಿಡ್ತಿವಿ. ಆ ಕಡೆ, ಈ ಕಡೆ ಯಲ್ಲಾ ಜನ ನಿಂತಿರುತ್ತಾರಲ್ಲಾ ಈ ಚೆಲುವರಾಯಸ್ವಾಮಿನೂ ಕುಮಾರಸ್ವಾಮಿ ತರಹ ಆಗೋದ್ನಲ್ಲಾ. ಅವರಿಗೆ ಇವನಿಗೂ ಏನು ವ್ಯತ್ಯಾಸ. ಕುಮಾರಸ್ವಾಮಿನು ಬಾಯಿಗೆ ಬಂದಂಗೆ ಮಾತನಾಡುತ್ತಾರೆ, ಇವರು ಬಾಯಿಗೆ ಬಂದಂಗೆ ಮಾತನಾಡುತ್ತಾರಲ್ಲಾ ಅಂತಾರೆ. ಅದಕ್ಕೆ ಇದ್ದಕ್ಕಿದ್ದಂತೆ ಮಧ್ಯಾಹ್ನ ತೀರ್ಮಾನ ಮಾಡ್ದೆ. ಇವರ ಆರೋಪಕ್ಕೆ ಉತ್ತರಿಸಬಾರದು ಅಂತ ತಿಳಿಸಿದ್ದಾರೆ. 

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿ, ಮಂತ್ರಿ ಆಗೋದು ಅಪರೂಪ. ಯಾವುದೋ ಪೂರ್ವಜನ್ಮದ ಪುಣ್ಯದಿಂದ ಆಗಿದ್ದೇವೆ. ಎರಡು ಜನ ಗೆದ್ದು ಮಂತ್ರಿಯಾಗಿದ್ದಾರೆ. ಅವರ ಮುಂದೆ ಒಂದು ಸೆಕೆಂಡ್ ಪುರುಸೊತ್ತು ಇಲ್ದಂಗೆ ಮಾಡುವ ಕೆಲಸ ಇರುತ್ತೆ. ಈಗ ರಾಷ್ಟ್ರದಲ್ಲಿ ಮಂತ್ರಿಯಾಗಿದ್ದಾರೆ. ಶುಕ್ರವಾರ ಆಗುತ್ತಿದ್ದಂತೆ ಶನಿವಾರ, ಭಾನುವಾರ ಇಲ್ಲಿಗೆ ಬಂದು ಅವರನ್ನ, ಇವರನ್ನು ಬೈಯ್ಯೋದು. ಅದಕ್ಕೇನು ಅರ್ಥನೇ ಇರಲ್ಲ. ಸಿದ್ದರಾಮಯ್ಯ ಅವರು ಆರ್ಡಿನರಿ ಲೀಡರ್ ಅಲ್ಲ. ಪರಿಸ್ಥಿತಿಯಲ್ಲಿ ಸಣ್ಣಪುಟ್ಟ ವ್ಯತ್ಯಾಸ, ಯಾರೋ ನಿರ್ಧಾರ ಮಾಡಿದ್ರೆ ಅದಕ್ಕೆ ಸಿದ್ದರಾಮಯ್ಯನವರೇ ಹೊಣೆ ಎನ್ನುವುದು ಬಹಳ ಅಪರಾಧ. ಕುಮಾರಸ್ವಾಮಿ ಹದಿನಾಲ್ಕು ತಿಂಗಳು ಮುಖ್ಯಮಂತ್ರಿ ಆಗಿದ್ರಲಾ ಏನು ಮಾಡಿದ್ರು, ಅದನ್ನು ತಿರುಗಿ ನೋಡಿದ್ರೆ ಸಾಕು. ಯಾವ ರೀತಿ ನಡೆದುಕೊಂಡರು ಏನೇನು ಕಾರ್ಯಕ್ರಮ ಕೊಟ್ಟರು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಸಚಿವ ಚೆಲುವರಾಯಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. 

ನಾವು ಎಲ್ಲಿ ಎಡವಿದ್ದೇವೆ ಹೇಳಿ

ರಾಜ್ಯದಲ್ಲಿ ನಮ್ಮ ಸರ್ಕಾರ ಬಂದು ಹದಿನಾಲ್ಕು ತಿಂಗಳು ಆಗಿದೆ. ನಾವು ಎಲ್ಲಿ ಎಡವಿದ್ದೇವೆ ಹೇಳಿ, ಯಾವ ವಿಚಾರದಲ್ಲಿ ರೈತರಿಗೆ ಬೆನ್ನು ತೋರಿಸಿದ್ದೇವೆ. ಸರ್ಕಾರಿ ನೌಕರರಿಗೆ ಏಳನೇ ವೇತನ ನೀಡಿದ್ದೇವೆ. ಕೆಲವರನ್ನು ನೆಗ್ಲೆಟ್ ಮಾಡುವುದೇ ಅನಿವಾರ್ಯ. ನಮ್ಮ ಜೊತೆಯಲ್ಲಿ ಇರುವವರು ನಾವು, ತಪ್ಪು ಮಾಡಿದ್ರು ಕ್ಲಾಪ್ಸ್ ಹೊಡಿತಾರೆ, ಒಳ್ಳೆಯದು ಹೇಳಿದ್ರು ಕ್ಲಾಪ್ಸ್ ಹೊಡಿತಾರೆ ಅದು ಅನಿವಾರ್ಯ. ಹಾಗಾಗಿ ಕುಮಾರಸ್ವಾಮಿಗೆ ಖುಷಿ ಆಗಿದೆ. ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಮೂರು ಜನ ಮುಖ್ಯಮಂತ್ರಿ ಆಗಿದ್ರು. ಅವರು ಕೊಟ್ಟ ಕಾರ್ಯಕ್ರಮದಿಂದ ರೊಚ್ಚಿಗೆದ್ದು ಜನ ಅವರನ್ನು ತಿರಸ್ಕರಿಸಿ 136 ಜನ ಕೊಟ್ಟಿದ್ದಾರೆ. ಯಾವಾಗಲೋ ಒಂದು ಲಾಟರಿ ಹೊಡ್ದಂಗೆ ಜನ ತಪ್ಪು ಮಾಡ್ದವರಿಗೂ ಅಧಿಕಾರ ಕೊಟ್ಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ. 

30 ವರ್ಷದಲ್ಲಿ 115 ಶಾಸಕರು ಒಂದೇ ಪಕ್ಷದಿಂದ ಆಯ್ಕೆಯಾಗಿಲ್ಲ. 136 ಜನ ಗೆದ್ದಿರುವ ಸರ್ಕಾರನಾ ತೆಗೆಯಬೇಕು ಅಂತ ದಿವಸ ಒದ್ದಾಡುತ್ತಿದ್ದಾರೆ. ಎಲ್ಲಾ ಪ್ರಯತ್ನ ಮಾಡಿದ್ರು, ಶಾಸಕರ ಹತ್ತಿರ ಹೋದರು, ಇನ್ನೊಬ್ಬರ ಹತ್ತಿರ ಹೋದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಜಿ ಸಿಎಂ, ಬಿಜೆಪಿ-ಜೆಡಿಎಸ್ ಸೇರಿ ಈ ಸರ್ಕಾರ ತೆಗೆತಿವಿ ಅಂತಾರಲ್ಲ ಅದೇ ಅಪರಾಧ. ಅದು ಸಂವಿಧಾನ, ಪ್ರಜಾಪ್ರಭುತ್ವ ವಿರುದ್ಧವಾದ ನಿಲುವು. ಅವರ ಬಾಯಲ್ಲಿ ಆ ರೀತಿ ಬಂದರೆ ಅವರಿಗೆ ಶಿಕ್ಷೆ ಆಗಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಚನೆಯಾಗಿರುವ ಸರ್ಕಾರ ತೆಗೆಯಲು ಇವರಿಗೆ ಏನು ಹಕ್ಕಿದೆ. ಈ ತರ ಮಾತಾಡ್ತಾರೆ, ಅವರಿಗೆಲ್ಲಾ ಏಕೆ ಪ್ರತಿಕ್ರಿಯೆ ಕೊಡಬೇಕು. ಎಲ್ಲಾ ಮಾಧ್ಯಮದವರು ಇಂತಹ ಹೇಳಿಕೆಗಳಿಗೆ ತೆರೆ ಎಳೆಯಿರಿ ಎಂದು ತಿಳಿಸಿದ್ದಾರೆ. 

ಜಾತಿಗಣತಿ ಜಾರಿ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಕೃಷಿ ಸಚಿವ ಚೆಲುವರಾಯಸ್ವಾಮಿ, ಕೆಲವು ಸತ್ಯನಾ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾತನಾಡುವುದು ಕಷ್ಟ ಆಗುತ್ತೆ. ನಾನು ಮಂತ್ರಿ ಆಗಿದ್ದೀನಿ, ಅಸೆಂಬ್ಲಿಯಲ್ಲಿ ನಿಂತು ಸತ್ಯ ಹೇಳಿದ್ರೆ ಮಾಧ್ಯಮದಲ್ಲಿ ಏನೇನು ಹಾಕ್ತಿರಾ. ಕೆಲವು ಟೈಂ ಸತ್ಯ ಹೇಳಲು ಆಗಲ್ಲ. ಕೆಲವು ಟೈಂ ಪರಿಸ್ಥಿತಿ ನೋಡಿ ಹೇಳಬೇಕು. ಜಾತಿಗಣತಿಯಿಂದ ಆಗಬಾರದ್ದು ಏನು ಆಗಲ್ಲ. ನೂರಕ್ಕೆ ನೂರು ಏನು ಆಗಲ್ಲ. ನನಗೆ ಇರುವ ಮಾಹಿತಿ ಪ್ರಕಾರ ಒಕ್ಕಲಿಗರಿಗೆ, ಲಿಂಗಾಯತರಿಗೆ ಯಾರಿಗೂ ಅನ್ಯಾಯ ಆಗಲ್ಲ. ನಮ್ಮ ಪಕ್ಷದಲ್ಲೂ ಪ್ರಣಾಳಿಕೆಯಲ್ಲಿ ತೀರ್ಮಾನ ತಗೊಂಡಿದ್ದಾರೆ. ಚುನಾವಣೆಗಿಂತ ಮುಂಚೆ ಆಗುತ್ತೆ ಅಂತ ಆತಂಕ ಪಡುತ್ತಿದ್ದು. ಈಗ ಮುಖ್ಯಮಂತ್ರಿಗೆ ವರದಿ ಕೊಟ್ಟಿದ್ದಾರೆ. ಕ್ಯಾಬಿನೇಟ್‌ನಲ್ಲಿ ಸಲ್ಲಿಕೆ ಆಗುತ್ತೆ, ಅಲ್ಲಿ ಚರ್ಚೆ ಆಗುತ್ತೆ. ಒಕ್ಕಲಿಗರು, ಲಿಂಗಾಯತರು ವರದಿ ಜಾರಿ ಮಾಡುವುದು ಬೇಡ ಅಂತ ಅರ್ಜಿ ಕೊಟ್ಟಿದ್ದಾರೆ. ಬಹುತೇಕ ಉಪಸಮಿತಿ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ಬರಬಹುದು. ಉಪಸಮಿತಿ ಮಾಡದೇ ಕ್ಯಾಬಿನೆಟ್‌ನಲ್ಲಿ ನೇರವಾಗಿ ಇಂಪ್ಲಿಮೆಂಟ್ ಮಾಡುವಂತಹ ಪರಿಸ್ಥಿತಿ ಬರಲಾರದು. ಸಿದ್ದರಾಮಯ್ಯ ಅವರು ಸಮರ್ಥರಿದ್ದಾರೆ, ಅನುಭವಸ್ತರಿದ್ದಾರೆ. ಹಳ್ಳಿಯಿಂದ ಬಂದಿರುವವರು ಅವರು ತೀರ್ಮಾನ ತೆಗೆದುಕೊಳ್ತಾರೆ. ಉಪಸಮಿತಿ ಮಾಡಿದ್ರೆ, ಒಂದಿಷ್ಟು ಚರ್ಚೆ ಮಾಡ್ತಾರೆ. ಸೂಕ್ತವಾದ ನಿರ್ಧಾರವನ್ನು ನಮ್ಮ ಪಕ್ಷ, ಸರ್ಕಾರ ತೆಗೆದುಕೊಳ್ಳುತ್ತೆ. ಯಾವ ಸಮಾಜಕ್ಕೂ ಅನ್ಯಾಯ ಆಗುವ ಅವಕಾಶ ಆಗಲ್ಲ ಎಂದು ತಿಳಿಸಿದ್ದಾರೆ. 

ಆದಿಚುಂಚನಗಿರಿ ಶ್ರೀಗಳ ಫೋನ್‌ ಟ್ಯಾಪ್‌: ಮತ್ತೆ ಗದ್ದಲ ಶುರು..!

ನಾನು, ಕೃಷ್ಣಭೈರೇಗೌಡ ಕೇಂದ್ರ ಸರ್ಕಾರಕ್ಕೆ ಹತ್ತು ಬಾರಿ ಹೋಗಿದ್ದೇವೆ ಟೈಂ ಕೊಡಲಿಲ್ಲ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಹೋದಾಗ ಅಮಿತ್ ಶಾ ಟೈಂ ಕೊಟ್ಟರೂ ಒಂದು ಮೀಟಿಂಗ್ ಮಾಡಲಿಲ್ಲ. ರಾಜ್ಯದಲ್ಲಿ ಅತಿವೃಷ್ಠಿಯಿಂದ ಜನಕ್ಕೆ ತೊಂದರೆಯಾದಾಗ ಎನ್‌‌ಡಿ‌ಆರ್‌ಎಫ್‌ನಿಂದ ಕೊಡಬೇಕಾದ ಹಣದ ಬಗ್ಗೆ ಒಂದು ಮೀಟಿಂಗ್ ಮಾಡಲಿಲ್ಲ. ಬರ ಬಂದಾಗ ಪ್ರಪೋಸಲ್ ಕೊಟ್ಟು ಅಮಿತ್ ಶಾ ಒಂದು ಮೀಟಿಂಗ್ ಮಾಡಲಿಲ್ಲ. ಕರ್ನಾಟಕ ಅವರನ್ನು ತಿರಸ್ಕರಿಸಬೇಕಿತ್ತು, ಧಿಕ್ಕರಿಸಬೇಕಿತ್ತು. ಕೊನೆಗೆ ಸುಪ್ರೀಂಕೋರ್ಟ್ ಹೋಗುವ ಪರಿಸ್ಥಿತಿ ಬಂತು. 3454 ಕೋಟಿ ದುಡ್ಡು ತಂದೆವು ಅದನ್ನು ಎನ್‌ಡಿ‌ಆರ್‌ಎಫ್ ಗೈಡ್‌ಲೈನ್ಸ್ ಪ್ರಕಾರ ಕೊಟ್ಟೆವು. ಇದು ಒಕ್ಕೂಟದ ವ್ಯವಸ್ಥೆ. ನಮ್ಮ ಸರ್ಕಾರ ಪೆನ್ಷನ್, ಕೃಷಿ ಇಲಾಖೆ ಕಾರ್ಯಕ್ರಮ ಕೊಟ್ಟಿದ್ದೇವೆ. ಅಂತಹ ಕಾರ್ಯಕ್ರಮವನ್ನು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕೊಟ್ಟಿದ್ದಾರೆ. ಜನ ಅರ್ಥ ಮಾಡ್ಕತರೋ ಇಲ್ಲವೋ ಗೊತ್ತಿಲ್ಲ. ನಮ್ಮ ಬದ್ದತೆ ಜನರು, ರೈತರ ಪರವಾಗಿ ಇದ್ದೇವೆ. ಜನರು ಅರ್ಥ ಮಾಡ್ಕತರೋ ಬಿಡ್ತಾರೋ ನಾವು ಪ್ರಶ್ನೆ ಮಾಡೋರು ನಾವಲ್ಲ. ನಮಗೆ ಜನನೇ ಯಜಮಾನರು ಎಂದು ಹೇಳಿದ್ದಾರೆ. 

ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಬಿಜೆಪಿಯವರು, ಜನತಾದಳದವರು ತೆವಲಿಗೆ ಮಾತಾಡ್ತಾರೆ. ತೆವಲಿಗೆ ಮಾತಾಡ್ತಾರೆ ಬಿಟ್ಟು ಬಿಡಿ ಅವರನ್ನ ಎಂದಷ್ಟೇ ಹೇಳಿದ್ದಾರೆ. 

click me!