ಅರವಿಂದ್ ಕೇಜ್ರಿವಾಲ್ ನಡೆ ಮಾಸ್ಟರ್‌ ಸ್ಟ್ರೋಕಾ ಅಥವಾ ಭಾರಿ ರಿಸ್ಕಾ? : ಬಿಜೆಪಿ ಹೇಳಿದ್ದೇನು?

By Anusha KbFirst Published Sep 15, 2024, 3:42 PM IST
Highlights

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಬಕಾರಿ ಮದ್ಯ ಹಗರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಎರಡೇ ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದು, ಇದು ದೆಹಲಿ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಕೇಜ್ರಿವಾಲ್ ರಾಜೀನಾಮೆ ಹಿಂದೆ ಇರುವ ಹಲವು ರಾಜಕೀಯ ಲೆಕ್ಕಾಚಾರದ ಬಗ್ಗೆ ಚರ್ಚೆಯಾಗುತ್ತಿದೆ.

ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅಬಕಾರಿ ಮದ್ಯ ಹಗರಣದಲ್ಲಿ ಜೈಲಿನಿಂದ ಬಿಡುಗಡೆಯಾದ ಎರಡೇ ದಿನದಲ್ಲಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದು, ಇದು ದೆಹಲಿ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಈ ಮೂಲಕ ಹರ್ಯಾಣ ವಿಧಾನಸಭೆಗೆ ಮೊದಲು ಅರವಿಂದ್ ಕೇಜ್ರಿವಾಲ್  ದೊಡ್ಡ ರಿಸ್ಕ್‌ ತೆಗೆದುಕೊಂಡಿದ್ದಾರೋ ಅಥವಾ ತಮ್ಮ ವಿರೋಧಿಗಳಿಗೆ ಮಾಸ್ಟರ್ ಸ್ಟ್ರೋಕ್ ನೀಡಲಿದ್ದಾರೋ ಎಂಬ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.  ಆರು ತಿಂಗಳ ನಂತರ ಜೈಲಿನಿಂದ ಬಿಡುಗಡೆಯಾದ ನಂತರ ಇಂದು ಮೊದಲ ಬಾರಿಗೆ ಎಎಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಇನ್ನೆರಡು ದಿನಗಳಲ್ಲಿ ರಾಜೀನಾಮೆ ನೀಡುವುದಾಗಿ ಘೋಷಣೆ ಮಾಡಿದ್ದಾರೆ. 

ಮುಂದೇನು?

Latest Videos

ಕೇಜ್ರಿವಾಲ್‌ ಹೇಳಿದ ಪ್ರಕಾರ ಇನ್ನೆರಡು ದಿನದಲ್ಲಿ ಎಎಪಿಯ 60 ಶಾಸಕರ ಸಭೆ ಕರೆದು ಹೊಸ ನಾಯಕನನ್ನು ಆಯ್ಕೆ ಮಾಡಲಾಗುವುದು. ಇದಾದ ನಂತರ ಸಿಎಂಗೆ ಹುದ್ದೆಗೆ ಕೇಜ್ರಿ ರಾಜೀನಾಮೆ ನೀಡಲಿದ್ದಾರೆ. ಅಲ್ಲದೇ ನಿಗದಿಗೂ ಮೊದಲು ದೆಹಲಿಗೆ ಚುನಾವಣೆ ನಡೆಸುವಂತೆ ಅವರು ಕರೆ ನೀಡಿದ್ದಾರೆ. ದೆಹಲಿಯಲ್ಲಿ ಮುಂದಿನ ಫೆಬ್ರವರಿಯಲ್ಲಿ ವಿಧಾನಸಭೆಗೆ ಚುನಾವಣೆ ನಿಗದಿಯಾಗಿದೆ. ಆದರೆ ಮಹಾರಾಷ್ಟ್ರ ಚುನಾವಣೆಯ ನಡೆಯುವ ನವಂಬರ್‌ ಸಮಯದಲ್ಲೇ ದೆಹಲಿಯಲ್ಲಿ ಚುನಾವಣೆ ನಡೆಸುವಂತೆ ಕೇಜ್ರಿವಾಲ್ ಮನವಿ ಮಾಡಿದ್ದಾರೆ. ಅಲ್ಲದೇ ಮುಂದಿನ ಚುನಾವಣೆ ನಡೆಯುವವರೆಗೆ ಯಾರಾದರೊಬ್ಬರು ಸಿಎಂ ಆಗಲಿದ್ದಾರೆ ಇದಕ್ಕಾಗಿ ಶಾಸಕರ ಸಭೆ ಕರೆದು ನಿರ್ಧಾರ ಮಾಡಲಾಗುವುದು.

ಇದನ್ನೂ ಓದಿ:Breaking: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ರಾಜೀನಾಮೆ!

ಜನರೇ ತೀರ್ಪು ನೀಡುವವರೆಗೂ ಸಿಎಂ ಕುರ್ಚಿ ಏರಲಾರೆ!

ನಾನು ಪ್ರತಿ ಬೀದಿಯ ಪ್ರತಿಯೊಬ್ಬರ ಮನೆ ಬಾಗಿಲಿಗೆ ಹೋಗಿ ಅವರ ಬೆಂಬಲ ಕೇಳುವೆ. ಜನರೇ ತೀರ್ಪು ನೀಡುವವರೆಗೆ ನಾನು ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಇದು  ಮುಂದಿರುವ ದೆಹಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಎಎಪಿ ಪಕ್ಷವೂ ಜನರನ್ನು ತಲುಪುವುದಕ್ಕೆ ದೊಡ್ಡ ಮಟ್ಟದ ಚಳುವಳಿಯನ್ನೇ ಹಮ್ಮಿಕೊಂಡಿದೆ ಎಂಬುದನ್ನು ಸೂಚಿಸುತ್ತಿದೆ. ಕೇಜ್ರಿವಾಲ್ ಜೊತೆಗೆ ಇತ್ತ ಮತ್ತೊಬ್ಬ ಎಎಪಿ ನಾಯಕ ಮನೀಷ್ ಸಿಸೋದಿಯಾ ಕೂಡ ಅಕ್ರಮ ಮದ್ಯ ಹಗರಣದಲ್ಲಿ ಜಾಮೀನು ಪಡೆದು ಹೊರಗಿದ್ದಾರೆ. ಇವರು ಈ  ಜನರ ತಲುಪುವ ಎಎಪಿಯ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದೇ ಹೇಳಲಾಗುತ್ತಿದೆ. 

ಇದು ಮಾಸ್ಟರ್‌ ಸ್ಟ್ರೋಕಾ ಅಥವಾ ರಿಸ್ಕ್‌? 

ಕೇಜ್ರಿವಾಲ್ ಅವರ ಇಂದಿನ ಈ ಶಾಕಿಂಗ್ ನಿರ್ಧಾರವೂ ಎಎಪಿಗೆ ಚುನಾವಣೆಯಲ್ಲಿ ಭಾರಿ ಲಾಭ ಮಾಡಿಕೊಡಬಹುದು ಎಂಬ ಯೋಚನೆಯಲ್ಲಿ ಎಎಪಿ ನಾಯಕರಿದ್ದಾರೆ. ಅಲ್ಲದೇ ಈ ನಿರ್ಧಾರದ ಮೂಲಕ ತನಗೆ ಅಧಿಕಾರದ ಆಸೆ ಇಲ್ಲ ಎಂಬುದನ್ನು ಜನರಿಗೆ ತಿಳಿಸಲು ಕೇಜ್ರಿವಾಲ್ ಬಯಸಿದ್ದಾರೆ. ಹೀಗಾಗಿ ಜನರ ತೀರ್ಪಿನ ನಂತರವೇ ತಾನು ಮಹತ್ವದ ಹುದ್ದೆಯನ್ನು ಅಲಂಕರಿಸುವುದಾಗಿ ಅವರು ಹೇಳಿದ್ದಾರೆ. ಇದು ಹಲವು ರಾಜಕೀಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ. 

ಇದನ್ನೂ ಓದಿ: ಬಿಹಾರ ಚುನಾವಣೆಗೆ ಮೊದಲು ಕುಡುಕರಿಗೆ ಪ್ರಶಾಂತ್ ಕಿಶೋರ್ ಕಿಕ್: ಅಧಿಕಾರಕ್ಕೆ ಬಂದ 1 ಗಂಟೆಯಲ್ಲಿ ಮದ್ಯ ನಿಷೇಧ ವಾಪಸ್

ಕೇಜ್ರಿವಾಲ್‌ ಅಗ್ನಿಪರೀಕ್ಷೆಗೆ ಒಳಗಾಗಿ ಗೆದ್ದು ಬರಲಿದ್ದಾರೆ

ಇತ್ತ ಎಎಪಿಯ ಸಂಸದ ರಾಘವ್ ಚಡ್ಡಾ ಅವರು ಅರವಿಂದ್ ಕೇಜ್ರಿವಾಲ್ ಅವರ ನಿರ್ಧಾರವನ್ನು ಅಗ್ನಿ ಪರೀಕ್ಷೆ ಎಂದು ಬಣ್ಣಿಸಿದ್ದಾರೆ. ಅಲ್ಲದೇ ಜನ ಕೇಜ್ರಿವಾಲ್‌ಗೆ ಪ್ರಮಾಣಿಕತೆಯ ಸರ್ಟಿಫಿಕೇಟ್ ನೀಡಲಿದ್ದಾರೆ. ಇವತ್ತು ಅವರು ಅಗ್ನಿ ಪರೀಕ್ಷೆಗೆ ಒಳಗಾಗಲು ಮುಂದಾಗಿದ್ದಾರೆ. ದೆಹಲಿ ಜನ ಎಎಪಿಗೆ ವೋಟು ಹಾಕುವ ಮೂಲಕ ಅವರು ಪ್ರಾಮಾಣಿಕ ಎಂಬುದನ್ನು ಸಾಬೀತುಪಡಿಸಲಿದ್ದಾರೆ. ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಅಭಿನಯದ 'ದೀವಾರ್' ಸಿನಿಮಾದ ಕತೆಯಂತೆ ದೆಹಲಿ ಜನ 'ಮಿಸ್ಟರ್ ಕೇಜ್ರಿವಾಲ್ ಮುಗ್ಧ' ಎಂದು ತಮ್ಮ ಕೈಯರೇ ಬರೆಯುತ್ತಾರೆ ಎಂದು ಹೇಳಿದರು.

ಎರಡು ದಿನ ಏಕೆ ಇಂದೇ ರಾಜೀನಾಮೆ ನೀಡಿ
ಆದರೂ ಬಿಜೆಪಿ ಮಾತ್ರ ಕೇಜ್ರಿವಾಲ್ ಅವರ ಈ ನಿರ್ಧಾರವನ್ನು ನಾಟಕ ಎಂದು ಜರೆದಿದೆ. ಅಲ್ಲದೇ ದೆಹಲಿಯಲ್ಲಿ ಯಾವಾಗ ಚುನಾವಣೆಯಾದರು ನಾವು ಗೆಲ್ಲುತ್ತೇವೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ. ಅಂಗ್ಲ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಹರೀಶ್ ಖುರಾನಾ, 48 ಗಂಟೆಗಳೇಕೆ ಇಂದೇ ಕೇಜ್ರಿವಾಲ್ ರಾಜೀನಾಮೆ ನೀಡಲಿ ಎಂದಿದ್ದಾರೆ. ಅವರು ಸಚಿವಾಲಯಕ್ಕೆ ಹೋಗುವಂತಿಲ್ಲ, ದಾಖಲೆಗಳಿಗೆ ಸಹಿ ಮಾಡುವಂತಿಲ್ಲ ಎಂದಾದ ಮೇಲೆ ಅವರು ರಾಜೀನಾಮೆ ನೀಡದೇ ಉಳಿದರು  ಏನು ಅರ್ಥವಿದೆ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ಬಿಜೆಪಿ ಚುನಾವಣೆಗೆ ಸಿದ್ಧವಿದೆಯೇ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ನಾವು ರೆಡಿ, ಅದು ಇವತ್ತೇ ಆಗಲಿ ಅಥವಾ ನಾಳೆಯೇ ಆಗಲಿ 25 ವರ್ಷದ ನಂತರ ನಾವೇ ದೆಹಲಿಯಲ್ಲಿ ಅಧಿಕಾರಕ್ಕೆ ಬರಲಿದ್ದೇವೆ ಎಂದು ಹೇಳಿದ್ದಾರೆ.

click me!