ಮಂಡ್ಯ: ಸುಮಲತಾ ಬಿಜೆಪಿ ಸೇರ್ಪಡೆ ಸಾಧ್ಯತೆ ಅಧಿಕ

Published : Feb 20, 2023, 04:30 AM IST
ಮಂಡ್ಯ: ಸುಮಲತಾ ಬಿಜೆಪಿ ಸೇರ್ಪಡೆ ಸಾಧ್ಯತೆ ಅಧಿಕ

ಸಾರಾಂಶ

ಲೋಕಸಭಾ ಚುನಾವಣೆಗೆ ಇನ್ನೂ ಒಂದೂ ಕಾಲು ವರ್ಷ ಸಮಯವಿದ್ದರೂ ಈಗ ವಿಧಾನಸಭಾ ಚುನಾವಣೆ ಎದುರಾಗಿರುವುದರಿಂದ ಸುಮಲತಾ ಅಂಬರೀಷ್‌ ಅವರು ತಮ್ಮ ಮುಂದಿನ ರಾಜಕೀಯ ನಿರ್ಣಯ ಕೈಗೊಳ್ಳುವ ಅನಿವಾರ್ಯತೆ ಬಂದಿದೆ. ಮೇಲಾಗಿ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಇರಾದೆಯನ್ನೂ ಅವರು ಹೊಂದಿದ್ದಾರೆ.

ವಿಜಯ್‌ ಮಲಗಿಹಾಳ

ಬೆಂಗಳೂರು(ಫೆ.20):  ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆಯೇ ಪ್ರಮುಖ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ ಪೈಕಿ ಯಾವ ಪಕ್ಷಕ್ಕೆ ಸೇರ್ಪಡೆಯಾಗಬೇಕು ಜಿಜ್ಞಾಸೆಯಲ್ಲಿರುವ ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಸದಸ್ಯೆ ಸುಮಲತಾ ಅಂಬರೀಷ್‌ ಅವರು ಅಂತಿಮವಾಗಿ ಬಿಜೆಪಿಯತ್ತ ವಾಲುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಲೋಕಸಭಾ ಚುನಾವಣೆಗೆ ಇನ್ನೂ ಒಂದೂ ಕಾಲು ವರ್ಷ ಸಮಯವಿದ್ದರೂ ಈಗ ವಿಧಾನಸಭಾ ಚುನಾವಣೆ ಎದುರಾಗಿರುವುದರಿಂದ ಸುಮಲತಾ ಅಂಬರೀಷ್‌ ಅವರು ತಮ್ಮ ಮುಂದಿನ ರಾಜಕೀಯ ನಿರ್ಣಯ ಕೈಗೊಳ್ಳುವ ಅನಿವಾರ್ಯತೆ ಬಂದಿದೆ. ಮೇಲಾಗಿ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಇರಾದೆಯನ್ನೂ ಅವರು ಹೊಂದಿದ್ದಾರೆ.

ಈಗಾಗಲೇ ಬಿಜೆಪಿ ವರಿಷ್ಠರ ಜತೆ ಮಾತುಕತೆ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು, ಮುಂಬರುವ ಮಾಚ್‌ರ್‍ ಮೊದಲ ಅಥವಾ ಎರಡನೇ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಭೇಟಿ ನೀಡುವ ವೇಳೆ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಬಹುದು ಎಂಬ ಸುದ್ದಿ ಬಿಜೆಪಿ ಪಾಳೆಯದಿಂದಲೇ ಹೊರಬಿದ್ದಿದೆ. ಬಿಜೆಪಿ ಸೇರ್ಪಡೆಯಾದಲ್ಲಿ ಸುಮಲತಾ ಅವರು ಮದ್ದೂರು ಅಥವಾ ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.

ಸಂಸದೆ ಸುಮಲತಾ ಕಾಂಗ್ರೆಸ್‌ ಪಕ್ಷ ಸೇರಲು ಅಭ್ಯಂತರವಿಲ್ಲ: ಡಿ.ಕೆ.ಶಿವಕುಮಾರ್‌

ಜತೆಗೆ ಸುಮಲತಾ ಅವರು ಬಿಜೆಪಿ ಸೇರ್ಪಡೆಯಾಗುವುದರಿಂದ ಪಕ್ಷದ ಸಂಘಟನೆ ತುಸು ದುರ್ಬಲವಾಗಿರುವ ಹಳೆ ಮೈಸೂರು ಭಾಗದಲ್ಲಿ ಅನುಕೂಲವಾಗುತ್ತದೆ ಎಂಬ ಉದ್ದೇಶವೂ ಇದರ ಹಿಂದಿದೆ.
ಬೆಂಗಳೂರು-ಮೈಸೂರು ದಶಪಥ ಉದ್ಘಾಟನೆ ಸಲುವಾಗಿ ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಒಂದು ವೇಳೆ ಆ ಸಮಯದಲ್ಲಿ ಆಗದಿದ್ದರೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಸಮ್ಮುಖದಲ್ಲಿ ಸುಮಲತಾ ಅವರು ಬಿಜೆಪಿಗೆ ಪಾದಾರ್ಪಣೆ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಹಲವು ದಿನಗಳಿಂದ ಸುಮಲತಾ ಅಂಬರೀಷ್‌ ಅವರು ಯಾವುದಾದರೊಂದು ರಾಜಕೀಯ ಪಕ್ಷಕ್ಕೆ ಸೇರ್ಪಡೆಯಾಗುವ ಬಗ್ಗೆ ವದಂತಿಗಳು ಕೇಳಿ ಬರುತ್ತಲೇ ಇದ್ದವು. ಈ ಸಂಬಂಧ ಅವರು ತಮ್ಮ ಬೆಂಬಲಿಗರು ಹಾಗೂ ಮತದಾರರ ಅಭಿಪ್ರಾಯ ಕೇಳಿದ ಬಳಿಕ ನಿರ್ಧಾರ ಕೈಗೊಳ್ಳುವುದಾಗಿ ಹೇಳಿಕೆಯನ್ನೂ ನೀಡಿದ್ದರು. ಇದೇ ವೇಳೆ ಬಿಜೆಪಿಯ ರಾಜ್ಯ ನಾಯಕರು ಸುಮಲತಾ ಅವರನ್ನು ಸಂಪರ್ಕಿಸಿ ತಮ್ಮ ಪಕ್ಷಕ್ಕೆ ಆಗಮಿಸುವಂತೆ ಆಹ್ವಾನವನ್ನೂ ನೀಡಿದ್ದರು. ಬಳಿಕ ದೆಹಲಿ ಮಟ್ಟದಲ್ಲೂ ಬಿಜೆಪಿ ವರಿಷ್ಠರೊಂದಿಗೆ ಸುಮಲತಾ ಅವರ ಭೇಟಿ ನಡೆದಿದೆ.

ಸುಮಲತಾ ರಾಜ್ಯಕಾರಣ ಪ್ರವೇಶಕ್ಕೆ ವೇದಿಕೆ ಸಿದ್ಧ?

ಈ ನಡುವೆ ಸುಮಲತಾ ಅವರನ್ನು ಕಾಂಗ್ರೆಸ್‌ ಪಕ್ಷಕ್ಕೆ ಕರೆತರುವ ಪ್ರಯತ್ನ ಸಣ್ಣ ಮಟ್ಟದಲ್ಲಿ ನಡೆದರೂ ಅದು ಯಶಸ್ವಿಯಾದಂತೆ ಕಂಡು ಬರಲಿಲ್ಲ. ಸ್ಥಳೀಯ ಮಟ್ಟದ ರಾಜಕೀಯ ಲೆಕ್ಕಾಚಾರದ ಜತೆಗೆ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದ ದೃಷ್ಟಿಯಿಂದ ಕಾಂಗ್ರೆಸ್‌ಗಿಂತ ಬಿಜೆಪಿ ಸೇರ್ಪಡೆಯೇ ಉತ್ತಮವಾಗಬಹುದು ಎಂಬ ನಿಲುವಿಗೆ ಸುಮಲತಾ ಅವರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಷ್‌ ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ವೇಳೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಬೆಂಬಲ ಸೂಚಿಸಿತ್ತು. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಿರುದ್ಧ 1.25 ಲಕ್ಷ ಮತಗಳ ಅಂತರದಿಂದ ಸುಮಲತಾ ರೋಚಕ ಗೆಲುವು ಸಾಧಿಸಿದ್ದರು. ಫಲಿತಾಂಶ ಹೊರಬಿದ್ದ ಕೆಲದಿನಗಳ ಬಳಿಕವೇ ಸುಮಲತಾ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನ ನಡೆದಿತ್ತು. ಆ ವೇಳೆ ಸುಮಲತಾ ಒಪ್ಪಿರಲಿಲ್ಲ. ಇದೀಗ ವಿಧಾನಸಭಾ ಚುನಾವಣೆ ಸಮೀಪಿಸಿದ್ದರಿಂದ ಬಿಜೆಪಿ ಮೂಲಕ ಮತ್ತೊಂದು ಹಂತದ ರಾಜಕೀಯಕ್ಕೆ ಹೆಜ್ಜೆ ಇಡಲಿದ್ದಾರೆ ಎನ್ನಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ