ಕಾಂಗ್ರೆಸ್‌ನಿಂದ ‘ಕಿವಿ ಮೇಲೆ ಹೂವು’ ಅಭಿಯಾನ ಆರಂಭ

By Kannadaprabha News  |  First Published Feb 20, 2023, 4:00 AM IST

ಮೈಸೂರು ನಗರದ ಜೆ.ಕೆ. ಮೈದಾನದ ಗೋಡೆಗಳ ಮೇಲೆ ಬಿಜೆಪಿ ಸುಳ್ಳು ಭರವಸೆಗಳು ಸಾಕಪ್ಪ ಸಾಕು, ಕಿವಿ ಮೇಲೆ ಹೂವು ಪೋಸ್ಟರ್‌ಗಳನ್ನು ಅಂಟಿಸಿ ಬಿಜೆಪಿ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದ ಕಾಂಗ್ರೆಸ್ಸಿಗರು. 


ಮೈಸೂರು(ಫೆ.20): ‘ಭರವಸೆ, ಭರವಸೆ, ಬುರುಡೆ ಭರವಸೆ ಸಾಕು! ಕಿವಿ ಮೇಲೆ ಹೂವು’ ಅಭಿಯಾನವನ್ನು ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿಯವರು ಭಾನುವಾರ ಆರಂಭಿಸಿದರು. ನಗರದ ಜೆ.ಕೆ. ಮೈದಾನದ ಗೋಡೆಗಳ ಮೇಲೆ ಬಿಜೆಪಿ ಸುಳ್ಳು ಭರವಸೆಗಳು ಸಾಕಪ್ಪ ಸಾಕು, ಕಿವಿ ಮೇಲೆ ಹೂವು ಪೋಸ್ಟರ್‌ಗಳನ್ನು ಅಂಟಿಸಿ ಬಿಜೆಪಿ ಸರ್ಕಾರದ ವಿರುದ್ಧ ವಿನೂತನವಾಗಿ ಪ್ರತಿಭಟಿಸಿದರು. ಬಿಜೆಪಿ ಸುಳ್ಳು ಭರವಸೆಗಳು ಸಾಕಪ್ಪ ಸಾಕು, ಪ್ರಣಾಳಿಕೆಯ ಶೇ.90 ಭರವಸೆಗಳನ್ನು ಹಾಗೂ 2023-23 ಬಜೆಟ್‌ ನ ಶೇ.56 ರಷ್ಟು ಭರವಸೆಗಳನ್ನು ಈಡೇರಿಸಿಲ್ಲ ಎಂದು ಅವರು ಆರೋಪಿಸಿದರು.

ಈ ವೇಳೆ ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌. ಮೂರ್ತಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರ ಆಡಳಿತ ನಡೆಸಿ 8 ವರ್ಷಗಳಲ್ಲಿ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಕಿವಿ ಮೇಲೆ ಹೂವ ಇಡುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಭರವಸೆ ಎಂದು ಎಲ್ಲಾ ಕಡೆಗಳಲ್ಲಿ ಪೋಸ್ಟರ್‌ ಅಂಟಿಸಿದ್ದಾರೆ. ಇಂದು ನಾವು ಈ ಅಭಿಯಾನವನ್ನು ಸಂಕೇತವಾಗಿ ಮಾಡಿದ್ದೇವೆ. ಸೋಮವಾರ ಎಲ್ಲಾ 65 ವಾರ್ಡ್‌ಗಳಲ್ಲಿ ಈ ಅಭಿಯಾನವನ್ನು ಮಾಡುತ್ತೇವೆ ಎಂದು ಹೇಳಿದರು.

Tap to resize

Latest Videos

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸಲು ಸಿದ್ದರಾಮಯ್ಯಗೆ ಒತ್ತಾಯ

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್‌ ಮಾತನಾಡಿ, ನಗರದಲ್ಲಿ 65 ವಾರ್ಡ್‌ಗಳಲ್ಲೂ ಬಿಜೆಪಿ ಆಕ್ರಮಣ ಮಾಡಿ ಬಿಜೆಪಿ ಭರವಸೆ ಅಂತ ಪೋಸ್ಟರ್‌ ಹಾಕಿದ್ದಾರೆ .ಜನಪರವಾಗಿ ಯಾವ ಕೆಲಸ ಮಾಡಿದೆ? ಜನರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಜೆಟ್‌ ನೋಡಿ ಬೇಸರಗೊಂಡಿದ್ದಾರೆ. ಸೋಮವಾರದಿಂದ ಎಲ್ಲಾ ವಾರ್ಡ್‌ಗಳಲ್ಲಿ ಪಾಲಿಕೆ ಸದಸ್ಯರು ಹಾಗೂ ಮಾಜಿ ಸದಸ್ಯರು ನೇತೃತ್ವದಲ್ಲಿ ಕಿವಿಯ ಮೇಲೆ ಹೂವ ಅಭಿಯಾನ ಮಾಡಲಾಗುವುದು ಎಂದರು.

ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ಬಿಜೆಪಿ ಭರವಸೆ ಅಂತ ಅಮಿತ್‌ ಶಾ, ನಡ್ದ ಕಟೀಲ್‌, ಮೋದಿ ಇರುವ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ. ಕಾರ್ಪೊರೇಷನ್‌ 1976 ಆಕ್ಟ್ ಪ್ರಕಾರ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಬ್ಯಾನರ್‌, ಪೋಸ್ಟರ್‌ ಅಂಟಿಸಬಾರದೆಂದು ಇದೆ. ಇವರು ಅನುಮತಿ ಪಡೆಯದೆ ಅಂಟಿಸಿದ್ದಾರೆ. ಪಬ್ಲಿಕ್‌ ಪ್ರಾಪರ್ಟೀಸ್‌ ಡ್ಯಾಮೇಜ್‌ ಅಕ್ಟ್ ಪ್ರಕಾರ ಪಾಲಿಕೆಯವರು ಕೇಸ್‌ ಹಾಕಬೇಕು ಎಂದು ಆಗ್ರಹಿಸಿದರು.

ಪೊಲೀಸರು, ಪಾಲಿಕೆಯವರು ಸಾರ್ವಜನಿಕರಾಗಿ ಕೆಲಸ ಮಾಡಬೇಕು. ಅವರು ಬಿಜೆಪಿ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಿಜೆಪಿ ಭರವಸೆ ಪೋಸ್ಟರ್‌ಗಳನ್ನು ಎಲ್ಲಾ ವಾರ್ಡ್‌ಗಳಲ್ಲಿ ಹಾಕಿದ್ದಾರೆ. ಅವರ ಮೇಲೆ ಕೇಸ್‌ ಹಾಕಿ, ನಮ್ಮ ಮೇಲೂ ಕೇಸ್‌ ಹಾಕಿ ಪರವಾಗಿಲ್ಲ. ಪೊಲೀಸರು, ಪಾಲಿಕೆಯ ಅಧಿಕಾರಿಗಳು ಸಾರ್ವಜನಿಕವಾಗಿ ಪಕ್ಷಾತೀತವಾಗಿ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮುಖಂಡರಾದ ಎಂ. ಶಿವಣ್ಣ, ಗಿರೀಶ್‌ ಮೊದಲಾದವರು ಇದ್ದರು.

click me!