ಕರ್ನಾಟಕ ವಿಧಾನಸಭಾ ಚುನಾವಣೆ 2023: ಹಳೇ ಮೈಸೂರು ಬಿಜೆಪಿಗೆ ಒಲಿಯುವುದೇ?

By Kannadaprabha NewsFirst Published Feb 20, 2023, 3:30 AM IST
Highlights

ಈ ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ನಾನಾ ರೀತಿಯ ರಣತಂತ್ರ ರೂಪಿಸಿ ದಂಡನಾಯಕರನ್ನು ನೇಮಿಸಿದ್ದಾರೆ. ಆದರೆ, ವಾಸ್ತವದಲ್ಲಿ ಆ ತಂತ್ರಗಳು ಬಿಜೆಪಿಯವರ ನೆರವಿಗೆ ಬರುತ್ತಿಲ್ಲ ಎಂಬ ಮಾತುಗಳು ಕಮಲ ಪಾಳಯದಿಂದಲೇ ಕೇಳಿಬರುತ್ತಿವೆ.
 

ಮಂಡ್ಯ ಮಂಜುನಾಥ

ಮಂಡ್ಯ(ಫೆ.20): 2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಹಳೇ ಮೈಸೂರು ಭಾಗವನ್ನು ಗೆಲ್ಲಲು ಪಣತೊಟ್ಟಿರುವ ಬಿಜೆಪಿ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚಿನ ಮಹತ್ವ ನೀಡದಿರುವುದು ಚುನಾವಣೆ ಎದುರಿಸಲು ಮುಂದಾಗಿರುವ ಟಿಕೆಟ್‌ ಆಕಾಂಕ್ಷಿಗಳಿಗೆ ಹಾಗೂ ಸ್ಥಳೀಯ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Latest Videos

ಬಿಜೆಪಿ ಚುನಾವಣಾ ಚಾಣಾಕ್ಷ ಅಮಿತ್‌ ಶಾ ಮಂಡ್ಯದಲ್ಲಿ ಜನಸಂಕಲ್ಪ ಯಾತ್ರೆ ನಡೆಸುವುದರೊಂದಿಗೆ ಚುನಾವಣೆಗೆ ರಣಕಹಳೆ ಊದಿದ್ದಾರೆ. ಈ ಭಾಗದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ನಾನಾ ರೀತಿಯ ರಣತಂತ್ರ ರೂಪಿಸಿ ದಂಡನಾಯಕರನ್ನು ನೇಮಿಸಿದ್ದಾರೆ. ಆದರೆ, ವಾಸ್ತವದಲ್ಲಿ ಆ ತಂತ್ರಗಳು ಬಿಜೆಪಿಯವರ ನೆರವಿಗೆ ಬರುತ್ತಿಲ್ಲ ಎಂಬ ಮಾತುಗಳು ಕಮಲ ಪಾಳಯದಿಂದಲೇ ಕೇಳಿಬರುತ್ತಿವೆ.

ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ, ಮಂಡ್ಯ ಉಸ್ತುವಾರಿ ಕೊಟ್ರು ಬೇಡ: ಸಚಿವ ಕೆ.ಸಿ. ನಾರಾಯಣಗೌಡ

ಸಂಘಟನೆಗಷ್ಟೇ ಸೀಮಿತ:

ಕಳೆದ ಮೂರು ವರ್ಷಗಳ ಅವಧಿಯಲ್ಲಿ ಮಂಡ್ಯ ಜಿಲ್ಲೆಯೊಳಗಿನ ನಿಷ್ಠಾವಂತ ಮುಖಂಡರು, ಕಾರ್ಯಕರ್ತರಿಗೆ ನಿಗಮ-ಮಂಡಳಿಗಳಲ್ಲಿ ಮಹತ್ವದ ಸ್ಥಾನ-ಮಾನಗಳನ್ನು ಕೊಡಲಿಲ್ಲ. ಸಂಘಟನೆಗಷ್ಟೇ ಅವರನ್ನು ಸೀಮಿತಗೊಳಿಸಿದರು. ಅಧಿಕಾರ ಕೊಟ್ಟು ಅವರಿಗೆ ಪಕ್ಷ ಸಂಘಟನೆ ಮಾಡುವ ಜವಾಬ್ದಾರಿ ವಹಿಸಲಿಲ್ಲ. ಕಾರ್ಯಕರ್ತರ ನೋವು-ನಲಿವುಗಳಿಗೆ ಸ್ಪಂದಿಸುವ ಕೆಲಸ ಮಾಡಲೇ ಇಲ್ಲ. ಕನಿಷ್ಠ ಪಕ್ಷ ಅಭಿವೃದ್ಧಿ ದೃಷ್ಟಿಯಿಂದಲಾದರೂ ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗಕ್ಕೆ ಕೊಡುಗೆಗಳನ್ನು ಕೊಟ್ಟು ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನಕ್ಕೆ ಕಮಲ ನಾಯಕರು ಪ್ರಯತ್ನವನ್ನೇ ನಡೆಸಲಿಲ್ಲ. ಚುನಾವಣಾ ಸಮಯದಲ್ಲಿ ಸಂಘಟನೆ ಮಾಡುವಂತೆ ಮುಖಂಡರು-ಕಾರ್ಯಕರ್ತರ ಒತ್ತಡ ಹೇರುತ್ತಿದ್ದಾರೆ. ಅವರ ಒಳಬೇಗುದಿಗೆ ಯಾರಿಂದಲೂ ಸ್ಪಂದನೆಯೇ ಇಲ್ಲವಾಗಿದೆ.

ಸಮರ್ಥಿಸಿಕೊಳ್ಳಲಾಗುತ್ತಿಲ್ಲ:

ಚುನಾವಣಾ ಸಮಯ ಹತ್ತಿರವಾಗುತ್ತಿದ್ದಂತೆ ಬಿಜೆಪಿ ನಾಯಕರು ಮಂಡ್ಯ ಜಿಲ್ಲೆ ಕಡೆ ದಂಡೆತ್ತಿ ಬರುತ್ತಿದ್ದಾರೆ. ಜಿಲ್ಲೆಯ ಪ್ರಗತಿ ದೃಷ್ಟಿಯಿಂದ ಕನಿಷ್ಠ ಮಟ್ಟದ ಅಭಿವೃದ್ಧಿ ಕಾರ್ಯವನ್ನೂ ಮಾಡದ ಬಿಜೆಪಿಯವರು ಜನರೆದುರು ಯಾವುದನ್ನೂ ಸಮರ್ಥಿಸಿಕೊಳ್ಳಲಾಗುತ್ತಿಲ್ಲ. ನಾಲ್ಕು ವರ್ಷ ಸ್ಥಗಿತಗೊಂಡಿದ್ದ ಮೈಷುಗರ್‌ ಕಾರ್ಖಾನೆಗೆ ಹೆಚ್ಚಿನ ಹಣ ದೊರಕಿಸಿಕೊಟ್ಟು ರೋಗಗ್ರಸ್ಥ ಕಾರ್ಖಾನೆ ಎಂಬ ಹಣೆಪಟ್ಟಿಕಳಚಿ ಚೇತೋಹಾರಿಯಾಗಿ ಬೆಳವಣಿಗೆ ಕಾಣುವಂತೆ ಮಾಡಿದ್ದರೆ ಬಿಜೆಪಿ ಪರವಾದ ಅಲೆ ಮೇಲೇಳಲು ಸಾಧ್ಯವಾಗುತ್ತಿತ್ತು. ಸಾಮಾನ್ಯ ರಸ್ತೆಯಿಂದ ಆರಂಭವಾಗಿ ಕೈಗಾರಿಕೆ ಸ್ಥಾಪನೆ ಹಂತದವರೆಗೆ ಯಾವುದಕ್ಕೂ ಮನ್ನಣೆಯನ್ನೇ ನೀಡದಿರುವುದು ಈ ಭಾಗದ ಜನರನ್ನು ತೀವ್ರ ನಿರಾಸೆಗೊಳ್ಳುವಂತೆ ಮಾಡಿದೆ.

ನಾರಾಯಣಗೌಡರ ಕೊಡುಗೆಯೂ ಇಲ್ಲ:

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಕೆ.ಸಿ.ನಾರಾಯಣಗೌಡರೂ ಅಭಿವೃದ್ಧಿ ದೃಷ್ಟಿಯಿಂದ ಯಾವೊಂದು ಕೊಡುಗೆ ನೀಡಲಿಲ್ಲ. ಈಗ ಬಿಜೆಪಿ ನಾಯಕರು ಅವರನ್ನೇ ಪಕ್ಷದೊಳಗೆ ಮೂಲೆಗುಂಪು ಮಾಡಿದ್ದಾರೆ. ಬಿಜೆಪಿಯೊಳಗೆ ತಾವಿರುವ ಪರಿಸ್ಥಿತಿ, ಜಿಲ್ಲೆಯೊಳಗೆ ಬಿಜೆಪಿ ಇರುವ ಸ್ಥಿತಿ-ಗತಿಯ ಬಗ್ಗೆ ಅರಿತಿರುವ ನಾರಾಯಣಗೌಡರು ಅಲ್ಲಿಂದ ಕಾಲ್ತೆಗೆಯುವುದಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಮೇಲ್ನೋಟಕ್ಕೆ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದರೂ ಒಳಗೊಳಗೆ ಕಾಂಗ್ರೆಸ್‌ ಬಾಗಿಲು ಬಡಿಯುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.

ಬೂಸ್ಟರ್‌ ಡೋಸ್‌ ನಾಯಕರು ಬೇಕು:

ಇದರ ನಡುವೆಯೂ ಮಂಡ್ಯವನ್ನು ಟಾರ್ಗೇಟ್‌ ಮಾಡಿಕೊಂಡು ಹಳೇ ಮೈಸೂರು ಭಾಗವನ್ನು ಕಬ್ಜ ಮಾಡಲು ಬಿಜೆಪಿ ಹೊರಟಿದೆ. ಬಿಜೆಪಿ ಯುವ ಘಟಕದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ್‌ ಅವರ ಸಾರಥ್ಯದಲ್ಲೇ ಎಲ್ಲ ರೀತಿಯ ಚುನಾವಣಾ ಅಸ್ತ್ರಗಳನ್ನು ಪ್ರಯೋಗಿಸಲಾಗುತ್ತಿದೆ. ಆದರೆ, ಹೆಚ್ಚಿನ ಬೂಸ್ಟರ್‌ ಡೋಸ್‌ ನೀಡುವ ನಾಯಕರ ಅಗತ್ಯತೆ ಬಿಜೆಪಿಗೆ ಈಗ ಅನಿವಾರ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಂತಹ ನಾಯಕರನ್ನು ಮುಂದಿನ ದಿನಗಳಲ್ಲಿ ಹಳೇ ಮೈಸೂರು ಭಾಗಕ್ಕೆ ಕರೆತರುವುದಕ್ಕೆ ಬಿಜೆಪಿ ಪ್ಲಾನ್‌ ಮಾಡಿಕೊಂಡಿದೆ. ಅವರನ್ನು ಕರೆತರುವುದರೊಂದಿಗೆ ಪಕ್ಷವನ್ನು ಇನ್ನಷ್ಟುಬೂಸ್ಟ್‌ ಅಪ್‌ ಮಾಡಬೇಕಿದೆ. ಇಲ್ಲದಿದ್ದರೆ ಹಳೇ ಮೈಸೂರು ಭಾಗವನ್ನು ತೆಕ್ಕೆಗೆ ತೆಗೆದುಕೊಳ್ಳುವ ಕಮಲ ಪಡೆಯವರ ಕನಸು ನನಸಾಗುವುದು ಕಷ್ಟವೆಂದೇ ಹೇಳಲಾಗುತ್ತಿದೆ.
ಮೂರು ವರ್ಷಗಳಿಂದಲೂ ಹಳೇ ಮೈಸೂರು ಭಾಗ ಅದರಲ್ಲೂ ಮುಖ್ಯವಾಗಿ ಮಂಡ್ಯ ಜಿಲ್ಲೆಯನ್ನು ಅಭಿವೃದ್ಧಿ ದೃಷ್ಟಿಯಿಂದ ಕಡೆಗಣಿಸಿರುವುದು ಸುಳ್ಳೇನಲ್ಲ. ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಅಭಿವೃದ್ಧಿ ದೃಷ್ಟಿಯಿಂದ ಯಾವುದೇ ಕೊಡುಗೆ ನೀಡಿಲ್ಲ ಎಂದು ಬಿಜೆಪಿ ನಾಯಕರು ಟೀಕಿಸುತ್ತಿರುವುದರ ನಡುವೆಯೇ ಬಿಜೆಪಿ ಜಿಲ್ಲೆಗೆ ನೀಡಿರುವುದೇನು ಎಂಬ ಬಗ್ಗೆ ಸಾರ್ವಜನಿಕರ ವಲಯದಲ್ಲಿ ತೀವ್ರವಾಗಿ ಚರ್ಚೆಗಳು ನಡೆಯುತ್ತಿವೆ.

Mandya : ಜೆಡಿಎಸ್‌ಗೆ 2ನೇ ಹಂತದ ಸೇರ್ಪಡೆ ಸಿದ್ಧತೆ : ಧನಂಜಯ

ಶೇ.30ರಷ್ಟು ಬೆಂಬಲ

ಅಮಿತ್‌ ಶಾ ಬರುವುದಕ್ಕೂ ಮುನ್ನ ಮಂಡ್ಯ ಜಿಲ್ಲೆಯೊಳಗೆ ಬಿಜೆಪಿ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕಿರುವ ಪ್ರಕಾರ ಶೇ.30 ರಷ್ಟುಮಾತ್ರ ಬೆಂಬಲ ದೊರಕಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ. ದೇವೇಗೌಡರು, ಎಚ್‌.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯನವರಂತಹ ವರ್ಚಸ್ವಿ ನಾಯಕರ ಹಿಡಿತದಲ್ಲಿರುವ ಹಳೇ ಮೈಸೂರು ದೊಳಗೆ ಬಿಜೆಪಿ ಪರವಾದ ಅಲೆ ಎಬ್ಬಿಸುವ ನಾಯಕರ ಅವಶ್ಯಕತೆ ಹೆಚ್ಚಿರುವುದಾಗಿ ಬಿಜೆಪಿ ನಾಯಕರಿಗೆ ಮಾಹಿತಿಯನ್ನು ರವಾನಿಸಲಾಗಿದೆ. ಆ ನಿಟ್ಟಿನಲ್ಲಿ ಬಿಜೆಪಿಯವರು ಕೂಡ ರಾಷ್ಟ್ರೀಯ ನಾಯಕರನ್ನು ಹಳೇ ಮೈಸೂರು ಭಾಗಕ್ಕೆ ಕರೆತಂದು ಧೂಳೆಬ್ಬಿಸುವ ಯೋಜನೆ ರೂಪಿಸಿಕೊಂಡಿದ್ದಾರೆ.

ರಾಷ್ಟ್ರೀಯ ನಾಯಕರಿಂದ ಒತ್ತಡ

ಹಳೇ ಮೈಸೂರು ಭಾಗದ ರಾಜಕೀಯ ಪರಿಸ್ಥಿತಿ, ಸನ್ನಿವೇಶಗಳು, ಪಕ್ಷಗಳ ಬಲಾಬಲ ಎಲ್ಲವೂ ಬಿಜೆಪಿ ರಾಜ್ಯ ನಾಯಕರ ಅರಿವಿಗಿದೆ. ಈ ಭಾಗದಲ್ಲಿ ಒಂದಷ್ಟುಮತಗಳನ್ನು ಬಿಜೆಪಿಯತ್ತ ಸೆಳೆಯುವ ಶಕ್ತಿ ಇರೋದು ಬಿ.ಎಸ್‌.ಯಡಿಯೂರಪ್ಪನವರಿಗೆ ಮಾತ್ರ. ಅದನ್ನು ಹೊರತುಪಡಿಸಿದಂತೆ ಉಳಿದ ನಾಯಕರಿಗೆ ಆ ಸಾಮರ್ಥ್ಯವಿಲ್ಲ. ಒಕ್ಕಲಿಗ ಶಕ್ತಿ ಕೇಂದ್ರವಾಗಿರುವ ಹಳೇ ಮೈಸೂರು ಭಾಗವನ್ನು ವಶಕ್ಕೆ ತೆಗೆದುಕೊಳ್ಳಲು ಕಾದಾಟಕ್ಕಿಳಿದಿದೆ. ರಾಷ್ಟ್ರೀಯ ನಾಯಕರ ಒತ್ತಡಕ್ಕೆ ಸಿಲುಕಿರುವ ರಾಜ್ಯ ನಾಯಕರು ಅನಿವಾರ್ಯವಾಗಿ ಹಳೇ ಮೈಸೂರು ಭಾಗದ ಕಡೆ ದಂಡೆತ್ತಿ ಬರುವಂತಾಗಿದೆ. ಕೆ.ಆರ್‌.ಪೇಟೆ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಕ್ಕೂ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವುದಕ್ಕೂ ಸಾಕಷ್ಟುವ್ಯತ್ಯಾಸಗಳಿವೆ. ಜಿಲ್ಲೆಯಲ್ಲಿ ಬಿಜೆಪಿ ಮತ ಗಳಿಕೆಯ ಪ್ರಮಾಣ ಕೊಂಚ ಮಟ್ಟಿಗೆ ಏರಿಕೆಯಾಗಿದ್ದರೂ ಪಕ್ಷವನ್ನು ಗೆಲ್ಲಿಸುವಷ್ಟರ ಮಟ್ಟಿಗೆ ಸಹಕಾರಿಯಾಗುತ್ತಿಲ್ಲ. ಹಾಗಾಗಿ ಬಿಜೆಪಿಗೆ ಶಕ್ತಿ ತುಂಬುವ ನಾಯಕರು, ಪ್ರಬಲ ಅಭ್ಯರ್ಥಿಗಳು ಪಕ್ಷಕ್ಕೆ ಹೆಚ್ಚು ಅನಿವಾರ್ಯವೆನಿಸಿದೆ.

click me!