ಶಾಸಕ ಬಿ.ವೈ. ವಿಜಯೇಂದ್ರ ಪ್ರಬಲ ಸಮುದಾಯದ ನಾಯಕ. ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಮೈಸೂರು (ನ.12): ಶಾಸಕ ಬಿ.ವೈ.ವಿಜಯೇಂದ್ರ ಪ್ರಬಲ ಸಮುದಾಯದ ನಾಯಕ. ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಮಾಡಿರುವುದು ಒಳ್ಳೆಯ ಬೆಳವಣಿಗೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರೂ ಆದ ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆಗಬೇಕು ಅಂತ 50 ಸಾವಿರ ಜನ ಸೇರಿಸಿದವನು ನಾನು. ಅವರು ಮುಖ್ಯಮಂತ್ರಿ ಆದ ಮೇಲೆ ವೀರಶೈವ ಮಾತ್ರವಲ್ಲ ಎಲ್ಲಾ ಸಮುದಾಯದವರನ್ನು ಸೇರಿಸಿಕೊಂಡು ಒಟ್ಟಾಗಿ ಕರೆದುಕೊಂಡು ಹೋದರು ಎಂದರು.
ಯಡಿಯೂರಪ್ಪ- ಕುಮಾರಸ್ವಾಮಿ ಒಟ್ಟಾಗಿ ಹೋಗಿದ್ದ ಕಾರಣಕ್ಕಾಗಿಯೇ ಅಧಿಕಾರ ಸಿಕ್ಕಿದ್ದು, ಇಬ್ಬರೂ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಈಗ ಅದೇ ರೀತಿ ಯಡಿಯೂರಪ್ಪರ ಮಗನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಕೊಡಲಾಗಿದೆ. ಮತ್ತೊಂದು ಕಡೆ ಕುಮಾರಸ್ವಾಮಿ ಜೆಡಿಎಸ್ ರಾಜ್ಯಾಧ್ಯಕ್ಷ ಆಗಿದ್ದಾರೆ. ಇಬ್ಬರು ಒಟ್ಟಾಗಿ ಹೋದರೆ ಕಾಂಗ್ರೆಸ್ ವಿರುದ್ಧ ಹೋರಾಟ ಮಾಡಲು ಸುಲಭವಾಗುತ್ತೆ ಎಂದು ಅವರು ಹೇಳಿದರು. ವಿಜಯೇಂದ್ರ ಯುವ ನಾಯಕ, ಸಮುದಾಯದ ಬೆಂಬಲ ಇದೆ. ಯಡಿಯೂರಪ್ಪ ಸಿಎಂ ಆಗಲು ವಿಜಯೇಂದ್ರ ಚಾಣಾಕ್ಷತನವೂ ಇದೆ. ಯಡಿಯೂರಪ್ಪರನ್ನ ಮೂಲೆಗುಂಪು ಮಾಡಿದರು ಅನ್ನೋ ಕಾರಣಕ್ಕೆ ಬಿಜೆಪಿಗೆ ಹಿನ್ನಡೆಯಾಗಿತ್ತು.
ಟೀಕಿಸುವವರಿಗೆ ಕೋಲಾರ ಜಿಲ್ಲಾಭಿವೃದ್ಧಿಯೇ ಉತ್ತರ: ಸಿಎಂ ಸಿದ್ದರಾಮಯ್ಯ
ಆದ್ದರಿಂದ ವಿಜಯೇಂದ್ರ ಆಯ್ಕೆ ಸೂಕ್ತವಾಗಿದೆ. ಇದೆಲ್ಲವನ್ನು ಯೋಚನೆ ಮಾಡಿಯೆ ಬಿಜೆಪಿ ವರಿಷ್ಠರು ವಿಜಯೇಂದ್ರಗೆ ಅಧಿಕಾರ ಕೊಟ್ಟಿದ್ದಾರೆ ಎಂದರು. ಬಿಜೆಪಿಯಲ್ಲಿ ಅಸಮಾಧಾನಕ್ಕೆ ಅವಕಾಶ ಇಲ್ಲ. ಹೈಕಮಾಂಡ್ ತೀರ್ಮಾನಕ್ಕೆ ಬದ್ಧರಾಗುತ್ತಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಾರೆ ಅಂತ ಹೇಳುತ್ತಿದ್ದರು. ಆದರೆ, ಹೈಕಮಾಂಡ್ ಸಿದ್ದರಾಮಯ್ಯಗೆ ಮಣೆ ಹಾಕಿತು. ಇದಾದ ಬಳಿಕ ಸಮಾಧಾನವಾಗಲಿಲ್ಲ. ಬಿಜೆಪಿಯಲ್ಲೂ ಅದೇ ರೀತಿ ಅಸಮಾಧಾನ ಇದೆ. ಹೈಕಮಾಂಡ್ ನಾಯಕರು ಎಲ್ಲರು ಸುಮ್ಮನಾಗುತ್ತಾರೆ ಎಂದು ಅವರು ತಿಳಿಸಿದರು.
ವಿ. ಸೋಮಣ್ಣರಿಗೆ ಅಸಮಾಧಾನ ಇದೆ. ಎಲ್ಲವನ್ನು ನಾಯಕರು ಮುಂದಿನ ಹಂತದಲ್ಲಿ ಸರಿಪಡಿಸುತ್ತಾರೆ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವುದು ನಮ್ಮ ಗುರಿ. ನಾವು ಇಷ್ಟು ಸ್ಥಾನ ಬಿಟ್ಟುಕೊಡಿ ಎಂದು ಕೇಳುವುದಿಲ್ಲ. ಗೆಲುವು ಒಂದೇ ಮಾನದಂಡ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಎರಡು ಕಡೆಯಿಂದ ಸರ್ವೆ ನಡೆಸಲಾಗುತ್ತೆ. ಮೈಸೂರು ಕ್ಷೇತ್ರದ ವಿಚಾರದಲ್ಲೂ ಇದೇ ಮಾನದಂಡ. ನಾವು ಇಷ್ಟು ಕ್ಷೇತ್ರ ಬಿಟ್ಟುಕೊಡಿ ಅಂತ ನಾವು ಕೇಳಿಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಬುರುಡೆ ಬಿಟ್ಟು ಹೋಗಿದ್ದಾರೆ: ಸಂಸದ ಮುನಿಸ್ವಾಮಿ ಟೀಕೆ
ನಾವು ವಿಪಕ್ಷ ಸ್ಥಾನ ಕೇಳಿಲ್ಲ: ಇನ್ನೂ ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿಯರನ್ನೇ ಮಾಡಿ ಎಂದು ಕುಮಾರಸ್ವಾಮಿ ಅವರೇ ಹೇಳಿದ್ದಾರೆ. ಇದನ್ನು ಬಿಜೆಪಿ ಹೈಕಮಾಂಡ್ ಮುಂದೆ ಕುಮಾರಸ್ವಾಮಿಯವರು ಹೇಳಿ ಬಂದಿದ್ದಾರೆ. ನಾವು ವಿರೋಧ ಪಕ್ಷ ಸ್ಥಾನವನ್ನು ಬಿಟ್ಟುಕೊಡಿ ಎಂದು ಕೇಳಿಲ್ಲ ಎಂದು ಜಿ.ಟಿ. ದೇವೇಗೌಡ ಸ್ಪಷ್ಟಪಡಿಸಿದರು.