ಎಕಲಿತದ್ದು ಕೇವಲ ಆರನೇ ಕ್ಲಾಸು. ಕೆಲಸ ಕಂಟೇನರ್ ಲಾರಿ ಡ್ರೈವರ್. ಭ್ರಷ್ಟಾಚಾರವನ್ನು ಸ್ವತ: ಕಂಡುಂಡು ಅದನ್ನು ಬುಡ ಸಹಿತ ಕಿತ್ತೊಗೆಯಬೇಕೆಂಬ ಛಲ...ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಈ ಬಾರಿಯ ಚುನಾವಣಾ ಅಭ್ಯರ್ಥಿ..!
ಸಂದೀಪ್ ವಾಗ್ಲೆ
ಮಂಗಳೂರು (ಏ.17) : ಕಲಿತದ್ದು ಕೇವಲ ಆರನೇ ಕ್ಲಾಸು. ಕೆಲಸ ಕಂಟೇನರ್ ಲಾರಿ ಡ್ರೈವರ್. ಭ್ರಷ್ಟಾಚಾರವನ್ನು ಸ್ವತ: ಕಂಡುಂಡು ಅದನ್ನು ಬುಡ ಸಹಿತ ಕಿತ್ತೊಗೆಯಬೇಕೆಂಬ ಛಲ...ಇವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಈ ಬಾರಿಯ ಚುನಾವಣಾ ಅಭ್ಯರ್ಥಿ..!
ಇವರು ದಯಾನಂದ(Dayananda). ಮೂಡುಬಿದಿರೆ ಕ್ಷೇತ್ರ(Mudubidire assembly constituency)ದ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ(KRS Party)ದಿಂದ ಸ್ಪರ್ಧೆಗೆ ಅಣಿಯಾಗಿದ್ದಾರೆ. ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯಾಗಬೇಕಾದರೆ ಕೋಟ್ಯಂತರ ರು.ಖರ್ಚು ಮಾಡುವ ತಾಕತ್ತು ಇರಬೇಕು ಎನ್ನುವ ಪರಿಸ್ಥಿತಿ ಎಲ್ಲೆಡೆ ಇರುವಾಗ, ಧನಬಲದ ಅಭ್ಯರ್ಥಿಗಳ ಎದುರು ಇವರು ಕಣಕ್ಕಿಳಿದಿರುವುದು ವಿಶೇಷ.
ಕೆಆರ್‌ಎಸ್ ಪಕ್ಷದಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ
41 ವರ್ಷ ವಯಸ್ಸಿನ ದಯಾನಂದ ಅವರು ಬಜ್ಪೆ ಸಮೀಪದ ಪೆರ್ಮುದೆ ನಿವಾಸಿ. ಕೂಲಿ ಕೆಲಸ, ಕೃಷಿ, ತೋಟ ಕಾರ್ಮಿಕರಾಗಿ ಕೆಲಸ ಮಾಡುತ್ತ ಜೀವನ ಸಾಗಿಸುತ್ತಿದ್ದ ಅವರು, 2003ರಿಂದ ಬಸ್ ಡ್ರೈವರ್ ಆಗಿ ದುಡಿಯಲು ಆರಂಭಿಸಿದ್ದರು. 2014ರಲ್ಲಿ ಎಲ್ಲ ಹಣ ಒಟ್ಟು ಸೇರಿಸಿ ಲಾರಿ ಕೊಂಡರು. ಈ ನಡುವೆ ಕೊರೋನಾ ಅವಧಿಯಲ್ಲಿ ಜೀವನ ಕಷ್ಟಕರವಾಗಿ ಲಾರಿ ಮಾರಿ ಬೇರೊಬ್ಬರ ಲಾರಿಗೆ ಡ್ರೈವರ್ ಆದರು. ಕನ್ಯಾಕುಮಾರಿಯಿಂದ ಜಮ್ಮು-ಕಾಶ್ಮೀರದವರೆಗೆ ಲಾರಿ ಓಡಿಸುತ್ತಿದ್ದರು. ಕಳೆದ 3 ವರ್ಷಗಳಿಂದ ಮಂಗಳೂರು ಬಂದರಿಗೆ ಕಾಫಿ ಸಾಗಾಟ ಮಾಡುವ ಕಂಟೇನರ್ ಲಾರಿಯ ಡ್ರೈವರ್ ಆಗಿ ದುಡಿಯುತ್ತಿದ್ದಾರೆ.
ಒಂದು ವಾರ ರಜೆ, ಮತ್ತೆ ಕೆಲಸ:
ಕೆಆರ್‌ಎಸ್ ಪಕ್ಷದಿಂದ ಅಧಿಕೃತ ಅಭ್ಯರ್ಥಿಯಾಗಿ ಘೋಷಿತವಾಗಿರುವ ದಯಾನಂದ ಅವರು ನಾಮಪತ್ರ ಸಲ್ಲಿಸಲು ಮತ್ತು ಪ್ರಚಾರ ಕಾರ್ಯಗಳಿಗಾಗಿ ಒಂದು ವಾರ ರಜೆ ಪಡೆದುಕೊಂಡಿದ್ದಾರೆ. ನಾಮಪತ್ರ ಸಲ್ಲಿಕೆಯ ಬಳಿಕ ಮತ್ತೆ ಕೆಲಸಕ್ಕೆ ಹಾಜರಾಗಿ ಲಾರಿ ಓಡಿಸಲಿದ್ದಾರೆ. ವಾರದಲ್ಲಿ ಮೂರು ದಿನ ಕೆಲಸ ಇರುವುದರಿಂದ ಉಳಿದ ಸಮಯವನ್ನು ಪ್ರಚಾರಕ್ಕಾಗಿ ವ್ಯಯಿಸುವ ಉದ್ದೇಶ ಇಟ್ಟುಕೊಂಡಿದ್ದಾರೆ. ಚುನಾವಣೆ ಹತ್ತಿರ ಬರುವಾಗ ಕೊನೆಯ 10 ದಿನ ಮತ್ತೆ ರಜೆ ಪಡೆಯುವ ಯೋಚನೆಯಲ್ಲಿದ್ದಾರೆ.
‘ಲಾರಿಯಲ್ಲಿ ಕೆಲಸ ಮಾಡುತ್ತಿದ್ದಾಗ ಎಲ್ಲಿ ಹೋದರೂ ಪೊಲೀಸರು ಲಂಚ ಕೇಳುತ್ತಿದ್ದರು. ಆರ್‌ಟಿಒಗೆ ಹೋದರೂ ದಬ್ಬಾಳಿಕೆ. ಸರ್ಕಾರಿ ಕಚೇರಿಗಳಿಗೆ ಹೋದರೆ ಹಣ ನೀಡದೆ ಯಾವ ಕೆಲಸವೂ ಆಗುತ್ತಿರಲಿಲ್ಲ. ಇಂಥ ಸಂದರ್ಭದಲ್ಲಿ ವಾಟ್ಸಪ್, ಫೇಸ್‌ಬುಕ್ ಮೂಲಕ ಭ್ರಷ್ಟಾಚಾರ ಮುಕ್ತ ಸಮಾಜಕ್ಕಾಗಿ ಹೋರಾಡುತ್ತಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಬಗ್ಗೆ ಮಾಹಿತಿ ಸಿಕ್ಕಿತು. 2-3 ವರ್ಷದ ಹಿಂದೆ ಅದರ ಸದಸ್ಯನಾದೆ. ಚುನಾವಣೆ ಸಮೀಪಿಸುತ್ತಿರುವಾಗ ಸ್ಪರ್ಧೆಯ ಇಂಗಿತವನ್ನು ವ್ಯಕ್ತಪಡಿಸಿದಾಗ ಪಕ್ಷದ ಮುಖಂಡರು ನನಗೆ ಅವಕಾಶ ನೀಡಿದ್ದಾರೆ. ಭ್ರಷ್ಟಾಚಾರ ಮುಕ್ತ ಸಮಾಜವನ್ನು ಕಟ್ಟುವುದು, ಜನರಿಗೆ ಸರ್ಕಾರದ ಸೌಲಭ್ಯಗಳು ಸರಿಯಾಗಿ ತಲುಪುವಂತೆ ಮಾಡುವುದು ನನ್ನ ಧ್ಯೇಯ’ ಎಂದು ದಯಾನಂದ ಹೇಳಿದರು.
ತಮ್ಮ ಕೆಲಸದ ನಡುವೆಯೂ ಕೆಆರ್‌ಎಸ್ ಪಕ್ಷದ ಸದಸ್ಯರಾದ ಬಳಿಕ ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರ ವಿರುದ್ಧ ದಯಾನಂದ ಹೋರಾಟ ನಡೆಸಿದ್ದಾರೆ. ಅನೇಕ ನಾಗರಿಕರಿಗೆ ಸರ್ಕಾರಿ ಕಚೇರಿಗಳಿಂದ ನ್ಯಾಯ ದೊರಕಿಸಲು ಶ್ರಮಿಸಿದ್ದಾರೆ. ಇದೇ ಅವರನ್ನು ಅಭ್ಯರ್ಥಿ ಸ್ಥಾನದವರೆಗೆ ತಂದು ನಿಲ್ಲಿಸಿದೆ.
ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ದಕ್ಷ ಆಡಳಿತಕ್ಕಾಗಿ ಕೆಆರ್‌ಎಸ್ ಪಕ್ಷವನ್ನು ಬೆಂಬಲಿಸಿ
ಕಷ್ಟಪಟ್ಟು ದುಡಿದ ಅಲ್ಪ, ಸ್ವಲ್ಪ ಹಣ ಇದೆ. ಜತೆಗೆ, ಯಾರನ್ನೂ ಒತ್ತಾಯ ಮಾಡದೆ ದೇಣಿಗೆ ಸಂಗ್ರಹ ಮಾಡುತ್ತ ಅದರಿಂದಲೇ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದೇನೆ. ಸಮಾವೇಶ ಇತ್ಯಾದಿಗಳನ್ನು ನಡೆಸಲು ದೊಡ್ಡ ಮೊತ್ತದ ಹಣ ಬೇಕಾಗಿರುವುದರಿಂದ ಸದ್ಯಕ್ಕೆ ಅಲ್ಲಲ್ಲಿ ಜನರು ಹೆಚ್ಚಿರುವ ಪ್ರದೇಶಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದೇವೆ. ಕರಪತ್ರಗಳನ್ನು ವಿತರಿಸುತ್ತಿದ್ದೇವೆ. ಅಭ್ಯರ್ಥಿಯಾದ ಬಳಿಕ ಜನರೇ ನನ್ನನ್ನು ಗುರುತಿಸಿ ಮಾತನಾಡಿಸುತ್ತಾರೆ, ಬೆಂಬಲವನ್ನೂ ನೀಡುತ್ತಿದ್ದಾರೆ. ಜನರು ಚುನಾವಣೆಯಲ್ಲೂ ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ.
- ದಯಾನಂದ, ಮೂಡುಬಿದಿರೆ ಕ್ಷೇತ್ರದ ಅಭ್ಯರ್ಥಿ.