
ಬೆಂಗಳೂರು (ಏ.17): ‘ಜಗದೀಶ್ ಶೆಟ್ಟರ್ ಅವರಿಗೆ ಎಲ್ಲ ಸ್ಥಾನಮಾನ ಕೊಟ್ಟಿದ್ದೇವೆ. ಆದರೂ ಅವರು ಈ ರೀತಿಯ ದುಡುಕಿನ ನಿರ್ಧಾರ ತೆಗೆದುಕೊಂಡಿರುವುದು ಪಕ್ಷಕ್ಕೆ ಮಾಡಿದ ದ್ರೋಹ. ಅಕ್ಷಮ್ಯ ಅಪರಾಧ. ನಾಡಿನ ಜನತೆ ಯಾವತ್ತೂ ಅವರನ್ನು ಕ್ಷಮಿಸುವುದಿಲ್ಲ’ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀಕ್ಷ್ಣವಾಗಿ ಹೇಳಿದ್ದಾರೆ. ಭಾನುವಾರ ಪಕ್ಷದ ಕಚೇರಿಯಲ್ಲಿ ಇತರ ನಾಯಕರ ಜತೆಯಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಸ್ಥಾನಮಾನ ಸಿಗಲಿ ಅಥವಾ ಸಿಗದಿರಲಿ. ದೇಶಕ್ಕಾಗಿ ಕೆಲಸ ಮಾಡಬೇಕು. ರಾಜ್ಯದ ಜನತೆ ಜಗದೀಶ್ ಶೆಟ್ಟರ್ ಅವರನ್ನು ಗುರುತಿಸಲು ಬಿಜೆಪಿ ಪಕ್ಷ ಕಾರಣ. ವ್ಯಕ್ತಿ ಎಷ್ಟೇ ದೊಡ್ಡವನಾಗಿದ್ದರೂ ಪಕ್ಷದ ಬೆಂಬಲ ಇಲ್ಲದೆ ದೊಡ್ಡವನಾಗಲು ಸಾಧ್ಯವಿಲ್ಲ. ಮುಖ್ಯಮಂತ್ರಿಯಾಗಿ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಎಲ್ಲ ಸ್ಥಾನಮಾನ ನೀಡಿದ್ದೆವು: ಬಿಜೆಪಿ ನನಗೆ, ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ, ಈಶ್ವರಪ್ಪ ಎಲ್ಲರಿಗೂ ಸರಿಯಾದ ಸ್ಥಾನಮಾನ ಕೊಟ್ಟು ಅನೇಕ ಅವಕಾಶಗಳನ್ನೂ ಕೊಟ್ಟಿದೆ. ಶೆಟ್ಟರ್ ಜನಸಂಘದ ಕಾಲದಿಂದ ಬಿಜೆಪಿ ಕುಟುಂಬದಲ್ಲಿ ಇದ್ದವರು. ಇವರನ್ನು ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದೆ. ವಿರೋಧ ಪಕ್ಷದ ನಾಯಕ, ಮಂತ್ರಿ, ಮುಖ್ಯಮಂತ್ರಿ ಮಾಡಿದ್ದೆವು. ಬಿ.ಬಿ.ಶಿವಪ್ಪ ಅವರನ್ನು ಎದುರು ಹಾಕಿಕೊಂಡು ಯುವಕ ಬೆಳೆಯಬೇಕು ಎಂಬ ಕಾರಣಕ್ಕೆ ವಿರೋಧ ಪಕ್ಷದ ನಾಯಕನಾಗಿ ಮಾಡಿದ್ದೆವು. ನಾನು ಮತ್ತು ದಿವಂಗತ ಅನಂತಕುಮಾರ್ ಜಗದೀಶ್ ಶೆಟ್ಟರ್ ಬೆನ್ನಿಗೆ ಕಾವಲಾಗಿ ನಿಂತಿದ್ದೆವು. ನಾನೇ ಮುಂದೆ ನಿಂತು ಅವರನ್ನು ಮುಖ್ಯಮಂತ್ರಿ ಮಾಡಿದ್ದೆ ಎಂದು ಹೇಳಿದರು.
ಮಾದಪ್ಪ ನನ್ನ ಕಳುಹಿಸಿದ್ದಾನೆ, ಬರಿಗೈಲಿ ಕಳುಹಿಸಬೇಡಿ: ಸಚಿವ ಸೋಮಣ್ಣ
ಕೇಂದ್ರ ಮಂತ್ರಿ ಸ್ಥಾನದ ಆಫರ್: ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೆಂದ್ರ ಪ್ರಧಾನ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಶನಿವಾರ ಖುದ್ದು ಶೆಟ್ಟರ್ ಮನೆಗೆ ತೆರಳಿ ಚರ್ಚಿಸಿದ್ದರು. ಶೆಟ್ಟರ್ ಅವರಿಗೆ ಚುನಾವಣಾ ರಾಜಕೀಯದಿಂದ ನಿವೃತ್ತಿ ತೆಗೆದುಕೊಳ್ಳುವಂತೆ ಹೇಳಿಲ್ಲ. ರಾಜ್ಯಸಭಾ ಸದಸ್ಯರನ್ನಾಗಿ ಮಾಡಿ ಬಳಿಕ ಕೇಂದ್ರದಲ್ಲಿ ಮಂತ್ರಿ ಮಾಡುತ್ತೇವೆ. ಇಂತಹ ಸಂದರ್ಭದಲ್ಲಿ ಬೇರೆ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಮಾತನಾಡಿ ಬಂದಿದ್ದರು. ಆದರೂ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ ಜತೆಗೆ ಕೈಜೋಡಿಸಿ ಹೊರಟ್ಟಿರುವುದು ಅಕ್ಷಮ್ಯ ಎಂದು ಹರಿಹಾಯ್ದರು.
‘ಬಿಜೆಪಿಯಲ್ಲಿ ವೀರಶೈವ ಸಮಾಜಕ್ಕೆ ಅನ್ಯಾಯ ಮಾಡಲಾಗಿದೆಯೇ?’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್ ಉದ್ದೇಶಪೂರ್ವಕವಾಗಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿ. ಬಿಜೆಪಿಯಿಂದ ವೀರಶೈವ ಸಮಾಜಕ್ಕೆ ಯಾವುದೇ ಅನ್ಯಾಯವಾಗಿಲ್ಲ. ಕಾಂಗ್ರೆಸ್ ಪಿತೂರಿ ಮಾತಿಗೆ ಬೆಲೆಕೊಡುವ ಅಗತ್ಯವಿಲ್ಲ. ನಾನು ರಾಜೀನಾಮೆ ಕೊಟ್ಟಿದ್ದು ಯಾರದ್ದೋ ಒತ್ತಾಯದಿಂದಲ್ಲ. ಸ್ವ ಇಚ್ಛೆಯಿಂದ ರಾಜೀನಾಮೆ ಕೊಟ್ಟಿದ್ದೆ ಎಂದು ಸಮಜಾಯಿಷಿ ನೀಡಿದರು.
ನನಗೆ 80 ವರ್ಷ ಆದರೂ ನಾನು ಓಡಾಡುತ್ತಿದ್ದೇನೆ. ವಿಚಾರ, ದೇಶಕ್ಕಾಗಿ ಬಲಿಷ್ಠ ಸರ್ಕಾರ ರಚನೆಗಾಗಿ ನನ್ನ ಸಂಪೂರ್ಣ ಸಮಯ ತೆಗೆದಿಟ್ಟಿದ್ದೇನೆ. ನಾನು ಬಿಜೆಪಿ ಪಕ್ಷದಲ್ಲಿ ಎಲ್ಲವನ್ನೂ ಅನುಭವಿಸಿದ್ದೇನೆ. 4 ಬಾರಿ ಮುಖ್ಯಮಂತ್ರಿಯಾಗಿದ್ದೇನೆ. ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದೆ. ಪಕ್ಷದ ಭವಿಷ್ಯದ ಹಿನ್ನೆಲೆಯಲ್ಲಿ ಯುವನಾಯಕತ್ವಕ್ಕೆ ಅವಕಾಶ ನೀಡುವುದು ಅನಿವಾರ್ಯ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು. ಈ ಚುನಾವಣೆಯಲ್ಲಿ ಹೊಸ ಮುಖಗಳು, ಎಲ್ಲ ಜಾತಿ-ವರ್ಗಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ ಪ್ರಯತ್ನ ಮಾಡುತ್ತಿದ್ದೇವೆ.
ಬಿಜೆಪಿಗೆ ಹೊಸತನ, ಹೊಸ ಹುರುಪು ತರಲು ಹಿರಿಯರು ಯುವಕರಿಗೆ ದಾರಿ ಮಾಡಿಕೊಡಬೇಕು. ಬಿಜೆಪಿ ನಿಮಗೆ ಎಲ್ಲವನ್ನೂ ಕೊಟ್ಟಿದೆ. ಆ ಋುಣ ತೀರಿಸುವ ಕೆಲಸ ಮಾಡಬೇಕು. ನಮ್ಮ ಶಾಸಕರಾದ ರಘುಪತಿ ಭಟ್, ಎಸ್.ಅಂಗಾರ, ಈಶ್ವರಪ್ಪ ಅವರು ಗೌರವಯುತವಾಗಿ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪಕ್ಷದ ಪ್ರಸ್ತುತ ಬೆಳವಣಿಗೆಯಿಂದ ಪಕ್ಷದ ಕಾರ್ಯಕರ್ತರು ವಿಚಲಿತರಾಗುವ ಅಗತ್ಯವಿಲ್ಲ. ಎಲ್ಲರೂ ಒಟ್ಟಾಗಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಹೇಳಿದರು.
ರಾಮನಗರ ಕ್ಷೇತ್ರವನ್ನು ಕುಮಾರಸ್ವಾಮಿ ಅವರ ಮನೆ ಸ್ವತ್ತು ಮಾಡಿಕೊಂಡಿದ್ದಾರೆಯೇ? : ಇಕ್ಬಾಲ್ ಹುಸೇನ್
ಕೆಜೆಪಿಗೆ ಹೋಗಿದ್ದು ಅಕ್ಷಮ್ಯ ಅಪರಾಧ: ‘ಯಡಿಯೂರಪ್ಪ ಕೆಜೆಪಿಗೆ ಏಕೆ ಹೋಗಿದ್ದರು?’ ಎಂಬ ಶೆಟ್ಟರ್ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಯಡಿಯೂರಪ್ಪ, ಹಿಂದೆ ಆಗಿದ್ದಕ್ಕೆ ನಾನು ಈಗಾಗಲೇ ಕ್ಷಮೆ ಕೇಳಿದ್ದೇನೆ. ನಾನು ಕೆಜೆಪಿಗೆ ಹೋಗಿದ್ದು ನನ್ನ ಜೀವನದಲ್ಲಿ ನಾನು ಮಾಡಿದ ಅಕ್ಷಮ್ಯ ಅಪರಾಧ ಎಂದರು. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಧರ್ಮೆಂದ್ರ ಪ್ರಧಾನ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮತ್ತಿತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.