ಸುಮಾರು ನಾಲ್ಕು ದಶಕಗಳ ಬಿಜೆಪಿಯೊಂದಿಗಿನ ನಂಟು ಕಡಿದುಕೊಳ್ಳಲು ತೀರ್ಮಾನಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ.
ಕನ್ನಡಪ್ರಭ ವಾರ್ತೆ
ಬೆಂಗಳೂರು/ಶಿರಸಿ: ಸುಮಾರು ನಾಲ್ಕು ದಶಕಗಳ ಬಿಜೆಪಿಯೊಂದಿಗಿನ ನಂಟು ಕಡಿದುಕೊಳ್ಳಲು ತೀರ್ಮಾನಿಸಿರುವ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಭಾನುವಾರ ಬೆಳಗ್ಗೆ ಹುಬ್ಬಳ್ಳಿಯಿಂದ ಶಿರಸಿಗೆ ತೆರಳಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಖುದ್ದಾಗಿ ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸಿದ ಅವರು ತಡರಾತ್ರಿವರೆಗೂ ಕಾಂಗ್ರೆಸ್ ನಾಯಕರೊಂದಿಗೆ ಸತತ ಸಮಾಲೋಚನೆ ನಡೆಸಿದರು.
ಶೆಟ್ಟರ್ ಅವರ ಬೀಗರಾದ ಗಣೇಶ್ ಶಾಮನೂರು (Ganesh Shamanoor)ಅವರ ನಿವಾಸದಲ್ಲಿ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರೊಂದಿಗೆ ಸಭೆ ನಡೆಯಿತು. ಸಭೆಯ ಮಧ್ಯೆಯೇ ಶೆಟ್ಟರ್ ಅವರು ದೂರವಾಣಿ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೂ ಚರ್ಚೆ ನಡೆಸಿದರು. ಬಳಿಕ ಕಾಂಗ್ರೆಸ್ ಸೇರ್ಪಡೆ ತೀರ್ಮಾನ ಕೈಗೊಂಡರು ಎಂದು ತಿಳಿದು ಬಂದಿದೆ.
ಇಂದು ಬೆಳಗ್ಗೆ 8.15ಕ್ಕೆ ಕೆಪಿಸಿಸಿ ಕಚೇರಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರ ಪತ್ರಿಕಾಗೋಷ್ಠಿ ಕರೆಯಲಾಗಿದೆ. ಈ ವೇಳೆಯೇ ಶೆಟ್ಟರ್ ಅವರು ಸೇರ್ಪಡೆಯಾಗಬಹುದು ಅಥವಾ ಶೆಟ್ಟರ್ ಸೇರ್ಪಡೆಯನ್ನು ಪ್ರಕಟಿಸಬಹುದು. ಇದೇ ವೇಳೆ ಬೆಂಗಳೂರಿನಲ್ಲಿ ಸಾಂಕೇತಿಕವಾಗಿ ಸೇರ್ಪಡೆಯಾಗಿ ಬಳಿಕ ಹುಬ್ಬಳ್ಳಿಯಲ್ಲಿ ಹೆಚ್ಚಿನ ಜನರನ್ನು ಸೇರಿಸಿ ಅಧಿಕೃತವಾಗಿ ಸೇರ್ಪಡೆಯಾಗುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಇದಕ್ಕೂ ಮೊದಲು ಶೆಟ್ಟರ್ ಅವರು ತಮ್ಮ ಆಪ್ತರ ಮೂಲಕ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಪತ್ರವನ್ನು ರವಾನಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಶೆಟ್ಟರ್ ಬಳಿಕ ಈ ಇಬ್ಬರೂ ನಾಯಕರಿಗೆ ಬಿಜೆಪಿ ಟಿಕೆಟ್ ಸಿಗೋದು ಡೌಟು?
ಶಾಮನೂರು ವಿಮಾನದಲ್ಲಿ ಶೆಟ್ಟರ್ ಬೆಂಗಳೂರಿಗೆ:
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಹುಬ್ಬಳ್ಳಿಯಿಂದ ಕಾಂಗ್ರೆಸ್ ಪಕ್ಷದ (Congress Party)ಹಿರಿಯ ನಾಯಕ ಹಾಗೂ ಅವರ ಬೀಗರಾದ ಶಾಮನೂರು ಶಿವಶಂಕರಪ್ಪ ಅವರ ಖಾಸಗಿ ವಿಮಾನದಲ್ಲೇ ಬೆಂಗಳೂರಿಗೆ ಆಗಮಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ಮುಖಂಡರಾದ ಗಿರೀಶ ಗದಿಗೆಪ್ಪಗೌಡರ ಹಾಗೂ ರಾಬರ್ಟ್ ದದ್ದಾಪುರಿ ಸ್ವಾಗತಿಸಿ ಬೆಂಗಳೂರಿಗೆ ಕಳುಹಿಸಿಕೊಟ್ಟರು. ಶೆಟ್ಟರ್ ಅವರೊಂದಿಗೆ ಕಾಂಗ್ರೆಸ್ ಮುಖಂಡರಾದ ಯು.ಬಿ. ಶೆಟ್ಟಿ, ರಜತ್ ಉಳ್ಳಾಗಡ್ಡಿಮಠ, ಶಾಜಮಾನ ಮುಜಾಹಿದ ಕೂಡ ಇದ್ದರು. ಅದಕ್ಕೂ ಮೊದಲು ಕಾಂಗ್ರೆಸ್ ಮುಖಂಡ, ಸಿದ್ದರಾಮಯ್ಯ ಅಭಿಮಾನಿಗಳ ಸಂಘದ ಅಧ್ಯಕ್ಷ ಗಿರೀಶ ಗದಿಗೆಪ್ಪಗೌಡರ ಅವರು ಶೆಟ್ಟರ್ ಮನೆಗೆ ಆಗಮಿಸಿ ರುದ್ರಾಕ್ಷಿ ಮಾಲೆ ಹಾಕಿ ಕಾಲಿಗೆರಗಿ ಸ್ವಾಗತಿಸಿದ್ದು ವಿಶೇಷವಾಗಿತ್ತು.
ಸ್ಪರ್ಧೆ ಖಚಿತ -ಶೆಟ್ಟರ್:
ಈ ನಡುವೆ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾಧ್ಯಮದೊಂದಿಗೆ ಮಾತನಾಡಿದ ಜಗದೀಶ್ ಶೆಟ್ಟರ್(Jagadish Shettar), ಯಾವುದೇ ಕಾರಣವಿಲ್ಲದೇ ನನಗೆ ಟಿಕೆಟ್ ವಂಚನೆ ಮಾಡಿರುವುದು ನೋವು ತಂದಿದೆ. ಮುಂದಿನ ಸ್ಪರ್ಧೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಆದರೆ ಸ್ಪರ್ಧೆ ಮಾಡುವುದಂತೂ ನಿಜ ಎಂದರು.
ಕಟ್ಟಿದ ಮನೆಯಿಂದ ಹೊರಹೋಗಲು ದುಃಖವಾಗ್ತಿದೆ: ಜಗದೀಶ ಶೆಟ್ಟರ್ ಭಾವುಕ ಮಾತು
ನನಗೆ ಮುಖ್ಯಮಂತ್ರಿ ಸ್ಥಾನ ಬೇಡ, ಯಾವುದೇ ಮಂತ್ರಿ ಸ್ಥಾನ ನೀಡುವುದು ಬೇಡ ಎಂದು ಈಗಾಗಲೇ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಬೊಮ್ಮಾಯಿ ಅವರ ಸರ್ಕಾರದಲ್ಲೂ ನಾನು ಯಾವುದೇ ಸ್ಥಾನ ಅಲಂಕರಿಸದೇ ಪಕ್ಷದ ಏಳಿಗೆಗೆ ಶ್ರಮಿಸಿದ್ದೇನೆ. ನನಗೆ ಟಿಕೆಟ್ ನೀಡದಿರಲು ಯಾವುದಾದರೂ ಒಂದು ಕಾರಣವನ್ನೂ ತಿಳಿಸಿಲ್ಲ. ಆರೋಗ್ಯದ ಸಮಸ್ಯೆ ಇಲ್ಲ, ಕಪ್ಪು ಚುಕ್ಕೆ ಹೊಂದಿಲ್ಲ, ನನ್ನದು ಸೀಡಿ ಹೊರ ಬಂದಿಲ್ಲ, ಭ್ರಷ್ಟಾಚಾರವಿಲ್ಲ. ಇಷ್ಟಾದರೂ ನನಗೆ ಟಿಕೆಟ್ ಕೈ ತಪ್ಪಲು ಯಾರೋ ಒಬ್ಬರು ಕಾರಣರಾಗಿದ್ದಾರೆ ಎಂದರು.
ಕಳೆದ ಮೂವತ್ತು ವರ್ಷಗಳಿಂದ ಪಕ್ಷ ನನಗೆ ಬೆಂಬಲ ನೀಡಿದೆ. ಪಕ್ಷದ ಬಲವರ್ಧನೆಗೆ ನಾನು ಶ್ರಮಿಸಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಬಿಜೆಪಿಯ ಕಾರ್ಯಕರ್ತರೂ ಇಲ್ಲದ ಸ್ಥಿತಿ ಇದ್ದಾಗ ಪಕ್ಷ ಬೆಳೆಸಿದ್ದೇನೆ. ಬಿ.ಎಸ್. ಯಡಿಯೂರಪ್ಪ(BSY), ಅನಂತಕುಮಾರ (Ananthkumar)ಅವರ ಜತೆ ಪಕ್ಷದ ಸಂಘಟನೆಗೆ ಎಲ್ಲೆಡೆ ಓಡಾಟ ನಡೆಸಿದ್ದೇನೆ. ಯಾವ ಕಾರಣಕ್ಕೆ ನನಗೆ ಟಿಕೆಟ್ ನೀಡುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಿ ಎಂದು ನಿನ್ನೆಯಿಂದಲೂ ನಾನು ಕೇಳುತ್ತಿದ್ದರೂ ಯಾವುದೇ ಉತ್ತರ ಸಿಕ್ಕಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪ್ರಲ್ಹಾದ್ ಜೋಶಿ (Pralhad Joshi)ಅವರೂ ಮನೆಗೆ ಬಂದು ಮಾತನಾಡಿದರು. ನಾನು ಮಂತ್ರಿ ಸ್ಥಾನದ ಆಕಾಂಕ್ಷಿಯಲ್ಲ, ಶಾಸಕನಾಗಿಯೇ ಸಾರ್ವಜನಿಕರ ಸೇವೆ ಮಾಡಬೇಕು ಎಂಬ ಆಸೆ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಯಡಿಯೂರಪ್ಪ ಸಹ ಈಗ ಮಾತನಾಡುತ್ತಿಲ್ಲ. ಒಂದು ಕಾಲದಲ್ಲಿ ಅವರೂ ಪಕ್ಷ ಬಿಟ್ಟು ಕೆಜೆಪಿಗೆ ಹೋಗಿದ್ದರು. ನನ್ನ ಪರವಾಗಿ ಮಾತನಾಡುತ್ತಿದ್ದ ಅವರು ಈಗ ಮಾತನಾಡದಿರುವುದು ಪಕ್ಷದ ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ಇರಬಹುದು. ಆದರೆ, ಪಕ್ಷದ ಕೆಲ ಸ್ವ ಹಿತಾಸಕ್ತಿ ನಾಯಕರ ಷಡ್ಯಂತ್ರದಿಂದಾಗಿ ನನಗೆ ಟಿಕೆಟ್ ಕೈ ತಪ್ಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.