ಯಡಿಯೂರಪ್ಪನವರು ಕೇಂದ್ರ ವರಿಷ್ಠರ ಮೇಲೆ ತಮ್ಮ ಪ್ರಭಾವ ಬಳಸಿ ಟಿಕೆಟ್ ಹಂಚಿಕೆ ಮಾಡಿಸಿದ್ದಾರೆ. ಅದರ ಪರಿಣಾಮ ಏನು ಎನ್ನುವುದು ಲೋಕಸಭೆ ಚುನಾವಣೆ ನಂತರ ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ.
ಸಾಗರ (ಮಾ.25): ಯಡಿಯೂರಪ್ಪನವರು ಕೇಂದ್ರ ವರಿಷ್ಠರ ಮೇಲೆ ತಮ್ಮ ಪ್ರಭಾವ ಬಳಸಿ ಟಿಕೆಟ್ ಹಂಚಿಕೆ ಮಾಡಿಸಿದ್ದಾರೆ. ಅದರ ಪರಿಣಾಮ ಏನು ಎನ್ನುವುದು ಲೋಕಸಭೆ ಚುನಾವಣೆ ನಂತರ ಗೊತ್ತಾಗುತ್ತದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಭಾನುವಾರ ಕರೆದಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದು ಮತ್ತೆ ಬಿಜೆಪಿಗೆ ಹೋಗುತ್ತೇನೆ.
ನಾನು ಸ್ಪರ್ಧೆ ಮಾಡಿರುವ ಬಗ್ಗೆ ದೇಶ ಮತ್ತು ರಾಜ್ಯದಲ್ಲಿ ದೊಡ್ಡಮಟ್ಟದ ಚರ್ಚೆಯಾಗುತ್ತಿದೆ. ಮೋದಿಯವರು ಕುಟುಂಬ ರಾಜಕಾರಣವನ್ನು ವಿರೋಧಿಸಿಕೊಂಡು ಬಂದಿದ್ದಾರೆ. ಈ ಲೋಕಸಭಾ ಚುನಾವಣೆ ನಂತರ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಕೊನೆಯಾಗಲಿದೆ. ನನ್ನ ಸ್ಪರ್ಧೆ ಬಿಜೆಪಿ ವಿರುದ್ಧವಲ್ಲ. ಕುಟುಂಬ ರಾಜಕಾರಣದ ವಿರುದ್ಧ. ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ತೊಲಗಬೇಕು ಎಂದು ಪುನರುಚ್ಚರಿಸಿದರು.
undefined
ರಾಜ್ಯ ಬಿಜೆಪಿಯಲ್ಲಿ ಬಿಎಸ್‌ವೈ ಹಿಡಿತ ತಪ್ಪಿಸಲೆಂದೇ ನನ್ನ ಸ್ಪರ್ಧೆ: ಕೆ.ಎಸ್.ಈಶ್ವರಪ್ಪ
ಬ್ರಹ್ಮ ಬಂದು ಹೇಳಿದ್ರೂ ಸ್ಪರ್ಧೆ ನಿಲುವು ಬದಲಿಲ್ಲ: ಬ್ರಹ್ಮ ಬಂದು ಹೇಳಿದರೂ ನನ್ನ ನಿಲುವಿನಿಂದ ಹಿಂದೆ ಸರಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರೂ ಈ ವಿಚಾರಲ್ಲಿ ಗೊಂದಲಕ್ಕೆ ಈಡಾಗಬಾರದು ಎಂದು ಪುನರುಚ್ಚರಿಸಿದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಸೇರಿದಂತೆ ಯಾರೂ ನನ್ನ ಜೊತೆ ಮಾತನಾಡಿಲ್ಲ. ಮಾತನಾಡಿದರೂ ನನ್ನ ನಿಲುವು ಬದಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ನಾನು ರಾಷ್ಟ್ರಭಕ್ತ ಬಳಗ ಎಂಬ ಸಂಘಟನೆ ಮೂಲಕ ಸ್ಪರ್ಧಿಸುತ್ತಿದ್ದು, ಚುನಾವಣೆಯಲ್ಲಿ ಖಂಡಿತಾ ಗೆಲ್ಲುತ್ತೇನೆ. ಎರಡು ತಿಂಗಳೊಳಗೆ ಮತ್ತೆ ಬಿಜೆಪಿ ಸೇರಲಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾ. 26ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗ ನಗರ ಮತ್ತು ಗ್ರಾಮಾಂತರ ಭಾಗದ ಬೂತ್ ಮಟ್ಟದ ಕಾರ್ಯಕರ್ತರ ಸಭೆ ಕರೆಯಲಾಗಿದೆ. ಸುಮಾರು ೪ ಸಾವಿರ ಜನ ಭಾಗವಹಿಸುವ ನಿರೀಕ್ಷೆ ಇದೆ. ಮಾ.28 ರಂದು ತಮ್ಮ ಚುನಾವಣಾ ಕಚೇರಿ ಮನೆಯ ಆವರಣದಲ್ಲಿ ಉದ್ಘಾಟನೆಗೊಳ್ಳಲಿದ್ದು, ವಿಶೇಷ ವ್ಯಕ್ತಿಯೊಬ್ಬರು ಹಾಗೂ ಐದು ಮಂದಿ ಮುತ್ತೈದೆಯರು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಲ್ಲಿಯೂ ಮಹತ್ತರ ಬದಲಾವಣೆಯಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡಿದರೆ, ಇನ್ನೊಂದಡೆ ಕಡಿಮೆ ಸ್ಥಾನ ಗಳಿಸಿದ ಕಾರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ರಾಜೀನಾಮೆ ಕೊಡಬೇಕಾಗಬಹುದು ಎಂದರು. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಗೀತಾಗೆ ಟಿಕೆಟ್ ಸಿಗಲು ಯಡಿಯೂರಪ್ಪ-ಸಿದ್ದರಾಮಯ್ಯನವರ ಹೊಂದಾಣಿಕೆ ರಾಜಕಾರಣ ಕಾರಣ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸುತ್ತಿದ್ದಾರೆ.
ಕಾಂಗ್ರೆಸ್ ಸಂಸ್ಕೃತಿ ರಾಜ್ಯ ಬಿಜೆಪಿಗೂ ಬಂದಿದೆ: ಕೆ.ಎಸ್.ಈಶ್ವರಪ್ಪ ಕಿಡಿ
ಗೀತಾ ಶಿವರಾಜ್ ಕುಮಾರ್ ಡಮ್ಮಿ ಕ್ಯಾಂಡಿಡೇಟ್ ಎಂದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೇಳುತ್ತಿದ್ದಾರೆ ಎಂದರು. ಈಗಲೂ ನಾನು ಬಿಜೆಪಿಯಲ್ಲಿಯೇ ಇದ್ದೇನೆ. ಮುಂದೆಯೂ ಇರುತ್ತೇನೆ. ಬಿಜೆಪಿ ನನ್ನ ತಾಯಿ. ಕೆಲವರು ತಾಯಿಯಿಂದ ನನ್ನನ್ನು ಬೇರ್ಪಡಿಸಲು ಯತ್ನಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವುದಿಲ್ಲ. ರಾಜ್ಯದ ಎಲ್ಲ 27 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುತ್ತಾರೆ. 28ನೇ ಅಭ್ಯರ್ಥಿಯಾಗಿ ನಾನು ಗೆದ್ದು, ನರೇಂದ್ರ ಮೋದಿಯವರಿಗೆ ಬೆಂಬಲ ನೀಡುತ್ತೇನೆ ಎಂದರು.