
ಮೂಡಿಗೆರೆ (ಮಾ.25): ಎನ್ ಡಿಆರ್‌ಎಫ್ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಮೊರೆಹೋಗುವಂತಹ ಕೆಟ್ಟ ಪರಿಸ್ಥಿತಿ ರಾಜ್ಯದ ಮುಖ್ಯಮಂತ್ರಿಗೆ ಬರಬಾರದಿತ್ತು. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದೆ. ಚುನಾವಣೆ ಘೋಷಣೆ ಬಳಿಕ ಸುಪ್ರೀಂ ಮೊರೆ ಹೋಗುವ ಡ್ರಾಮಾವನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಅವರಿಗೆ ಇದು ಶೋಭೆ ತರುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಕಿಸಿದರು. ಭಾನುವಾರ ಕುಟುಂಬಸ್ಥರೊಂದಿಗೆ ಹೊರನಾಡಿನಲ್ಲಿ ಚಂಡಿಕಾ ಹೋಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು.
ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಣಕಾಸಿನ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ. ನಾವು ಸೋತಿದ್ದೇವೆ ಎಂದು ಕೇಂದ್ರಕ್ಕೆ ಹೋಗಿ ಒತ್ತಾಯ ಮಾಡಿದರೆ ಬೇರೆ ಮಾತು. ಅದನ್ನು ಬಿಟ್ಟು ಆರೋಪ ಮಾಡುವುದು ಸರಿಯಲ್ಲ ಎಂದರು. ವಿನಾಶ ಕಾಲೇ ವಿಪರೀತ ಬುದ್ಧಿ ಎಂಬಂತೆ ಕಾಂಗ್ರೆಸ್ ನಡೆದುಕೊಳ್ಳುತ್ತಿದೆ. ಸೋಲಿನ ಹತಾಶೆಯಿಂದ ವಿವಿಧ ರೀತಿ ಹೇಳಿಕೆಗಳನ್ನು ಕಾಂಗ್ರೆಸ್ಸಿಗರು ನೀಡುತ್ತಿದ್ದಾರೆ ಎಂದು ಹೇಳಿದರು.
ಎಲ್ಲಾ 28 ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ: ಬಿಎಸ್‌ವೈಇದೇ ವೇಳೆ ಯಡಿಯೂರಪ್ಪ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳಲ್ಲೂ ಗೆಲ್ಲುವ ವಿಶ್ವಾಸವಿದೆ ಎಂದರು. ಮೋದಿಗೆ ಮತ್ತಷ್ಟು ಶಕ್ತಿ ಬರಲಿ, ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆದ್ದು ಪ್ರಧಾನಿ ಮೋದಿ ಅವರ ಕೈ ಬಲಪಡಿಸಬೇಕು ಎಂದರು. ಯಡಿಯೂರಪ್ಪ ಹಾಗೂ ಅವರ ಪುತ್ರ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಸೊಸೆ ಮತ್ತು ಪುತ್ರಿ ಶನಿವಾರ ರಾತ್ರಿಯೇ ಹೊರನಾಡಿಗೆ ಬಂದು ತಂಗಿದ್ದರು. ಭಾನುವಾರ ಬೆಳಗ್ಗೆ 6 ಗಂಟೆಗೆ ಎಲ್ಲರೂ ದೇವಾಲಯಕ್ಕೆ ಆಗಮಿಸಿದರು.
ತಮಿಳುನಾಡು ಮೇಕೆದಾಟು ಕಿರಿಕ್‌ಗೆ ಬಿಜೆಪಿ ಆಕ್ರೋಶ: ವಿಜಯೇಂದ್ರ ಹೇಳಿದ್ದೇನು?
ರಾಹುಕಾಲ ಕಳೆಯುತ್ತಿದ್ದಂತೆ, ಬೆಳಗ್ಗೆ 6.30ಕ್ಕೆ ಚಂಡಿಕಾ ಹೋಮ ಆರಂಭಗೊಂಡಿತು. ಶತ್ರು ನಿವಾರಣೆಗಾಗಿ ಮಾಡುವ ಹೋಮ ಇದಾಗಿದೆ. ಬೆಳಗ್ಗೆ 10.30ರ ವೇಳೆಗೆ ಪೂರ್ಣಾಹುತಿ ನಡೆಯಿತು. ಹುಣ್ಣಿಮೆ ಹಿಂದಿನ ದಿನ ಪೂಜೆ ನೆರವೇರಿಸಿರುವುದು ಅತ್ಯಂತ ಶ್ರೇಷ್ಠ ದಿನ ಎಂದು ಹೇಳಲಾಗುತ್ತಿದೆ. ಕ್ಷೇತ್ರದ ಪುರೋಹಿತರು ಪೂಜಾ ಕೈಂಕರ್ಯ ನೆರವೇರಿಸಿದರು. ಕ್ಷೇತ್ರದ ಧರ್ಮಕರ್ತರಾದ ಜಿ.ಭೀಮೇಶ್ವರ ಜೋಷಿ ಅವರು ಅಮ್ಮನವರ ಪ್ರಸಾದ ನೀಡಿದರು. ಬಳಿಕ, ಕಳಸೇಶ್ವರ ದೇಗುಲಕ್ಕೂ ಯಡಿಯೂರಪ್ಪ ಕುಟುಂಬದವರು ಭೇಟಿ ನೀಡಿ ದೇವರ ದರ್ಶನ ಪಡೆದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.