ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ್ದಕ್ಕೆ ಅನಾಮಧೇಯ ವ್ಯಕ್ತಿಗಳು ತಮಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಪೊಲೀಸ್ ರಕ್ಷಣೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರಿಗೆ ಶನಿವಾರ ದೂರು ನೀಡಿದ್ದಾರೆ.
ಮೈಸೂರು (ಅ.29): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿದ್ದಕ್ಕೆ ಅನಾಮಧೇಯ ವ್ಯಕ್ತಿಗಳು ತಮಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದು, ಪೊಲೀಸ್ ರಕ್ಷಣೆ ನೀಡಬೇಕು ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಅವರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರಿಗೆ ಶನಿವಾರ ದೂರು ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಧಾರ ರಹಿತ ಆರೋಪ ಮಾಡಿದ್ದು, ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡಿದ್ದೇನೆ. ನಾನು ಯಾವುದೇ ರೀತಿ ಅಸಂಬದ್ಧ ಪದ ಬಳಸಿಲ್ಲ.
ಹೀಗಿರುವಾಗ, ಶುಕ್ರವಾರ ನನ್ನ ಮೊಬೈಲ್ ಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಕುಮಾರಸ್ವಾಮಿ ಬಗ್ಗೆ ಮಾತನಾಡಿದ್ದಕ್ಕೆ ಜೀವ ಬೆದರಿಕೆ ಹಾಕಿರುತ್ತಾರೆ. ಶನಿವಾರ ಸಹ ಬೇರೆ ಬೇರೆ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿದೆ ಎಂದು ಅವರು ದೂರಿದ್ದಾರೆ. ಅಲ್ಲದೆ, ಶನಿವಾರ ಬೆಳಗ್ಗೆ ಕಲಾಮಂದಿರದ ಬಳಿ ಕೆಲವು ಜೆಡಿಎಸ್ ಮುಖಂಡರು ಮತ್ತು ಕುಮಾರಸ್ವಾಮಿ ಅಭಿಮಾನಿಗಳು, ನನ್ನ ಬಗ್ಗೆ ಮಾತನಾಡುತ್ತಾ, ಇವರಿಗೆ ಸರಿಯಾಗಿ ಬುದ್ಧಿ ಕಲಿಸಬೇಕು. ಅಟ್ಯಾಕ್ ಮಾಡೋಣ ಎಂದು ಮಾತನಾಡಿದ್ದು, ಅಲ್ಲಿಯೇ ಇದ್ದ ನಮ್ಮ ಪಕ್ಷದ ಮುಖಂಡರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.
undefined
ದೇವೇಗೌಡರಿಗೆ ವೋಟು ಹಾಕಿಸಿದ್ದು ನಾನು, ಪ್ರಜ್ವಲ್ ಬಂದಿರಲಿಲ್ಲ: ಶಾಸಕ ಶಿವಲಿಂಗೇಗೌಡ
ಇದರಿಂದ ನನಗೆ ಜೀವ ಬೆದರಿಕೆ ಇದ್ದು, ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸುವುದರೊಂದಿಗೆ ರಕ್ಷಣೆ ನೀಡಬೇಕು ಎಂದು ಅವರು ದೂರಿನಲ್ಲಿ ಕೋರಿದ್ದಾರೆ. ಈ ವೇಳೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ನಗರಾಧ್ಯಕ್ಷ ಆರ್. ಮೂರ್ತಿ, ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಎನ್.ಆರ್. ನಾಗೇಶ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಪಾಲಿಕೆ ಮಾಜಿ ಸದಸ್ಯ ಎಂ. ಶಿವಣ್ಣ, ಮಾಧ್ಯಮ ವಕ್ತಾರ ಮಹೇಶ್ ಮೊದಲಾದವರು ಇದ್ದರು.
ಆಪರೇಷನ್ ಕಮಲ ಬಿಜೆಪಿಯ ಹಿಡನ್ ಅಜೆಂಡಾ: ಆಪರೇಷನ್ ಕಮಲ ಎನ್ನುವುದು ಬಿಜೆಪಿಯ ಹಿಡನ್ ಅಜೆಂಡಾ. ಅವರ ಬುದ್ಧಿಯೇ ಅದು ಎಂದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬೇರೆ ಪಕ್ಷಗಳಿಂದ ಅಧಿಕಾರ ನಡೆಯುತ್ತಿರುವುದನ್ನು ಬೀಳಿಸಿ ಬಿಜೆಪಿ ಸರ್ಕಾರ ರಚನೆ ಮಾಡಿದ ನಿದರ್ಶನ ನಮ್ಮ ಮುಂದಿದೆ. ಅವರು ನಮ್ಮ ಶಾಸಕರನ್ನು ಮಾತನಾಡಿಸಿರುವುದು ಸತ್ಯ. ಅದಕ್ಕೆ ಮಂಡ್ಯ ಎಂಎಲ್ಎ ರವಿಕುಮಾರ್ ಗಣಿಗ ಅವರ ಬಳಿ ದಾಖಲೆ ಇವೆ. ಅದನ್ನು ಸಿಎಂ ಅವರಿಗೆ ಕೊಡಲಾಗುತ್ತದೆ. ಇದನ್ನು ತನಿಖೆ ಮಾಡಿಸಲಾಗುವುದು ಎಂದರು.
ರಾಜ್ಯದಲ್ಲಿ ಜನರು ಕಾಂಗ್ರೆಸ್ ಪಕ್ಷಕ್ಕೆ 136 ಸೀಟು ಕೊಟ್ಟಿದ್ದಾರೆ. ಬಿಜೆಪಿ- ಜೆಡಿಎಸ್ ನವರು ಬಾಯಿ ಮುಚ್ಚಿಕೊಂಡು ಸುಮ್ಮನಿರಬೇಕು. ನಮ್ಮ ಸರ್ಕಾರದ ಜನಪ್ರಿಯತೆಯನ್ನು ಬಿಜೆಪಿ ಜೆಡಿಎಸ್‌ಗೆ ತಡೆದುಕೊಳ್ಳಲು ಆಗುತ್ತಿಲ್ಲ. ಹೀಗೆ ಆದರೆ ರಾಜ್ಯದಲ್ಲಿ 25 ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಹೀಗಾಗಿ ಜನರನ್ನು ದಿಕ್ಕುತಪ್ಪಿಸುವುದಕ್ಕಾಗಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಹೇಳಿದರು.
ದಾಖಲೆ ನೋಡಿದರೆ ರಾಮನಗರಕ್ಕೆ ಎಚ್‌ಡಿಕೆ ಕೊಡುಗೆ ಗೊತ್ತಾಗುತ್ತೆ: ಎಚ್.ಡಿ.ರೇವಣ್ಣ
ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಶಾಸಕ ರವಿಕುಮಾರ್ ಗಣಿಗ ಹೇಳಿಕೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಲಕ್ಷ್ಮಣ್, ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಎನ್ನುವುದು ಇದೆ. ಡೆಮಾಕ್ರಸಿಯ ಆಧಾರದಲ್ಲಿ ಯಾರು ಎಷ್ಟುದಿನ ಮುಖ್ಯಮಂತ್ರಿ ಆಗಿರಬೇಕು. ಯಾರು ಮಂತ್ರಿ ಆಗಿರಬೇಕು. ಯಾರು ಆಗಿರಬಾರದು ಯಾರಿಗೆ ಅವಕಾಶ ಕೊಡಬೇಕು ಎನ್ನುವ ವ್ಯವಸ್ಥೆ ಇದ್ದರೆ ಅದು ಕಾಂಗ್ರೆಸ್‌ನಲ್ಲಿ ಮಾತ್ರ. ಅದನ್ನೆಲ್ಲ ಹೈಕಮಾಂಡ್ ನಿರ್ಧರಿಸುತ್ತದೆ. ಎಲ್ಲೂ ಲಿಖಿತ ಒಪ್ಪಂದಗಳು ನಮ್ಮಲ್ಲಿ ಆಗುವುದಿಲ್ಲ. ನಮ್ಮಲ್ಲಿ ಸಿಎಂ, ಡಿಸಿಎಂ ಯಾರಾಗಬೇಕು ಎನ್ನುವುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಹಾಗಾಗಿ ಪಕ್ಷದ ವಕ್ತಾರನಾಗಿ ನನ್ನ ಹತ್ತಿರ ಏನಿಲ್ಲ ಎಂದು ಹೇಳಿದರು.