ಬಿಜೆಪಿ-ಜೆಡಿಎಸ್‌ ಮೈತ್ರಿ ಈಗ ಅಧಿಕೃತ: ದಸರಾ ಬಳಿಕ ಲೋಕಸಭೆ ಸೀಟು ಹಂಚಿಕೆ ನಿರ್ಧಾರ

By Kannadaprabha News  |  First Published Sep 23, 2023, 5:43 AM IST

ಕಳೆದ ಹಲವು ದಿನಗಳಿಂದ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೊಳಗಾಗಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ ಬಿದ್ದಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ. 


ಬೆಂಗಳೂರು/ನವದೆಹಲಿ (ಸೆ.23): ಕಳೆದ ಹಲವು ದಿನಗಳಿಂದ ರಾಜ್ಯದ ರಾಜಕೀಯ ಪಡಸಾಲೆಯಲ್ಲಿ ಚರ್ಚೆಗೊಳಗಾಗಿದ್ದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಅಧಿಕೃತ ಮುದ್ರೆ ಬಿದ್ದಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆಯಾಗಿದೆ. ಜೆಡಿಎಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು.

ಮಾತಕತೆ ಬೆನ್ನಲ್ಲೇ ಅಮಿತ್ ಶಾ ಮತ್ತು ನಡ್ಡಾ ಅವರು ಟ್ವೀಟ್ ಮೂಲಕ ಜೆಡಿಎಸ್ ಪಕ್ಷವು ಎನ್‌ಡಿಎ ಭಾಗವಾಗಲು ನಿರ್ಧರಿಸಿದೆ. ಜೆಡಿಎಸ್ ಪಕ್ಷವನ್ನು ಸ್ವಾಗತಿಸುವುದಾಗಿ ಹೇಳಿದರು. ಅದೇ ರೀತಿ ಕುಮಾರಸ್ವಾಮಿ ಅವರೂ ಮೈತ್ರಿ ಬಗ್ಗೆ ನಡೆದ ಮಾತುಕತೆ ನನಗೆ ಬಹಳ ಸಂತಸವಾಗಿದೆ ಎಂದು ತಿಳಿಸಿದರು. ಜತೆಗೆ ರಾಜ್ಯ ಬಿಜೆಪಿ ನಾಯಕರೂ ಟ್ವೀಟ್ ಮೂಲಕ ಮೈತ್ರಿಯನ್ನು ಸ್ವಾಗತಿಸಿ ಹೇಳಿಕೆ ನೀಡಿದರು. ಇದೀಗ ಮೈತ್ರಿ ಪ್ರಕ್ರಿಯೆ ಅಧಿಕೃತವಾಗಿದ್ದು, ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಯಾವ ಪಕ್ಷಕ್ಕೆ ಯಾವ ಕ್ಷೇತ್ರಗಳು ಎಂಬುದರ ನಿರ್ಧಾರ ಕೈಗೊಳ್ಳಲು ಇನ್ನೂ ಕೆಲಸಮಯ ಬೇಕಾಗುತ್ತದೆ. ಬಹುತೇಕ ಮುಂದಿನ ತಿಂಗಳ ದಸರಾ ಹಬ್ಬದ ಬಳಿಕ ಕ್ಷೇತ್ರಗಳ ಹಂಚಿಕೆ ಇತ್ಯರ್ಥವಾಗಲಿದೆ.

Tap to resize

Latest Videos

ಬಿಜೆಪಿ ವರಿಷ್ಠರು ಬಿಜೆಪಿಗರಿಗೆ ಸಿಗಲ್ಲ, ಜೆಡಿಎಸ್‌ನವರಿಗೆ ಹೇಗೆ ಸಿಗ್ತಾರೆ: ಕಾಲೆಳೆದ ಕಾಂಗ್ರೆಸ್‌

ದಿಲ್ಲಿ/ ಬೆಂಗಳೂರಲ್ಲಿ ಬೃಹತ್‌ ಕಾರ್ಯಕ್ರಮ ಸಾಧ್ಯತೆ: ಈಗ ಮೈತ್ರಿಯ ನಿರ್ಧಾರ ಆಗಿದ್ದರೂ ದೊಡ್ಡ ಸಭೆಯಲ್ಲಿ ಮೈತ್ರಿಯ ಅಧಿಕೃತ ಘೋಷಣೆ ಮಾಡುವ ಇರಾದೆ ಉಭಯ ಪಕ್ಷಗಳದ್ದು. ಹೀಗಾಗಿ ದೆಹಲಿ ಅಥವಾ ಬೆಂಗಳೂರಲ್ಲಿ ಬೃಹತ್ ಕಾರ್ಯಕ್ರಮವೊಂದನ್ನು ಆಯೋಜಿಸಿ ಜನರ ಮುಂದೆ ಅಧಿಕೃತವಾಗಿ ಮೈತ್ರಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಮೈತ್ರಿಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಘೋಷಣೆ ಮಾಡುವುದು ಸೂಕ್ತ. ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸೇರಿದಂತೆ ಎಲ್ಲ ಹಿರಿಯ ನಾಯಕರೊಂದಿಗೆ ಚರ್ಚೆ ನಡೆಸಿ ಬಳಿಕ ಅಧಿಕೃತ ಘೋಷಣೆ ಮಾಡಿದರೆ ಒಳ್ಳೆಯದು ಎಂಬ ಮಾತನ್ನು ಕುಮಾರಸ್ವಾಮಿ ಅವರು ಬಿಜೆಪಿ ವರಿಷ್ಠರಿಗೆ ಹೇಳಿದ್ದಾರೆ ಎನ್ನಲಾಗಿದೆ.

ದಸರಾ ಬಳಿಕ ಕ್ಷೇತ್ರಗಳ ಹಂಚಿಕೆ ತೀರ್ಮಾನ: ದೆಹಲಿಯಲ್ಲಿ ಬಿಜೆಪಿ ವರಿಷ್ಠರೊಂದಿಗೆ ನಿರ್ಣಾಯಕ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಕುಮಾರಸ್ವಾಮಿ, ಒಳ್ಳೆಯ ದಿನ ಮತ್ತು ಒಳ್ಳೆಯ ಸಮಯ ನೋಡಿಕೊಂಡು ಯಾರಿಗೆಷ್ಟು ಕ್ಷೇತ್ರಗಳು ಎಂಬುದನ್ನು ದಸರಾ ನಂತರ ನಿರ್ಧಾರ ಮಾಡುತ್ತೇವೆ ಎಂದರು. ಕರ್ನಾಟಕ ರಾಜ್ಯದಲ್ಲಿ ಹೊಸ ರಾಜಕೀಯ ಶಕೆ ಆರಂಭಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಆಗುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಜತೆ ಮಹತ್ವದ ಮಾತುಕತೆ ಸೌಹಾರ್ದ, ಪರಸ್ಪರ ವಿಶ್ವಾಸದಿಂದ ನಡೆಯಿತು. 

ಮೈತ್ರಿ ಬಗ್ಗೆ ನಡೆದ ಮಾತುಕತೆ ನನಗೆ ಬಹಳ ಸಂತಸವಾಗಿದೆ. ಮುಂದೆ ಎಲ್ಲವೂ ಸುಗಮವಾಗಿ ನಡೆಯುತ್ತದೆ ಎಂದು ತಿಳಿಸಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಯಾವ ಪಕ್ಷಕ್ಕೆ ಎಷ್ಟು ಸೀಟು ಹಂಚಿಕೆ ಆಗುತ್ತದೆ ಎನ್ನುವುದು ಮುಖ್ಯವಲ್ಲ ಎಂದು ಹಲವು ಬಾರಿ ಹೇಳಿದ್ದೇನೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ರಾಜ್ಯದ 28 ಕ್ಷೇತ್ರಗಳಿಗೆ 28 ಅನ್ನು ಗೆಲ್ಲುವ ಬಗ್ಗೆ ಚರ್ಚೆ ನಡೆಸಲಾಯಿತು. ಈ ವಿಷಯವನ್ನು ನಾನು ಬಿಜೆಪಿ ವರಿಷ್ಠರಿಗೆ ಒತ್ತಿ ಹೇಳಿದ್ದೇನೆ. ನನ್ನ ಮಾತಿಗೆ ಅವರೂ ಸಮಹಮತ ವ್ಯಕ್ತಪಡಿಸಿದರು ಎಂದು ಹೇಳಿದರು. 

ಬಿಜೆಪಿ ಸ್ಥಳೀಯ ನಾಯಕರನ್ನು ದೆಹಲಿಗೆ ಕರೆಸಿ ಮಾತುಕತೆ ನಡೆಸುವುದು, ನಂತರ ಎರಡೂ ಪಕ್ಷಗಳ ಹಿರಿಯರನ್ನು ಕರೆದು ಪರಸ್ಪರ ಸಮನ್ವಯತೆ ಮಾತುಕತೆ ನಡೆಸುವ ಹಾಗೂ ದಸರಾ ಹಬ್ಬದ ನಂತರ ಎಲ್ಲಾ ನಿರ್ಧಾರಗಳನ್ನು ಕೈಗೊಳ್ಳುವ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಅಲ್ಲದೆ, ಈ ಮೈತ್ರಿ ದೀರ್ಘಕಾಲೀನವಾಗಿರಬೇಕು. ಇದರಲ್ಲಿ ರಾಜ್ಯದ ಹಿತ ಅಡಗಿರಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಯಿತು ಎಂದು ಮಾಹಿತಿ ನೀಡಿದರು. ಅಮಿತ್‌ ಶಾ ನಿವಾಸದಲ್ಲಿ ನಡೆದ ಮಾತುಕತೆ ವೇಳೆ ನಡ್ಡಾ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮಾಜಿ ಸಂಸದ ಕುಪೇಂದ್ರ ರೆಡ್ಡಿ, ಜೆಡಿಎಸ್ ಯುವಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಉಪಸ್ಥಿತರಿದ್ದರು.

ಐದು ಕ್ಷೇತ್ರಗಳಿಗೆ ಜೆಡಿಎಸ್‌ ಒಲವು: ಮೈತ್ರಿ ಬಳಿಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಜೆಡಿಎಸ್ ಪಕ್ಷವು ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಆಸಕ್ತಿ ತೋರಿದೆ. ಹಳೆ ಮೈಸೂರು ಭಾಗದ ಹಾಸನ, ಮಂಡ್ಯ, ಕೋಲಾರ, ತುಮಕೂರು ಲೋಕಸಭಾ ಕ್ಷೇತ್ರಗಳ ಜತೆಗೆ ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಕ್ಷೇತ್ರದ ಬಗ್ಗೆ ಆಸಕ್ತಿ ತೋರಿದೆ. ಈ ಬಗ್ಗೆ ಸಾಂಕೇತಿಕವಾಗಿ ಕುಮಾರಸ್ವಾಮಿ ಅವರು ಅಭಿಪ್ರಾಯವನ್ನೂ ಬಿಜೆಪಿ ವರಿಷ್ಠರ ಮುಂದಿಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಈ ಪೈಕಿ ಕೋಲಾರ, ತುಮಕೂರು ಹಾಗೂ ರಾಯಚೂರು ಕ್ಷೇತ್ರಗಳಲ್ಲಿ ಬಿಜೆಪಿ ಹಾಲಿ ಸಂಸದರಿದ್ದಾರೆ. ಜತೆಗೆ ಮಂಡ್ಯದ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರೂ ಈಗ ಬಿಜೆಪಿಗೆ ಬೆಂಬಲ ಘೋಷಿಸಿದ್ದಾರೆ. ಹೀಗಾಗಿ, ಯಾವ ಕ್ಷೇತ್ರಗಳನ್ನು ಬಿಜೆಪಿಯು ಜೆಡಿಎಸ್‌ಗೆ ಬಿಟ್ಟುಕೊಡಲು ಮುಂದಾಗಲಿದೆ ಎಂಬುದು ಕುತೂಹಲಕರವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಭಾರತದ ಬಗ್ಗೆ ವಿಶ್ವಾಸ ವ್ಯಕ್ತಪಡಿಸುವ ಮೂಲಕ ಜೆಡಿಎಸ್ ಪಕ್ಷವು ಎನ್‌ಡಿಎ ಭಾಗವಾಗಲು ನಿರ್ಧರಿಸಿದೆ. ಎನ್‌ಡಿಎ ಕುಟುಂಬಕ್ಕೆ ಜೆಡಿಎಸ್ ಪಕ್ಷವನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಜೆಡಿಎಸ್ ಪಕ್ಷದ ಸಹಯೋಗವು ಕರ್ನಾಟಕವನ್ನು ಅಭಿವೃದ್ಧಿಯ ಪಥದತ್ತ ಮುನ್ನಡೆಸಲು, ಬಲಿಷ್ಠ ಭಾರತ ಹಾಗೂ ಬಲಿಷ್ಠ ಎನ್‌ಡಿಎ ನಿರ್ಮಾಣಕ್ಕೆ ದಾರಿ ಮಾಡಿಕೊಡಲಿದೆ.
-ಅಮಿತ್ ಶಾ, ಕೇಂದ್ರ ಗೃಹ ಸಚಿವ

ಅಮಿತ್ ಶಾ ಜೊತೆ ಇಂದು ‘ದಳ’ಪತಿಗಳ ಮೈತ್ರಿ ಚರ್ಚೆ?: ಹಾಸನ, ಮಂಡ್ಯ, ತುಮಕೂರು ಕ್ಷೇತ್ರ ಜೆಡಿಎಸ್‌ಗೆ?

ಕರ್ನಾಟಕ ರಾಜ್ಯದಲ್ಲಿ ಹೊಸ ರಾಜಕೀಯ ಶಕೆ ಆರಂಭಕ್ಕೆ ನಾಂದಿ ಹಾಡುವ ನಿಟ್ಟಿನಲ್ಲಿ, ಜೆಡಿಎಸ್ ಪಕ್ಷವು ಎನ್‌ಡಿಎ ಮೈತ್ರಿಕೂಟಕ್ಕೆ ಸೇರ್ಪಡೆ ಆಗುವ ಬಗ್ಗೆ ಕೇಂದ್ರ ಗೃಹ ಸಚಿವರು ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಜತೆ ಮಹತ್ವದ ಮಾತುಕತೆ ಸೌಹಾರ್ದ, ಪರಸ್ಪರ ವಿಶ್ವಾಸದಿಂದ ನಡೆಯಿತು. ಮೈತ್ರಿ ಬಗ್ಗೆ ನಡೆದ ಮಾತುಕತೆ ನನಗೆ ಬಹಳ ಸಂತಸವಾಗಿದೆ. ಮುಂದೆ ಎಲ್ಲವೂ ಸುಗಮವಾಗಿ ನಡೆಯುತ್ತದೆ
-ಎಚ್‌.ಡಿ.ಕುಮಾರಸ್ವಾಮಿ, ಜೆಡಿಎಸ್ ನಾಯಕ

click me!